ಸೋಮವಾರ, ಮಾರ್ಚ್ 27, 2023
32 °C

ಟಾಲಿವುಡ್‌ನ ಹಾಟ್ ಫೇವರಿಟ್ ರಶ್ಮಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಶ್ಮಿಕಾ ಮಂದಣ್ಣ ಸದ್ಯಕ್ಕೆ ತೆಲುಗು ಸಿನಿರಂಗದ ಬಹುಬೇಡಿಕೆಯ ನಟಿ. ಅವರ ನಟನೆಯ ‘ದೇವದಾಸ್’ ಹಾಗೂ ‘ಡಿಯರ್ ಕಾಮ್ರೇಡ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಾಗ ಅವರ ವೃತ್ತಿಯ ಮೇಲೆ ಹೊಡೆತ ಬೀಳಬಹುದು ಎನ್ನಲಾಗಿತ್ತು. ಆದರೆ ಅದನ್ನೂ ಮೀರಿ ಆಕೆ ಟಾಲಿವುಡ್‌ನ ಟಾಪ್ ಹಿರೋಯಿನ್‌ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ.

ರಶ್ಮಿಕಾ ಮಹೇಶ್‌ಬಾಬು ನಟನೆಯ ‘ಸರಿಲೇರು ನಿಕೆವ್ವರು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ಸಿನಿಮಾದಲ್ಲೂ ಕಿರಿಕ್ ಪಾರ್ಟಿ ಸುಂದರಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

ಸದ್ಯ ‘ಚಲೋ‘ ಖ್ಯಾತಿಯ ವೆಂಕಿ ಕುಡುಮುಲ ನಿರ್ದೇಶನದ ‘ಭೀಷ್ಮಾ’ ಚಿತ್ರದಲ್ಲಿ ನಟ ನಿತಿನ್ ಜೊತೆ ನಟಿಸುತ್ತಿದ್ದಾರೆ ಈ ಬೆಡಗಿ.

ಇದರೊಂದಿಗೆ ದಿಲ್ ರಾಜು ನಿರ್ದೇಶನದ, ನಾಗಚೈತನ್ಯ ನಟನೆಯ ‘ಅದೇ ನುವ್ವು, ಅದೇ ನೇನು’ ಚಿತ್ರಕ್ಕೂ ಸಹಿ ಹಾಕಿದ್ದಾರೆ.

ಮೂಲಗಳ ಪ್ರಕಾರ ಕರುನಾಡ ಕುವರಿ ಒಂದು ದಿನವೂ ಗ್ಯಾಪ್ ಇಲ್ಲದಂತೆ ತಮ್ಮ ಶೂಟಿಂಗ್ ಶೆಡ್ಯೂಲ್ ಇರಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಟಾಲಿವುಡ್‌ ಮೇಲೆ ಗಮನ ಹರಿಸುತ್ತಿದ್ದಾರೆ.

ಸಮಂತಾ ಬಳಿಕ ತೆಲುಗು ಸಿನಿರಂಗದಲ್ಲಿ ಯಾವ ನಟಿಯೂ ಬಿಗ್‌ಸ್ಟಾರ್ ಎಂದು ಕರೆಸಿಕೊಂಡಿಲ್ಲ. ಈಗ ರಶ್ಮಿಕಾ ಹಾಗೂ ಪೂಜಾ ಹೆಗ್ಡೆ ನಡುವೆ ನಂಬರ್ 1 ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಪೂಜಾ ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣಕ್ಕೆ ರಶ್ಮಿಕಾ ಮುಂದೆ ಅವಕಾಶಗಳು ಹೆಚ್ಚಿವೆ.

ನಾಗಚೈತನ್ಯಗೆ ರಶ್ಮಿಕಾ ನಾಯಕಿ

‘ಅದೇ ನುವ್ವು ಅದೇ ನೀನು’ ಚಿತ್ರಕ್ಕೆ ನಾಗಚೈತನ್ಯ ಅವರಿಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ.

2018ರಲ್ಲಿಯೇ ಚಿತ್ರೀಕರಣ ಆರಂಭಿಸಬೇಕಿದ್ದ‘ಅದೇ ನುವ್ವು ಅದೇ ನೀನು’ ಚಿತ್ರ ಕಾರಣಾಂತರಗಳಿಂದ ತಡವಾಗಿತ್ತು. ಸಿನಿಮಾ ಪ್ರಸಾರದ ಹಕ್ಕನ್ನು ತೆಲುಗಿನ ಜನಪ್ರಿಯ ಚಾನಲ್‌ವೊಂದಕ್ಕೆ ಮಾರಾಟ ಮಾಡಲಾಗಿತ್ತು. ಈಗ ಇದೇ ಚಾನಲ್‌ನ ಅಧಿಕೃತ ಫೇಸ್‌ಬುಕ್‌ ಪುಟದ ಮೂಲಕ ಒಂದು ಪ್ರಕಟಣೆಯನ್ನು ನೀಡಲಾಗಿದೆ.

ಸಿನಿಮಾ ಮತ್ತೆ ಸೆಟ್ಟೇರಲಿದೆ. ನಾಯಕ ಹಾಗೂ ನಾಯಕಿಯನ್ನು ಬದಲಿಸಲಾಗಿದೆ. ನಾಗಚೈತನ್ಯ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಲಿದ್ದಾರೆ ಎಂದು ಪೋಸ್ಟ್ ಹಾಕಲಾಗಿದೆ.

ಚಿತ್ರೀಕರಣ ಆರಂಭಿಸಲು 2018 ಅಕ್ಟೋಬರ್‌ ತಿಂಗಳಿನಲ್ಲಿ ಪೂಜೆಯನ್ನು ಮಾಡಲಾಗಿತ್ತು. ದಿಲ್‌ ರಾಜು ಅವರು ನಿರ್ಮಾಣ ಜವಾಬ್ದಾರಿ ಹೊತ್ತಿದ್ದರು. ಸಂಸದ ಜಯದೇವ್‌ ಗಲ್ಲಾ ಅವರ ಪುತ್ರ ಅಶೋಕ್‌ ಗಲ್ಲಾ ಅವರನ್ನು ಪರಿಚಯಿಸುವ ಉದ್ದೇಶದಿಂದ ಸ್ಕ್ರಿಪ್ಟ್ ಕೂಡ ಸಿದ್ದಗೊಂಡಿತ್ತು. ನಭಾ ನಟೇಶ್‌ ನಾಯಕಿಯಾಗಿ ಆಯ್ಕೆಯಾಗಿದ್ದರು. ಶೂಟಿಂಗ್ ಆರಂಭವಾದ ಒಂದೆರಡು ದಿನಗಳಲ್ಲಿಯೇ ಚಿತ್ರೀಕರಣ ನಿಂತುಹೋಗಿತ್ತು.

ಸಿನಿಮಾ ಸೆಟ್ಟೇರದಿದ್ದರೂ ಶೀರ್ಷಿಕೆ ಹಾಗೂ ಕತೆ ನಿರ್ಮಾಪಕರ ಬಳಿಯೇ ಉಳಿದುಕೊಂಡಿತ್ತು. ಈಗ ನಾಗಚೈತನ್ಯ ಹಾಗೂ ರಶ್ಮಿಕಾ ಅವರನ್ನು ದಿಲ್‌ ರಾಜು ಅವರೇ ಒಪ್ಪಿಸಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಆದರೆ ಸಿನಿಮಾ ತಂಡ ಮಾತ್ರ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.

ಇದು ರೊಮ್ಯಾಂಟಿಕ್‌ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ಆಗಲಿದೆ. 2018ರಲ್ಲಿಯೇ ಈ ಸಿನಿಮಾದ ಸ್ಕ್ರಿಪ್ಟ್ ಕುರಿತು ಸಾಕಷ್ಟು ಕುತೂಹಲ ಸೃಷ್ಟಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು