ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದಾದರು ಸಲ್ಮಾನ್ ಖಾನ್‌– ಗಾಯಕ ಅರ್ಜಿತ್ ಸಿಂಗ್‌: ಕೊನೆಗೊಂಡ 9 ವರ್ಷಗಳ ಮುನಿಸು

Published 19 ಅಕ್ಟೋಬರ್ 2023, 12:44 IST
Last Updated 19 ಅಕ್ಟೋಬರ್ 2023, 12:44 IST
ಅಕ್ಷರ ಗಾತ್ರ

ಒಂಬತ್ತು ವರ್ಷಗಳ ಬಳಿಕ ಬಾಲಿವುಡ್‌ ನಟ ಸಲ್ಮಾನ್ ಖಾನ್ ಮತ್ತು ಜನಪ್ರಿಯ ಗಾಯಕ ಅರ್ಜಿತ್‌ ಸಿಂಗ್ ನಡುವಿನ ಮುನಿಸು ಕೊನೆಗೊಂಡಿದೆ. ಸಲ್ಮಾನ್‌ ಖಾನ್‌ ಅವರ ಮುಂದಿನ ಚಿತ್ರ ‘ಟೈಗರ್‌–3’ಗೆ ಹಾಡೊಂದನ್ನು ಹಾಡುವ ಮೂಲಕ ಇಬ್ಬರ ನಡುವಿನ ಸ್ನೇಹ ಮತ್ತೆ ಚಿಗುರಿದೆ.

ಹೌದು.... 2014ರಿಂದ ಅರ್ಜಿತ್ ಸಿಂಗ್‌ ಅವರಿಗೆ ಸಲ್ಮಾನ್‌ ಖಾನ್‌ ಚಿತ್ರಗಳಿಗೆ ಅಘೋಷಿತ ಬಹಿಷ್ಕಾರ ಹಾಕಲಾಗಿತ್ತು. ಗಾಯಕ ಅರ್ಜಿತ್ ಸಿಂಗ್‌ ತಮ್ಮ ಚಿತ್ರಗಳಿಗೆ ಹಾಡು ಹಾಡುವುದಿಲ್ಲ ಎಂದು ಸಲ್ಮಾನ್ ಬಹಿರಂಗವಾಗಿ ಹೇಳಿಕೊಂಡಿದ್ದರು. ಈ ವಿಚಾರವಾಗಿ ಅರ್ಜಿತ್ ಸಿಂಗ್‌ ಸಲ್ಮಾನ್‌ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಅದಾದ ಬಳಿಕವೂ ಮುನಿಸು ಕೊನೆಗೊಂಡಿರಲಿಲ್ಲ.

ತಾವಿಬ್ಬರು ಒಂದಾಗಿರುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಸಲ್ಮಾನ್‌, ‘ಟೈಗರ್‌–3 ಚಿತ್ರದ ಮೊದಲ ಹಾಡಿನ ಮೊದಲ ಝಲಕ್‌ ಇದು. ನನ್ನ ಚಿತ್ರಕ್ಕೆ ಅರ್ಜಿತ್‌ ಸಿಂಗ್ ಹಾಡಿದ ಮೊದಲ ಹಾಡು ಇದು(ಜಗಳದ ನಂತರ). ನವೆಂಬರ್‌ 12ಕ್ಕೆ ಚಿತ್ರ ತೆರೆ ಮೇಲೆ ಬರಲಿದೆ’ ಎಂದು ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 4ರಂದು ಗಾಯಕ ಅರ್ಜಿತ್ ಸಿಂಗ್‌ ಸಲ್ಮಾನ್‌ ಖಾನ್‌ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ಬಗ್ಗೆ ನೆಟ್ಟಿಗರೊಬ್ಬರು ವಿಡಿಯೊ ಹಂಚಿಕೊಂಡಿದ್ದು, ಇಬ್ಬರು ಒಂದಾಗಿದ್ದಾರೆ ಎಂಬ ಸುದ್ದಿ ಹರದಾಡಿತ್ತು. ಇದಾದ ಸ್ವಲ್ಪ ದಿನಗಳಲ್ಲೇ ಅರ್ಜಿತ್‌ ಸಲ್ಮಾನ್‌ ಖಾನ್‌ ಸಿನಿಮಾಕ್ಕೆ ಹಾಡು ಹಾಡಿದ್ದಾರೆ.

ಏನಿದು ಜಗಳ?

2014ರಲ್ಲಿ ನಡೆದ ಖಾಸಗಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರ್ಜಿತ್ ಸಿಂಗ್‌ ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಸ್ವತಃ ಸಲ್ಮಾನ್‌ ಖಾನ್‌ ಅವರೇ ಆಯೋಜಿಸಿದ್ದರು. ಈ ವೇಳೆ ವೇದಿಕೆ ಮೇಲೆ ನಡೆದ ಜಗಳವು ಇಬ್ಬರ ನಡುವಿನ ಸಂಬಂಧವು ಹದಗೆಡುವಂತೆ ಮಾಡಿತ್ತು.

ಸಾಧಾರಣ ಬಟ್ಟೆ, ಫ್ಲಿಪ್‌ ಪಾಪ್‌ ಧರಿಸಿ ವೇದಿಕೆ ಮೇಲೆ ಬಂದ ಅರ್ಜಿತ್ ಸಿಂಗ್ ಅವರನ್ನು ಸಲ್ಮಾನ್‌ ಕಾಲೆಳೆದಿದ್ದರು. ಏನು ನಿದ್ದೆ ಮಾಡಿದ್ದೀರಾ? ಎಂದು ಸಲ್ಮಾನ್ ಕಿಚಾಯಿಸಿದ್ದು, ನೀವೆಲ್ಲ ನಿದ್ದೆ ಹೋಗುವಂತೆ ಮಾಡಿದ್ದೀರಲ್ಲ ಎಂದು ಅರ್ಜಿತ್‌ ಖಾರವಾಗಿಯೇ ಉತ್ತರಿಸಿದ್ದರು.

ಈ ಘಟನೆ ಬೆನ್ನಲ್ಲೇ 'ಸುಲ್ತಾನ್' ಮತ್ತು 'ಬಜರಂಗಿ ಭಾಯಿಜಾನ್' ಸೇರಿದಂತೆ ಸಲ್ಮಾನ್ ಅವರ ಚಿತ್ರಗಳಿಂದ ಅಜಿತ್ ಸಿಂಗ್ ಅವರ ಹಾಡುಗಳನ್ನು ತೆಗೆದುಹಾಕಲಾಯಿತು.

2016ರಲ್ಲಿ ಹಾಡುಗಳನ್ನು ಪುನಃ ಹಾಕುವಂತೆ ಅರ್ಜಿತ್ ಸಿಂಗ್ ಕ್ಷಮೆಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT