ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪೇಂದ್ರ ಸಂದರ್ಶನ: ಪ್ರಯೋಗದತ್ತ ರಿಯಲ್‌ ಸ್ಟಾರ್‌

Last Updated 31 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಕೆಲಕಾಲ ನಿರ್ದೇಶನದಿಂದ ಬ್ರೇಕ್‌ ತೆಗೆದುಕೊಂಡಿದ್ದ ನಟ ಉಪೇಂದ್ರ ಮತ್ತೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅವರ ನಟನೆಯ ‘ಹೋಮ್‌ ಮಿನಿಸ್ಟರ್‌’ ಇಂದು ಬಿಡುಗಡೆಯಾಗುತ್ತಿದೆ. ಆ ನೆಪ‍ದಲ್ಲಿ ರಿಯಲ್‌ ಸ್ಟಾರ್‌ ಜೊತೆಗೆ ಸಿನಿ ಕ್ಷೇತ್ರ, ಪ್ರಜಾಕೀಯದ ಬಗ್ಗೆ ನಡೆಸಿದ ಸಂದರ್ಶನದ ಝಲಕ್‌ ಇಲ್ಲಿದೆ...

ಯಾರಿವರು ‘ಹೋಮ್‌ ಮಿನಿಸ್ಟರ್‌’?

ಈ ‘ಹೋಮ್‌ ಮಿನಿಸ್ಟರ್‌’ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಅವರು ಯಾರು ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು. ಟ್ರೇಲರ್‌ ಈಗಾಗಲೇ ಕುತೂಹಲ ಹುಟ್ಟಿಸಿದೆ. ಇದೊಂದು ಕುಟುಂಬ ಪ್ರಧಾನ ಚಿತ್ರ. ಚಿತ್ರವು ಕೋವಿಡ್‌ ಸಂದರ್ಭದ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು, ವರ್ಕ್‌ ಫ್ರಂ ಹೋಮ್‌ ಇತ್ಯಾದಿ ವಿಷಯಗಳ ಬಗ್ಗೆ ತಮಾಷೆಯಾಗಿ ಕಥೆ ಹೇಳುತ್ತಾ ಹೋಗಿದೆ. ಒಂದು ಫ್ಲ್ಯಾಟ್‌ನಲ್ಲಿ ನಡೆಯುವ ಕಥೆಯಿದು. ಇಡೀ ಚಿತ್ರ ಹೊಸ ಮಜಾ ಕೊಡುತ್ತದೆ.

ಕಥೆಯ ಕೊನೆಯಲ್ಲಿ ಏನೋ ಹೊಸ ವಿಷಯ ಹೇಳಲು ಹೊರಟಂತಿದೆ...

ಹೌದು, ಸಣ್ಣ ತಿರುವು ಕೊಟ್ಟಿದ್ದೇವೆ. ಹೊಡೆದಾಟ, ಗುಂಡು ಹಾರಾಟ ಇವೆಲ್ಲಾ ಇತಿಮಿತಿಯಲ್ಲಷ್ಟೇ ಇವೆ. ಮನರಂಜನೆಯಲ್ಲಿ ಎಲ್ಲವೂ ಇರಬೇಕಲ್ವಾ? ಹಾಗಾಗಿ ಅದನ್ನು ಅಳವಡಿಸಿದ್ದೇವೆ. ಟ್ರೇಲರ್‌ ನೋಡಿದ ಅನೇಕರು ಈ ಅಂಶದ ಬಗ್ಗೆ ಕೇಳಿದ್ದಾರೆ. ಅವೆಲ್ಲದ್ದಕ್ಕೂ ಚಿತ್ರದಲ್ಲಿ ಉತ್ತರವಿದೆ.

‘ಕಬ್ಜ’ ಎಲ್ಲಿಯವರೆಗೆ ಬಂದಿತು?

‘ಕಬ್ಜ’ ಶೂಟಿಂಗ್‌ ಮುಂದಿನ ತಿಂಗಳು ಮುಗಿಯಲಿದೆ. ಬಳಿಕ ಶೂಟಿಂಗ್‌ ನಂತರದ ಕೆಲಸಗಳು ನಡೆಯಲಿವೆ. ಸೆಪ್ಟೆಂಬರ್‌ ವೇಳೆಗೆ ‘ಕಬ್ಜ’ವನ್ನು ತೆರೆಯಲ್ಲಿ ಕಾಣಬಹುದು.

ನಿರ್ದೇಶಕರಾಗಿ ಕೆಲಕಾಲದ ಅಂತರದ ಬಳಿಕ ಬರುತ್ತಿದ್ದೀರಿ. ಹೊಸ ಅಪ್‌ಡೇಟ್‌ಗಳು ಏನಿವೆ?

ತುಂಬಾ ಬದಲಾವಣೆಗಳು ಆಗಿವೆ. ಕಥೆ, ವಿಷಯ, ಚಿತ್ರಗಳ ಸಂಖ್ಯೆ ಎಲ್ಲವೂ ಹೆಚ್ಚಿವೆ. ಕೋವಿಡ್‌ ಕೂಡ ಕೆಲ ಕಾಲ ಬ್ರೇಕ್‌ ನೀಡಿತು. ನಾನೂ ಪ್ರಜಾಕೀಯ, ಕಿಟ್‌ ವಿತರಣೆ ಇತ್ಯಾದಿಗಳಲ್ಲಿ ಬ್ಯುಸಿ ಆಗಿದ್ದೆ. ಹಾಗಾಗಿ ಈ ಅಂತರದಲ್ಲಿ ಹೊಸ ಸ್ಕ್ರಿಪ್ಟ್‌ ಓದುವುದು, ಬರೆಯುವುದು, ಟ್ರೆಂಡ್‌ಗಳನ್ನು ಗಮನಿಸುವುದು ಇತ್ಯಾದಿ ಇದ್ದೇ ಇರುತ್ತಿತ್ತು. ಅವುಗಳು ನನ್ನ ಮುಂದಿನ ಚಿತ್ರದಲ್ಲಿ ಕಾಣಿಸಲಿವೆ.

U ಅನ್ನುವ ಲಾಳದ ಶೀರ್ಷಿಕೆ ಕೊಟ್ಟಿದ್ದೀರಲ್ಲಾ? ಹೊಸದೇನು ಹೇಳುತ್ತಿದ್ದೀರಿ?

ಎಲ್ಲರೂ ವಿಭಿನ್ನವಾದ ಚಿತ್ರ ಮಾಡುತ್ತೇವೆ ಎಂದೇ ಹೇಳುತ್ತಾರೆ. ಆದರೆ, U ಚಿತ್ರ ಏನು ಎಂಬ ಆಲೋಚನೆಯನ್ನು ಜನರೇ ಮಾಡಬೇಕು. ಅವರ ಆಲೋಚನೆಗೊಂದಿಷ್ಟು ಕೆಲಸ ಸಿಗಬೇಕು. ಅವರು ಹೊಸ ಪರಿಕಲ್ಪನೆಯನ್ನು ನಿರೀಕ್ಷಿಬೇಕು. ಆ ನಿಟ್ಟಿನಲ್ಲಿ U ಒಳ್ಳೆಯ ಚಿತ್ರವಾಗಿ ಮೂಡಿಬರಲಿದೆ.

ಪ್ರಜಾಕೀಯದ ಕಾರುಬಾರುಗಳು ಏನು?

ತುಂಬಾ ಚೆನ್ನಾಗಿ ನಡೆದಿದೆ. ಇಲ್ಲಿ ವಿಚಾರಗಳೇ ಪ್ರಚಾರವಾಗಬೇಕು. ಹಾಗಾಗಿ ದೊಡ್ಡಮಟ್ಟದ ಪ್ರಚಾರ ಮಾಡುತ್ತಿಲ್ಲ. ಆದರೆ, ಒಂದು ಬದಲಾವಣೆಯತ್ತ ಹೆಜ್ಜೆ ಇಟ್ಟಿರುವುದಂತೂ ನಿಜ. ಮುಂದಿನ ಚುನಾವಣೆಯಲ್ಲಿ ಪ್ರಜಾಕೀಯ ಖಂಡಿತವಾಗಿಯೂ ತನ್ನ ಇರುವಿಕೆ ತೋರಿಸಲಿದೆ. ಏನಿದ್ದರೂ ಪ್ರಜೆಗಳೇ ಮುಂದೆ ಬರಬೇಕು, ಮುನ್ನಡೆಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT