ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಮಾಸ್ಟರ್‌ ಆನಂದ್ ಸಂದರ್ಶನ: ‘ರಂಗ’ನ ಕನಸು

Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಜನರನ್ನು ನಗಿಸಲು ‘ನಾ ಕೋಳಿಕ್ಕೆ ರಂಗ’ ಎನ್ನುತ್ತಾ ನಟ ಮಾಸ್ಟರ್‌ ಆನಂದ್‌ ಇಂದು(ನ.10) ತೆರೆ ಮೇಲೆ ಬರುತ್ತಿದ್ದಾರೆ. ಕಿರುತೆರೆ, ಬೆಳ್ಳಿತೆರೆಯ ಹೆಜ್ಜೆಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ಗುರಿಯನ್ನು ಆನಂದ್‌ ಸಿನಿಮಾ ಪುರವಣಿ ಜೊತೆಗೆ ಹಂಚಿಕೊಂಡರು...

ಪ್ರ

‘ಪ್ರೇಮಂ ಪೂಜ್ಯಂ’ ಆನಂದ್‌ ಕಂಬ್ಯಾಕ್‌ ಚಿತ್ರವಾಗಿತ್ತು. ಮತ್ತೆ ತೆರೆ ಮೇಲೆ ಹೆಚ್ಚು ಕಾಣಿಸಿಕೊಳ್ಳಲಿಲ್ಲವೇಕೆ?

ನನಗೆ ಈ ‘ಕಂಬ್ಯಾಕ್‌’ ಎನ್ನುವ ಪದಪ್ರಯೋಗದ ಬಗ್ಗೆ ಬೇರೆಯದೇ ಆಲೋಚನೆ ಇದೆ. ಒಬ್ಬ ನಟ ಇಂಡಸ್ಟ್ರಿಗೆ ಬಂದ ನಂತರ, ಜನರ ಮನದಲ್ಲಿ ಆತನಿಗೆ ಜಾಗ ಸಿಕ್ಕಿತು ಎಂದರೆ ಯಾವುದೇ ‘ಗೋಬ್ಯಾಕ್‌’, ‘ಕಂಬ್ಯಾಕ್‌’ ಇರುವುದಿಲ್ಲ. ಇದು ನಾನು ನಂಬಿರುವ ತತ್ವ. ಸಿನಿಮಾವನ್ನು ದಿನನಿತ್ಯ ಮಾಡಲು ಸಾಧ್ಯವಿಲ್ಲ. ಒಂದು ವರ್ಷ, ಎರಡು ವರ್ಷ ಬಿಟ್ಟು ಸಿನಿಮಾ ಮಾಡಿದರೆ ಅದನ್ನು ಕಂಬ್ಯಾಕ್‌ ಅನ್ನಲು ಸಾಧ್ಯವಿಲ್ಲ. 25 ವರ್ಷ ಸಿನಿಮಾದಿಂದ ದೂರವಿದ್ದು, ಮತ್ತೆ ತೆರೆ ಮೇಲೆ ಬಂದರೆ ಕಂಬ್ಯಾಕ್‌ ಎನ್ನಬಹುದು. ಈಗ ಬರುತ್ತಿರುವ ಸಿನಿಮಾಗಳನ್ನು ನೋಡಿದರೆ, ಒಬ್ಬರು ಮೂರ್ನಾಲ್ಕು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಉತ್ತಮವಾದ ಒಂದು ಸಿನಿಮಾ ನೀಡದೇ ಇದ್ದರೆ ಯಾವ ಕಂಬ್ಯಾಕೂ ಇಲ್ಲ. ಒಂದೊಳ್ಳೆಯ ಪಾತ್ರದ ಮುಖಾಂತರ ಜನರ ಮುಂದೆ ಬರದೇ ಇದ್ದರೆ ಎಷ್ಟೇ ಸಿನಿಮಾ ಮಾಡಿದರೂ ಪ್ರಯೋಜನವಿಲ್ಲ. ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟು ಎನ್ನುವುದು ನನ್ನ ಪಾಲಿಸಿ. ಅಸ್ತಿತ್ವ ತೋರಿಸಿಕೊಳ್ಳುವ ಬದಲು ಒಳ್ಳೆಯ ಸಿನಿಮಾಗಳನ್ನು ಮಾಡೋಣ ಎನ್ನುವುದು ನನ್ನ ಗುರಿ. ‘ಪ್ರೇಮಂ ಪೂಜ್ಯಂ’ ಬಳಿಕ ಹಲವು ಆಫರ್‌ಗಳು ಬಂದವು. ಕೇವಲ ಫ್ರೆಂಡ್‌ ಆಗಿ, ಪೋಷಕ ನಟನಾಗಿ ಮಾಡುವಾಗ ಅದರಲ್ಲಿ ಸತ್ವ ಏನಿದೆ? ಅದಕ್ಕಾಗಿ ನಾನು ಗುಣಮಟ್ಟದ ಪಾತ್ರಗಳಿಗಾಗಿ ಕಾಯುವೆ. 

ಇವತ್ತು ಒಬ್ಬ ನಟ, ನಿರ್ದೇಶಕ ನಾನಿಷ್ಟೇ ಸಿನಿಮಾ ಮಾಡುವುದು ಎಂದು ಗುರಿ ಇಟ್ಟುಕೊಂಡಿರುತ್ತಾನೆ. ಆ ಸಿನಿಮಾಗಳಿಗೇ ಹೆಚ್ಚಿನ ಗಮನಹರಿಸುತ್ತಾರೆ. ಹಿಂದಿನ ಕಾಲದಲ್ಲಿ ನಿರ್ದೇಶಕನೊಬ್ಬ ಜೀವನಪೂರ್ತಿ ಸಿನಿಮಾ ಮಾಡಿ ದುಡಿದ ಹಣವನ್ನು, ಇಂದು ನಿರ್ದೇಶಕನೊಬ್ಬ ಒಂದೆರಡು ಸಿನಿಮಾಗಳಲ್ಲಿ ಮಾಡುತ್ತಾನೆ. ಇವತ್ತು ಸಿನಿಮಾ ಗುಣಮಟ್ಟದ ಮೇಲೆ ಗಮನ ಹೆಚ್ಚಿದೆ. ಗುಣಮಟ್ಟದ ಪಾತ್ರಗಳು, ಕಂಟೆಂಟ್‌ಗಳು ಬಂದಾಗ ಅದನ್ನು ಆರಿಸಿಕೊಳ್ಳುವ ಅವಕಾಶ ನನ್ನ ಮುಂದಿದೆ; ಅನಿವಾರ್ಯ ಅಲ್ಲ.

ಪ್ರ

ಕಿರುತೆರೆ ಮೇಲೆ ಹೆಚ್ಚಿನ ಗಮನವೇ?

ಹಾಗೇನಿಲ್ಲ. ಅದು ಎಲ್ಲರಲ್ಲಿರುವ ಒಂದು ಭ್ರಮೆ. ನಾನು ಯಾವುದೇ ಧಾರಾವಾಹಿ ಮಾಡುತ್ತಿಲ್ಲ. ನಾನು ರಿಯಾಲಿಟಿ ಶೋಗಳ ನಿರೂಪಣೆ ಮಾಡುತ್ತಿದ್ದೇನೆ. ಇದು ತಿಂಗಳಲ್ಲಿ ನಾಲ್ಕೇ ದಿನ. ವಾಹಿನಿಯವರು ಒಂದು ದಿನ ಶೂಟಿಂಗ್‌ ನಡೆಸಿದರೆ, ಕಂಟೆಂಟ್‌ಗಳ ಮಹಾಪೂರವನ್ನೇ ಸೃಷ್ಟಿಸುತ್ತಾರೆ. ರೀಲ್ಸ್‌, ಫೋಟೊ, ಪ್ರೊಮೊ... ಹೀಗೆ. ಅದು ಪ್ರತಿನಿತ್ಯ ಒಂದಲ್ಲ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಲೇ ಇರುತ್ತದೆ. ಕಳೆದ ಐದು ವರ್ಷಗಳಿಂದ ಇತ್ತೀಚೆಗೆ ನಾನು ನಾನ್‌–ಫಿಕ್ಷನ್‌ ಕಾರ್ಯಕ್ರಮಗಳನ್ನು ಹೆಚ್ಚು ಮಾಡುತ್ತಿದ್ದೇನೆ. ಈ ಕಂಟೆಂಟ್‌ಗಳು ಜನರನ್ನು ಆವರಿಸಿರುವ ಕಾರಣ ನಾನು ಕಿರುತೆರೆಯಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದೇನೆ ಎನ್ನುವ ಭಾವನೆ ಮೂಡುತ್ತದೆ. ಆದರೆ ವಾಸ್ತವದಲ್ಲಿ ನನ್ನ ಬಳಿ ಒಂದಿಷ್ಟು ಆರೋಗ್ಯಕರ ಸಮಯ ಉಳಿಯುತ್ತದೆ. ಈ ಅವಧಿಯನ್ನು ನಾನು ಕುಟುಂಬಕ್ಕೆ, ವೈಯಕ್ತಿಕ ಗುರಿ ಸಾಧಿಸಲು, ಕಥೆಗಳನ್ನು ಬರೆಯಲು, ಮನರಂಜನಾ ಕ್ಷೇತ್ರದ ಸಂಶೋಧನೆಗಳಿಗೆ ವಿನಿಯೋಗಿಸುತ್ತಿದ್ದೇನೆ. ಕಂಟೆಂಟ್‌ ಮಾರುಕಟ್ಟೆ ಹಿರಿದಾಗಿದೆ. ಕಾಲ, ಸಮಯ ಕೂಡಿಬಂದಾಗ ನಾನು ಸಿದ್ಧಪಡಿಸಿದ ಕಂಟೆಂಟ್‌ಗಳನ್ನು ಈ ಮಾರುಕಟ್ಟೆಗೆ ಬಿಡುತ್ತೇನೆ.  

ಪ್ರ

‘ನಾ ಕೋಳಿಕ್ಕೆ ರಂಗ’ ಯಾವ ಮಾದರಿಯ ಸಿನಿಮಾ? ನಿಮ್ಮ ಪಾತ್ರದ ಬಗ್ಗೆ ಹೇಳಿ.

ಇದೊಂದು ಹಳ್ಳಿ ಸೊಗಡಿನ ಸಿನಿಮಾ. ಇಲ್ಲಿ ಮನರಂಜನೆಗೆ ಆದ್ಯತೆ ಇದೆ. ಮನರಂಜನೆಗಾಗಿ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಆಗಮಿಸುತ್ತಾರೆ. ನಮ್ಮ ಸಿನಿಮಾದಲ್ಲಿ ಮನರಂಜನೆಗೇನೂ ಕೊರತೆ ಇಲ್ಲ. ನಮ್ಮ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಪ್ರಾಣಿ ಹಿಂಸೆ ಬಗ್ಗೆ ಸಂದೇಶವೊಂದನ್ನು ನೀಡಿದ್ದೇವೆ. ನನ್ನ ಪಾತ್ರದ ಹೆಸರು ‘ರಂಗ’. ಉಂಡಾಡಿ ಗುಂಡ ಈತ. ಆತನ ಜೊತೆಯಲ್ಲೊಂದು ಹುಂಜ. ತಂದೆಯ ಪಿಂಚಣಿ ಹಣದಲ್ಲಿ ಜೀವನ ಸಾಗಿಸುವ ಕುಟುಂಬ. ಹೆಚ್ಚಿನ ಜವಾಬ್ದಾರಿ ಇರದ ‘ರಂಗ’ನ ಸುತ್ತ ಚಿತ್ರದ ಕಥೆಯಿದೆ. ಒಂದು ನಾಯಿ, ಬೆಕ್ಕು, ಟಗರಿನ ಜೊತೆಗೆ ಮನುಷ್ಯನ ಸಂಬಂಧ ಗಾಢವಾಗಿರುವುದನ್ನು ನೋಡಿರುತ್ತೇವೆ. ಇಲ್ಲಿ ‘ಹುಂಜ’ದ ಜೊತೆಗೆ ನನ್ನ ಪಾತ್ರ ಭಾವನಾತ್ಮಕವಾಗಿ ಎಷ್ಟು ಬೆಸೆದುಕೊಂಡಿದೆ ಎನ್ನುವುದನ್ನು ನೋಡಬಹುದು. 

ಪ್ರ

ಆನಂದ್‌ ಮೇಲೆ ಜನರು ಇಟ್ಟಿರುವ ನಿರೀಕ್ಷೆ ಹೇಗಿದೆ?

ಮೊದಲಿಗೆ ‘ನಾ ಕೋಳಿಕ್ಕೆ ರಂಗ’ ಸಿನಿಮಾ ಹೆಚ್ಚು ಭಾವನಾತ್ಮಕವಾಗಿ ಮೂಡಿಬಂದಿತ್ತು. ಒಬ್ಬ ಕಲಾವಿದನಾಗಿ ನಾನು ಈ ಗಾಢವಾದ ಭಾವನೆಗಳಲ್ಲಿ ಚೆನ್ನಾಗಿ ಸ್ಕೋರ್‌ ಮಾಡಿದ್ದೇನೆ, ವಿಭಿನ್ನವಾಗಿ ನಟಿಸಿದ್ದೇನೆ ಎನಿಸಿತು. ಆದರೆ ನನ್ನ ಸಿನಿಮಾ ಎಂದ ಮೇಲೆ ಜನರಿಗೆ ಒಂದಿಷ್ಟು ಹಾಸ್ಯದ ನಿರೀಕ್ಷೆ ಇರುತ್ತದೆ. ಹೀಗಾಗಿ ಮತ್ತೊಮ್ಮೆ 35–40 ನಿಮಿಷಕ್ಕೆ ಬೇಕಾಗುವಷ್ಟು ಹಾಸ್ಯ ದೃಶ್ಯಗಳನ್ನು ಶೂಟಿಂಗ್‌ ಮಾಡಿ, ಇಡೀ ಸಿನಿಮಾಗೆ ಮರುರೂಪ ನೀಡಿದೆವು. ಜನರ ನಿರೀಕ್ಷೆ ಒಂದು ರೀತಿ ತೀರದ ದಾಹ. ಜನರ ಮನಸ್ಸಿನಲ್ಲಿ ಯಾವ ರೀತಿ ಛಾಪು ಒತ್ತಿರುತ್ತೇವೆಯೋ ಅದನ್ನು ಮೀರಿ ಹೊಸದನ್ನು ನೀಡುವುದೇ ಒಂದು ಸವಾಲು.

ಪ್ರ

ಆನಂದ್‌ ಕೈಯಲ್ಲಿರುವ ಪ್ರಾಜೆಕ್ಟ್‌ಗಳು...

ಸದ್ಯ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಕಥೆಗಳನ್ನು ಕೇಳುತ್ತಿದ್ದೇನೆ. ಕೆಲವು ಚರ್ಚೆಯ ಹಂತದಲ್ಲಿವೆ. ಪಾತ್ರಗಳನ್ನು ಮಾಡುವುದಕ್ಕಿಂದ ನನ್ನದೇ ಒಂದಿಷ್ಟು ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ತಯಾರಿಯಲ್ಲಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT