ಶನಿವಾರ, ಏಪ್ರಿಲ್ 4, 2020
19 °C

ಸಿನಿಮಾ ವಿಮರ್ಶೆ | ಫೈಟಿಂಗ್‌ ಪ್ರಿಯರಿಗೆ ಟೈಮ್‌ಪಾಸ್‌

ಹನಿ Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಶಿವಾರ್ಜುನ (ಕನ್ನಡ)
ನಿರ್ಮಾಣ: ಎಂ.ಬಿ. ಮಂಜುಳಾ ಶಿವಾರ್ಜುನ್‌
ನಿರ್ದೇಶನ: ಶಿವತೇಜಸ್‌
ತಾರಾಗಣ: ಚಿರಂಜೀವಿ ಸರ್ಜಾ, ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್, ಕಿಶೋರ್, ಅವಿನಾಶ್, ತಾರಾ

***

ನಾಲ್ಕು ಭರ್ಜರಿ ಫೈಟು, ಮೂರು ಹಾಡು, ಸ್ವಲ್ಪ ದ್ವಂದ್ವಾರ್ಥದ ಪೋಲಿ ಡೈಲಾಗು, ತಲೆಮಾರುಗಳ ದ್ವೇಷದ ಅದೇ ಹಳೆಯ ಕಥೆ– ಇವಿಷ್ಟನ್ನು ‘ಬೊಕೆ’ಯೊಂದರಲ್ಲಿ ಚಂದ ಮಡಚಿ ಸ್ವಲ್ಪ ಸೆಂಟು ಹೊಡೆದು ಕೊಟ್ಟಿದ್ದಾರೆ ನಿರ್ದೇಶಕ ಶಿವತೇಜಸ್‌. ದ್ವೇಷ, ಕೊಲೆ ಮತ್ತು ಹೊಡೆದಾಟಗಳೇ ಚಿತ್ರದ ಜೀವಾಳ. ಅಲ್ಲಲ್ಲಿ ಸೆಂಟಿಮೆಂಟ್‌ ದೃಶ್ಯಗಳಿದ್ದರೂ ಪ್ರೇಕ್ಷಕರಿಗೆ ಕಣ್ಣೀರು ಬರುವುದಿಲ್ಲ.

ನದಿಯ ಇಕ್ಕೆಲದಲ್ಲಿರುವ ಎರಡು ಹಳ್ಳಿಗಳಿಗೆ ಇರುವುದು ಒಂದೇ ದೇವಸ್ಥಾನ. ಕೂಡಿ ಬಾಳದಂತೆ ತಡೆಯುವುದು ಎರಡು ಕುಟುಂಬಗಳ ದ್ವೇಷ. ದ್ವೇಷದ ದಳ್ಳುರಿಗೆ ಸಿಕ್ಕು ಬಾಲ್ಯದಲ್ಲೇ ಊರು ಬಿಟ್ಟು ಓಡಿಹೋದ ಇಬ್ಬರು ಸೋದರರು (ಚಿರಂಜೀವಿ ಸರ್ಜಾ ಮತ್ತು ಕಿಶೋರ್‌) ಮರಳಿ ಅಪರಿಚಿತರಂತೆ ಊರು ಸೇರುತ್ತಾರೆ. ಅಣ್ಣ ತಹಶೀಲ್ದಾರ್‌ ಆಗಿ ಊರುಗಳನ್ನು ಕೂಡಿಸಲು ಯತ್ನಿಸಿದರೆ, ತಮ್ಮ ಕುಟುಂಬಕ್ಕೆ ಆಸರೆಯಾಗಿ ವಿಲ್ಲನ್‌ನ ತಂತ್ರಗಳನ್ನು ವಿಫಲಗೊಳಿಸುತ್ತಾನೆ. ಕೊನೆಗೆ ಊರುಬಿಟ್ಟು ಹೋದ ಸೋದರರು ಇವರೇ ಎಂದು ವಿಲನ್‌ ಕಡೆಯವರಿಗೆ ಗೊತ್ತಾದಾಗ ತಹಶೀಲ್ದಾರ್‌ ಕೊಲೆಯಾಗುತ್ತಾನೆ. ನಾಯಕ (ಚಿರಂಜೀವಿ ಸರ್ಜಾ) ವಿಲನ್‌ಗಳ ಮೇಲೆ ಮುಗಿಬಿದ್ದು ಕತ್ತರಿಸಿ ಮುಗಿಸಿ, ಉಳಿದವರೊಂದಿಗೆ ಸುಖವಾಗಿರುತ್ತಾನೆ. ಚಿತ್ರದಲ್ಲಿ ಒಂದಿಬ್ಬರು ಪೊಲೀಸರು ಕಾಣಿಸುತ್ತಾರಾದರೂ, ಪೊಲೀಸ್‌ ಠಾಣೆ ಇದ್ದ ಯಾವ ಕುರುಹುಗಳೂ ಇಲ್ಲ. ಕಥೆಯ ಬಗ್ಗೆ ತರ್ಕ ವ್ಯರ್ಥ.  ರವಿವರ್ಮ, ವಿನೋದ್‌ ಮತ್ತು ಥ್ರಿಲ್ಲರ್‌ ಮಂಜು ಹೊಡೆದಾಟಗಳು ಅಭಿಮಾನಿಗಳನ್ನು ರಂಜಿಸುತ್ತವೆ. 

ಚಿತ್ರದ ಉತ್ತರಾರ್ಧ ಸ್ವಲ್ಪ ನೋಡುವಂತಿದೆ. ನಾಯಕಿ ಅಮೃತಾ ಅಯ್ಯಂಗಾರ್‌ರ ಲವಲವಿಕೆ ಮತ್ತು ಕಿಶೋರ್‌ ಅಭಿನಯ ಇದಕ್ಕೆ ಕಾರಣ. ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಶಿವರಾಜ್‌ ಮತ್ತು ನಯನಾ ಕೂಡಾ ಇದಕ್ಕೆ ಸಾಥ್‌ ನೀಡಿದ್ದಾರೆ. ಮೊದಲಾರ್ಧದಲ್ಲಿ ಪೋಲಿ ಸಂಭಾಷಣೆಯ ಟ್ರ್ಯಾಕ್‌ನಲ್ಲಿ ಕಾಣಿಸಿಕೊಂಡ ಸಾಧು ಕೋಕಿಲ, ಕುರಿ ಪ್ರತಾಪ್‌ ಬಳಿಕ ಕಣ್ಮರೆಯಾಗುತ್ತಾರೆ. ಸಾಧು ಮತ್ತು ಅವರ ಮಗ ಸುರಾಗ್‌ ಸಂಗೀತ ನಿರ್ದೇಶನದಲ್ಲಿ ಕವಿರಾಜ್‌ ಬರೆದ ಹಾಡು ಪರವಾಗಿಲ್ಲ. ಸರ್ಜಾ ಪತ್ನಿ ಮೇಘನಾರಾಜ್ ಇದಕ್ಕೆ ಧ್ವನಿಯಾಗಿದ್ದಾರೆ. ಯೋಗರಾಜ್‌ ಭಟ್‌ ಮತ್ತು ನಾಗೇಂದ್ರ ಪ್ರಸಾದ್‌ ಹಾಡುಗಳಿದ್ದರೂ ಕಥೆಗೆ ಪೂರಕವಾಗಿಲ್ಲ. ಅವಿನಾಶ್‌, ತಾರಾ ಎಂದಿನಂತೆ ನಟಿಸಿದ್ದಾರೆ. ತಾರಾ ಅವರ ಮಗ ಶ್ರೀಕೃಷ್ಣ ಚಿತ್ರದಲ್ಲೂ ಮಗನ ಪಾತ್ರ ನಿರ್ವಹಿಸಿದ್ದಾನೆ. ಮುಖ್ಯ ವಿಲ್ಲನ್‌ ಪಾತ್ರದಲ್ಲಿ ಹಿಂದಿಯ ರವಿಕಿಶನ್‌ ಗಮನಾರ್ಹ. ‘ಟೈಮ್‌ಪಾಸ್‌’ ಮಾಡುವವರಿಗೆ ಹೇಳಿಮಾಡಿಸಿದ ಸಿನಿಮಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು