ಗುರುವಾರ , ಸೆಪ್ಟೆಂಬರ್ 23, 2021
27 °C

ಸಿನಿಮಾ ಶೂಟಿಂಗ್ ವೇಳೆ ಫೈಟರ್ ಸಾವು: ಈ ದುರಂತಗಳಿಗೆ ಕೊನೆಯಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೂಟಿಂಗ್‌ ವೇಳೆಯ ದುರಂತ ಘಟನೆಗಳು ಚಿತ್ರರಂಗವನ್ನು ಆಗಾಗ ಕಾಡುತ್ತಲೇ ಇವೆ. ದುರಂತಗಳು ನಡೆದಾಗ ಒಂದಿಷ್ಟು ಚರ್ಚೆಗಳು ನಡೆಯುವುದು, ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವುದು ನಡೆದೇ ಇದೆ.

ಇಂಥ ಘಟನೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಲಿಯಾಗುವುದು ಸಾಹಸ ಕಲಾವಿದರು, ತಂತ್ರಜ್ಞರು ಮತ್ತು ಕೆಳಹಂತದ ಕಾರ್ಮಿಕರು. ಆರ್ಥಿಕ ಮತ್ತು ಮಾನಸಿಕ ಒತ್ತಡ ಬೀಳುವುದು ನಿರ್ಮಾಪಕರ ಮೇಲೆ. ನಿರ್ಮಾಪಕನ ಬದುಕಿನಲ್ಲಿ ಅಂಥ ಘಟನೆ ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತದೆ.

ಇಂತಹ ಘಟನೆಗಳನ್ನು ತಡೆಯಲು ಏನೇನು ಮಾಡಬಹುದು ಎಂಬ ಚರ್ಚೆ ಮತ್ತು ಅದಕ್ಕೆ ಸಂಬಂಧಿಸಿದ ಸಿದ್ಧತೆ ನಿರ್ಮಾಪಕರ ಮಟ್ಟದಲ್ಲಿ ನಡೆದಿದೆ. ಅಲ್ಲಿ ನಡೆದ ಚರ್ಚೆಯ ಅಂಶಗಳನ್ನು ನಿರ್ಮಾಪಕ ಕೆ. ಮಂಜು ‘ಸಿನಿಮಾ ಪುರವಣಿ’ಗೆ ವಿವರಿಸಿದರು.

ವಿಮೆ ಕಡ್ಡಾಯಗೊಳ್ಳಲಿ: ಚಿಕ್ಕ ರೋಪ್‌ನಿಂದ ಹಿಡಿದು ಒಂದೊಂದು ಪುಟ್ಟ ಪುಟ್ಟ ಸಾಮಗ್ರಿಗಳಿಗೂ ದುಬಾರಿ ಬಿಲ್‌ ಮಾಡುವ ಸ್ಟಂಟ್‌ ಮಾಸ್ಟರ್‌ಗಳು ತಾವು ಹಾಗೂ ಕಲಾವಿದರಿಗೆ ವಿಮೆ ಮಾಡಿಸಿರುವುದಿಲ್ಲ. ಇದು ಕಡ್ಡಾಯಗೊಳ್ಳಬೇಕು. 

ಇದನ್ನೂ ಓದಿ: ರಚಿತಾ ರಾಮ್-ಅಜಯ್ ರಾವ್ ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್‌ ಸ್ಪರ್ಶ; ಫೈಟರ್ ಸಾವು

ಫೈಟ್‌ ಮಾಸ್ಟರ್‌ಗಳಾಗಿ ತುಂಬಾ ವಯಸ್ಸಾದವರು, ಸಾಹಸ ತಂತ್ರ ಗೊತ್ತಿಲ್ಲದವರು, ಅನುಭವ ಇಲ್ಲದವರು ಬರುತ್ತಿದ್ದಾರೆ. ಇದು ತಪ್ಪಬೇಕು. 

ನಿರ್ಮಾಪಕರಿಗೆ ಸ್ವಾತಂತ್ರ್ಯ ಬೇಕು: ಈಗ ಚಿತ್ರ ಚಟುವಟಿಕೆಗೆ ಯಾರೇ ಬೇಕಾದರೂ ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ನೋಂದಣಿಯಾದವರನ್ನೇ ತೆಗೆದುಕೊಳ್ಳಬೇಕು ಎಂಬ ನಿಯಮ ಇದೆ. ಅಲ್ಲಿ ಎಲ್ಲರೂ ಅರ್ಹರೇ ಇರುತ್ತಾರೆ ಎಂಬ ಖಾತ್ರಿ ಇರುವುದಿಲ್ಲ. ಇದು ಬದಲಾಗಬೇಕು.

ವೈದ್ಯರು, ಪ್ರಥಮ ಚಿಕಿತ್ಸೆ ವ್ಯವಸ್ಥೆ ಬೇಕು: ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಅಲ್ಲಿ ವೈದ್ಯರು, ಅಂಬುಲೆನ್ಸ್‌, ಪ್ರಥಮ ಚಿಕಿತ್ಸೆ ಸೌಲಭ್ಯ ಇರಲೇಬೇಕು.

ಅವರವರೇ ಜವಾಬ್ದಾರಿ: ಚಿತ್ರ ನಿರ್ಮಾಣದ ವಿವಿಧ ವಿಭಾಗಗಳಲ್ಲಿ ಏನೇ ಆದರೂ ಆಯಾ ವಿಭಾಗದ ಮುಖ್ಯಸ್ಥರಿಗೇ ಹೊಣೆಗಾರಿಕೆ ವಹಿಸಬೇಕು. ಸಾಹಸ ಚಿತ್ರೀಕರಣದಲ್ಲಿ ಏನಾದರೂ ಲೋಪವಾದರೆ ಫೈಟ್‌ ಮಾಸ್ಟರೇ ಹೊಣೆಗಾರರಾಗಬೇಕು. ಎಲ್ಲ ಸರ್ಕಾರಗಳು ಚಿತ್ರನಗರಿ ಎಂದು ಹೇಳುತ್ತಲೇ ಬಂದಿವೆ. ಅದು ಯಾವಾಗ ಅನುಷ್ಠಾನವಾಗುತ್ತೋ ಗೊತ್ತಿಲ್ಲ. 

ಏಕಗವಾಕ್ಷಿ ವ್ಯವಸ್ಥೆ ಬೇಕು: ಈಗ ಹೆಸರಿಗೊಂದು ಏಕಗವಾಕ್ಷಿ ವ್ಯವಸ್ಥೆಯೇನೋ ಇದೆ. ಆದರೆ, ಶೂಟಿಂಗ್‌ಗೆ ಹೋದಾಗ ಸ್ಥಳೀಯಮಟ್ಟದಲ್ಲಿ ಪೊಲೀಸರ, ಅಧಿಕಾರಿಗಳ, ಆಡಳಿತದ ಸಹಕಾರ ಸಿಗುವುದಿಲ್ಲ. ಇದು ಬದಲಾಗಬೇಕು.  

‘ಈಗ ಚಿತ್ರತಂಡಗಳು ತಮ್ಮ ನಿರ್ಲಕ್ಷ್ಯಕ್ಕೆ ಬೆಲೆತೆರಬೇಕಾಗಿ ಬಂದಿದೆ. ಜೀವ ಪಣಕ್ಕಿಟ್ಟು ಸಾಹಸ ಪ್ರದರ್ಶಿಸಿ ಆಗಬೇಕಾದದ್ದು ಏನು ಹೇಳಿ’ ಎಂದು ಬೇಸರದಿಂದ ಪ್ರಶ್ನಿಸುತ್ತಾರೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌. ಜೈರಾಜ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು