ಮಂಗಳವಾರ, ಸೆಪ್ಟೆಂಬರ್ 17, 2019
21 °C

ಶಾರೂಖ್–ಕಾಜಲ್ ಜೋಡಿ: ಮತ್ತೆ ದಕ್ಕೀತೇ ಖುಷಿಯ ಬುಗ್ಗೆ?

Published:
Updated:
Prajavani

ಶಾರೂಖ್‌ ಖಾನ್‌ ಮತ್ತು ಕಾಜಲ್ ಜೋಡಿಯ ಸಿನಿಮಾಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ‘ಬಾಜಿಗರ್‌’ ಚಿತ್ರದಿಂದ ಆರಂಭಿಸಿ ಈಚಿನ ‘ದಿಲ್‌ವಾಲೆ’ ಚಿತ್ರದವರೆಗೆ ಅವರ ಜೋಡಿ ಮಾಡಿದ ಮೋಡಿಯನ್ನು ಆ ಜೋಡಿಯ ಅಭಿಮಾನಿಗಳು ಮಾತ್ರವಲ್ಲದೆ, ಎಲ್ಲ ಸಿನಿಮಾ ಪ್ರೇಮಿಗಳೂ ಅಚ್ಚರಿಯಿಂದ ಗಮನಿಸಿರಬಹುದು.

ಈಗ, ಶಾರೂಖ್‌ ಮತ್ತು ಕಾಜಲ್‌ ಜೋಡಿಯ ಇನ್ನೊಂದು ಸಿನಿಮಾ ಸೆಟ್ಟೇರಬಹುದು ಎಂಬ ಅಭಿಮಾನ ಮಿಶ್ರಿತ ಕಾತರ ಸಿನಿಮಾ ಪ್ರೇಮಿಗಳಲ್ಲಿ ಮೂಡಿದೆ. ಹಾಗೆ ಆಗಿರುವುದಕ್ಕೆ ಒಂದಿಷ್ಟು ಕಾರಣಗಳೂ ಇವೆ. ಶಾರೂಖ್‌ ಅವರು 2019 ಅಥವಾ 2020ರಲ್ಲಿ ಕರಣ್‌ ಜೋಹರ್‌ ನಿರ್ದೇಶನದ ಸಿನಿಮಾವೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ.

ಅಷ್ಟೇ ಅಲ್ಲ, ಸಿನಿಮಾ ಸಂಬಂಧಿತ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಜಲ್ ಅವರೂ ಈ ಬಗ್ಗೆ ಒಂದು ಸುಳಿವು ನೀಡಿದ್ದಾರೆ. ‘ಕಳೆದ 25 ವರ್ಷಗಳಿಂದಲೂ ನಾನು ಮತ್ತು ಶಾರೂಖ್‌ ಆಗಾಗ ಒಟ್ಟಾಗಿ ಸಿನಿಮಾ ಮಾಡುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿ ಇನ್ನೊಂದು ಸಿನಿಮಾ ಆಗಲೂಬಹುದು’ ಎಂಬ ಅರ್ಥದ ಮಾತನ್ನು ಕಾಜಲ್ ಆಡಿದ್ದಾರೆ.

ಅಂದಹಾಗೆ, ಕರಣ್‌ ಜೋಹರ್ ಮತ್ತು ಶಾರೂಖ್ ಅವರ ಸ್ನೇಹ ತೀರಾ ಗಾಢ. ಹಾಗೆಯೇ, ಕರಣ್‌ ಅವರ ನಿರ್ದೇಶನದಲ್ಲಿ, ಶಾರೂಖ್‌ ಅಭಿನಯದಲ್ಲಿ ಬಂದ ಕೆಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ಕಾಜಲ್ ನಾಯಕಿಯ ಪಾತ್ರ ನಿಭಾಯಿಸಿದ್ದಾರೆ. ಈ ಕಾರಣಗಳಿಂದಾಗಿ, ಕರಣ್ ಜೋಹರ್ ಅವರ ಮುಂದಿನ ಸಿನಿಮಾದಲ್ಲಿ ಶಾರೂಖ್ ಮತ್ತು ಕಾಜಲ್ ಒಟ್ಟಾಗಬಹುದು ಎಂಬ ಅನುಮಾನ ಗಟ್ಟಿಯಾಗಿದೆ. ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ರಾಜ್–ಸಿಮ್ರನ್ ಜೋಡಿ ಮತ್ತೆ ತೆರೆಯ ಮೇಲೆ ಒಟ್ಟಾಗಿ ಕಾಣುವಂತೆ ಆಗಲಿ’ ಎಂದು ಅಭಿಮಾನಿಗಳು ಕಾತರದಿಂದ ಕಾಯುವಂತೆ ಆಗಿದೆ.

ಶಾರೂಖ್–ಕಾಜಲ್ ಸಿನಿಮಾಗಳು: ಈ ಜೋಡಿ ಒಟ್ಟಾಗಿ ಮಾಡಿದ ಮೊದಲ ಸಿನಿಮಾ ‘ಬಾಜಿಗರ್’. 1993ರಲ್ಲಿ ತೆರೆಕಂಡ ಈ ಚಿತ್ರವನ್ನು ಅಬ್ಬಾಸ್–ಮುಸ್ತಾನ್ ಜೋಡಿ ನಿರ್ದೇಶಿಸಿತ್ತು. ‘ಯೇ ಕಾಲಿ ಕಾಲಿ ಆಂಖೇ’, ‘ಬಾಜಿಗರ್ ಓ ಬಾಜಿಗರ್’ ಹಾಡುಗಳು ಜನಪ್ರಿಯವಾಗಿದ್ದವು.

ಈ ಜೋಡಿಯ ‘ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರವು ಕೆಲವು ಸಾರ್ವಕಾಲಿಕ ದಾಖಲೆಗಳನ್ನು ಸೃಷ್ಟಿಸಿತು. ಆದಿತ್ಯ ಚೋಪ್ರಾ ನಿರ್ದೇಶನದ ಈ ಸಿನಿಮಾ ಮುಂಬೈನ ಮರಾಠಾ ಚಿತ್ರಮಂದಿರದಲ್ಲಿ 20 ವರ್ಷಗಳ ಕಾಲ ಪ್ರದರ್ಶನ ಕಂಡ ಹೆಗ್ಗಳಿಕೆ ಪಡೆಯಿತು. ಕರಣ್ ಜೋಹರ್ ನಿರ್ದೇಶನದ ‘ಕುಚ್ ಕುಚ್ ಹೋತಾ ಹೈ’ ಈ ಜೋಡಿಗೆ ಹೆಸರು ತಂದುಕೊಟ್ಟ ಇನ್ನೊಂದು ಸೂಪರ್‌ಹಿಟ್ ಚಿತ್ರ. ಕಾಲೇಜು ಜೀವನದಿಂದ ಆರಂಭವಾಗುವ ಈ ಚಿತ್ರದಲ್ಲಿ ಇರುವುದು ತ್ರೀಕೋನ ಪ್ರೇಮಕಥೆ.

ಜತಿನ್–ಲಲಿತ್ ಸಂಗೀತ ನಿರ್ದೇಶನ ಇದ್ದ ಈ ಚಿತ್ರದ ‘ಕುಚ್ ಕುಚ್ ಹೋತಾ ಹೈ’, ‘ಲಡ್ಕಿ ಬಡಿ ಅಂಜಾನಿ ಹೈ’ ಹಾಡುಗಳು ಎವರ್‌ಗ್ರೀನ್‌ ಎಂಬ ಖ್ಯಾತಿ ಗಳಿಸಿಕೊಂಡವು!

ಕರಣ್ ಜೋಹರ್ ನಿರ್ದೇಶನದಲ್ಲೇ ಮೂಡಿಬಂದ, ಬಹುತಾರಾಗಣದ ‘ಕಭಿ ಖುಷಿ ಕಭಿ ಗಮ್’ ಚಿತ್ರ ಕೂಡ ಶಾರೂಖ್–ಕಾಜಲ್ ಜೋಡಿಯ ಮೋಡಿಯನ್ನು ವೀಕ್ಷಕರ ಹೃದಯಕ್ಕೆ ತಲುಪಿಸಿತು. ‘ಮೈ ನೇಮ್ ಈಸ್ ಖಾನ್’ ಮತ್ತು ‘ದಿಲ್ವಾಲೆ’ ಈ ಜೋಡಿಯ ತೀರಾ ಈಚಿನ ಸಿನಿಮಾಗಳು. ಒಟ್ಟಿನಲ್ಲಿ, ಶಾರೂಖ್‌–ಕಾಜಲ್ ಅವರು ಅಭಿಮಾನಿಗಳ ಪಾಲಿಗೆ ಖುಷಿಯ ಬುಗ್ಗೆ ಸೃಷ್ಟಿಸಬಲ್ಲ, ‘ಆಮರ ಪ್ರೇಮಿ’ ಜೋಡಿ.

Post Comments (+)