ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕರ ಸಂದರ್ಶನ: ‘ಕಾಸರಗೋಡಿನ ಸರ್ಕಾರಿ ಶಾಲೆ’ಯಲ್ಲಿ ಏನೆಲ್ಲಾ ಇದೆ ಗೊತ್ತಾ?

Last Updated 23 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘‘ರಿಕ್ಕಿ ಸಿನಿಮಾ ಮಾಡುವಾಗ ನನಗೆ ಮಕ್ಕಳ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಆ ಸಿನಿಮಾದಲ್ಲಿ ನಾನು ಕೆಲವು ಅನಿವಾರ್ಯ ಕಾರಣಗಳಿಂದ ನನ್ನ ಸ್ಕ್ರಿಪ್ಟ್‌ನಲ್ಲಿ ಇಲ್ಲದ ದೃಶ್ಯಗಳನ್ನು ಸೇರಿಸಬೇಕಾಗಿ ಬಂದಿತ್ತು. ನನ್ನ ಮನಸಲ್ಲಿ ಏನಿದೆಯೋ ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದು ಆಗಲೇ ಅನಿಸಿತ್ತು. ‘ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಇದು ಪೂರ್ಣ ಸ್ವಾತಂತ್ರ್ಯ ತೆಗೆದುಕೊಂಡು ನನ್ನ ಮನಸಲ್ಲಿದ್ದದ್ದನ್ನು ಹಾಗೆಯೇ ದೃಶ್ಯೀಕರಿಸಿದ ಸಿನಿಮಾ’ – ತಮ್ಮ ಹೊಸ ಸಿನಿಮಾ ಕುರಿತು ನಿರ್ದೇಶಕ ರಿಷಬ್‌ ಶೆಟ್ಟಿ ಮಾತಿಗಾರಂಭಿಸಿದ್ದು ಹೀಗೆ.

‘ಸರ್ಕಾರಿ ಹಿ.ಪ್ರಾ. ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಚಿತ್ರದ ಮೂಲಕ ತಮ್ಮ ಬಾಲ್ಯಕ್ಕೆ ಮರುಭೇಟಿ ನೀಡಿ ಬಂದ ಖುಷಿಯಲ್ಲಿ ಅವರಿದ್ದಾರೆ. ತೆರೆಯ ಮೇಲೆ ನೋಡಿದ ಎಲ್ಲರಿಗೂ ಅದೇ ಅನುಭವ ದೊರಕುವ ವಿಶ್ವಾಸವೂ ಅವರಿಗಿದೆ.

‘ಕಿರಿಕ್‌ ಪಾರ್ಟಿ’ಯಂಥ ಹಿಟ್‌ ಸಿನಿಮಾ ಕೊಟ್ಟ ಮೇಲೆ ಯಾವುದೇ ದೊಡ್ಡ ಸ‌್ಟಾರ್‌ ಇಲ್ಲದ ಇಂಥದ್ದೊಂದು ಸಿನಿಮಾ ಕೈಗೆತ್ತಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಅವರಿಗೆ ಆವಾಗಾವಾಗ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ರಿಷಬ್‌ ಉತ್ತರ, ‘ಸಿನಿಮಾದಲ್ಲಿ ದೊಡ್ಡದು ಸಣ್ಣದು ಎನ್ನುವುದಿಲ್ಲ. ಸಿನಿಮಾ ಸಿನಿಮಾ ಅಷ್ಟೆ. ಕೊನೆಗೂ ಒಂದು ಸಿನಿಮಾದಲ್ಲಿ ಕಥೆ– ಪಾತ್ರಗಳು ಕಾಣಿಸಬೇಕೇ ಹೊರತು ಸ್ಟಾರ್‌ಗಳು ಅಲ್ಲವಲ್ಲ. ಅದು ಎಷ್ಟು ದೊಡ್ಡ ಸಿನಿಮಾ ಎನ್ನುವುದನ್ನು ಬಜೆಟ್‌ ನಿರ್ಧರಿಸುವುದಿಲ್ಲ, ಬದಲಿಗೆ ಜನರು ನಿರ್ಧರಿಸುತ್ತಾರೆ’.

‘ಈ ಚಿತ್ರದ ಕಥೆ ಬರೆದಿದ್ದು ಎರಡು ವರ್ಷಗಳ ಹಿಂದೆ. ಮಕ್ಕಳನ್ನು ಇಟ್ಟುಕೊಂಡು ಸಿನಿಮಾ ಮಾಡೋಣ ಅನಿಸಿತ್ತು. ಅದೇ ಸಮಯದಲ್ಲಿ ಸರಿಯಾಗಿ ಕರ್ನಾಟಕದಾದ್ಯಂತ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆಯೂ ಶುರುವಾಗಿತ್ತು. ನಾನೂ ಹಳ್ಳಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವನು. ಈಗ ಅವುಗಳನ್ನು ಮುಚ್ಚುತ್ತಿರುವ ಕುರಿತು ಬೀದಿಗಿಳಿದು ಹೋರಾಟ ಮಾಡಲು ಎಷ್ಟು ಸಾಧ್ಯವೋ ಗೊತ್ತಿಲ್ಲ. ಆದರೆ ನಮ್ಮ ಕಡೆಯಿಂದ ಸಿನಿಮಾ ಮೂಲಕ ಏನಾದರೂ ಸಂದೇಶ ಕೊಡಲು ಸಾಧ್ಯವೇ ಎನ್ನುವುದನ್ನು ಯೋಚಿಸಿದೆ. ಈ ಚಿತ್ರವನ್ನು ಅಂಥ ಒಂದು ಶಾಲೆಯ ಸುತ್ತಲೇ ಕಟ್ಟೋಣ ಅನಿಸಿತು. ಪಾತ್ರಗಳಂತೂ ನನ್ನ ಬಾಲ್ಯದ ಜಗತ್ತಿನಿಂದ ಹಾಗೆಯೇ ಎತ್ತಿಕೊಂಡಿದ್ದೇನೆ. ನನ್ನ ಅಣ್ಣನನ್ನು ಮನಸಲ್ಲಿ ಇಟ್ಟುಕೊಂಡೇ ಈ ಚಿತ್ರದ ದಡ್ಡ ಪ್ರವೀಣನ ಪಾತ್ರ ಕಟ್ಟಿದ್ದು. ಟ್ರೇಲರ್‌ನಲ್ಲಿ ಮಾತಾಡುವ ಮುಮ್ಮುಟ್ಟಿ ಎನ್ನುವ ಪಾತ್ರ ನಾನೇ. ಭುಜಂಗ ಎನ್ನುವ ಪಾತ್ರವೂ ನಮ್ಮೂರಿನಲ್ಲಿ ಇರುವ ವಾಸ್ತವ ವ್ಯಕ್ತಿಯೇ. ಹೆಸರು ಬದಲಾಯಿಸಿದ್ದೇನಷ್ಟೆ’ ಎಂದು ಚಿತ್ರದ ಕಥಾವಸ್ತು ಮತ್ತು ಪಾತ್ರಗಳು ನಿಜಜಗತ್ತಿನಿಂದ ಜೀವತಳೆದ ಬಗೆಯನ್ನು ಅವರು ವಿವರಿಸುತ್ತಾರೆ.

‘ಬಾಲ್ಯ ಎಂದ ತಕ್ಷಣ ಎಲ್ಲರೊಳಗೂ ಒಂದು ನಾಸ್ಟಾಲ್ಜಿಕ್‌ ಭಾವ ಉದ್ದೀಪನಗೊಳ್ಳುತ್ತದೆ. ಈ ಸಿನಿಮಾ ಕೂಡ ಅಂಥದ್ದೇ ಭಾವವನ್ನು ಪ್ರೇಕ್ಷಕರಲ್ಲಿ ಹುಟ್ಟಿಸುತ್ತದೆ’ ಎನ್ನುವ ನಂಬಿಕೆ ರಿಷಬ್‌ ಅವರದು.

ಕಥೆ ಬರೆದ ಮೇಲೆ ಇದಕ್ಕೊಂದು ಪ್ರಾದೇಶಿಕ ಹಿನ್ನೆಲೆ ಇರಬೇಕು ಎಂದು ಅವರಿಗನಿಸಿದೆ. ಈ ಯೋಚನೆ ಬಂದಿದ್ದೇ ಅವರ ಮನಸಲ್ಲಿ ಹೊಳೆದ ಜಾಗ ಕಾಸರಗೋಡು. ತಮ್ಮ ಚಿತ್ರದ ಕಥೆಗೆ ಕಾಸರಗೋಡನ್ನು ಆಯ್ದುಕೊಂಡಿದ್ದು ಯಾಕೆ ಎನ್ನುವ ಬಗ್ಗೆ ಅವರು ವಿವರಿಸುವುದು ಹೀಗೆ: ‘ಆ ಜಾಗಕ್ಕೆ ಅದ್ಭುತವಾದ ದೃಶ್ಯಶ್ರೀಮಂತಿಕೆ ಇದೆ. ಅಲ್ಲಿನ ಜನರು ತುಳು, ಕನ್ನಡ, ಮಲಯಾಳಂ, ಬ್ಯಾರಿ, ತಮಿಳು, ಕೊಂಕಣಿ ಹೀಗೆ ಹಲವು ಭಾಷೆಗಳಲ್ಲಿ ಮಾತಾಡುವವರು ಸಿಗುತ್ತಾರೆ. ಸಾಂಸ್ಕೃತಿಕವಾಗಿಯೂ ಶ್ರೀಮಂತ ಊರದು. ಇದರ ಜತೆಗೆ ಕಾಸರಗೋಡು ಕೇರಳಕ್ಕೆ ಸೇರಿಕೊಂಡಮೇಲೆ ಅಲ್ಲಿ ನಡೆದ ಸಾಮಾಜಿಕ ಪಲ್ಲಟಗಳನ್ನೂ ಸಿನಿಮಾದೊಳಗೆ ತರಬಹುದು ಎಂಬ ಇನ್ನೊಂದು ಕಾರಣವೂ ಇದೆ. 1956ರ ನಂತರ ಅಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿ ಹೋದೆವು. ಕನ್ನಡ ಮಾಧ್ಯಮ ಶಾಲೆಗಳು ಹೇಳದೆ ಕೇಳದೆ ಮಲಯಾಳಂ ಮಾಧ್ಯಮ ಆಗಿಬಿಟ್ಟಿದ್ದು, ಕನ್ನಡ ಮಕ್ಕಳಿಗೆ ಮಲಯಾಳಂ ಟೀಚರ್ ಬಂದು ಪಾಠ ಹೇಳಿಕೊಡುವುದೆಲ್ಲ ಹಿಂದೆ ನಡೆದಿದೆ. ಇತ್ತೀಚೆಗೆ ಮತ್ತೆ ಅಂಥ ಪ್ರಕ್ರಿಯೆಗಳು ಶುರುವಾಗಿವೆಯಂತೆ. ಇವೆಲ್ಲವನ್ನೂ ನನ್ನ ಸಿನಿಮಾದಲ್ಲಿ ತೋರಿಸಿದ್ದೇನೆ’ ಎಂದು ಮನರಂಜನೆಯ ಜತೆಗೆ ಸಮಕಾಲೀನ ವಿದ್ಯಮಾನಗಳ ಸುಳಿಯನ್ನೂ ಒಳಗೊಂಡಿರುವ ಸೂಚನೆ ನೀಡುತ್ತಾರೆ. ‘ಆದರೆ ಈ ಸಿನಿಮಾ ಕಾಸರಗೋಡಿನ ಹೋರಾಟದ ಸಿನಿಮಾ ಅಲ್ಲ. ಇದು ಒಂದು ಶಾಲೆಯ ಸುತ್ತ ನಡೆಯುತ್ತದೆ. ಆ ಶಾಲೆ ಕಾಸರಗೋಡಿನಲ್ಲಿದೆ’ ಎಂದೂ ಅವರೇ ಸ್ಪಷ್ಟಪಡಿಸುತ್ತಾರೆ.

ಈ ಚಿತ್ರಕ್ಕೆ ಪಾತ್ರವರ್ಗವನ್ನು ಆಯ್ದುಕೊಳ್ಳುವಾಗಲೂ ಅವರು ಕಾಸರಗೋಡು, ಮಂಜೇಶ್ವರ ಮತ್ತು ಉಪ್ಪಳ ಭಾಗದ ಜನರಿಗೆ ವಿಶೇಷ ಪ್ರಾಧಾನ್ಯ ನೀಡಿದ್ದಾರೆ. ‘ಈ ಚಿತ್ರದ ಮುಖ್ಯ ಪಾತ್ರಗಳಾದ ಪ್ರವೀಣ, ಮುಮ್ಮುಟ್ಟಿ ಪಾತ್ರದಲ್ಲಿ ನಟಿಸುತ್ತಿರುವ ಹುಡುಗರೆಲ್ಲ ನಮ್ಮ ಆಡಿಷನ್‌ಗೆಂದು ಬಂದವರಲ್ಲ. ಏನೋ ಸಿನಿಮಾ ಕೆಲಸ ನಡೆಯುತ್ತಿದೆ ನೋಡ್ಕೊಂಡು ಹೋಗುವಾ ಎಂದು ಬಂದವರು. ಅವರಿಂದ ಆಡಿಷನ್‌ ತೆಗೆದುಕೊಂಡು, ಅವರಿಗೆ ಒಂದೂವರೆ ತಿಂಗಳು ಕಾರ್ಯಾಗಾರ ನಡೆಸಿ ಆಮೇಲೆ ಚಿತ್ರೀಕರಣ ಮಾಡಿದ್ದೇವೆ’ ಎಂದು ವಿವರಿಸುವ ರಿಷಬ್‌, ’ನನಗೆ ಏನೆಲ್ಲ ಮಾಡಬೇಕು ಅನಿಸುತ್ತಿತ್ತೋ ಅದನ್ನೆಲ್ಲವನ್ನೂ ಮಾಡಲು ಅವಕಾಶ ಸಿಕ್ಕಿದ ತೃಪ್ತಿ ಈ ಸಿನಿಮಾ ಕೊಟ್ಟಿದೆ’ ಎಂದು ಹೇಳುತ್ತಾರೆ.

‘‘ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ದೊರಕಬೇಕು. ಮಕ್ಕಳಿಲ್ಲ ಎಂದು ಅಥವಾ ಇನ್ಯಾವುದೇ ಕಾರಣಕ್ಕೆ ಕನ್ನಡ ಶಾಲೆಗಳನ್ನು ಮುಚ್ಚಬಾರದು’ ಎಂಬ ಗಟ್ಟಿಯಾದ ಸಂದೇಶವನ್ನು ಈ ಚಿತ್ರ ಧ್ವನಿಸುತ್ತದೆ. ಅದರ ಜತೆಗೆ ‘ಕಿರಿಕ್‌ ಪಾರ್ಟಿ’ಯ ಜ್ಯೂನಿಯರ್‌ ಆವೃತ್ತಿಯನ್ನು ನೋಡಿದ ಮಜವನ್ನೂ ಖಂಡಿತ ಕೊಡುತ್ತದೆ’’ ಎಂದು ಅವರು ಭರವಸೆಯೊಂದಿಗೇ ಅವರು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತಾರೆ.
**
‘ಭಿನ್ನ– ಶ್ರೀಮಂತ ಅನುಭವ’
ಎರಡೂ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಒಳ್ಳೆಯ ಅನುಭವ ಕೊಟ್ಟಿದೆ. ಸತ್ಯಪ್ರಕಾಶ್‌ ಒಳ್ಳೆಯ ನಿರ್ದೇಶಕರು, ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಬರಹಗಾರರು. ಪದಪದಗಳಲ್ಲಿಯೂ ಸಿನಿಮಾ ಕಟ್ಟುವುದು ಅವರ ಸ್ವಭಾವ. ‘ರಾಮಾ ರಾಮಾ ರೇ’ ಚಿತ್ರದಲ್ಲಿಯೂ ಒಟ್ಟಿಗೆ ಕೆಲಸ ಮಾಡಿದ್ದರಿಂದ ನನ್ನ ಮೇಲೆ ಅವರಿಗೆ ನಂಬಿಕೆ ಜಾಸ್ತಿ. ಹಾಗಾಗಿ ‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ಕೆಲಸ ಮಾಡುವಾಗ ಸಾಕಷ್ಟು ಸ್ವಾತಂತ್ರ್ಯ ಇತ್ತು.

‘ಸರ್ಕಾರಿ ಹಿ.ಪ್ರಾ. ಶಾಲೆ...’ಯ ರಿಷಬ್‌ ಶೆಟ್ಟಿ ಅವರ ಜತೆ ನಾನು ಕೆಲಸ ಮಾಡುತ್ತಿರುವುದು ಇದೇ ಮೊದಲ ಬಾರಿ. ಅದರ ಅನುಭವವೂ ಭಿನ್ನವಾಗಿತ್ತು. ಈ ಚಿತ್ರದಲ್ಲಿ ಒಟ್ಟು 9 ಹಾಡುಗಳಿವೆ. ಒಂದಕ್ಕಿಂತ ಇನ್ನೊಂದು ಭಿನ್ನವಾಗಿರಬೇಕು ಎಂಬ ಅಪೇಕ್ಷೆಯಲ್ಲಿಯೇ ಕೆಲಸ ಮಾಡಿದ್ದೇನೆ. ಹಾಡುಗಳೇ ಇಲ್ಲದೆ ಪ್ರಯೋಗಾತ್ಮಕ ಸಿನಿಮಾ ಮಾಡುವ ಕಾಲದಲ್ಲಿ ಒಂದು ಪ್ರಯೋಗಶೀಲ ಸಿನಿಮಾದಲ್ಲಿ ಒಂಬತ್ತುಹಾಡುಗಳಿರುವುದು ವಿಶೇಷವೇ ಅಲ್ಲವೇ?

ಈ ಎರಡೂ ಚಿತ್ರಗಳಿಗೆ ನಾವು ನಾವ ಸ್ಟಾರ್‌ ಹಾಡುಗಾರರನ್ನೂ ಬಳಸಿಲ್ಲ. ಪ್ರಾದೇಶಿಕ ಪ್ರತಿಭೆಗಳನ್ನೇ ಬಳಸಿಕೊಂಡಿದ್ದೇವೆ. ಇದೂ ಒಂದು ವಿಶೇಷ ಸಂಗತಿಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT