ಗುರುವಾರ , ಅಕ್ಟೋಬರ್ 1, 2020
21 °C

ಒಟಿಟಿಯಲ್ಲಿ ‘ಮಿತ್ರರಕ್ಷಕ’‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಆಪ್ತಮಿತ್ರ’ ಮತ್ತು ‘ಆಪ್ತರಕ್ಷಕ’ ಚಿತ್ರಗಳನ್ನು ಕನ್ನಡ ಸಿನಿಪ್ರಿಯರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ‘ಆಪ್ತಮಿತ್ರ’ ಚಿತ್ರವಂತೂ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸ್ಥಾಪಿಸಿದ ಸಿನಿಮಾ. ವರ್ಷಗಳ ಕಾಲ ತೆರೆ ಮೇಲೆ ಮಿಂಚಿದ್ದ ಈ ಸಿನಿಮಾ ನಟ ವಿಷ್ಣುವರ್ಧನ್ ಅವರ ವೃತ್ತಿ ಬದುಕಿನಲ್ಲಿ ಅಸಾಧಾರಣ ಚಿತ್ರವೂ ಎನಿಸಿದೆ. ‘ಆಪ್ತಮಿತ್ರ’ ನಂತರ 'ಆಪ್ತರಕ್ಷಕ' ಸಿನಿಮಾ ಕೂಡ ತೆರೆಕಂಡಿತ್ತು. 

ನಾಗವಲ್ಲಿ ಪಾತ್ರ ಕೇಂದ್ರವಾಗಿಟ್ಟುಕೊಂಡು ಆ‍ಪ್ತಮಿತ್ರ ಭಾಗ –3 ಚಿತ್ರ ಮಾಡಲು ಮುಂದಾಗಿದ್ದ ಹೊಸಬರ ತಂಡವೊಂದು, ನಂತರ ಶೀರ್ಷಿಕೆ ಬದಲಿಸಿಕೊಂಡು ಚಿತ್ರವನ್ನು ಪೂರ್ಣಗೊಳಿಸಿದೆ. ಮಾದೇಶ್ ಎಂಟರ್‌ಪ್ರೈಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ‘ಮಿತ್ರರಕ್ಷಕ’ ಶೀರ್ಷಿಕೆ ಇಡಲಾಗಿದೆ. ಇದೇ 15ರಂದು ಮೈ ಎಟಿಎಂ ಮೊಬೈಲ್ ಆ್ಯಪ್ ಒಟಿಟಿ ಮೂಲಕ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಓಂಪ್ರಕಾಶ್ ನಾಯಕ್, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜತೆಗೆ ನಾಗವಲ್ಲಿ ಪಾತ್ರದಲ್ಲಿ ಅವರು ನಟಿಸಿದ್ದಾರೆ.

ಸ್ನೇಹಿತರ ತಂಡ ದಟ್ಟ ಕಾಡಿಗೆ ಹೋದಾಗ ತಂಡದಲ್ಲಿದ್ದವರಲ್ಲಿ ಒಬ್ಬರ ಕೊಲೆ ನಡೆಯುತ್ತದೆ. ಆ ಕೊಲೆಯನ್ನು ನಾಗವಲ್ಲಿಯೇ ಮಾಡಿದೆ ಎಂದೂ ತಂಡದಲ್ಲಿದ್ದ ಕೆಲವರು ಭಾವಿಸುತ್ತಾರೆ. ಆದರೆ ನಿಜವಾದ ಕೊಲೆಗಾರ ಯಾರು, ಹೇಗೆ ಮತ್ತು ಏಕೆ ಕೊಲೆ ನಡೆಯುತ್ತದೆ ಎನ್ನುವ ರಹಸ್ಯವೇ ಈ ಚಿತ್ರದ ಕಥಾಹಂದರ. ಶೃಂಗೇರಿ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. 

ಕಿರಣ್ ಛಾಯಾಗ್ರಹಣ, ನವೀನ್ ಸಹ‌ನಿರ್ದೇಶನ, ಓಂಪ್ರಕಾಶ್ ಸಂಕಲನ, ದೇವದಾಸ್ ಸಂಗೀತವಿದೆ. ಶ್ರೀಧರ್, ಸ್ಮೈಲ್ ಶಿವು, ಸ್ವಪ್ನ, ಕಾವ್ಯ, ಅವಿನಾಶ್ ಭಾರದ್ವಾಜ್, ಪ್ರಸನ್ನ, ರುದ್ರೇಶ್, ಶಂಕರ್ ಬಾಬು, ಅನಿತಾ ಹೆಗ್ಗರ್, ನೆಲಮಂಗಲ ಬಾಬು ಅವರ ತಾರಾಗಣವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು