ಶನಿವಾರ, ಮಾರ್ಚ್ 25, 2023
28 °C

‘ಬಂಗಾರ‍್ರಾಜು’ ಚಿತ್ರದಲ್ಲಿ ಸಮಂತಾ, ನಾಗಚೈತನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಯಾಣ್‌ ಕೃಷ್ಣ ಅವರ ಬಹುನಿರೀಕ್ಷಿತ ‘ಬಂಗಾರ‍್ರಾಜು’ ಚಿತ್ರದಲ್ಲಿ  ನಟಿ ಸಮಂತಾ ಅಕ್ಕಿನೇನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಅವರ ಪತಿ ನಾಗಚೈತನ್ಯ ನಟಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನಾಗಾರ್ಜುನ ಅಕ್ಕಿನೇನಿ. 

ನಾಗಾರ್ಜುನ, ನಾಗಚೈತನ್ಯ ಹಾಗೂ ಸಮಂತಾ ಈ ಮೂವರೂ ಈ ಸಿನಿಮಾದ ಭಾಗವಾಗಿರುವುದರಿಂದ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಸಮಂತಾ ಅವರದ್ದೇ ಪ್ರಮುಖ ಪಾತ್ರ. ಆದರೆ ಯಾವ ರೀತಿಯ ಪಾತ್ರ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಅಕ್ಕಿನೇನಿ ನಾಗಾರ್ಜುನ ಚಿತ್ರದ ಕೆಲಸಗಳ ಬಗ್ಗೆ ಈಗಾಗಲೇ ಕಲ್ಯಾಣ್‌ ಕೃಷ್ಣ ಜೊತೆ ಮಾತನಾಡಿದ್ದಾರೆ. ಇದು 2016ರಲ್ಲಿ ಬಿಡುಗಡೆಯಾದ ‘ಸೋಗ್ಗಾಡೆ ಚಿನ್ನಿನಾಯನಾ’ ಚಿತ್ರದ ಸೀಕ್ವೆಲ್‌. 

‘ಸೋಗ್ಗಾಡೆ ಚಿನ್ನಿನಾಯನಾ’ ಚಿತ್ರವನ್ನು ಕಲ್ಯಾಣ್‌ ಕೃಷ್ಣ ಅವರೇ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ತನ್ನ ಸಂಬಂಧಿಕರಿಂದಲೇ ಕೊಲೆಯಾಗುವ ವ್ಯಕ್ತಿ ಬಂಗಾರ‍್ರಾಜು, ಯಮನ ಒಪ್ಪಿಗೆ ಪಡೆದು ಭೂಮಿಗೆ ವಾಪಸ್‌ ಬಂದು ತನ್ನ ಸಾವಿನ ಹಿಂದಿನ ಕಾರಣವನ್ನು ಪತ್ತೆ ಹಚ್ಚುವುದು ಸಿನಿಮಾದ ಕತೆ. ಇದು ಸೂಪರ್‌ಹಿಟ್‌ ಆಗಿತ್ತು. ಇದರಲ್ಲಿ ಅಕ್ಕಿನೇನಿ ನಾಗಾರ್ಜುನ, ರಮ್ಯಕೃಷ್ಣ, ಲಾವಣ್ಯ ತ್ರಿಪಾಠಿ ನಟಿಸಿದ್ದರು. ಈ ಸಿನಿಮಾವು ಕನ್ನಡದಲ್ಲಿ ‘ಉಪೇಂದ್ರ ಮತ್ತೆ ಬಾ’ ಎಂದು ರಿಮೇಕ್‌ ಆಗಿತ್ತು. ಇದರಲ್ಲಿ ಉಪೇಂದ್ರ, ಪ್ರೇಮಾ ಹಾಗೂ ಶ್ರುತಿ ಹರಿಹರನ್‌ ನಟಿಸಿದ್ದರು. 

ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾಕ್ಕೆ ‘ಬಂಗಾರ‍್ರಾಜು’ ಎಂದೇ ಹೆಸರಿಟ್ಟಿದ್ದಾರೆ .

ಸಮಂತಾ ಹಾಗೂ ನಾಗಚೈತನ್ಯ ಜೋಡಿಯಾಗಿ ನಟಿಸಲಿದ್ದಾರೆ. ಇದು ಇವರಿಬ್ಬರು ಜೋಡಿಯಾಗಿ ನಟಿಸುತ್ತಿರುವ ಐದನೇ ಚಿತ್ರವಾಗಿದೆ. ಈ ಹಿಂದೆ ‘ಏ ಮಾಯ ಚೇಸಾವೆ’, ‘ಮನಂ’,
‘ಆಟೋನಗರ್‌ ಸೂರ್ಯ’ ಹಾಗೂ ‘ಮಜಿಲಿ’ಯಲ್ಲಿ ಜೊತೆಯಾಗಿ ನಟಿಸಿದ್ದರು. 

ನಾಗಾರ್ಜುನ ತಮ್ಮ ಅನ್ನಪೂರ್ಣ ಸ್ಟುಡಿಯೊ ಬ್ಯಾನರ್‌ನಡಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು