ಗುರುವಾರ , ಏಪ್ರಿಲ್ 15, 2021
19 °C

ಪವನ್‌ಕಲ್ಯಾಣ್ ಜೊತೆ ರಾಣಾ ನಟಿಸುವುದು ಫಿಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ಕೆಲದಿನಗಳಿಂದ ಟಾಲಿವುಡ್ ದಿಗ್ಗಜರಾದ ರಾಣಾ ದಗ್ಗುಬಾಟಿ ಹಾಗೂ ಪವರ್‌ಸ್ಟಾರ್‌ ಪವನ್‌ಕಲ್ಯಾಣ್ ಒಟ್ಟಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಈಗ ಈ ಸುದ್ದಿ ಪಕ್ಕಾ ಆಗಿದೆ. ಅಲ್ಲದೇ ಸ್ವತಃ ರಾಣಾ ಈ ಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಲಯಾಳಂನ ಸೂಪರ್‌ಹಿಟ್‌ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ ತೆಲುಗಿಗೆ ರಿಮೇಕ್‌ ಆಗುತ್ತಿದ್ದು ಇದರಲ್ಲಿ ಪವನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರಾಣಾ.

ಅಯ್ಯಪ್ಪನುಂ ಕೋಶಿಯುಂ ಚಿತ್ರದಲ್ಲಿ ಪ್ರಥ್ವಿರಾಜ್ ಸುಕುಮಾರನ್ ನಟಿಸಿದ್ದ ಪಾತ್ರಕ್ಕೆ ರಾಣಾ ಬಣ್ಣ ಹಚ್ಚಲಿದ್ದಾರೆ. ಬಿಜು ಮೆನನ್ ನಟಿಸಿದ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸಾಗರ್ ಕೆ. ಚಂದ್ರ ನಿರ್ದೇಶನ ಮಾಡುತ್ತಿದ್ದು ತಮನ್ ಎಸ್‌. ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅವರ ಹೆಸರು ಇನ್ನೂ ಅಂತಿಮವಾಗಿಲ್ಲ.

ರಾಣಾ ಆಗಮನದ ನಂತರ ಈ ಮಲ್ಟಿಸ್ಟಾರರ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. ರಾಣಾ ಸದಾ ಭಿನ್ನ ಹಾಗೂ ಚಾಲೆಂಜಿಂಗ್‌ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಕಾರಣಕ್ಕೆ ಈ ಚಿತ್ರದಲ್ಲೂ ರಾಣಾ ಚಿತ್ರಕ್ಕೆ ಪ್ಲಸ್‌ಪಾಯಿಂಟ್ ಆಗಲಿದ್ದಾರೆ ಎನ್ನುತ್ತಿವೆ ಮೂಲಗಳು. ಪವನ್‌ ಹಾಗೂ ರಾಣಾ ಇಬ್ಬರನ್ನು ಒಟ್ಟಾಗಿ ತೆರೆ ಮೇಲೆ ಕಾಣಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಸ್ಟಾರ್‌ ನಟರ ಇಮೇಜ್‌ಗೆ ತಕ್ಕಂತೆ ಚಿತ್ರಕಥೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದರೂ ಮೂಲಚಿತ್ರ ವೀಕ್ಷಿಸಿದವರಿಗೆ ಇವರ ಪಾತ್ರ ಏನು ಎಂಬುದನ್ನು ತಲೆಯಲ್ಲಿ ತಕ್ಷಣಕ್ಕೆ ಹೊಳೆಯಬಹುದು.

ಇತ್ತೀಚೆಗೆ ಅಭಿಮಾನಿಗಳನ್ನು ಸೆಳೆಯುವ ನಿಟ್ಟಿನಲ್ಲಿ ತಮನ್ ಸಂಗೀತ ನೀಡಿರುವ ಚಿತ್ರದ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು ಚಿತ್ರತಂಡ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರುವ 12ನೇ ಚಿತ್ರವಿದು.

ಈ ಸಿನಿಮಾ ಶೂಟಿಂಗ್ ಮುಂದಿನ ಜನವರಿಯಿಂದ ಆರಂಭವಾಗುವ ನಿರೀಕ್ಷೆ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು