ಭಾನುವಾರ, ಜುಲೈ 25, 2021
26 °C

ಪುಷ್ಪ ಸಿನಿಮಾಕ್ಕೆ ಕಾಡಿನ ಸೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್‌ ಲುಕ್

ನಿರ್ಮಾಣ ಹಂತದಲ್ಲಿರುವ ಅಲ್ಲು ಅರ್ಜುನ್‌ ಅಭಿನಯದ ಹೊಸ ಸಿನಿಮಾ ‘ಪುಷ್ಪ’, ಸಿನಿಮಾ ಪ್ರೇಮಿಗಳಲ್ಲಿ, ಅಲ್ಲು ಅಭಿಮಾನಿಗಳಲ್ಲಿ ಬೆಟ್ಟದಂತಹ ನಿರೀಕ್ಷೆಗಳನ್ನು ಹುಟ್ಟು ಹಾಕಿವೆ. 

ಇದು ಸುಕುಮಾರ್ ನಿರ್ದೇಶನದ ಬಹುಭಾಷಾ ಚಿತ್ರ. ಈ ಸಿನಿಮಾದಲ್ಲಿ ಕಾಡಿನ ದೃಶ್ಯಗಳಿರುವ ಸನ್ನಿವೇಶವನ್ನು ಚಿತ್ರೀಕರಿಸಬೇಕಾಗಿದೆ. ಆ ದೃಶ್ಯಗಳನ್ನು ಕೇರಳದಲ್ಲಿ ಚಿತ್ರೀಕರಣ ಮಾಡಲು ಚಿತ್ರ ತಂಡ ಯೋಜನೆ ಹಾಕಿಕೊಂಡಿತ್ತು. ಇದಾದ ನಂತರ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲೂ ಚಿತ್ರೀಕರಣ ಮುಂದುವರಿಸುವ ಯೋಚನೆ ಇತ್ತು. ಆದರೆ, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದ ಕಾರಣ, ಈ ಮೊದಲು ಮಾಡಿಕೊಂಡಿದ್ದ ಎಲ್ಲ ಶೂಟಿಂಗ್ ಯೋಜನೆಗಳನ್ನು ಚಿತ್ರ ತಂಡ ರದ್ದುಗೊಳಿಸಿದೆ.

ಆದರೆ ಸಿನಿಮಾದಲ್ಲಿ ನೈಜವಾಗಿಯೇ ದೃಶ್ಯಗಳು ಕಾಣಬೇಕು ಎಂದು ಚಿತ್ರತಂಡ ತೀರ್ಮಾನಿಸಿತು. ಜತೆಗೆ, ಅಲ್ಲು ಅರ್ಜುನ್ ಅವರು, ಹೈದರಾಬಾದ್‌ನಲ್ಲಿ ಸೆಟ್‌ ಹಾಕಿ, ಮುಕ್ತವಾಗಿ ಚಿತ್ರೀಕರಣ ನಡೆಸುವಂತೆ ಸಲಹೆ ನೀಡಿದ್ದರು. ಈಗ ಅದೇ ದೃಶ್ಯಗಳನ್ನು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಅನ್ನಪೂರ್ಣ ಸ್ಟುಡಿಯೊದಲ್ಲಿ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಇದಕ್ಕಾಗಿ ಸ್ಟುಡಿಯೊದಲ್ಲಿ ಕೇರಳದ ಕಾಡನ್ನೇ ಹೋಲುವಂತಹ ಸೆಟ್‌ಗಳನ್ನು ಹಾಕುತ್ತಿದ್ದಾರೆ. ಈ ಕೆಲಸಗಳು ಪೂರ್ಣಗೊಳ್ಳುತ್ತಿದ್ದಂತೆ ಜುಲೈ ಮೊದಲ ವಾರದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿನಯದ ಹಾಡಿನ ದೃಶ್ಯಗಳ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ. 

ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್‌ ಸಂಗೀತ ನಿರ್ದೇಶನವಿದೆ. ಈ ಚಿತ್ರದಲ್ಲಿ ನಾಯಕಿ ರೋಜಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಗಾಳಿಸುದ್ದಿ ಇದೆ. ಆದರೆ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿರುವ ಅವರು, ಈ ಚಿತ್ರದಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. 

ಚಿತ್ರದ ಟ್ರೇಲರ್‌ ಹಾಗೂ ಟೀಸರ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಇದು ಅಲ್ಲು ಅರ್ಜುನ್‌ ಹಾಗೂ ನಿರ್ದೇಶಕ ಸುಕುಮಾರ್‌ ಜೋಡಿಯ ಮೂರನೇ ಸಿನಿಮಾ. ಈ ಹಿಂದೆ ಇವರಿಬ್ಬರು ‘ಆರ್ಯ’ ಹಾಗೂ ‘ಆರ್ಯ 2’ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ‘ಆರ್ಯ’ ಬ್ಲಾಕ್‌ಬಸ್ಟರ್‌ ಹಿಟ್‌ ಚಿತ್ರ.  

‘ಅಲಾವೈಕುಂಠಪುರಮುಲೊ’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಅಲ್ಲು ಅರ್ಜುನ್‌ ಒಪ್ಪಿಕೊಂಡಿರುವ ಸಿನಿಮಾ ‘ಪುಷ್ಪ’. ಆ ಚಿತ್ರವನ್ನು ತ್ರಿವಿಕ್ರಮ್‌ ಶ್ರೀನಿವಾಸ್‌ ನಿರ್ದೇಶಿಸಿದ್ದರು. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದರು. 

ಈಚೆಗೆ ಸುಕುಮಾರ್‌ ನಿರ್ದೇಶನದ ‘ರಂಗಸ್ಥಳಂ’ ಸಿನಿಮಾವು ಸಹ ಭಾರಿ ಯಶಸ್ಸು ಕಂಡಿತ್ತು. ಹೀಗಾಗಿ ಸುಕುಮಾರ್‌, ಅಲ್ಲು ಅರ್ಜುನ್‌ನ ಹೊಸ ಚಿತ್ರವಾದ ‘ಪುಷ್ಪ’ ಬಗ್ಗೆ ಸಿನಿಪ್ರಿಯರ ನಿರೀಕ್ಷೆಗಳು ಹೆಚ್ಚಾಗಿವೆ. ಮೈತ್ರಿ ಮೂವಿ ಮೇಕರ್ಸ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು