ಶುಕ್ರವಾರ, ನವೆಂಬರ್ 27, 2020
24 °C

ಚಿತ್ರೀಕರಣ ಪೂರ್ಣಗೊಳಿಸಿದ ‘ಫ್ಯಾಂಟಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇತ್ತೀಚೆಗಷ್ಟೇ ಚಿತ್ರೀಕರಣ ಶುರುಮಾಡಿದ್ದ ‘ಫ್ಯಾಂಟಸಿ’ ಚಿತ್ರ ತಂಡ ಇದೀಗ ಚಿತ್ರೀಕರಣ ಪೂರ್ಣಗೊಳಿಸಿ ರಾಕ್ಲೈನ್ ಸ್ಟುಡಿಯೋದಲ್ಲಿ ಕುಂಬಳಕಾಯಿ ಹೊಡೆದ ಖುಷಿಯಲ್ಲಿದೆ. ಚಿತ್ರೀಕರಣೋತ್ತರ ಕೆಲಸಗಳನ್ನು ಭರದಿಂದ ನಡೆಸಿ, ಬರುವ ಫೆಬ್ರುವರಿಯಲ್ಲಿ ಚಿತ್ರ ತೆರೆಕಾಣಿಸುವ ಸಿದ್ಧತೆಯಲ್ಲಿದೆ ಚಿತ್ರತಂಡ.

24 ದಿನದಲ್ಲಿ ಇಡೀ ಚಿತ್ರದ ಶೂಟಿಂಗ್ ಮುಗಿಸಿದ್ದು, ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರದ ನಿರ್ದೇಶಕ ಪವನ್‌ ಕುಮಾರ್‌ ಆರ್‌. ಅವರು ಚಿತ್ರತಂಡದೊಂದಿಗೆ ಚಿತ್ರೀಕರಣದ ತಾಣದಲ್ಲೇ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ಪವನ್ ಡ್ರೀಮ್ ಫಿಲಂಸ್ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಪವನ್ ಕುಮಾರ್ ಆರ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಿರ್ದೇಶನದ ನೊಗವನ್ನು ಹೊರುವ ಜತೆಗೆ ಜತೆಗೆ ತಮ್ಮ ತಾಯಿ–ತಂದೆ ಎಂ. ಮಹಾದೇವಿ, ಟಿ. ರಂಗಸ್ವಾಮಿ ಅವರೊಡಗೂಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ನಿರ್ದೇಶಕ ಗುರು ದೇಶಪಾಂಡೆ ಅವರ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕನಾಗಿ ಚಂದನವನಕ್ಕೆ ಬಂದೆ. ಬಳಿಕ ‘ಅಮ್ಮ ಐ ಲವ್ ಯೂ’, ‘ಆದ್ಯಾ’ ಸಿನಿಮಾಗಳಲ್ಲಿ ನಿರ್ದೇಶಕ ಕೆ.ಎಂ. ಚೈತನ್ಯ ಅವರೊಂದಿಗೆ ಕೆಲಸ ಮಾಡಿದೆ. ಚೈತನ್ಯ ಅವರಿಂದ ನಿರ್ದೇಶನದ ಪಾಠವನ್ನೂ ಕಲಿತೆ. ಸಿನಿಮಾರಂಗಕ್ಕೆ ನಾನು ಬರಲು ಚಿರಂಜೀವಿ ಸರ್ಜಾ ಅವರೇ ಕಾರಣ’ ಎಂದು  ಪವನ್ ಮಾತಿಗಾರಂಭಿಸಿದರು.

‘ಎಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು, ಸಿನಿಮಾ ಹಾದಿ ಹಿಡಿದೆ. ಅಪ್ಪ, ಅಮ್ಮನಿಂದಲೂ ಸಾಥ್ ಸಿಕ್ಕಿತು. ಒಳ್ಳೆಯ ಕಥೆಯೂ ಸಿದ್ಧವಾಯಿತು. ಸಿನಿಮಾ ನಿರ್ಮಿಸುವ ನಿರ್ಧಾರ ತೆಗೆದುಕೊಂಡು ಕೆಲಸ ಆರಂಭಿಸಿದೆ. ಕಂಟೆಂಟ್ ಎಷ್ಟೇ ಗಟ್ಟಿಯಾಗಿದ್ದರೂ, ಅದನ್ನು ಬಿಂಬಿಸುವ ಛಾಯಾಗ್ರಾಹಕ ಅಷ್ಟೇ ಮುಖ್ಯ. ಆ ಸ್ಥಾನ ತುಂಬಲು ಪಿ.ಕೆ.ಎಚ್. ದಾಸ್ ಬಂದರು. ಅವರಿಂದ ಶೇ. 100ರಷ್ಟು ಕೆಲಸ ಬಯಸಿದರೆ, ಇನ್ನೂ ಹತ್ತು ಪರ್ಸೆಂಟ್‌ ಹೆಚ್ಚೇ ಕೊಟ್ಟಿದ್ದಾರೆ. ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ. ಶಶಿರಾಮ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ’ ಎಂದು ತಾಂತ್ರಿಕ ವರ್ಗವನ್ನೂ ಪರಿಚಯಿಸಿದರು.

‘ಒಂಬತ್ತು ತಿಂಗಳ ನಂತರ ಮತ್ತೆ ಕ್ಯಾಮೆರಾ ಎದುರು ಬಂದಾಗ ಖುಷಿಯಾಯಿತು. ಪವನ್ ಅವರ ಹೊಸ ಆಲೋಚನೆ, ಸಿನಿಮಾ ಬಗ್ಗೆ ಆತನಿಗಿರುವ ಪ್ಯಾಷನ್, ಸೆಳೆತವನ್ನು ‘ಸಂಹಾರ’ ಸಿನಿಮಾ ಸಮಯದಲ್ಲಿಯೇ ನೋಡಿದ್ದೆ. ನಿರ್ದೇಶಕನಾಗುವ ಎಲ್ಲ ಕೌಶಲವೂ ಆತನಿಗಿದೆ ಎಂದು ಆಗಲೇ ಹೇಳಿದ್ದೆ. ಇದೀಗ ಅದು ಸಾಕಾರವಾಗಿದೆ. ಈ ಸಿನಿಮಾದಲ್ಲಿ ನನಗೂ ಒಂದು ಪಾತ್ರ ಸಿಕ್ಕಿದೆ. ನನ್ನ ಪಾತ್ರದ ಹೆಸರು ಭಾಸ್ಕರ್ ಪೊನ್ನಪ್ಪ’ ಎನ್ನುವ ಮಾತು ಸೇರಿಸಿದರು ನಟ ಬಾಲರಜಾವಾಡಿ.

ಚಿತ್ರದ ನಾಯಕಿ ಪ್ರಿಯಾಂಕಾ ಸಹ ಸಿನಿಮಾ ಬಗ್ಗೆ ತುಂಬಾ ಖುಷಿಯಲ್ಲಿದ್ದಾರೆ. ‘ಬಿಗ್‌ ಬಾಸ್‌ನಲ್ಲಿ ದಿನದೂಡಿದಂತೆ ಕೊರೊನಾದಲ್ಲಿಯೂ ಸಮಯ ಕಳೆದಿದ್ದೆವು. ಖುಷಿ ವಿಚಾರ ಕೇಳಿ ತುಂಬಾ ದಿನವೇ ಆಗಿತ್ತು. ಆಗ ಸಿಕ್ಕ ಸಿಹಿ ಸುದ್ದಿ ಈ ‘ಫ್ಯಾಂಟಸಿ’ ಸಿನಿಮಾ. ಇದು ನನ್ನ ಮೊದಲ ಸಿನಿಮಾ. ಧಾರಾವಾಹಿಯಂತೆ ಇಲ್ಲಿಯು ನೆಗೆಟಿವ್ ಪಾತ್ರ ಮುಂದುವರಿದಿದೆ’ ಎನ್ನುವುದು ಪ್ರಿಯಾಂಕಾ ಅಂಬೋಣ.

ವಿಶೇಷ ಪಾತ್ರದಲ್ಲಿ ನಟ ಹೇಮಂತ್ ಕಾಣಿಸಿಕೊಂಡಿದ್ದಾರೆ. ಹರಿಣಿ, ಮೂರ್ತಿ, ಗೌರಿ, ಬಾಲನಟ ಅನುರಾಗ್ ಅವರ ತಾರಾಗಣವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.