ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಜ್‌ಕುಮಾರ್‌ ನಟನೆಯ ಹೊಸ ಚಿತ್ರದ ಹೆಸರು ‘ಆರ್‌.ಡಿ.ಎಕ್ಸ್‌’

Last Updated 6 ಜನವರಿ 2020, 9:46 IST
ಅಕ್ಷರ ಗಾತ್ರ

‘ಸೆಂಚುರಿ ಸ್ಟಾರ್‌’ ಶಿವರಾಜ್‌ಕುಮಾರ್‌ ಅವರು ಕಾಲಿವುಡ್‌ನ ಚಿತ್ರ ನಿರ್ಮಾಣ ಸಂಸ್ಥೆಯಾದ ಸತ್ಯ ಜ್ಯೋತಿ ಫಿಲ್ಮ್‌ ನಿರ್ಮಿಸುತ್ತಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈಗ ಈ ಸಿನಿಮಾದ ಶೀರ್ಷಿಕೆಯೂ ಅಧಿಕೃತಗೊಂಡಿದೆ. ಚಿತ್ರಕ್ಕೆ ‘ಆರ್‌.ಡಿ.ಎಕ್ಸ್‌’ ಎಂದು ಹೆಸರಿಡಲಾಗಿದೆ. ಇದಕ್ಕೆ ತಮಿಳಿನ ಖ್ಯಾತ ನಿರ್ದೇಶಕ ರವಿ ಅರಸು ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ತಮಿಳಿನ ಸೂಪರ್‌ ಹಿಟ್‌ ಚಿತ್ರ ‘ಈಟಿ’ಗೂ ಆ್ಯಕ್ಷನ್‌ ಕಟ್‌ ಹೇಳಿದ್ದು ರವಿ ಅರಸು ಅವರೇ. ಅವರು ನಿರ್ದೇಶಿಸಿರುವ ಬಹುನಿರೀಕ್ಷಿತ ‘ಅಯಂಗರನ್‌’ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ‘ಆರ್‌.ಡಿ.ಎಕ್ಸ್‌’ ಚಿತ್ರದ ಶೂಟಿಂಗ್‌ ಫೆಬ್ರುವರಿ 19ರಿಂದ ಆರಂಭವಾಗಲಿದೆ. ಶಿವರಾಜ್‌ಕುಮಾರ್‌ ಅವರು ನಟಿಸಿದ ಮೊದಲ ಚಿತ್ರ ‘ಆನಂದ್‌’. ಫೆ. 19ರಂದೇ ಈ ಸಿನಿಮಾದ ಶೂಟಿಂಗ್‌ ಪ್ರಾರಂಭವಾಗಿತ್ತಂತೆ. ‘ಆರ್‌.ಡಿ.ಎಕ್ಸ್‌’ ಚಿತ್ರದಲ್ಲಿ ಪೊಲೀಸ್‌ ಸುತ್ತ ಕಥೆ ಹೆಣೆಯಲಾಗಿದೆ. ರವಿ ಅರಸು ಅವರೇ ಈ ಕಥೆ ಬರೆದಿದ್ದಾರಂತೆ.

ಸತ್ಯ ಜ್ಯೋತಿ ಫಿಲ್ಮ್ಸ್‌ಸಂಸ್ಥೆ ಸ್ಥಾಪನೆಯಾಗಿದ್ದು 1982ರಲ್ಲಿ. ಈ ಸಂಸ್ಥೆಯನ್ನು ಹುಟ್ಟುಹಾಕಿದ್ದುಟಿ.ಜಿ. ತ್ಯಾಗರಾಜನ್‌. ತಮಿಳಿನಲ್ಲಿ ಅಜಿತ್‌ ನಟನೆಯ ‘ವಿವೇಗಂ’, ‘ವಿಶ್ವಸಂ’ ಚಿತ್ರವನ್ನು ಈ ಸಂಸ್ಥೆ ನಿರ್ಮಿಸಿದೆ. ಸಂಕ್ರಾಂತಿಗೆ ಬಿಡುಗಡೆಗೆ ಸಿದ್ಧವಾಗಿರುವ ಧನುಷ್‌ ನಟನೆಯ ‘ಪಟಾಸ್‌’ ಚಿತ್ರವನ್ನೂ ಈ ‍ಪ್ರೊಡಕ್ಷನ್‌ನಡಿಯೇ ನಿರ್ಮಿಸಲಾಗಿದೆ.

1986ರಲ್ಲಿ ‘ಸಾಹಸಸಿಂಹ’ ವಿಷ್ಣುವರ್ಧನ್‌ ನಟನೆಯ ಕನ್ನಡದ ‘ಸತ್ಯ ಜ್ಯೋತಿ’ ಚಿತ್ರವನ್ನು ಈ ಸಂಸ್ಥೆಯೇ ನಿರ್ಮಿಸಿತ್ತು. ಕೆ. ರಂಗರಾಜ್‌ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರೊಟ್ಟಿಗೆ ಊರ್ವಶಿ ಮತ್ತು ಸುಮಲತಾ ನಟಿಸಿದ್ದರು. ಮೂರು ದಶಕದ ಬಳಿಕ ಮತ್ತೆ ಈ ಸಂಸ್ಥೆಯು ಕನ್ನಡ ಚಿತ್ರೋದ್ಯಮವನ್ನು ಪ್ರವೇಶಿಸುತ್ತಿದೆ.

ಶಿವರಾಜ್‌ಕುಮಾರ್‌ ನಟನೆಯ ‘ಮಫ್ತಿ’ ಮತ್ತು ‘ಟಗರು’ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿದ್ದವು. ಈ ಚಿತ್ರಗಳನ್ನು ವೀಕ್ಷಿಸಿದ ಸಂಸ್ಥೆಯು ‘ಆರ್‌.ಡಿ.ಎಕ್ಸ್‌’ ಚಿತ್ರಕ್ಕೆ ಶಿವಣ್ಣ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವರ್ಗಕ್ಕೆ ಕಲಾವಿದರ ಹುಡುಕಾಟ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT