ಸೋಮವಾರ, ಫೆಬ್ರವರಿ 24, 2020
19 °C

‘ಮಾಂಜ್ರಾ’ದಲ್ಲಿ ನೈಜ ಪ್ರೇಮಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಮಾಂಜ್ರಾ’ ಅಂದರೆ ಬೀದರ್ ತಾಲ್ಲೂಕಿನಲ್ಲಿ ಇರುವ ಒಂದು ನದಿ. ಆದರೆ, ನಿರ್ದೇಶಕ ಮುತ್ತುರಾಜ್ ರೆಡ್ಡಿ ಅವರ ಪಾಲಿಗೆ ಇದೊಂದು ಅಪರೂಪದ ಪ್ರೇಮಕಥೆ.

2005ರಲ್ಲಿ ಬೆಳಗಾವಿ ಸಮೀಪ ನಡೆದ ನೈಜ ಪ್ರೇಮಕಥೆಯೊಂದನ್ನು ಆಧರಿಸಿ ರೆಡ್ಡಿ ಅವರು ‘ಮಾಂಜ್ರಾ’ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ‘ಇದು ಶಂಕರ್ ಎನ್ನುವ ವ್ಯಕ್ತಿಯೊಬ್ಬರ ಪ್ರೇಮಕಥೆಯನ್ನು ಆಧರಿಸಿದೆ. ಇವರ ಕಥೆಯನ್ನು ನಾನು ತೆಲುಗು ಸುದ್ದಿಪತ್ರಿಕೆಯೊಂದರ ಮೂಲಕ ಓದಿ ತಿಳಿದುಕೊಂಡೆ. ಆ ಕಥೆಯನ್ನು ಸಿನಿಮಾ ಮಾಡಬೇಕು ಎಂದು ನನಗೆ ಆಗಲೇ ಅನಿಸಿತ್ತು’ ಎಂದು ರೆಡ್ಡಿ ಹೇಳಿದರು.

ತಮ್ಮ ಸಿನಿಮಾ ಕುರಿತು ಒಂದಿಷ್ಟು ವಿವರ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ‘ಶಂಕರ್ ಅವರು ಯುವತಿಯೊಬ್ಬಳನ್ನು ಪ್ರೀತಿಸುತ್ತಿ ದ್ದರು. ಆದರೆ ಒಂದು ದಿನ ಆ ಯುವತಿ ಸಾವನ್ನಪ್ಪಿದರು. ಅವರದ್ದು ಕೊಲೆಯೋ, ಆತ್ಮಹತ್ಯೆಯೋ ಎಂಬುದು ಯಾರಿಗೂ ಗೊತ್ತಿಲ್ಲ. ತಮ್ಮ ಪ್ರೇಯಸಿಗೆ ಕಾಲ್ಗೆಜ್ಜೆ ತೊಡಿಸಬೇಕು ಎಂದು ಶಂಕರ್ ಒಂದು ಜೊತೆ ಕಾಲ್ಗೆಜ್ಜೆ ತಂದಿಟ್ಟುಕೊಂಡಿದ್ದರು. ಆದರೆ, ಅದನ್ನು ಆಕೆಗೆ ತೊಡಿಸಬೇಕು ಎಂಬ ಆಸೆ ಈಡೇರಲಿಲ್ಲ’ ಎಂದು ಕಥೆಯನ್ನು ರೆಡ್ಡಿ ವಿವರಿಸಿದರು.

‘ಪ್ರೇಯಸಿ ಮೃತಪಟ್ಟ ನಂತರ ಶಂಕರ್ ಅವರಿಗೆ ಬುದ್ಧಿಭ್ರಮಣೆ ಆಯಿತು. ಅವರು ಈಗ ಸರಿಯಾಗಿ ಮಾತನಾಡಲಾರರು. ಹಾಗಾಗಿ, ತಮ್ಮ ಕಥೆಯನ್ನು ಹೇಳಿಕೊಳ್ಳಲು ಈಗ ಅವರಿಂದ ಆಗುತ್ತಿಲ್ಲ. ಆದರೆ, ಅವರ ಸ್ನೇಹಿತರ ಜೊತೆ ಮಾತನಾಡಿ ಅವರ ಕಥೆ ಏನು ಎಂಬುದನ್ನು ತಿಳಿದುಕೊಳ್ಳಲಾಗಿದೆ’ ಎಂದರು ರೆಡ್ಡಿ. ಪುಣೆಯ ರಂಜಿತ್ ಸಿಂಗ್ ಅವರು ಈ ಚಿತ್ರದ ನಾಯಕ ನಟನಾಗಿ ಅಭಿನಯಿಸಿದ್ದಾರೆ. ‘ಈ ಚಿತ್ರದ ನಾಯಕ ಹಳ್ಳಿ ಹುಡುಗ. ನಾನು ಪಟ್ಟಣದವನು. ಹಾಗಾಗಿ, ಹಳ್ಳಿಯ ಯುವಕನಂತೆ ನಟಿಸಲು ತರಬೇತಿ ಪಡೆಯಬೇಕಾಯಿತು’ ಎಂದರು ರಂಜಿತ್. ಅಪೂರ್ವ ಅವರು ಈ ಚಿತ್ರದ ನಾಯಕಿ. ರಂಜನ್ ಪನಗುತ್ತಿ ಅವರು ಖಳನಾಯಕನಾಗಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು