ಮಂಗಳವಾರ, ಸೆಪ್ಟೆಂಬರ್ 21, 2021
27 °C

ಸಿನಿಪ್ರಿಯರಿಗೆ ನಿರಾಸೆ: ರಾಜಮೌಳಿಯ ‘ಆರ್‌ಆರ್‌ಆರ್‌‘ ಬಿಡುಗಡೆ ಮುಂದಕ್ಕೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌‘ ಯಾವಾಗ ಬಿಡುಗಡೆ ಆಗುತ್ತದೋ ಎಂದು ಸಿನಿಪ್ರಿಯರು ತುದಿಗಾಲ ಮೇಲೆ ನಿಂತಿದ್ದಾರೆ.

ಶೂಟಿಂಗ್ ಹಾಗೂ ನಿರ್ಮಾಣೋತ್ತರ ಕೆಲಸಗಳನ್ನು ಮುಗಿಸಿರುವ ಆರ್‌ಆರ್‌ಆರ್‌, ಇದೇ ಅಕ್ಟೋಬರ್ 13 ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿರುವುದಾಗಿ ಚಿತ್ರತಂಡ ಇಂದು ಟ್ವಿಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

‘ಅಕ್ಟೋಬರ್‌ನಲ್ಲಿ ‘ಆರ್‌ಆರ್‌ಆರ್‌’ ಬಿಡುಗಡೆ ಮಾಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಎಲ್ಲರಿಗೂ ಗೊತ್ತಿರುವಂತೆ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡಲಿಕ್ಕೆ ಕೊರೊನಾವೈರಸ್‌ ಸಾಂಕ್ರಾಮಿಕದಿಂದ ಸಾಕಷ್ಟು ಅನಾನುಕೂಲ ಆಗಲಿದೆ. ನಾವು ಅನಿವಾರ್ಯವಾಗಿ ಆರ್‌ಆರ್‌ಆರ್‌ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದೇವೆ. ಮುಂದಿನ ದಿನಾಂಕವನ್ನು ಸದ್ಯ ಪ್ರಕಟಿಸುತ್ತಿಲ್ಲ. ಏಕೆಂದರೆ, ಜಗತ್ತಿನಾದ್ಯಂತ ಬಹುತೇಕ ಚಿತ್ರಮಂದಿರಗಳು ಮುಚ್ಚಿವೆ. ಸಿನಿಮಾ ರಂಗ ಸಹಜ ಸ್ಥಿತಿಗೆ ಬಂದ ನಂತರ ನಾವು ಆದಷ್ಟು ಬೇಗ ಆರ್‌ಆರ್‌ಆರ್‌ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ‘ ಎಂದು ಚಿತ್ರತಂಡ ತಿಳಿಸಿದೆ.

 

ಕೋವಿಡ್ 3ನೇ ಅಲೆಯ ಆತಂಕದಲ್ಲಿರುವ ಚಿತ್ರ ವಿತರಕರು ಆರ್‌ಆರ್‌ಆರ್‌ ಬಿಡುಗಡೆಯನ್ನು ವಿಳಂಬ ಮಾಡುವಂತೆ ರಾಜಮೌಳಿಗೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. ಒಂದು ವೇಳೆ ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ ಎಂಬುದು ವಿತರಕರ ವಾದವಾಗಿದೆ.

 

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ಸುಮಾರು ₹400 ಕೋಟಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್‌ ಅವರ ಜೀವನ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಮ್‌ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿ ನಿರ್ದೇಶನದ 'ಆರ್‌ಆರ್‌ಆರ್‌' ಬಿಡುಗಡೆ ಮತ್ತೆ ಮುಂದೂಡಿಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು