ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ನಟಿ ಆಶಿಕಾ ರಂಗನಾಥ್ ಲವ್‌ಸ್ಟೋರಿ...

Last Updated 24 ನವೆಂಬರ್ 2022, 19:30 IST
ಅಕ್ಷರ ಗಾತ್ರ

ನಟಿ ಆಶಿಕಾ ರಂಗನಾಥ್‌ ಅವರಿಗಿಂದು ಡಬಲ್‌ ಧಮಾಕ! ತಮಿಳಿನ ಅವರ ಚೊಚ್ಚಲ ಚಿತ್ರದ ಜೊತೆಗೆ ಕನ್ನಡದ ‘ರೇಮೊ’ ಸಿನಿಮಾ ಕೂಡಾ ಇಂದು ತೆರೆ ಕಾಣುತ್ತಿದೆ. ಲವ್‌ಸ್ಟೋರಿಗಳನ್ನು ಇಷ್ಟಪಡೋ ಆಶಿಕಾ ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದು ಹೀಗೆಂದರು...

***

ಆಶಿಕಾಗೆ ಇಂದು ಡಬಲ್‌ ಧಮಾಕ ಅಲ್ಲವೇ?
ಖಂಡಿತವಾಗಿಯೂ... ತಮಿಳಿನ ನನ್ನ ಚೊಚ್ಚಲ ಚಿತ್ರ ಹಾಗೂ ಕನ್ನಡದಲ್ಲಿನ ನನ್ನ ಬಹುನಿರೀಕ್ಷಿತ ಸಿನಿಮಾ ‘ರೇಮೊ’ ಪ್ರೇಕ್ಷಕರೆದುರಿಗಿದೆ. ನನ್ನ ಸಿನಿಪಯಣದಲ್ಲಿ ಹಿಂದೆಂದೂ ಒಂದೇ ದಿನ ನನ್ನ ಎರಡು ಸಿನಿಮಾಗಳು ತೆರೆಕಂಡಿರಲಿಲ್ಲ. ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಕೋವಿಡ್‌ ಮೊದಲೇ ‘ರೇಮೊ’ ಶೂಟಿಂಗ್‌ ಆರಂಭಿಸಿದ್ದೆವು. ಆದರೆ ಕೋವಿಡ್‌ ಕಾರಣದಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇತ್ತು.

‘ರೇಮೊ’ ಎದುರಿಗೆ ನಿಂತ ‘ಮೋಹನ’ ಯಾರು?
ಇಲ್ಲಿಯವರೆಗೂ ನನ್ನನ್ನು ಒಂದೊಂದು ಪಾತ್ರದಲ್ಲಿ ನೋಡಿ ಜನ ಇಷ್ಟಪಟ್ಟಿದ್ದರು. ಅತಿಥಿ ಪಾತ್ರದಲ್ಲಾಗಿರಲಿ, ‘ಪಟಾಕಿ ಪೋರಿ’ಯಂಥ ಹಾಡಿರಲಿ ಹೀಗೆ ಒಂದು ದೃಶ್ಯದಲ್ಲೇ ನಾನು ಇದ್ದರೂ ಜನ ನನ್ನನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದರು. ಎಂಟ್ಹತ್ತು ದೃಶ್ಯಗಳಷ್ಟೇ ಅಲ್ಲ, ತೆರೆ ತುಂಬಾ ನೀವೇ ಕಾಣಿಸಿಕೊಳ್ಳುವುದು ಯಾವಾಗ ಎನ್ನುವ ಪ್ರಶ್ನೆಯೂ ಅವರದ್ದಾಗಿತ್ತು. ಈ ಆಸೆ ನನ್ನೊಳಗೂ ಇತ್ತು. ‘ರ್‍ಯಾಂಬೊ–2’ ಸಿನಿಮಾದಲ್ಲಿ ಇಂತಹ ಅವಕಾಶ ನನಗೆ ಲಭಿಸಿತ್ತು. ಬಹಳ ದಿನಗಳ ನಂತರ ‘ರೇಮೊ’ ಮೂಲಕ ನಾನು ಮತ್ತೆ ಪೂರ್ಣ ಪ್ರಮಾಣದಲ್ಲಿ ತೆರೆ ಆವರಿಸಿಕೊಳ್ಳಲಿದ್ದೇನೆ. ಇಲ್ಲಿ ಗ್ಲ್ಯಾಮರ್‌ಗಷ್ಟೇ ಮಹತ್ವ ಇಲ್ಲ.‘ಮೋಹನ’ ಎನ್ನುವ ನನ್ನ ಪಾತ್ರಕ್ಕೆ ಹೀರೊನ ಪಾತ್ರದಷ್ಟೇ ಪ್ರಾಮುಖ್ಯ ಇದೆ. ಇಲ್ಲಿ ಆಕೆಯ ಎರಡು ಶೇಡ್ಸ್‌ ನೋಡಬಹುದು. ಇಲ್ಲಿ ಗ್ಲ್ಯಾಮರಸ್‌ ಆಗಿರೋ ಆಶಿಕಾಳನ್ನೂ ನೋಡಬಹುದು. ಜೊತೆಗೆ ಹಾಡುಗಾರ್ತಿಯಾಗಿರುವ ಆಶಿಕಾಳನ್ನೂ ಕಣ್ತುಂಬಿಕೊಳ್ಳಬಹುದು. ಮ್ಯೂಸಿಕಲ್‌ ಲವ್‌ಸ್ಟೋರಿ ಕಥಾಹಂದರದ ‘ರೇಮೊ’ ಸಿನಿಮಾದಲ್ಲಿ ನನ್ನ ಪಾತ್ರ ಮುಗ್ಧತೆ–ದಿಟ್ಟತೆಯ ಮಿಶ್ರಣ. ಹಿಂದೆಂದಿಗಿಂತ ಹೆಚ್ಚು ಬೋಲ್ಡ್‌ ಆಗಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಂಡಿದ್ದೇನೆ.

ಟ್ರೈಲರ್‌ ನೋಡಿದರೆ ತೆರೆ ತುಂಬಾ ಆಶಿಕಾ ತುಂಬಿಕೊಂಡಿದ್ದಾರೆ...
ದಶಕದ ಹಿಂದೆ ನಾಯಕಿಗೆ ಪ್ರಾಮುಖ್ಯ ನೀಡುವ ಕಥಾಹಂದರದ ಸಿನಿಮಾಗಳನ್ನು ನೋಡುತ್ತಿದ್ದೆವು. ಉದಾಹರಣೆಗೆ ರಮ್ಯಾ, ರಕ್ಷಿತಾ, ರಾಧಿಕಾ ಪಂಡಿತ್‌ ಅವರ ಸಿನಿಮಾಗಳು. ಇತ್ತೀಚಿನ ದಿನಗಳಲ್ಲಿ ಇಂಥ ಸಿನಿಮಾಗಳು ಬಂದಿರಲಿಲ್ಲ. ‘ರೇಮೊ’ ಮತ್ತೆ ಇಂಥ ಅವಕಾಶವನ್ನು ಒದಗಿಸಿದೆ. ತೆರೆ ತುಂಬಾ ನಾವೇ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಪ್ರತಿಯೊಬ್ಬ ಕಲಾವಿದನ ಬದುಕಲ್ಲಿ ಇರುತ್ತದೆ. ‘ರೇಮೊ’ದಲ್ಲಿ ತೆರೆ ಮೇಲೆ ಸಿನಿಮಾ ಅವಧಿಯ ಶೇ80–90 ಭಾಗ ನಾನಿರಲಿದ್ದೇನೆ. ಏಕೆಂದರೆ ನನ್ನ ಪಾತ್ರ ಚಿತ್ರಕಥೆಗೆ ಅಷ್ಟು ಅವಶ್ಯವಾಗಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಎಲ್ಲರಿಗಿಂತ ನಾನೇ ಹೆಚ್ಚು ಉತ್ಸುಕಳಾಗಿದ್ದೇನೆ.

ಪವನ್‌ ಒಡೆಯರ್‌ ಅವರಂಥ ಅನುಭವಿ ನಿರ್ದೇಶಕರು ‘ರೇಮೊ’ ಕಥೆ ಹೇಳಿದಾಗಲೇ ನಾನು ಒಪ್ಪಿಕೊಂಡೆ. ಏಕೆಂದರೆ ಇದೊಂದು ಪ್ರೇಮಕಥೆ. ಎಲ್ಲ ಕಲಾವಿದರಿಗೂ ಒಂದೊಂದು ಜಾನರ್‌ ಇಷ್ಟವಿರುತ್ತದೆ. ನನಗೆ ಲವ್‌ಸ್ಟೋರಿ, ರೊಮ್ಯಾನ್ಸ್‌–ಕಾಮಿಡಿ ಜಾನರ್‌ ಎಂದರೆ ಬಹಳ ಇಷ್ಟ. ‘ರೇಮೊ’ ಔಟ್‌ ಆ್ಯಂಡ್‌ ಔಟ್‌ ಲವ್‌ಸ್ಟೋರಿ.

‘ಗೂಗ್ಲಿ’ಗೂ ‘ರೇಮೊ’ಗೂ ಸಂಬಂಧ ಇದೆಯೇ?
ಲವ್‌ಸ್ಟೋರಿ ಎಂದಾಕ್ಷಣ ನನಗೆ ನೆನಪಾಗುವುದೇ ಪವನ್‌ ಒಡೆಯರ್‌ ಅವರ ‘ಗೂಗ್ಲಿ’ ಸಿನಿಮಾ. ಈ ಸಿನಿಮಾ ಆದ ಮೇಲೆ ಅವರು ಪೂರ್ಣ ಪ್ರಮಾಣದ ಲವ್‌ಸ್ಟೋರಿಯ ಸಿನಿಮಾವನ್ನು ಮಾಡಿರಲಿಲ್ಲ. ‘ಗೂಗ್ಲಿ ಮಾಡಿರೋ ನಿರ್ದೇಶಕ ಇವರು’ ಎಂದೇ ಪವನ್‌ ಅವರನ್ನು ಪ್ರೇಕ್ಷಕರು ಗುರುತಿಸುತ್ತಾರೆ. ಹೀಗಾಗಿ ಆ ಟ್ರೇಡ್‌ ಮಾರ್ಕ್‌ ಸಿನಿಮಾದ ಒಂದಿಷ್ಟು ಕ್ಲಾಸಿಕ್‌ ದೃಶ್ಯಗಳು ಇರಲೇಬೇಕಲ್ಲವೇ... ನಿರ್ದೇಶಕನಾಗಿ ತನ್ನ ಹಳೆಯ ಸಿನಿಮಾದ ಒಂದಿಷ್ಟು ಅಂಶಗಳನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ಹೀಗಾಗಿಯೇ ‘ರೇಮೊ’ದಲ್ಲಿ ನಾಯಕ ನಾಯಕಿಯ ಕೆನ್ನೆಗೆ ಬಾರಿಸೋ ದೃಶ್ಯ ‘ಗೂಗ್ಲಿ’ ನೆನಪಿಸುತ್ತೆ. ಕಲಾವಿದನ ಬದುಕಿನಲ್ಲಾಗುವ ಏರಿಳಿತಗಳನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಈ ಸಿನಿಮಾ ಪ್ರತಿಯೊಬ್ಬರಿಗೂ ಕನೆಕ್ಟ್‌ ಆಗುತ್ತದೆ.

ಇಶಾನ್‌ ಅವರ ಬಗ್ಗೆ...
‘ರೇಮೊ’ ಎಂಬ ಪಾತ್ರಕ್ಕೆ ಇಶಾನ್‌ ಅವರನ್ನು ಬಿಟ್ಟರೆ ಬೇರೆ ಯಾರೂ ಹೊಂದಿಕೊಳ್ಳಲು ಸಾಧ್ಯವೇ ಇಲ್ಲ. ಆ ದೈತ್ಯ ದೇಹ, ಕೆಂಚು ಗಡ್ಡ ಹೀಗೆ ಬಾಹ್ಯವಾಗಿ ಅವರನ್ನು ನೋಡಿದರೆ ಬಹಳ ಟಫ್‌ ಹುಡುಗ ಎಂದುಕೊಳ್ಳುವವರೇ ಹೆಚ್ಚು. ಆದರೆಅವರು ತುಂಬಾ ಮುಗ್ಧ ವ್ಯಕ್ತಿತ್ವದವರು.

ಆಶಿಕಾ ಕೈಯಲ್ಲಿರುವ ಪ್ರಾಜೆಕ್ಟ್‌ಗಳು...
ಪಿಆರ್‌ಕೆ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಾಣವಾಗಿರುವ ‘O2’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಇದೊಂದು ಮೆಡಿಕಲ್‌ ಥ್ರಿಲ್ಲರ್‌. ನನ್ನ ಪಾತ್ರವೇ ಇಲ್ಲಿ ಲೀಡ್‌. ಈ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ‘ಸಿಂಪಲ್‌’ ಸುನಿ ನಿರ್ದೇಶನದ ‘ಗತವೈಭವ’ದ ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೆರಡು ಶೆಡ್ಯೂಲ್‌ ಬಾಕಿ ಇದೆ. ನಂದಮೂರಿ ಕಲ್ಯಾಣ್‌ ರಾಮ್‌ ಅವರ ಜೊತೆಗಿನ ನನ್ನ ಮೊದಲ ತೆಲುಗು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಮುಂದಿನ ವರ್ಷಇದು ತೆರೆಕಾಣಲಿದೆ. ತಮಿಳಿನಲ್ಲಿ ಇನ್ನೊಂದು ಪ್ರಾಜೆಕ್ಟ್‌ ಚರ್ಚೆಯ ಹಂತದಲ್ಲಿದೆ.

ನಿಮ್ಮೊಂದು ಕನಸು ನನಸಾದ ಬಗ್ಗೆ..‌.
ಖಂಡಿತವಾಗಿ. ತಮಿಳಿನಲ್ಲಿ ಸಿದ್ಧಾರ್ಥ್‌ ಅವರ ಜೊತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಸದ್ಯಕ್ಕೆ ಅದೇ ಸಿನಿಮಾದ ಚಿತ್ರೀಕರಣದಲ್ಲಿದ್ದೇನೆ. ಇಂದಿಗೂ ಅವರ ಮುಂದೆ ಹೋಗಿ ನಿಂತಾಗ, ಇದು ನಿಜವೇ ಕನಸೇ ಎನ್ನುವ ಭಾವನೆ. ‘ಅಪ್ಪು’ ಸಿನಿಮಾ ನೋಡಿದ ಬಳಿಕ ಪುನೀತ್‌ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಹುಟ್ಟಿತ್ತು. ಅದೇ ರೀತಿ ‘ಬೊಮ್ಮರಿಲ್ಲು’ ಸಿನಿಮಾ ನೋಡಿದ ಬಳಿಕ ಸಿದ್ಧಾರ್ಥ್‌ ಅವರ ಪಾತ್ರ ನನ್ನನ್ನು ಕಾಡಿತ್ತು. ಅವರ ಜೊತೆ ನಟಿಸಬೇಕು ಎನ್ನುವ ಆಸೆಯನ್ನೂ ಹುಟ್ಟಿಸಿತ್ತು. ಒಂದಷ್ಟು ದಿನ ಸಿದ್ಧಾರ್ಥ್‌ ಅವರು ಸಿನಿಮಾ ಕ್ಷೇತ್ರದಿಂದಲೇ ದೂರ ಉಳಿದಿದ್ದರು. ಈ ನಡುವೆ ನನಗೆ ಅವರ ಜೊತೆ ನಟಿಸುವ ಅವಕಾಶ ದೊರಕಿತ್ತು. ಅವರೇ ಹೀರೋನಾ ಎಂದು ಮತ್ತೆ ಮತ್ತೆ ಕೇಳಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT