ಭಾನುವಾರ, ಸೆಪ್ಟೆಂಬರ್ 19, 2021
25 °C

ಕ್ರಾಂತಿ ಮತ್ತು ಪ್ರೀತಿಯ ಕಥಾಹಂದರ ಬಿಚ್ಚಿಟ್ಟ ಗೋದ್ರಾ ಟೀಸರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಪ್ರತಿಭಟನೆ, ಅದರ ನಡುವೆಯೊಂದು ನವಿರಾದ ಪ್ರೇಮ, ಹಿನ್ನಲೆಯಲ್ಲಿ ಸಾಗುವ ನಿಗೂಢತೆಯ ಧ್ವನಿ... ಹೀಗೆ ತೆರೆದುಕೊಳ್ಳುವ ನೀನಾಸಂ ಸತೀಶ್‌ ಅಭಿನಯದ ಗೋದ್ರಾ ಟೀಸರ್‌, ಕ್ರಾಂತಿ ಮತ್ತು ಪ್ರೀತಿಯ ಕುರಿತ ಸಿನಿಮಾ ಎನ್ನುವುದನ್ನು ಜನರಿಗೆ ಸುಲಭವಾಗಿ ಮುಟ್ಟಿಸುತ್ತದೆ.

ನೈಜ ಕಥಾ ಹಂದರಕ್ಕೆ ಹೆಚ್ಚು ಒಲವು ತೋರುವ ನೀನಾಸಂ ಸತೀಶ್‌, ಗೋದ್ರಾದಲ್ಲಿಯೂ ಅನ್ಯಾಯದ ವಿರುದ್ಧ ಹೋರಾಡುವ ನಕ್ಸಲ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದೂ ಸಹ ನೈಜ ಕಥಾ ಹಂದರ ಮೇಲೆ ಹೆಣೆದಿರುವ ಸಿನಿಮಾವಾಗಿದೆ.

ರಾಜಕೀಯ, ನಕ್ಸಲ್‌ ಚಳವಳಿ, ಬಹುರಾಷ್ಟ್ರೀಯ ಕಂಪನಿಗಳ ವಿಷಯಗಳ ಮೇಲೆ ಸಿನಿಮಾ ಸಾಗುತ್ತದೆ ಎನ್ನುವುದು ಹಾಗೂ ಸತೀಶ್‌ ನೀನಾಸಂ, ಶ್ರದ್ಧಾ ಶ್ರೀನಾಥ್‌, ಅಚ್ಯುತ್‌ ಕುಮಾರ್‌, ವಸಿಷ್ಠ ಸಿಂಹ ಈಗ ನಾಲ್ಕು ವ್ಯಕ್ತಿಗಳ ಮೇಲೆ ಸಿನಿಮಾ ಕೇಂದ್ರಿತವಾಗಿದೆ ಎಂಬುದನ್ನು ಟೀಸರ್‌ ಬಿಚ್ಚಿಟ್ಟಿದೆ.

‘ಇಲ್ಲಿ ಬಲಾಡ್ಯ ಬದುಕಿ, ಬಡವ ಮಾತ್ರ ನಿತ್ಯ ಸಾಯ್ತಾ ಇದಾನೆ ಅಂದ್ರೆ ವ್ಯವಸ್ಥೆಯಲ್ಲಿ ಏನೋ ದೋಷ ಇರ್ಬೇಕು’ ಎನ್ನುವ ಡೈಲಾಗ್‌ ಮೂಲಕ ರಾಜಕಾರಣಿಯಾಗಿರುವ ಅಚ್ಯುತ್‌ ಪಾತ್ರ ಟೀಸರ್‌ನಲ್ಲಿ ತೆರೆದುಕೊಳ್ಳುತ್ತದೆ. 

ಬಡವ, ಶ್ರೀಮಂತರ ಹೋರಾಟವೇ ಎನ್ನುವ ನಕ್ಸಲ್‌ ಚಳವಳಿಯ ದೃಶ್ಯಗಳ ನಡುವೆಯೇ ಶ್ರೀಮಂತರ ಮಗಳಾಗಿ ಕಾಣಿಸಿಕೊಂಡಿರುವ ನಾಯಕಿ ಶ್ರದ್ಧಾ ಶ್ರೀನಾಥ್‌ ಮತ್ತು ನಾಯಕನ ನವೀರಾದ ಪ್ರೇಮ ಕಥೆಯ ಎಳೆ ಸಿನಿಮಾದ ಕುರಿತು ಒಂದು ಕುತೂಹಲವನ್ನು ಹುಟ್ಟಿಸುತ್ತದೆ. ಪೈಲಟ್‌ ಅವತಾರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ.

‘ಹುಟ್ಟು ದರಿದ್ರ ಆಗಿದ್ರೂ ಸಾವು ಚರಿತ್ರೆ ಆಗ್ಬೇಕು’, ‘ಫ್ರೀಡಂ ಯಾವಾಗ್ಲೂ ಫ್ರೀಯಾಗಿ ಸಿಗಲ್ಲ ರಕ್ತ ಹರಿಸಬೇಕು’, ‘ಒಂದು ಕಾಲ ಇತ್ತು ರಾಜನ ಕೊಂದರೆ ಯುದ್ಧ ಮುಗಿಯುತ್ತಿತ್ತು. ಆದ್ರೆ, ಈಗ ಹಾಗಲ್ಲ, ಲಕ್ಷಾಂತರ ಬಲಿದಾನಗಳು ನಡೆದ್ರು ಎಂದೂ ಮುಗಿಯದ ಯುದ್ಧ’ ಎನ್ನುವ ಖಡಕ್‌ ಡೈಲಾಗ್‌ಗಳು ಸಿನಿಮಾ ಕುರಿತ ನಿರೀಕ್ಷೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ಯುವ ನಿರ್ದೇಶಕ ಕೆ.ಎಸ್.ನಂದೀಶ್ ಈ ಬಹುನಿರೀಕ್ಷಿತ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೀಸರ್‌ ವೀಕ್ಷಿಸಿದ ಅನೇಕರು ಗಾಂಧಿನಗರದ ಭರವಸೆಯ ನಿರ್ದೇಶಕ ಎಂಬ ಮಾತುಗಳನ್ನು ಆಡಿದ್ದಾರೆ.  ಜೇಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್​ಅಡಿ ಈ ಚಿತ್ರ ನಿರ್ಮಾಣವಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.