ಬುಧವಾರ, ಮಾರ್ಚ್ 3, 2021
18 °C

PV Web Exclusive: ಬಾಡಿಗೆಯೋ ಶೇಕಡಾವಾರೋ...ಮುಗಿಯದ ಚಿತ್ರ ಪ್ರದರ್ಶನದ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ ಪ್ರದರ್ಶನ ಸಂಬಂಧಿಸಿ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ. ಒಂದೆಡೆ ದೊಡ್ಡ ಬಜೆಟ್‌ನ ಚಿತ್ರಗಳು ಬಿಡುಗಡೆಗಾಗಿ ಕಾದು ನಿಂತಿವೆ. ಇದೇ ವೇಳೆ ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳವು ಪ್ರತಿ ಚಿತ್ರ ಪ್ರದರ್ಶನದ ಕಲೆಕ್ಷನ್‌ನ ಶೇಕಡಾವಾರು ಪಾಲು ನೀಡಬೇಕು ಎಂದು ಪಟ್ಟು ಹಿಡಿದಿದೆ. 

ನಿರ್ಮಾಪಕರ ಸಂಘದ ನೇತೃತ್ವದಲ್ಲಿ ಈ ಸಮಸ್ಯೆ ಬಗೆಹರಿಸಲು ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚನೆಯಾಗಿದೆ. ಸಮಿತಿಯ ಮಾತುಕತೆಗೂ ಉತ್ತರ ಕರ್ನಾಟಕದ ಪ್ರದರ್ಶನಕರ ಮಹಾಮಂಡಳ ಮಣಿದಿಲ್ಲ. ಹೀಗಾಗಿ ಪ್ರದರ್ಶನ ಸಂಬಂಧಿಸಿ ಬಿಕ್ಕಟ್ಟು ಹಾಗೇ ಮುಂದುವರಿದಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳ ಹಲವು ಸುತ್ತಿನ ಮಾತುಕತೆ ನಡೆಸಿದರೂ ವಿಷಯ ತಾರ್ಕಿಕ ಅಂತ್ಯ ಕಂಡಿಲ್ಲ. ನಿರ್ಮಾಪಕರ ಸಂಘವಂತೂ ಈ ವಿಷಯಕ್ಕೆ ಸಂಬಂಧಿಸಿ ಮೂವರ ಸಮಿತಿಯನ್ನೂ ರಚಿಸಿತ್ತು. ಮಾತುಕತೆ ಫಲಪ್ರದ ಆಗಿಲ್ಲ. ಹೀಗಾಗಿ ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಂಡಳದ ವ್ಯಾಪ್ತಿಯಲ್ಲಿರುವ ಸುಮಾರು 450ರಷ್ಟು ಚಿತ್ರಮಂದಿರಗಳಲ್ಲಿ ಹೊಸ ಚಿತ್ರಗಳು ಶೇಕಡಾವಾರು ಕಲೆಕ್ಷನ್‌ ಮೊತ್ತ ಹಂಚಿಕೆಗೆ ಒಪ್ಪಿಗೆ ನೀಡದ ಹೊರತು ಪ್ರದರ್ಶನಗೊಳ್ಳುತ್ತಿಲ್ಲ.

ವಾಣಿಜ್ಯ  ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌ ಪ್ರತಿಕ್ರಿಯಿಸಿದ್ದು ಹೀಗೆ, ‘ಪ್ರದರ್ಶನ ಸಂಬಂಧಿಸಿ ನಿರ್ಮಾಪಕ ಮತ್ತು ಚಿತ್ರ ಮಂದಿರದ ಮಾಲೀಕರ ಮಧ್ಯೆ ನಡೆಯುವುದು ವೈಯಕ್ತಿಕ ವ್ಯವಹಾರ. ಅದನ್ನು ಅವರು ಬಾಡಿಗೆ ಆಧಾರವೋ ಶೇಕಡಾವಾರೋ ಹೇಗೆ ಬೇಕಾದರೂ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಸದ್ಯ ದೊಡ್ಡ ಬಜೆಟ್‌ ಸಿನಿಮಾದವರು ಬಾಡಿಗೆ ಪದ್ಧತಿಯಲ್ಲಿ (ಪ್ರತಿ ವಾರಕ್ಕೆ ನಿರ್ದಿಷ್ಟ ಮೊತ್ತದ ಬಾಡಿಗೆ) ಚಿತ್ರ ಪ್ರದರ್ಶನ ಮಾಡಿಸುತ್ತಾರೆ. ಹೀಗೆ ಅವರವರ ಆಯ್ಕೆ ಅದು. ಆದ್ದರಿಂದ ಸಂಕಷ್ಟದ ಕಾಲದಲ್ಲಿ ಚಿತ್ರಗಳ ಪ್ರದರ್ಶನಕ್ಕೆ ಎಲ್ಲರೂ ಸಹಕಾರ ಕೊಡಬೇಕು’ ಎಂದು ಮನವಿ ಮಾಡಿದರು.

ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ, ‘ವ್ಯವಹಾರ ಸಂಬಂಧಿ ಭಿನ್ನಾಭಿಪ್ರಾಯಗಳು ಏನೇ ಇರಲಿ. ಸದ್ಯ ಕೊರೊನಾದಿಂದಾಗಿ ಎಲ್ಲ ಬಿಕ್ಕಟ್ಟು ಸೃಷ್ಟಿಯಾಗಿದೆ. ಸದ್ಯ ಪ್ರದರ್ಶನಕ್ಕೆ ಅವಕಾಶ ಕೊಡಲಿ. ನಾವು ಶೇಕಡಾವಾರು ಕಲೆಕ್ಷನ್‌ ಹಂಚಿಕೆಗೆ ವಿರೋಧಿಸುವುದಿಲ್ಲ. ಆದರೆ, ಅದು ಯಾವ ರೀತಿ, ಯಾವ ಸಿನಿಮಾಗಳಿಗೆ ಎಂಬುದನ್ನು ನೋಡಿಕೊಂಡು ಮಾಡಬೇಕಾಗುತ್ತದೆ. ಶೇಕಡಾವಾರು ಕಲೆಕ್ಷನ್‌ನ ಪಾಲು ಕೇಳಿದಾಗ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾದ ಕಲೆಕ್ಷನ್‌ನಲ್ಲಿ ಪ್ರದರ್ಶಕರು ಗರಿಷ್ಠ ಮೊತ್ತದ ಕಲೆಕ್ಷನ್‌ ಕೇಳಿದರೆ ನಿರ್ಮಾಪಕನಿಗೆ ಅದರಲ್ಲಿ ಏನೂ ಸಿಗುವುದಿಲ್ಲ. ಅದಕ್ಕಾಗಿ ಬಿಗ್‌ ಬಜೆಟ್‌ನವರು ಬಾಡಿಗೆ ಆಧಾರದ ಪ್ರದರ್ಶನವನ್ನೇ ಬಯಸುತ್ತಾರೆ’ ಎಂದರು.

ನಾವೇ ಗರಿಷ್ಠ ಶೋಷಿತರು: ಓದುಗೌಡರ್‌

ಚಲನಚಿತ್ರ ಕ್ಷೇತ್ರದಲ್ಲಿ ಗರಿಷ್ಠ ಮಟ್ಟದ ಶೋಷಿತರು ನಾವೇ ಎನ್ನುತ್ತಾರೆ ಉತ್ತರ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್‌.ಆರ್‌. ಓದುಗೌಡರ್‌.

‘ನಾವೂ ಕೂಡಾ ಬಾಡಿಗೆ ಪದ್ಧತಿಯನ್ನೇ ಅನುಸರಿಸುತ್ತಿದ್ದೆವು. ಬಿಗ್‌ ಬಜೆಟ್‌ ಎಂದು ಹೇಳಿಕೊಳ್ಳುವ ಸಿನಿಮಾದವರು. ಆರಂಭದಲ್ಲಿ ಸರಿಯಾಗಿಯೇ ಬಾಡಿಗೆ ಕೊಡುತ್ತಾರೆ. ಕಲೆಕ್ಷನ್‌ ಕಡಿಮೆಯಾದಾಗ ಶೇಕಡಾವಾರು ಕಲೆಕ್ಷನ್‌ ಹಂಚಿಕೆ ಮಾಡಿಕೊಳ್ಳೋಣ ಎಂದು ಮಾತು ಬದಲಾಯಿಸುತ್ತಾರೆ. ಆಗ ಸಿನಿಮಾದ ಕಲೆಕ್ಷನ್ನೂ ಕಡಿಮೆಯಾಗಿರುತ್ತದೆ. ಇವರಿಗೆ ಬರಬೇಕಾದ ಲಾಭಾಂಶ ಬಂದಾಗಿರುತ್ತದೆ. ನಮ್ಮ ವೆಚ್ಚ ಮಾತ್ರ ಹಾಗೆಯೇ ಏರುತ್ತದೆ. ಇಂಥದ್ದನ್ನೆಲ್ಲಾ ನೋಡಿ ನೋಡಿ ರೋಸಿ ಹೋಗಿಯೇ ಮಹಾಮಂಡಳವು ವ್ಯಾವಹಾರಿಕ ವಿಷಯಗಳಲ್ಲಿ ಕಠಿಣ ನಿರ್ಧಾರಕ್ಕೆ ಬಂದಿದೆ’ ಎಂದು ಹೇಳಿದರು.

ಮುಂಗಡ ಕೊಟ್ಟು ಕೈ ಸುಟ್ಟುಕೊಂಡೆವು: ಒಂದು ಒಳ್ಳೆಯ ಸಿನಿಮಾ ಬರುತ್ತದೆ ಎಂದಾದಾಗ ಬಿಡುಗಡೆಗೆ ಮುನ್ನವೇ ಚಿತ್ರ ಮಂದಿರ ಮಾಲೀಕರು ನಿರ್ಮಾಪಕರಿಗೆ ಮುಂಗಡ ಹಣಕೊಟ್ಟು ಸಿನಿಮಾ ಬುಕ್‌ ಮಾಡುವುದಿದೆ. ಅದರಲ್ಲೂ ಹಿಂದಿರುಗಿಸಬಹುದಾದ ಮುಂಗಡ ಮತ್ತು ಹಿಂದಿರುಗಿಸಲಾಗದ ಮುಂಗಡ ಎಂದು ಎರಡು ವಿಧಗಳಿವೆ. ಚಿತ್ರ ಉತ್ತಮ ಪ್ರದರ್ಶನ ಕಂಡರೆ ಅದೃಷ್ಟಕ್ಕೆ ಆ ಮೊತ್ತ ಕಲೆಕ್ಷನ್‌ ಮೂಲಕ ಹಿಂದಕ್ಕೆ ಬರುತ್ತದೆ. ಇಲ್ಲವಾದರೆ ಕೈಸುಟ್ಟುಕೊಳ್ಳುವ ಪರಿಸ್ಥಿತಿ. ಇಂಥ ಅಮಾನವೀಯ ಪದ್ಧತಿ ತೊಲಗಬೇಕು ಎಂದು ಒತ್ತಾಯಿಸಿದರು.

ನಮಗೆ ಶೇಕಡಾವಾರು ಕಲೆಕ್ಷನ್‌ ಕೊಡಲು ಒಪ್ಪದ ನಿರ್ಮಾಪಕರು ಮಲ್ಟಿಪ್ಲೆಕ್ಸ್‌ಗಳಿಗೆ ಹೇಗೆ ಯಾವ ತಕರಾರು ಇಲ್ಲದೆ ಶೇಕಡಾವಾರು ಲೆಕ್ಕದಲ್ಲಿ ಸಿನಿಮಾ ಪ್ರದರ್ಶನಕ್ಕೆ ಕೊಡುತ್ತಾರೆ? ಅಲ್ಲಿ ಸಾಧ್ಯವಾಗುವುದು ಇಲ್ಲೇಕೆ ಸಾಧ್ಯವಿಲ್ಲ ಎಂದು ಓದುಗೌಡರ್‌ ಪ್ರಶ್ನಿಸಿದರು.

‘ಇದು ಕೊರೊನಾ ಕಾಲದಲ್ಲಷ್ಟೇ ಅಲ್ಲ. ಕೊರೊನಾ ಪೂರ್ವದಿಂದಲೂ ಈ ಶೋಷಣೆ ಮುಂದುವರಿದಿದೆ. ಇದಕ್ಕೆ ಪ್ರದರ್ಶಕರ ನಡುವಿನ ಅನಾರೋಗ್ಯಕರ ಸ್ಪರ್ಧೆಯೂ ಕಾರಣ. ಆಗಸ್ಟ್‌ 15ರಿಂದ ಚಿತ್ರ ಪ್ರದರ್ಶನಕ್ಕೆ ಸರ್ಕಾರ ಅವಕಾಶ ಕೊಟ್ಟ ದಿನದಿಂದಲೂ ನಾನು ಧ್ವನಿಯೆತ್ತುತ್ತಲೇ ಇದ್ದೇನೆ. ಆಗ ಯಾವ ನಿರ್ಮಾಪಕರೂ ನಮಗೆ ಸ್ಪಂದಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಮಕೃಷ್ಣ ಪ್ರತಿಕ್ರಿಯಿಸಿ, ‘ಮಲ್ಟಿಪ್ಲೆಕ್ಸ್‌ ವ್ಯವಸ್ಥೆ ಆರಂಭದಿಂದಲೂ ತನ್ನದೇ ಆದ ಕಂಪನಿ ಸಂಸ್ಕೃತಿಯಲ್ಲಿ ಬಂದುಬಿಟ್ಟಿದೆ. ಅಪಾಯದ ಅರಿವಿಲ್ಲದ ನಾವು ಆರಂಭದಲ್ಲಿ ಸಿನಿಮಾ ಕೊಟ್ಟುಬಿಟ್ಟೆವು. ಈಗ ಅದು ಮುಂದುವರಿದಿದೆ. ಸಣ್ಣ ಪಟ್ಟಣ, ಗ್ರಾಮೀಣ ಪ್ರದೇಶಗಳ ಚಿತ್ರಮಂದಿರಗಳ ತಮ್ಮದೇ ಆದ ರೀತಿಯಲ್ಲಿ ವ್ಯವಹಾರ ನಡೆಸುತ್ತಿವೆ. ಅವಕ್ಕೊಂದು ನಿರ್ದಿಷ್ಟ ಚೌಕಟ್ಟು ಇರಲಿಲ್ಲ. ಎಲ್ಲದಕ್ಕೂ ಒಂದು ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು. ಪರಸ್ಪರ ಚರ್ಚೆಯ ಮೂಲಕ ಒಂದು ಒಳ್ಳೆಯ ನಿರ್ಧಾರಕ್ಕೆ ಬರಬಹುದು’ ಎಂದು ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು