ಮಂಗಳವಾರ, ಸೆಪ್ಟೆಂಬರ್ 21, 2021
21 °C

ಅನಂತನಾಗ್‌ ಭಾರತೀಯ ಸಿನಿಮಾದ ಅಭಿಜ್ಞ: ನಟ ಯಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ ನಟ ಅನಂತನಾಗ್‌ ಅವರ ಹೆಸರನ್ನು ನಾಮನಿರ್ದೇಶಿಸಿ ಟ್ವಿಟರ್‌ನಲ್ಲಿ ಆರಂಭವಾಗಿರುವ ಅಭಿಯಾನಕ್ಕೆ ನಟ ಯಶ್‌ ಕೂಡಾ ಬೆಂಬಲ ಸೂಚಿಸಿದ್ದಾರೆ. ‘ಅನಂತನಾಗ್‌ ಅವರು ಕೇವಲ ನಟರಲ್ಲ, ಅವರು ಭಾರತೀಯ ಸಿನಿಮಾದ ಅಭಿಜ್ಞ’ ಎಂದು ಯಶ್‌ ಉಲ್ಲೇಖಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಯಶ್‌, ‘ನಟನೆ ಎನ್ನುವುದು ವರ್ತನೆ’ ಹೀಗೆಂದು ಒಮ್ಮೆ ಅನಂತನಾಗ್‌ ಅವರು ನನ್ನಲ್ಲಿ ಹೇಳಿದ್ದರು. ಈ ಮಾತು ನನ್ನಲ್ಲಿ ಇನ್ನೂ ಉಳಿದಿದೆ. ಬೆಳೆಯುತ್ತಾ, ಅವರ ಹಾಸ್ಯ ಪ್ರಧಾನ ಚಿತ್ರಗಳನ್ನು ನೋಡಿ ನಕ್ಕವನು ನಾನು. ಅವರು ಅತ್ತಾಗ ನನ್ನ ಕಣ್ಣೂ ಒದ್ದೆಯಾಗಿತ್ತು. ಈ ಮಾಂತ್ರಿಕನ ಜೊತೆಗೆ ತೆರೆ ಹಂಚಿಕೊಳ್ಳಬೇಕು ಎನ್ನುವ ಆಸೆ ನನಗೆ ಎಂದೆಂದಿಗೂ ಇರಲಿದೆ. ಅವರ ಸಿನಿಮಾಗಳು ಇಂದಿಗೂ ಪ್ರಸ್ತುತ. ಅವರ ನಟನೆ ಇರಲಿ ಅಥವಾ ಅವರ ಪ್ರತಿಭೆ ಸದಾ ಹಸಿರಾಗಿಯೇ ಇರಲಿದೆ. ಕಿರುತೆರೆಯಿಂದ ಹಿಡಿದು ನನ್ನ ಸಿನಿಮಾ ಪಯಣದ ಆರಂಭದಿಂದಲೂ ಈ ಅದ್ಭುತ ನಟನ ಜೊತೆ ನಟಿಸುವ ಭಾಗ್ಯ ನನಗೆ ದೊರಕಿದೆ. ಅನಂತನಾಗ್‌ ಅವರಿಗೆ ಹಲವು ವಿಷಯಗಳ ಬಗ್ಗೆ ಇದ್ದ ಅಪಾರ ಜ್ಞಾನ ನನಗೆ ಪ್ರೇರಣೆ. ಅನಂತನಾಗ್‌ ಅವರು ಸದಾ ಕರ್ನಾಟಕದ ಹೆಮ್ಮೆಯಾಗಿರಲಿದ್ದಾರೆ. ಅನಂತನಾಗ್‌ ಅವರು ಕೇವಲ ನಟರಲ್ಲ, ಅವರು ಭಾರತೀಯ ಸಿನಿಮಾದ ಅಭಿಜ್ಞ. ಹೀಗಾಗಿ ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮನಾರು? ಎಂದು ಉಲ್ಲೇಖಿಸಿದ್ದಾರೆ. 

ಟ್ವೀಟ್‌ ಜೊತೆಗೆ ಅನಂತನಾಗ್‌ ಅವರ ಜೊತೆಗಿರುವ ಫೋಟೊವನ್ನೂ ಯಶ್‌ ಪೋಸ್ಟ್‌ ಮಾಡಿದ್ದಾರೆ. ಪದ್ಮ ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳನ್ನು ಸೆ.15ರೊಳಗಾಗಿ ನಾಮನಿರ್ದೇಶನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಟ್ವೀಟ್‌ ಮುಖಾಂತರ ಸಾರ್ವಜನಿಕರನ್ನು ಕೇಳಿಕೊಂಡಿರುವ ಬೆನ್ನಲ್ಲೇ, ನಟ ಅನಂತ್‌ನಾಗ್‌ ಅವರಿಗೆ ಪದ್ಮಪ್ರಶಸ್ತಿ ನೀಡಬೇಕು ಎನ್ನುವ ಅಭಿಯಾನವನ್ನು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಟ್ವಿಟರ್‌ನಲ್ಲಿ ಆರಂಭಿಸಿದ್ದರು. ನಟರಾದ ಪುನೀತ್‌ ರಾಜ್‌ಕುಮಾರ್‌, ರಕ್ಷಿತ್‌ ಶೆಟ್ಟಿ ಸೇರಿದಂತೆ ಹಲವು ಕಲಾವಿದರು, ಸಾವಿರಾರು ಜನರು ಈ ಅಭಿಯಾನಕ್ಕೆ ಸಾವಿರಾರು ಜನರು ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು