ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ನಟಿಸಲು ಸಿದ್ಧ: ಸೊನಾಲಿ ಬೇಂದ್ರೆ

ಟಾಮ್‌ ಬಾಯ್‌ ಲುಕ್‌ನಲ್ಲಿ ಕಾಣಿಸಿಕೊಂಡ ಚಿಗರೆ ಕಂಗಳ ಚೆಲುವೆ
Last Updated 13 ಮೇ 2019, 2:37 IST
ಅಕ್ಷರ ಗಾತ್ರ

ಹಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದಬಾಲಿವುಡ್‌ನಚಿಗರೆ ಕಂಗಳ ಚೆಲುವೆ ಸೊನಾಲಿ ಬೇಂದ್ರೆಇತ್ತೀಚೆಗೆ ಹೆಚ್ಚು ಸುದ್ದಿಯಾಗಿದ್ದೇ ಕ್ಯಾನ್ಸರ್‌ ಜತೆ ನಡೆಸಿದ ಹೋರಾಟದಿಂದ. ಮದುವೆ, ಮಗನ ಲಾಲನೆ, ಪಾಲನೆಯಲ್ಲಿ ಮುಳುಗಿದ್ದ ಸೊನಾಲಿ ಚಿತ್ರರಂಗದಿಂದ ದೂರವಾಗಿದ್ದರು.ಬಾಲಿವುಡ್‌ ಕೂಡ ಅವರನ್ನು ಮರೆತಿತ್ತು.

ಇನ್ನೇನು ಮಗ ಬೆಳೆದುನಿಂತ ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡರಾಯಿತು ಎನ್ನುವಾಗಲೇ ಕ್ಯಾನ್ಸರ್‌ ಬಳ್ಳಿಯಂತ ಬಳಕುವ ದೇಹವನ್ನು ಹೊಕ್ಕು ಅದೆಷ್ಟೋ ವರ್ಷವಾಗಿತ್ತು.ಮುಂದಿನದು ಕ್ಯಾನ್ಸರ್‌ ಜತೆ ನಿತ್ಯ ಹೋರಾಟದ ಬದುಕು. ನ್ಯೂಯಾರ್ಕ್‌ನಲ್ಲಿ ಕ್ಯಾನ್ಸರ್‌ ಚಿಕಿತ್ಸೆ, ಕೀಮೊಥೆರಪಿಗಾಗಿ ಆಸ್ಪತ್ರೆಗಳ ಓಡಾಟದಲ್ಲಿಯೇ ಎರಡು ವರ್ಷ ಉರುಳಿ ಹೋದವು.ಛಲಬಿಡದೆಕ್ಯಾನ್ಸರ್ ಜತೆ ಸೆಣಸಾಟ ನಡೆಸಿ ಗೆದ್ದು ಬಂದಿರುವ ಗಟ್ಟಿಗಿತ್ತಿ ಸೊನಾಲಿ ಮತ್ತೆ ಬಣ್ಣ ಹಚ್ಚಲು ಲವಲವಿಕೆಯಿಂದ ಸಿದ್ಧರಾಗಿದ್ದಾರೆ.

ಎಫ್‌ಕೆಸಿಸಿಐ ಫ್ಲೋ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಸೊನಾಲಿ ಮೊದಲಿನಂತೆ ಗೆಲುವಾಗಿದ್ದರು.ಬಾಡಿದ ಮುಖದಲ್ಲಿ ಮತ್ತೆ ನಗು ಅರಳಿದೆ. ಮಂಕಾಗಿದ್ದ ಚಿಗರೆ ಕಂಗಳಲ್ಲಿ ಮತ್ತೆ ಬೆಳಕು ಕಾಣುತ್ತಿದೆ. ಹಸಿರು ಬಣ್ಣದ ಚಿತ್ತಾರಗಳ ಪ್ಯಾಂಟ್‌, ಶರ್ಟ್‌ ತೊಟ್ಟು, ಕನ್ನಡಕ ಧರಿಸಿ ಮುಗುಳುನಗೆ ಸೂಸುತ್ತಾ ಬಂದ ಬಾಬ್‌ ಕಟ್‌ ಸೊನಾಲಿ ಥಟ್ಟನೆಗುರುತು ಹಿಡಿಯದಷ್ಟು ಬದಲಾಗಿದ್ದಾರೆ.

ಸೊನಾಲಿ ಬೇಂದ್ರೆ ಎಂದರೆ ಚಿತ್ರರಸಿಕರಿಗೆ ಥಟ್ಟನೆ ನೆನಪಿಗೆ ಬರುತ್ತಿದ್ದದ್ದೇ ಅವರ ಗುಳಿ ಕೆನ್ನೆ, ಮುಗ್ಧ ನಗು, ಚಿಗರೆ ಕಂಗಳು, ರೇಷ್ಮೆಯಂತಹ ಕೂದಲು. ಭಯಂಕರವಾದ ಕೀಮೊಥೆರಪಿ ಆಕೆಯ ರೇಷ್ಮೆಯಂತಹ ದಟ್ಟ ಕೂದಲನ್ನು ಸಂಪೂರ್ಣವಾಗಿ ನುಂಗಿ ಹಾಕಿದೆ. ಬಾಲ್ಡ್‌ ಹೆಡ್‌ ಮರೆಮಾಚಲು ಧರಿಸಿರುವ ಬಾಬ್‌ ಕಟ್‌ ವಿಗ್‌ನಿಂದಾಗಿತೆಳ್ಳಗೆ ಜಿಂಕೆಯಂತಿದ್ದ ಬೆಡಗಿಗೆ ಟಾಮ್‌ ಬಾಯ್‌ ಲುಕ್‌ ಬಂದಿದೆ. ನಿಜವಾಗಿಯೂ ಈಕೆ ಸೊನಾಲಿ ಬೇಂದ್ರೆನಾ ಎಂಬ ಅನುಮಾನ ಕಾಡಲು ಶುರುಮಾಡುತ್ತದೆ. ಕ್ಯಾನ್ಸರ್‌ ಶಾರೀರಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿ, ಬೌದ್ಧಿಕವಾಗಿಯೂ ಸೊನಾಲಿಯಲ್ಲಿ ಬದಲಾವಣೆ ತಂದಿರುವುದು ಮಾತಿನಲ್ಲಿಯೇ ಕಂಡುಬರುತ್ತದೆ.

ಕ್ಯಾನ್ಸರ್‌ ತನ್ನ ವ್ಯಕ್ತಿತ್ವದಲ್ಲಿ ಬದಲಾವಣೆ ತಂದಿದೆ. ನಾನು ಮೊದಲಿಗಿಂತ ಹೆಚ್ಚು ಪ್ರಬುದ್ಧಳಾಗಿದ್ದೇನೆ. ಇದರ ಕ್ರೆಡಿಟ್‌ ಏನಿದ್ದರೂ ಕ್ಯಾನ್ಸರ್‌ಗೆ ಸಲ್ಲಬೇಕು ಎನ್ನುತ್ತಾರೆ ಸೋನಾಲಿ.

‘ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದೇನೆ. ಶೂಟಿಂಗ್‌ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಡ್ಡಿ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೇಲಾಗಿ ನನ್ನ ದೇಹವೂ ಧನಾತ್ಮಕವಾಗಿ ಸ್ಪಂದಿಸುತ್ತಿದೆ. ಮತ್ತೆ ಸಿನಿಮಾದಲ್ಲಿ ನಟಿಸಲು, ಬಣ್ಣ ಹಚ್ಚಿಕೊಳ್ಳಲು ಮನಸು ಹಾತೊರೆಯುತ್ತಿದೆ. ಒಳ್ಳೆಯ ಆಫರ್‌ ಬಂದರೆ, ಪಾತ್ರ ಯಾವುದಾದರೇನು ನಟಿಸಲು ಸಿದ್ಧ’ ಎಂದು ಸೊನಾಲಿ ಸುಳಿವು ಕೊಟ್ಟರು.

‘ಪ್ರೀತ್ಸೆ’ ನೆನಪುಗಳ ಮೆರವಣಿಗೆ
ಕನ್ನಡ ಚಿತ್ರರಂಗದ ಬಗ್ಗೆ ಮಾತು ಬಂದಾಗ ಸೊನಾಲಿ ನೆನಪು ಸಹಜವಾಗಿ ದಶಕಗಳ ಹಿಂದೆ ತಾವು ನಾಯಕಿಯಾಗಿ ನಟಿಸಿದ ಏಕೈಕ ಕನ್ನಡ ಚಿತ್ರ ‘ಪ್ರೀತ್ಸೆ’ಯತ್ತ ಹೊರಳಿತು. ‘ಪ್ರೀತ್ಸೆ’ ಬಗ್ಗೆ ಪ್ರೀತಿಯಿಂದ ಮಾತನಾಡಿದ ಅವರು, ಶಿವರಾಜಕುಮಾರ್‌ ಜತೆ ನಟಿಸಿದ ಅನುಭವ ಅದ್ಭುತವಾಗಿತ್ತು ಎಂದು ನೆನಪಿಸಿಕೊಂಡರು. ‘ಪ್ರೀತ್ಸೆ’ ನಂತರ ಸ್ಯಾಂಡಲ್‌ವುಡ್‌ ತನ್ನನ್ನು ಮರೆತು ಬಿಟ್ಟಿತು.ಅದ್ಯಾಕೋ ಗೊತ್ತಿಲ್ಲ ನಂತರ ಮತ್ತೆತಮಗೆ ಕನ್ನಡ ಚಿತ್ರದಲ್ಲಿ ನಟಿಸುವಂತೆ ಅವಕಾಶ ಹುಡುಕಿಕೊಂಡು ಬರಲಿಲ್ಲ. ಒಳ್ಳೆಯ ಆಫರ್‌ ಬಂದರೆ ಈಗಲೂ ಕನ್ನಡ ಚಿತ್ರದಲ್ಲಿ ನಟಿಸಲು ಸಿದ್ಧ ಎಂದರು.

‘ಪ್ರೀತ್ಸೆ’ಯಿಂದ ಮಾತು ಚಿತ್ರದ ನಾಯಕ ನಟ ಶಿವರಾಜಕುಮಾರ್‌ ಅವರತ್ತ ಹೊರಳಿತು. ಶಿವರಾಜ್‌ ಕುಮಾರ್‌ ಒಳ್ಳೆಯ ನಟ. ಅದಕ್ಕಿಂತಲೂ ಹೆಚ್ಚಾಗಿ ಅವರೊಬ್ಬ ಲವ್ಲಿ ಪರ್ಸನ್‌ (ಒಳ್ಳೆಯ ವ್ಯಕ್ತಿ) ಎಂದು ಹೊಗಳಿದರು. ಅವರೊಂದಿಗೆ ನಟಿಸಲು ಆಹ್ವಾನ ಬಂದರೆ ಖಂಡಿತ ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಎಂದರು. ನನಗೆ ಬೆಂಗಳೂರು ಒಡನಾಟ ಹೊಸದಲ್ಲ. ಬಹಳ ವರ್ಷಗಳ ಹಿಂದೆ ನನ್ನ ತಂದೆ ಇಲ್ಲಿಯೇ ಸರ್ಕಾರಿ ನೌಕರಿಯಲ್ಲಿದ್ದರು. ಹೀಗಾಗಿ ನಾನು ಮತ್ತು ನನ್ನ ಮೂವರು ಸಹೋದರಿಯರು ಬೆಂಗಳೂರಿನಲ್ಲಿಯೇ ಬಾಲ್ಯವನ್ನು ಕಳೆದಿದ್ದೇವೆ. ಕನ್ನಡ ಕಲಿಯಲು ಆಗಲಿಲ್ಲ. ಅಲ್ಪಸ್ವಲ್ಪ ಅರ್ಥ ಮಾಡಿಕೊಳ್ಳಬಲ್ಲೆ ಎಂದರು ಸೊನಾಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT