ಸೋಮವಾರ, ಸೆಪ್ಟೆಂಬರ್ 21, 2020
27 °C

ಸೈರಾ ನರಸಿಂಹರೆಡ್ಡಿ: ಶಿಥಿಲ ಚಿತ್ರಕಥೆಯಲ್ಲೂ ಹಿಡಿದಿಡುವ ಚಿರಂಜೀವಿ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

saira narasimha reddy

ಚಿತ್ರ: ಸೈರಾ ನರಸಿಂಹ ರೆಡ್ಡಿ (ತೆಲುಗು)
ನಿರ್ದೇಶನ: ಸುರೇಂದರ್ ರೆಡ್ಡಿ 
ತಾರಾಗಣ: ಚಿರಂಜೀವಿ, ಅಮಿತಾಭ್ ಬಚ್ಚನ್, ಸುದೀಪ್, ಜಗಪತಿ ಬಾಬು, ತಮನ್ನಾ, ನಯನತಾರಾ

ಗಾಂಧಿಜಯಂತಿಯ ದಿನ ‘ಸೈರಾ ನರಸಿಂಹ ರೆಡ್ಡಿ’ ತೆರೆಕಂಡಿದೆ. ಗಾಂಧಿ ಅಹಿಂಸಾ ಪ್ರತಿಪಾದಕ. ನರಸಿಂಹ ರೆಡ್ಡಿ ಹಿಂಸಾವಾದಿ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರೇರಣೆ ನೀಡಿದ ಹಿಂಸಾ ಹೋರಾಟಗಾರನಾಗಿ ರಾಯಲಸೀಮೆಯ ಯೋಧ ನರಸಿಂಹ ರೆಡ್ಡಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾನೆ. ಅವನ ಸುತ್ತಲಿನ ಹೋರಾಟದ ಕಥನವನ್ನು ಉತ್ಪ್ರೇಕ್ಷೆ ಮಾಡಿ ನಿರ್ದೇಶಕ ಸುರೇಂದರ್ ರೆಡ್ಡಿ 170 ನಿಮಿಷಗಳ ದೀರ್ಘಾವಧಿ ಸಿನಿಮಾ ಮಾಡಿದ್ದಾರೆ.

ಝಾನ್ಸಿ ರಾಣಿ ಪಾತ್ರಧಾರಿ ಅನುಷ್ಕಾ ಶರ್ಮ ನರಸಿಂಹ ರೆಡ್ಡಿಯ ಪ್ರೇರಣಾ ಕಥನಕ್ಕೆ ಮುನ್ನುಡಿ ಹೇಳುತ್ತಾಳೆ. ಅಷ್ಟಕ್ಕೆ ಮಾತ್ರ ಆಕೆಯ ಪಾತ್ರ ಸೀಮಿತ. ಆಮೇಲೆ ನರಸಿಂಹ ರೆಡ್ಡಿಯ ಜನನದಿಂದ ಹಿಡಿದು ಮರಣದವರೆಗೆ ಚಿತ್ರಕಥೆಯನ್ನು ನಿರ್ದೇಶಕರು ಮೊದಲರ್ಧ ಹಿಂಜಿ, ಎರಡನೇ ಅರ್ಧ ಬೆಳೆಸಿದ್ದಾರೆ. 

ಕಪ್ಪ ಕೇಳುವ ಬ್ರಿಟಿಷರು ಮುಖ್ಯ ಖಳರು. ತಮ್ಮ ನಡುವೆಯೇ ಇರುವ ಕೃತ್ರಿಮ ಮನಸ್ಸಿನ ಬಂಧು-ಮಿತ್ರರಲ್ಲಿ ಕೆಲವರು ಉಪಖಳರು. ನರಸಿಂಹ ರೆಡ್ಡಿಗೆ ಒಬ್ಬ ಮಹಾಗುರು. ಅದು ಅಮಿತಾಭ್ ಬಚ್ಚನ್. ಬುದ್ಧಿಯಿಂದ ಯುದ್ಧ ಮಾಡಬೇಕು ಎಂದು ಬಾಲ್ಯದಲ್ಲೇ ನಾಯಕನಿಗೆ ಪಾಠ ಹೇಳುವ ಅವರಿಗೆ ತಮ್ಮ ಶಿಷ್ಯನಿಗೆ ಸಾವೇ ಇಲ್ಲವೆಂಬ ನಂಬಿಕೆ. 

ನರಸಿಂಹ ರೆಡ್ಡಿಯ ಜನಪ್ರೀತಿ, ನರ್ತಕಿ ಪ್ರೀತಿ, ಬಾಲ್ಯವಿವಾಹದ ಹಂಗು ಇವೆಲ್ಲವುಗಳನ್ನೂ ಮಂದ ಬೆಳಕಿನಲ್ಲಿ, ಕಲ್ಪಿತ ಜನಪದೀಯ ಶೈಲಿಯಲ್ಲಿ ನಿರ್ದೇಶಕರು ತೋರಿಸುತ್ತಾ ಹೋಗುತ್ತಾರೆ. 1995ರಲ್ಲಿ ತೆರೆಕಂಡಿದ್ದ, ಮೆಲ್ ಗಿಬ್ಸನ್ ನ ‘ಬ್ರೇವ್ ಹಾರ್ಟ್’ ಸಿನಿಮಾ ನೆನಪಾಗಲು ಅನುಕರಣೆ ಮಾಡಿದ ಅದರ ಶೈಲಿಯೇ ಕಾರಣ. 

ಸಾಹಸ ಸಂಯೋಜನೆ ಸಿನಿಮಾದ ಹೈಲೈಟ್. ಕೆಲವು ಭಾವುಕ ಸನ್ನಿವೇಶಗಳು, ಯುದ್ಧದ ದೃಶ್ಯಗಳು ಛಾಪು ಮೂಡಿಸುತ್ತವೆ. ಚಿರಂಜೀವಿ ಅರುವತ್ತು ದಾಟಿದ ತಮ್ಮ ವಯಸ್ಸನ್ನು ಮೇಕಪ್ಪಿನಿಂದ ಮುಚ್ಚಿಹಾಕಿರುವ ರೀತಿಯಂತೂ ಬೆರಗು. ಅವರ ಕಣ್ಣೊಳಗೆ ಅಭಿನಯ ತೀವ್ರತೆಯ ಬನಿ. ತಮನ್ನಾ ಅವರಿಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವರಾದರೂ ತೆರೆಮೇಲೆ ಅದು ಅರಿವಿಗೇ ಬರುವುದಿಲ್ಲ. ಸುದೀಪ್ ಕೂಡ ಚಿರಂಜೀವಿ ಜತೆಗಿನ ಬಹುತೇಕ ಸನ್ನಿವೇಶಗಳಲ್ಲಿ ಹದವರಿತಂತೆ ಅಭಿನಯಿಸಿದ್ದಾರೆ. ವಿಜಯ್ ಸೇತುಪತಿ ಪಾತ್ರಕ್ಕೆ ತೂಕವಿಲ್ಲ. ನಯನತಾರಾ ಸಿಕ್ಕ ಅವಕಾಶದಲ್ಲೇ ತಮನ್ನಾಗೂ ಪೋಟಿ ನೀಡಿದ್ದಾರೆ. ಹಲವು ಭಾಷೆಗಳ ನಟ-ನಟಿಯರು ಚಿತ್ರದಲ್ಲಿ ಇಡುಕಿರುದಿರುವುದು ಮಾರುಕಟ್ಟೆಯ ತಂತ್ರ. ಕನ್ನಡತಿ ಪವಿತ್ರಾ ಲೋಕೇಶ್, ಲಕ್ಷ್ಮೀ ಗೋಪಾಲಸ್ವಾಮಿ ಸಿಕ್ಕ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ರತ್ನವೇಲು ಸಿನಿಮಾಟೊಗ್ರಫಿಯ ಶ್ರಮಕ್ಕೆ ಸಿನಿಮಾದಲ್ಲಿ ದಟ್ಟ ಉದಾಹರಣೆಗಳು ಸಿಗುತ್ತವೆ. ಆದರೆ, ಅಮಿತ್ ತ್ರಿವೇದಿ ಸ್ವರ ಸಂಯೋಜನೆಯ ಹಾಡುಗಳು ಕಾಡುವುದಿಲ್ಲ. ಸಂಭಾಷಣೆ ಇನ್ನೂ ಹರಿತವಾಗಬೇಕಿತ್ತು. ದೃಶ್ಯದಿಂದ ದೃಶ್ಯಕ್ಕೆ ಅಗತ್ಯವಿರುವ ಬಂಧ ಸಿನಿಮಾದಲ್ಲಿ ಇಲ್ಲ. ಚಿತ್ರಕಥೆಯ ಹೆಣಿಗೆಯಲ್ಲಿ ಎದ್ದುಕಾಣುವ ಲೋಪವಿದು. ಹೀಗಾಗಿಯೇ ಮೊದಲರ್ಧ ವಿಪರೀತ ಎಳೆದಂತಾಗಿದೆ. 

ಉತ್ತಮ ತಂತ್ರಗಾರಿಕೆ, ದುರ್ಬಲ ಶಿಲ್ಪ-ಎರಡನ್ನೂ ಸಿನಿಮಾಗೆ ಅನ್ವಯಿಸಿ ಹೇಳಬಹುದು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು