ಗುರುವಾರ , ಆಗಸ್ಟ್ 11, 2022
24 °C

ಹಿಂದಿಗೆ ರಿಮೇಕ್‌ ಆಗಲಿದೆಯಂತೆ ರಾಗಿಣಿ ನಟನೆಯ ‘ದಿ ಟೆರರಿಸ್ಟ್‌’ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟಿ ರಾಗಿಣಿ ದ್ವಿವೇದಿ ಡ್ರಗ್ಸ್‌ ಜಾಲದಲ್ಲಿ ಭಾಗಿಯಾದ ಆರೋಪದಡಿ ಈಗ ಸಿಸಿಬಿಯ ಬಂಧನದಲ್ಲಿದ್ದಾರೆ. ಈ ನಡುವೆಯೇ ಎರಡು ವರ್ಷಗಳ ಹಿಂದೆ ಆಕೆ ನಟಿಸಿದ್ದ ಕನ್ನಡದ ‘ದಿ ಟೆರರಿಸ್ಟ್‌’ ಸಿನಿಮಾವು ಹಿಂದಿಗೆ ರಿಮೇಕ್‌ ಆಗುತ್ತಿರುವ ಸುದ್ದಿ ಹೊರಬಿದ್ದಿದೆ. ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಪಿ.ಸಿ. ಶೇಖರ್‌ ಅವರೇ ಟ್ವೀಟ್‌ ಮೂಲಕ ಇದನ್ನು ದೃಢಪಡಿಸಿದ್ದಾರೆ.

ಗಿರೀಶ್ ಶಿವಣ್ಣ, ಕೀರ್ತಿ ಭಾನು, ರವಿ ಭಟ್ ಮತ್ತು ಮನು ಹೆಗಡೆ ನಟಿಸಿದ್ದ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಅಲಂಕಾರ್‌ ಪಾಂಡಿಯನ್. ರಾಗಿಣಿ ಇದರಲ್ಲಿ ರೇಷ್ಮಾ ಹೆಸರಿನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ತನ್ನ ತಂಗಿಯ ಅಪಹರಣದ ಬೆನ್ನಟ್ಟಿದ ರೇಷ್ಮಾ ಟೆರರಿಸ್ಟ್‌ಗಳ ಚಕ್ರವ್ಯೂಹದಲ್ಲಿ ಸಿಲುಕುತ್ತಾಳೆ. ಅದರಿಂದ ಹೊರಬರಲು ಏನೆಲ್ಲ ಕಸರತ್ತು ನಡೆಸುತ್ತಾಳೆ ಎಂಬುದೇ ಈ ಚಿತ್ರದ ಹೂರಣ. ಈ ಕ್ರೈಮ್‌ ಥ್ರಿಲ್ಲರ್‌ ಚಿತ್ರದಲ್ಲಿ ರಾಗಿಣಿಯ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.

‘ದಿ ಟೆರರಿಸ್ಟ್‌ ಚಿತ್ರದ ಹಿಂದಿಯ ರಿಮೇಕ್‌ ಹಕ್ಕುಗಳನ್ನು ವಿಶಾಲ್‌ ರಾಣಾ ಪಡೆದುಕೊಂಡಿದ್ದಾರೆ. ಸೋನಂ ಕಪೂರ್‌ ಅಥವಾ ವಿದ್ಯಾ ಬಾಲನ್‌ ಅವರು ರಾಗಿಣಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಶೀಘ್ರವೇ, ಈ ಸಿನಿಮಾ ಸೆಟ್ಟೇರಲಿದೆ’ ಎಂದು ನಿರ್ದೇಶಕ ಪಿ.ಸಿ. ಶೇಖರ್‌ ಟ್ವೀಟ್‌ ಮಾಡಿದ್ದಾರೆ.

ರಾಗಿಣಿ ಕನ್ನಡದಲ್ಲಿ ಕೊನೆಯದಾಗಿ ನಟಿಸಿ ಬಿಡುಗಡೆಯಾದ ಚಿತ್ರ ‘ಅಧ್ಯಕ್ಷ ಇನ್‌ ಅಮೆರಿಕಾ’. ಇದರಲ್ಲಿ ಅವರು ಶರಣ್‌ಗೆ ನಾಯಕಿಯಾಗಿದ್ದರು.

ರಘು ಹಾಸನ ನಿರ್ದೇಶನದ ‘ಗಾಂಧಿಗಿರಿ’ ಚಿತ್ರದಲ್ಲೂ ಆಕೆ ನಟಿಸಿದ್ದಾರೆ. ಇನ್ನೂ ಇದರ ಶೇಕಡ 20ರಷ್ಟು ಶೂಟಿಂಗ್‌ ಬಾಕಿ ಇದೆಯಂತೆ. ಇದರಲ್ಲಿ ಪ್ರೇಮ್‌ಗೆ ಅವರು ಜೋಡಿಯಾಗಿದ್ದಾರೆ. ರಾಗಿಣಿ ಬಂಧನದಲ್ಲಿರುವ ಪರಿಣಾಮ ಬಾಕಿ ಉಳಿದಿರುವ ಶೂಟಿಂಗ್‌ಗೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು