ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Filmfare Awards 2024 | ರಣಬೀರ್‌, ಆಲಿಯಾ ಅತ್ಯುತ್ತಮ ನಟ, ನಟಿ

Published 30 ಜನವರಿ 2024, 7:04 IST
Last Updated 30 ಜನವರಿ 2024, 7:04 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನಲ್ಲಿ ನಡೆದ 69ನೇ ಫಿಲ್ಮ್‌ಫೇರ್‌ ಅವಾರ್ಡ್ಸ್‌ 2024ರಲ್ಲಿ ‘ಅನಿಮಲ್‌’ ಹಾಗೂ ‘ರಾಕಿ ಜೌರ್‌ ರಾಣಿ ಕಿ ಪ್ರೇಮ್‌ ಕಹಾನಿ’ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗಾಗಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ನಟಿ ಆಲಿಯಾ ಭಟ್‌ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು.

ನಿರ್ದೇಶಕ ವಿಧು ವಿನೋದ್‌ ಚೋಪ್ರಾ ಅವರ ‘12th Fail’ ಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು.

ಗುಜರಾತ್‌ ಪ್ರವಾಸೋದ್ಯಮದೊಂದಿಗೆ ಆಯೋಜಿಸಿದ್ದ 69ನೇ ಹ್ಯುಂಡೈ ಫಿಲ್ಮ್‌ಫೇರ್‌ ಅವಾರ್ಡ್ಸ್‌ 2024 ಗುಜರಾತ್‌ನ ಗಿಫ್ಟ್‌ ಸಿಟಿಯಲ್ಲಿ (ಗುಜರಾತ್ ಇಂಟರ್‌ ನ್ಯಾಷನಲ್‌ ಫೈನಾನ್ಸ್ ಟೆಕ್-ಸಿಟಿ) ನಡೆಯಿತು. ಕರಣ್‌ ಜೋಹರ್‌, ಆಯುಷ್ಮಾನ್ ಖುರಾನಾ ಮತ್ತು ಮನೀಶ್‌ ಪಾಲ್‌ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕರಣ್‌ ಜೋಹರ್‌ ನಿರ್ದೇಶನದ ‘ರಾಕಿ ಜೌರ್‌ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರವು ಅತ್ಯುತ್ತಮ ಸಂಭಾಷಣೆ ಹಾಗೂ ನೃತ್ಯ ಸಂಯೋಜನೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಇದೇ ಚಿತ್ರಕ್ಕಾಗಿ ಶಬಾನಾ ಅಜ್ಮಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದರು.

ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದ ನಟ ವಿಕ್ಕಿ ಕೌಶಲ್‌ ಅವರು ಶಾರುಖ್‌ ಖಾನ್‌ ಅಭಿನಯದ ಡಂಕಿ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದರು.

ಕಳೆದ ವರ್ಷ ತೆರೆಕಂಡ ಪಠಾಣ್‌, ಜವಾನ್‌ ಮತ್ತು ಡಂಕಿ ಮೂರು ಜನಪ್ರಿಯ ಚಿತ್ರಗಳು ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಹಾಗೂ ನಟ ಶಾರುಕ್‌ ಖಾನ್‌ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡರೂ ಪ್ರಶಸ್ತಿ ಲಭಿಸಿಲ್ಲ. ‘ಜವಾನ್‌’ ಚಿತ್ರಕ್ಕೆ ಮಾತ್ರ ಅತ್ಯುತ್ತಮ ವಿಎಫ್‌ಎಕ್ಸ್‌ ಮತ್ತು ಆ್ಯಕ್ಷನ್‌ ಫಿಲ್ಮ್‌ಫೇರ್‌ ಪ್ರಶಸ್ತಿ ದೊರೆತಿದೆ.

ಕಳೆದ ವರ್ಷದ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾದ ‘ಅನಿಮಲ್‌’ ಚಿತ್ರದಲ್ಲಿನ ನಟನೆಗಾಗಿ ರಣಬೀರ್‌ ಕಪೂರ್‌ ಅವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು. ಅಲ್ಲದೆ, ಚಿತ್ರವು ಅತ್ಯುತ್ತಮ ಸಂಗೀತ ಆಲ್ಬಮ್‌ ಮತ್ತು ಹಿನ್ನೆಲೆ ಸಂಗೀತಕ್ಕೆ ಪ್ರಶಸ್ತಿ ಪಡೆಯಿತು. ಚಿತ್ರದ ಅರ್ಜನ್‌ ವ್ಯಾಲಿ ಹಾಡಿಗಾಗಿ ಗಾಯಕ ಭೂಪಿಂದರ್‌ ಬಬ್ಬಲ್‌ಗೆ ಪ್ರಶಸ್ತಿ ಲಭಿಸಿತು.

‘12th Fail’ ಚಿತ್ರದ ನಾಯಕ ವಿಕ್ರಾಂತ್‌ ಮೆಸ್ಸೆ ಅವರು ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಫಿಲ್ಮ್‌ಫೇರ್‌ ಪ್ರಶಸ್ತಿಯನ್ನು ಪಡೆದರು. ಅಲ್ಲದೆ, ಚಿತ್ರಕಥೆ ಮತ್ತು ಸಂಕಲನ ವಿಭಾಗದಲ್ಲೂ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ.

ಕಾರ್ಯಕ್ರಮದಲ್ಲಿ ಕರೀನಾ ಕಪೂರ್‌, ಅಪರಶಕ್ತಿ ಖುರಾನಾ, ಕರಿಷ್ಮಾ ತನ್ನಾ, ಕಾರ್ತಿಕ್‌ ಆರ್ಯನ್‌, ರಣಬೀರ್‌, ಸಾರಾ ಅಲಿ ಖಾನ್‌ ಹಾಗೂ ಜಾಹ್ನವಿ ಕಪೂರ್‌ ಸೇರಿದಂತೆ ಅನೇಕ ನಟ, ನಟಿಯರು ಹಾಗೂ ಗಣ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT