ಮಂಗಳವಾರ, ಡಿಸೆಂಬರ್ 7, 2021
23 °C

ಜೈಲಿನಲ್ಲಿ ಮಗ ಆರ್ಯನ್ ಖಾನ್ ಭೇಟಿಯಾದ ಶಾರುಕ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರು ಇಂದು ಮುಂಬೈನ ಆರ್ಥರ್ ರೋಡ್ ಜೈಲಿಗೆ ತೆರಳಿ ಮಗ ಆರ್ಯನ್ ಖಾನ್ ಅವರನ್ನು ಭೇಟಿಯಾದರು.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಆರ್ಯನ್ ಖಾನ್ ಅಕ್ಟೋಬರ್ 2ರಿಂದ ಜೈಲಿನಲ್ಲಿದ್ದಾರೆ. ನಿನ್ನೆ ನ್ಯಾಯಾಲಯವು ಅವರಿಗೆ ಜಾಮೀನು ನಿರಾಕರಿಸಿತ್ತು.

ಆರ್ಯನ್ ಖಾನ್ ಬಂಧನದ ಬಳಿಕ ಇದೇ ಮೊದಲ ಬಾರಿಗೆ ಶಾರುಕ್ ಖಾನ್ ಮಗನನ್ನು ಭೇಟಿಯಾಗಿದ್ದಾರೆ. 20 ನಿಮಿಷಗಳ ಕಾಲ ಮಗನ ಜೊತೆ ಮಾತನಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಜೈಲು ಭೇಟಿ ನಿರ್ಬಂಧವನ್ನು ಮಹಾರಾಷ್ಟ್ರ ಸರ್ಕಾರ ತೆರವುಗೊಳಿಸಿದ ಬಳಿಕ ಈ ಭೇಟಿ ನಡೆದಿದೆ.

ಆರ್ಯನ್ ಖಾನ್‌ಗೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿದ್ದು, ಈಗ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರ ನ್ಯಾಯಾಂಗ ಬಂಧನ ಇಂದಿಗೆ ಕೊನೆಗೊಳ್ಳುತ್ತದೆ.

ಶುಕ್ರವಾರ ತಮ್ಮ ತಂದೆ ಶಾರುಖ್ ಖಾನ್ ಮತ್ತು ತಾಯಿ ಗೌರಿ ಖಾನ್‌ ಅವರೊಂದಿಗೆ ವಿಡಿಯೊ ಕರೆ ಮೂಲಕ ಮಾತನಾಡಿದ್ದರು.

ನಿನ್ನೆ ಆರ್ಯನ್ ಖಾನ್‌ಗ ಜಾಮೀನು ನಿರಾಕರಿಸಿದ್ದ ವಿಶೇಷ ನ್ಯಾಯಾಲಯವು, ವಾಟ್ಸ್‌ಆ್ಯಪ್ ಚಾಟ್‌ಗಳು ಆತ ‘ಅಕ್ರಮ ಮಾದಕವಸ್ತು ಚಟುವಟಿಕೆಗಳಲ್ಲಿ’ ಭಾಗಿಯಾಗಿರುವುದನ್ನು ತೋರಿಸುತ್ತವೆ ಎಂದು ಹೇಳಿತ್ತು.

‘ವಾಟ್ಸ್‌ಆ್ಯಪ್ ಚಾಟ್‌ಗಳು ಆರ್ಯನ್ ಖಾನ್, ನಿಯಮಿತವಾಗಿ ಮಾದಕವಸ್ತು ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ತೋರಿಸುತ್ತವೆ. ಆದ್ದರಿಂದ ಜಾಮೀನು ಪಡೆದ ಬಳಿಕ ಆರ್ಯನ್ ಖಾನ್ ಇದೇ ರೀತಿಯ ಅಪರಾಧ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗುವುದಿಲ್ಲ’ ಎಂದು ನ್ಯಾಯಾಧೀಶ ವಿ.ವಿ ಪಾಟೀಲ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ದಾಖಲೆಗಳು ಆರ್ಯನ್ ಖಾನ್ ಮತ್ತು ಡ್ರಗ್ಸ್ ಪೂರೈಕೆದಾರರು ಹಾಗೂ ಪೆಡ್ಲರ್‌ಗಳ ನಡುವೆ ಸಂಬಂಧ ಸೂಚಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ಸ್ ಕಂಡುಬಂದಿಲ್ಲವಾದರೂ, ಸ್ನೇಹಿತ ಅರ್ಬಾಜ್ ಮರ್ಚೆಂಟ್ ಶೂನಲ್ಲಿ ಆರು ಗ್ರಾಂ ಚರಸ್ ಇರುವ ಬಗ್ಗೆ ಆತನಿಗೆ ತಿಳಿದಿತ್ತು. ಇದು ‘ಪ್ರಜ್ಞಾಪೂರ್ವಕ ಅಪರಾಧ’ಕ್ಕೆ ಸಮಾನವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ.. ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ: ಆರ್ಯನ್ ಖಾನ್‌ ಜಾಮೀನು ಅರ್ಜಿ ತಿರಸ್ಕೃತ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು