ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕನ್ನು ತಡೆಯಲು ಸಾಧ್ಯವಿಲ್ಲ: ಪತಿಯ ಬಂಧನದ ನಂತರ ಶಿಲ್ಪಾ ಶೆಟ್ಟಿ ಮೊದಲ ಪೋಸ್ಟ್‌

ಅಕ್ಷರ ಗಾತ್ರ

ಪತಿ ರಾಜ್ ಕುಂದ್ರಾ ಅವರನ್ನು ಬಂಧಿಸಿದ ನಂತರ ಶಿಲ್ಪಾ ಶೆಟ್ಟಿ ತಮ್ಮ ಮೊದಲ ಇನ್‌ಸ್ಟಾಗ್ರಾಮ್‌ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಖ್ಯಾತ ಲೇಖಕ ಜೇಮ್ಸ್ ಥರ್ಬರ್ ಅವರ ಪುಸ್ತಕದ ಪುಟವೊಂದನ್ನು ಆ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

'ಕೋಪದಿಂದ ಹಿಂತಿರುಗಿ, ಭಯದಿಂದ ಮುಂದಕ್ಕೆ ನೋಡಬೇಡಿ. ಆದರೆ, ಜಾಗೃತಿಯಿಂದ ಸುತ್ತಲೂ ನೋಡಿ' ಎಂಬ ಸಾಲನ್ನು ಪೋಸ್ಟ್‌ನ ಆರಂಭದಲ್ಲಿ ಬರೆಯಲಾಗಿದೆ.

'ಅನುಭವಿಸಿದ ಹತಾಶೆ ಮತ್ತು ನೋಯಿಸಿದ ಜನರನ್ನು ನಾವು ಕೋಪದಿಂದ ನೋಡುತ್ತೇವೆ. ನಾವೂ ಸಹ ನಮ್ಮ ಕೆಲಸಗಳನ್ನು ಕಳೆದುಕೊಳ್ಳಬಹುದು. ಕಾಯಿಲೆಗೆ ತುತ್ತಾಗಬಹುದು. ನಮ್ಮ ಪ್ರೀತಿಪಾತ್ರರು ಮರಣ ಹೊಂದಬಹುದು. ಆದರೆ, ನಾವು ಇರಬೇಕಾದ ಸರಿಯಾದ ಜಾಗ ಮಾತ್ರ ಇದುವೇ ಆಗಿದೆ. ಏನಾಗಿದೆ ಅಥವಾ ಏನಾಗಿರಬಹುದು ಎಂಬುದರ ಬಗ್ಗೆ ಆತಂಕದಿಂದ ನೋಡುತ್ತಿಲ್ಲ. ಆದರೆ, ಅದು ಏನು ಎಂಬುದು ಮಾತ್ರ ಸಂಪೂರ್ಣವಾಗಿ ತಿಳಿದಿದೆ' ಎಂಬ ಅರ್ಥವುಳ್ಳ ಸಾಲುಗಳನ್ನು ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ.

'ಈಗ ಜೀವಂತವಾಗಿರುವುದಕ್ಕೆ ಅದೃಷ್ಟಶಾಲಿ ಎಂದೇ ನಾನು ತಿಳಿದುಕೊಂಡಿದ್ದೇನೆ. ಆ ಕಾರಣ ನಾನು ಗಟ್ಟಿಯಾಗಿ ಉಸಿರನ್ನು ತೆಗೆದುಕೊಳ್ಳುತ್ತೇನೆ. ಈ ಹಿಂದೆಯೂ ಸಂಕಷ್ಟಗಳನ್ನು ದಾಟಿ ಬದುಕುಳಿದಿದ್ದೇನೆ. ಭವಿಷ್ಯದಲ್ಲಿ ಸವಾಲುಗಳನ್ನೂ ಎದುರಿಸುತ್ತೇನೆ. ಇವತ್ತಿನ ನನ್ನ ಬದುಕನ್ನು ನಾನು ಬದುಕುತ್ತೇನೆ. ಯಾವುದರಿಂದಲೂ ಇದಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ' ಎಂದು ಶಿಲ್ಪಾ ಶೆಟ್ಟಿ ಪೋಸ್ಟ್‌ ಮಾಡಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಪೋಸ್ಟ್‌ನ ಸ್ಕ್ರೀನ್‌ ಶಾಟ್‌
ನಟಿ ಶಿಲ್ಪಾ ಶೆಟ್ಟಿ ಪೋಸ್ಟ್‌ನ ಸ್ಕ್ರೀನ್‌ ಶಾಟ್‌

ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಮತ್ತು ಆ್ಯಪ್‌ಗಳ ಮೂಲಕ ಅವುಗಳನ್ನು ಬಿತ್ತರಿಸಿದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಸ್ಥಳೀಯ ನ್ಯಾಯಾಲಯ ಜುಲೈ 23ರವರೆಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ರಾಜ್‌ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ಪೊಲೀಸರು ಮತ್ತೊಬ್ಬ ಆರೋಪಿ ರಿಯಾನ್‌ ಜಾನ್‌ನನ್ನು ಬಂಧಿಸಿದ್ದು ಆತನನ್ನು ಜುಲೈ 23ರವರೆಗೂ ನ್ಯಾಯಾಲಯ ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಕುಂದ್ರಾ ಹಾಗೂ ರಿಯಾನ್‌ನನ್ನು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಪ್ರಕರಣದಲ್ಲಿ ಕುಂದ್ರಾ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯವರ ಪಾತ್ರ ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವುದಕ್ಕೂ ಮುಂಚೆ ರಾಜ್‌ ಕುಂದ್ರ ಕವಿತಾರನ್ನು ಮದುವೆಯಾಗಿ ಲಂಡನ್‌ನಲ್ಲಿ ನೆಲೆಸಿದ್ದರು. ಕವಿತಾಗೆ 2006ರಲ್ಲಿ ವಿಚ್ಛೇದನ ನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT