ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ: ಭಿನ್ನ ಪಾತ್ರದತ್ತ ರಾಜ್‌ ಶೆಟ್ಟಿ

Published 16 ಮೇ 2024, 23:30 IST
Last Updated 16 ಮೇ 2024, 23:30 IST
ಅಕ್ಷರ ಗಾತ್ರ
ನಟ ರಾಜ್‌ ಬಿ.ಶೆಟ್ಟಿ ನಟನೆಯ ಮೊದಲ ಮಲಯಾಳ ಸಿನಿಮಾ ‘ಟರ್ಬೊ’ ಮೇ 23ಕ್ಕೆ ಬಿಡುಗಡೆಯಾಗುತ್ತಿದೆ. ರಾಜ್‌ ಅವರಿಗೂ ಮಲಯಾಳ ಸಿನಿಮಾ ಇಂಡಸ್ಟ್ರಿಗೂ ನಂಟು ಮೊದಲಿನಿಂದಲೂ ಇದೆ. ಇತ್ತೀಚೆಗೆ ತೆರೆ ಕಂಡ ಫಹಾದ್‌ ಫಾಸಿಲ್‌ ನಟನೆಯ ‘ಆವೇಶಂ’ನಲ್ಲೂ ರಾಜ್‌ ಅವರ ಅಳಿಲು ಸೇವೆ ಇದೆ.
ಪ್ರ

‘ಟರ್ಬೊ’ದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? 

ನಾನು ‘ಟೋಬಿ’ ಸಿನಿಮಾ ಪ್ರಚಾರಕ್ಕೆ ಕೇರಳಕ್ಕೆ ಹೋಗಿದ್ದೆ. ಆ ಸಂದರ್ಭದಲ್ಲಿ, ‘ಟರ್ಬೊ’ ಚಿತ್ರತಂಡ ಸ್ಕ್ರಿಪ್ಟ್‌ ಅಂತಿಮಗೊಳಿಸಿ ಚಿತ್ರೀಕರಣಕ್ಕೆ ಸಿದ್ಧವಾಗಿತ್ತು. ಆ ವೇಳೆಯಲ್ಲಿ ಅವರು ನನ್ನನ್ನು ಸಂಪರ್ಕಿಸಿದ್ದರು. ನನಗೆ ಅವರು ವಿವರಿಸಿದ ಆ ಪಾತ್ರ ವಿಶೇಷವಾಗಿತ್ತು. ಆತ ನೋಡಲು ಸಾಮಾನ್ಯನಾಗಿದ್ದರೂ ತುಂಬಾ ಅಸಾಮಾನ್ಯ. ಆ ಪಾತ್ರಕ್ಕೆ ಅಗತ್ಯವಾಗಿದ್ದ ದೈಹಿಕ ಗುಣಲಕ್ಷಣಗಳು ಅವರಿಗೆ ನನ್ನಲ್ಲಿ ಕಂಡವು. ನಾನು ಮೊದಲು ಕಥೆ ಕೇಳಿದೆ. ಆ ಪಾತ್ರ ಬಹಳ ಪರಿಣಾಮ ಬೀರುವ ಪಾತ್ರವಾಗಿತ್ತು. ಮಮ್ಮುಟ್ಟಿ ಅವರ ಜೊತೆ ತೆರೆಹಂಚಿಕೊಳ್ಳುವಂತಹ ಪಾತ್ರ ನನಗೆ ಸಿಗುತ್ತಿದೆಯೇ ಎಂದು ಆಶ್ಚರ್ಯವೂ ಆಯಿತು. ಮಲಯಾಳದಲ್ಲಿ ನಾನು ಯಾವುದೇ ಸಿನಿಮಾ ಮಾಡಿರಲಿಲ್ಲ. ಹೀಗಿರುವಾಗ ಇಂತಹ ಪಾತ್ರದ ಆಫರ್‌ ಬಂದಿತ್ತು. ಸಿನಿಮಾದಲ್ಲಿ ಕಬೀರ್‌ ಸಿಂಗ್‌, ಸುನಿಲ್‌ ಅವರಂತಹ ಖ್ಯಾತ ನಟರು ಇದ್ದಾರೆ ಎಂದು ಹೇಳಿದ್ದರು. ಅವರೆಲ್ಲರ ನಡುವೆ ನನ್ನದೂ ಒಂದು ಪಾತ್ರ ಎಂದುಕೊಂಡಿದ್ದೆ. ಆದರೆ ನನ್ನದೇ ಪಾತ್ರ ಪ್ರಮುಖವಾದದ್ದು ಎನ್ನುವುದು ತಿಳಿಯಿತು. ಸಿನಿಮಾ ಮತ್ತು ಕಲೆಯ ಶಕ್ತಿ ನೋಡಿ, ಗಡಿಯನ್ನೂ ದಾಟಿ ಹೋಗುತ್ತವೆ. ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.

ಪ್ರ

ಸಿನಿಮಾದಲ್ಲಿನ ಪಾತ್ರದ ಬಗ್ಗೆ...

‘ಗರುಡ ಗಮನ..’, ‘ಟೋಬಿ’ ಪಾತ್ರಗಳನ್ನು ನೋಡಿ ನನಗೆ ಈ ಅವಕಾಶ ಲಭಿಸಿದೆ ಎಂದುಕೊಂಡಿದ್ದೇನೆ. ಆ ಸಿನಿಮಾದ ಪಾತ್ರಕ್ಕಿಂತ ಭಿನ್ನವಾದ ಪಾತ್ರ ‘ಟರ್ಬೊ’ದಲ್ಲಿದೆ. ಆ ಪಾತ್ರಗಳಲ್ಲಿ ಸ್ಟೈಲ್‌ ಎಂಬ ಅಂಶ ಇರಲೇ ಇಲ್ಲ. ಆದರೆ ‘ಟರ್ಬೊ’ದಲ್ಲಿನ ಪಾತ್ರಕ್ಕೆ ಸ್ಟೈಲ್‌ ಎನ್ನುವುದೇ ಪ್ರಮುಖ ಅಂಶ. ನಾನು ಮಲಯಾಳ ಕಲಿತಿದ್ದೇನೆ. ಹೇಗೆ ‘ಆರ್‌ಸಿಬಿ’ಯ ಒಬ್ಬ ಹೊರ ರಾಜ್ಯದ ಅಥವಾ ವಿದೇಶಿ ಆಟಗಾರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂದು ಹಾಡಿದಾಗ ನಮಗೆ ಹೇಗೆ ಖುಷಿಯಾಗುತ್ತದೆಯೋ, ಅದೇ ರೀತಿ ಆಯಾ ರಾಜ್ಯದಲ್ಲಿ ಅವರ ಭಾಷೆ, ಸಂಸ್ಕೃತಿಗೆ ಸಿಕ್ಕಬೇಕಾದ ಗೌರವ ಹೊರಗಿನವನಿಂದ ಸಿಕ್ಕಾಗ ಅವರಿಗೆ ಖುಷಿಯಾಗುತ್ತದೆ. ಕನ್ನಡ ಹಾಗೂ ತುಳು ಭಾಷೆಯನ್ನು ನಿದ್ದೆಯಿಂದ ಎಬ್ಬಿಸಿ ಮಾತನಾಡಿಸಿದರೂ ಮಾತನಾಡುತ್ತೇನೆ. ಈ ಭಾಷೆಗಳಲ್ಲಿ ಸಿಗುವ ಖುಷಿ, ವ್ಯಕ್ತಿಪಡಿಸುವ ಸ್ವಾತಂತ್ರ್ಯ ಬೇರೆ ಭಾಷೆಯಲ್ಲಿ ಸಿಗುವುದಿಲ್ಲ. ‘ಟರ್ಬೊ’ ಸಿನಿಮಾಗಾಗಿ ಒಬ್ಬ ಸ್ಥಳೀಯ ಮಲಯಾಳ ಬರುವ ವ್ಯಕ್ತಿಯೊಂದಿಗೆ ಒಡನಾಡಿದ್ದೆ. ವಿದ್ಯಾರ್ಥಿಯ ರೀತಿಯಲ್ಲಿ ಆ ಭಾಷೆ ಕಲಿತಿದ್ದೆ. ಸಿನಿಮಾದಲ್ಲಿ ನಾನು ‘ವೆಟ್ರಿವೇಲ್‌ ಶಣ್ಮುಗಸುಂದರಂ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮಿಳು, ಮಲಯಾಳ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಈ ಪಾತ್ರದ ಸಂಭಾಷಣೆಯಿದೆ.   

ಪ್ರ

‘ಟೋಬಿ’ ಮಲಯಾಳದಲ್ಲಿ ಹೆಚ್ಚು ಸದ್ದು ಮಾಡಿತು ಅಲ್ಲವೇ?

ಹೌದು. ಕನ್ನಡದಲ್ಲಿ ‘ಟೋಬಿ’ ಬಿಡುಗಡೆ ಮಾಡಿದಾಗ ಆ ಸಿನಿಮಾ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇತ್ತು. ಹೀಗೆ ಪ್ರಾಜೆಕ್ಟ್‌ ಒಂದು ಜನರ ನಿರೀಕ್ಷೆಯನ್ನು ತಲುಪದೇ ಇದ್ದಾಗ ಅವರಿಗೆ ನಿರಾಶೆಯಾಗುತ್ತದೆ. ನಾನು ನೇರವಾಗಿ ಒಂದು ವಿಚಾರ ಒಪ್ಪಿಕೊಳ್ಳುತ್ತೇನೆ. ‘ಟೋಬಿ’ಯಲ್ಲಿ ನಮ್ಮ ತಂಡದ ಸಮಸ್ಯೆಯೂ ಬಹಳ ಇತ್ತು. ನಾವೇನೋ ಮಾಡಬೇಕೆಂದಿದ್ದೆವು, ಅದು ಕನ್ನಡದಲ್ಲಿ ಮಾಡಲು ಸಾಧ್ಯವಾಗಲಿಲ್ಲ. ಮಲಯಾಳದಲ್ಲಿ ಅದನ್ನೆಲ್ಲಾ ಬದಲಾಯಿಸಿಕೊಂಡು ಸಿನಿಮಾ ನೀಡಿದಾಗ, ಅದು ಕನ್ನಡದ ಆವೃತ್ತಿಗಿಂತ ಉತ್ತಮವಾಗಿತ್ತು. ಆ ಬದಲಾವಣೆಯನ್ನು ಹೇಳುವುದು ಈ ಸಂದರ್ಭದಲ್ಲಿ ಸೂಕ್ತವಲ್ಲ ಎಂದುಕೊಂಡಿದ್ದೇನೆ. ನಮ್ಮ ತಂಡಕ್ಕೆ ಸಮರ್ಪಕವಾಗಿ ಸಿನಿಮಾವನ್ನು ತಲುಪಿಸಲು ಸಾಧ್ಯವಾಗದಿರುವುದು ಸಿನಿಮಾದ ಹಿನ್ನಡೆಗೆ ಕಾರಣ ಹೊರತುಪಡಿಸಿ, ಕನ್ನಡ ಪ್ರೇಕ್ಷಕರಲ್ಲ. ಪ್ರೇಕ್ಷಕರು ಎಲ್ಲ ಕಡೆ ಒಳ್ಳೆಯ ಸಿನಿಮಾವನ್ನು ನಿರೀಕ್ಷಿಸುತ್ತಾರೆ. ಒಳ್ಳೆಯ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಜನರಿಗೆ ಇಷ್ಟವಾಗಿಲ್ಲ ಎಂದು ಅವರನ್ನು ದೂಷಿಸಲು ಸಾಧ್ಯವಿಲ್ಲ. ಮಲಯಾಳದಲ್ಲಿ ಹಿಟ್‌ ಆದ ಸಿನಿಮಾಗಳು ಕರ್ನಾಟಕದಲ್ಲೂ ಹಿಟ್‌ ಆಗಿವೆಯಲ್ಲವೇ. ಹೀಗಾಗಿ ಪ್ರೇಕ್ಷಕರು ಎಲ್ಲ ಕಡೆ ಪ್ರೇಕ್ಷಕರೇ.

ಪ್ರ

‘45’ ಸಿನಿಮಾ ಎಲ್ಲಿಯವರೆಗೆ ಬಂದಿದೆ? 

ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದೊಂದು ದೊಡ್ಡ ಪ್ರಾಜೆಕ್ಟ್‌. ಮೂವರು ಪ್ರಮುಖ ನಟರು ಇದರಲ್ಲಿದ್ದು, ನಮ್ಮೆಲ್ಲರ ಶೂಟಿಂಗ್‌ ದಿನಗಳನ್ನು ನೋಡಿಕೊಂಡು ಚಿತ್ರೀಕರಣ ನಡೆಯುತ್ತಿದೆ. ಸುಮಾರು ಶೇ 85ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಉಳಿದ ಭಾಗದ ಚಿತ್ರೀಕರಣಕ್ಕೆ ಖಂಡಿತವಾಗಿಯೂ ಸಮಯ ಬೇಕು. ಈ ವರ್ಷದಲ್ಲೇ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಇದೊಂದು ಒಳ್ಳೆಯ ಸಿನಿಮಾ ಆಗಿ ಮೂಡಿಬರಲಿದೆ ಎನ್ನುವ ನಂಬಿಕೆ ಇದೆ.

ಪ್ರ

ಹೊಸ ಕಥೆ ಬರೆಯುತ್ತಿದ್ದೀರಂತೆ...

ಹೌದು. ಇಷ್ಟು ಕೆಲಸಗಳ ನಡುವೆ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದೇನೆ. ಶೇ 50ರಷ್ಟು ಬರವಣಿಗೆ ಪೂರ್ಣಗೊಳಿಸಿದ್ದೇನೆ. ಶೇ 20ರಷ್ಟು ಪ್ರಿಪ್ರೊಡಕ್ಷನ್‌ ಕೆಲಸಗಳು ನಡೆದಿದೆ.

ಪ್ರ

‘ಆವೇಶಂ’ನಲ್ಲೂ ರಾಜ್‌ ನಂಟು’

‘ಕೊಂಚ ಮಲಯಾಳ ಮಾತನಾಡಲು ಅರಿತಿರುವ ಕನ್ನಡಿಗ ನಾನು. ಮಲಯಾಳದ ‘ಆವೇಶಂ’ ಸಿನಿಮಾದಲ್ಲಿನ ‘ರಂಗ’ ಎನ್ನುವ ಪಾತ್ರ ಬೆಂಗಳೂರಿನಲ್ಲಿ ನೆಲೆಸಿರುವ ಒಬ್ಬ ಮಲಯಾಳಿ. ಆ ‘ರಂಗ’ ಮಾತನಾಡಬೇಕಾದರೆ ಕನ್ನಡದಲ್ಲಿ ಯೋಚನೆ ಮಾಡಿ ಮಲಯಾಳದಲ್ಲಿ ಮಾತನಾಡಿದಂತೆ ಅನಿಸಬೇಕು. ಅದು ಆಗಬೇಕಿದ್ದರೆ ನಾನು ಯಾವ ರೀತಿ ಯೋಚನೆ ಮಾಡುತ್ತೇನೆ ಎಂದು ಚಿತ್ರತಂಡಕ್ಕೆ ಬೇಕಿತ್ತು. ಪ್ರತಿಯೊಬ್ಬ ಮಲಯಾಳಿ ಆ ಸಿನಿಮಾ ನೋಡಬೇಕಾದರೆ ‘ರಂಗ’ ಮಾತನಾಡುತ್ತಿರುವುದು ನಮ್ಮೂರಿನ ಮಲಯಾಳ ಅಲ್ಲ ಎಂದೆನಿಸಬೇಕು. ‘ರಂಗ’ ಎನ್ನುವ ಪಾತ್ರವನ್ನು ಕೆತ್ತುವಲ್ಲಿ ಚಿತ್ರತಂಡ ನನ್ನ ಸಹಾಯ, ಸಲಹೆಯನ್ನು ಪಡೆದಿತ್ತು. ಚಿತ್ರದಲ್ಲಿ ನನ್ನ ಪಾಲೇನೂ ದೊಡ್ಡದಿಲ್ಲ. ಆದರೂ ನನಗೊಂದು ಧನ್ಯವಾದ ಹೇಳಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳಿಗೆ ಹೀಗೆ ಸಹಾಯ ಮಾಡಿದ್ದೇನೆ. ಆದರೆ ಅವರ್‍ಯಾರೂ ಥ್ಯಾಂಕ್ಸ್‌ ಕಾರ್ಡ್‌ನಲ್ಲಿ ನನ್ನ ಹೆಸರು ಹಾಕಿದಂತಿಲ್ಲ’ ಎನ್ನುತ್ತಾರೆ ರಾಜ್‌. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT