ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತ್ರವೆಂಬುದು ಜಗವ ಕಾಣುವ ಕಿಟಕಿ: ಶೃಂಗ ಬಿ. ವಿ.

Last Updated 25 ಏಪ್ರಿಲ್ 2019, 11:02 IST
ಅಕ್ಷರ ಗಾತ್ರ

ಶೃಂಗ ಬಿ.ವಿ. ಬೆಂಗಳೂರು ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಪ್ರತಿಭಾವಂತ ನಟ. ಅನನ್ಯಾ ಕಾಸರವಳ್ಳಿ ಅವರ ‘ಹರಿಕಥಾ ಪ್ರಸಂಗ’ ಸಿನಿಮಾ ಮೂಲಕವೂ ಗಮನಸೆಳೆದಿದ್ದ ಅವರು, ಕಿರುತೆರೆಯಲ್ಲಿಯೂ ನಟನೆಯ ಛಾಪು ಮೂಡಿಸಿದವರು. ಅಚ್ಯುತಕುಮಾರ್‌ ನಿರ್ದೇಶನದ ‘ಕೊಳ’ ನಾಟಕದಲ್ಲಿನ ನಟನೆಗೆ ‘ಮೆಟಾ ನಾಟಕೋತ್ಸವ’ದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

*‘ಮೆಟಾ’ ನಾಟಕೋತ್ಸವದ ಕುರಿತು ಹೇಳಿ.

‘ಮೆಟಾ’ ನಾಟಕೋತ್ಸವದ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ. ನನಗೆ ಆ ನಾಟಕೋತ್ಸವಕ್ಕೆ ಹೋಗಲು ಸಾಧ್ಯವಾಗಲಿಲ್ಲವಲ್ಲ ಎಂದೂ ಅನಿಸುತ್ತಿತ್ತು. ಇದೇ ಮೊದಲ ಬಾರಿಗೆ ನಾನು ಆ ನಾಟಕಕ್ಕೆ ಹೋಗಿದ್ದು. ತುಂಬ ವ್ಯವಸ್ಥಿತವಾಗಿ ಸಂಘಟನೆ ಮಾಡಲಾಗುತ್ತದೆ.

‘ಮಹೀಂದ್ರಾ ಎಕ್ಸೆಲೆನ್ಸ್‌ ಫಾರ್‌ ಥಿಯೇಟರ್‌ ಅವಾರ್ಡ್ಸ್‌’ ಪ್ರತಿವರ್ಷವೂ ನಡೆಯುತ್ತದೆ. ದೇಶದ ಬೇರೆ ಬೇರೆ ಭಾಗಗಳಿಂದ ನಾಟಕಗಳು ಸ್ಪರ್ಧೆಯಲ್ಲಿರುತ್ತವೆ. ಈ ಸಲ ಎಂಟು ನಾಟಕಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಅದರಲ್ಲಿ ಅಚ್ಯುತಕುಮಾರ್‌ ನಿರ್ದೇಶನದ ‘ಕೊಳ’ ನಾಟಕವೂ ಇತ್ತು. ನಮ್ಮ ನಾಟಕ ಬೆಸ್ಟ್‌ ಕಾಸ್ಟ್ಯೂಮ್‌, ಬೆಸ್ಟ್‌ ಡೈರೆಕ್ಷನ್‌ ಮತ್ತು ಬೆಸ್ಟ್‌ ಡ್ರಾಮಾ ಈ ಮೂರು ವಿಭಾಗಗಳಲ್ಲಿ ನಾಮನಿರ್ದೇಶನವಾಗಿತ್ತು. ನನ್ನ ಹೆಸರು ಮೊದಲು ನಾಮನಿರ್ದೇಶನ ಆಗಿರಲಿಲ್ಲ. ಅವತ್ತು ನಾಟಕ ನೋಡಿದ ಜ್ಯೂರಿ ನನ್ನ ನಟನೆ ನೋಡಿ ನನ್ನ ಹೆಸರನ್ನು ‘ಅತ್ಯುತ್ತಮ ನಟ’ ವಿಭಾಗಕ್ಕೆ ನಾಮನಿರ್ದೇಶನ ಮಾಡಿದ್ದರು. ನಾಮನಿರ್ದೇಶನವಾಗಿರುವುದು ನನಗೆ ಗೊತ್ತಿಲ್ಲದಿದ್ದುದರಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿಯೂ ನಾನು ಇರಲಿಲ್ಲ. ಆ ಸಮಯದಲ್ಲಿ ಬೇರೆ ನಾಟಕ ನೋಡುತ್ತಿದ್ದೆ.

*ನೀವು ರಂಗಭೂಮಿಯ ಆಸಕ್ತಿ ಬೆಳೆಸಿಕೊಂಡಿದ್ದು ಹೇಗೆ?

ನನ್ನ ತಂದೆ ಶಿವಮೊಗ್ಗದವರು, ತಾಯಿ ಧಾರವಾಡದವರು. ನಾನು ಹುಟ್ಟಿದ್ದು ಬೆಳಗಾವಿಯಲ್ಲಿ. ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಓದಿದ್ದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌. ಎಂಜಿನಿಯರಿಂಗ್‌ ಮೂರನೇ ಸೆಮಿಸ್ಟರ್‌ನಲ್ಲಿದ್ದಾಗ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದು.

ನನ್ನ ತಂದೆ ‘ಬೆನಕ’ ನಾಟಕತಂಡದಲ್ಲಿ ಅಭಿನಯಿಸುತ್ತಿದ್ದರು. ‘ಗೋಕುಲ ನಿರ್ಗಮನ’ ನಾಟಕಕ್ಕೆ ಹೊಸ ಹುಡುಗರನ್ನು ಹುಡುಕುತ್ತಿದ್ದರು. ತಂದೆ ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಆಗ ನನಗೆ ರಂಗಭೂಮಿ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಆ ವಾತಾವರಣವೇ ತುಂಬ ಇಷ್ಟವಾಯ್ತು. 2004ರಲ್ಲಿ ನಟಿಸಿದ ‘ಗೋಕುಲ ನಿರ್ಗಮನ’ ನನ್ನ ಮೊದಲ ನಾಟಕ. ನಂತರ ಮೂರು ವರ್ಷ ನಾಟಕಗಳನ್ನು ಮಾಡುತ್ತಲೇ ಎಂಜಿನಿಯರಿಂಗ್ ಮುಗಿಸಿದೆ. ಆ ಸಮಯದಲ್ಲಿಯೇ ರಂಗಶಂಕರದ ಪರಿಚಯವೂ ಆಗಿತ್ತು. ‘ಗುಮ್ಮ ಬಂದ ಗುಮ್ಮ’ ನಾಟಕಕ್ಕೂ ಆಯ್ಕೆಯಾಗಿದ್ದೆ. ಅದು 2007. ಆಗಲೇ ನಾನು ನಟನಾಗಬೇಕು ಎಂದು ನಿರ್ಧರಿಸಿದೆ.

*ಧಾರಾವಾಹಿ ಮತ್ತು ಸಿನಿಮಾಗಳಲ್ಲಿಯೂ ನಟಿಸಿದ್ದೀರಲ್ಲವೇ?

ನನಗೆ ಮೊದಲು ಧಾರಾವಾಹಿಯಲ್ಲಿ ನಟಿಸುವ ಅವಕಾಶ ಕೊಡಿಸಿದ್ದು ಯಶ್‌. 2005ರಲ್ಲಿ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಯಲ್ಲಿ ನಟಿಸಿದ್ದೆ. ಆಗ ಅವರೆಲ್ಲ ‘ಇವನ್ಯಾಕೆ ಇಲ್ಲಿಗೆ ಬಂದ, ಪಾಪ’ ಅನ್ನುವ ಹಾಗೆ ನಟಿಸಿದ್ದೆ. ಅದಾದ ಮೇಲೆ 2009ರಲ್ಲಿ ‘ಕುಸುಮಾಂಜಲಿ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆಗ ನಟನೆಯ ಬಗ್ಗೆ ಕೊಂಚ ತಿಳಿದುಕೊಂಡಿದ್ದೆ. ನಂತರ ಸಿಹಿಕಹಿ ಚಂದ್ರು ನಿರ್ದೇಶನದ ‘ಬದುಕು ಮಾಯೆಯ ಆಟ’ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದೆ. ಇತ್ತೀಚೆಗೆ ಕೆ.ಎಂ. ಚೈತನ್ಯ ಅವರ ‘ಪ್ರೀತಿಯೆಂದರೇನು’ ಧಾರಾವಾಹಿಯಲ್ಲಿ ನಟಿಸಿದೆ.

ನಾನು ‘ಬಾಯ್‌ ವಿತ್‌ ಎ ಸೂಟ್‌ಕೇಸ್‌’‍ ಅಂತ ಅಂತರರಾಷ್ಟ್ರೀಯ ಸಹಯೋಗದ ಒಂದು ನಾಟಕದಲ್ಲಿ ನಟಿಸಿದ್ದೆ. ಅದನ್ನು ನೋಡಿದ ಕೆ.ಎಂ. ಚೈತನ್ಯ ಅವರು ‘ಪರಾರಿ’ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಅದಾದ ಮೇಲೆ ‘ರಿಂಗ್‌ ಮಾಸ್ಟರ್‌’, ‘ರಿಂಗ್‌ ರೋಡ್‌ ಶುಭಾ’ ಸಿನಿಮಾಗಳಲ್ಲಿಯೂ ನಟಿಸಿದೆ. ಆದರೆ ಇಂದಿಗೂ ನಾನು ಹೆಮ್ಮೆಯಿಂದ ಹೇಳಿಕೊಳ್ಳುವ ಸಿನಿಮಾ ಅನನ್ಯಾ ಕಾಸರವಳ್ಳಿ ಅವರ ‘ಹರಿಕಥಾ ಪ್ರಸಂಗ’ ಸಿನಿಮಾ. ಅದಾದ ಮೇಲೆ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಕಿರುಚಿತ್ರ ಮತ್ತು ರಂಗಭೂಮಿಗಳಲ್ಲಿಯೇ ತೊಡಗಿಕೊಂಡಿದ್ದೇನೆ.

*ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ರಂಗಭೂಮಿಯ ಪಾತ್ರ ಯಾವ ಬಗೆಯದು?

ರಂಗಭೂಮಿ ಒಂದು ಮಟ್ಟದ ವಿಶ್ಲೇಷಣಾ ದೃಷ್ಟಿಯನ್ನು ಬೇಡುತ್ತದೆ. ಅದು ಒಂದೇ ದಿಕ್ಕಿನಲ್ಲಿ ನಡೆಸುವ ವಿಶ್ಲೇಷಣೆ ಅಲ್ಲ. ರಾಜಕೀಯ, ಸಾಮಾಜಿಕ, ಗಣಿತ – ಹೀಗೆ ಹಲವು ನೆಲೆಗಳಲ್ಲಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ಹಾಡು ಅಥವಾ ರಿದಂ ಅನುಸರಿಸುವಾಗ ಗಣಿತ ಬೇಕು. ಆ ಹಾಡು ಅಥವಾ ರಿದಂ ಯಾಕೆ ಎಂದು ಅರ್ಥ ಮಾಡಿಕೊಳ್ಳಲು ಸಮಾಜೋ ರಾಜಕೀಯ ಸ್ಥಿತಿಗತಿಗಳ ಅರಿವಿರಬೇಕು. ಮೊದಮೊದಲು ಇವನ್ನೆಲ್ಲ ಯೋಚಿಸುತ್ತಲೇ ಇರಲಿಲ್ಲ. ಹೋಗುವುದು, ನನ್ನ ಪಾತ್ರದ ಸಂಭಾಷಣೆ ಹೇಳಿ ಬರುವುದು ಅಷ್ಟೇ ಆಗಿತ್ತು. ಆದರೆ ನಿರಂತರವಾಗಿ ಅದದೇ ನಾಟಕಗಳನ್ನು ಮಾಡುತ್ತ, ಅದದೇ ಪಾತ್ರಗಳಲ್ಲಿ ನಟಿಸುತ್ತ ‘ಏನಿದು ನಾಟಕ?’ ಎಂಬ ಪ್ರಶ್ನೆ ನನ್ನೊಳಗೆ ಹುಟ್ಟಿಕೊಳ್ಳಲು ಶುರುವಾಯ್ತು. ಆ ಪ್ರಶ್ನೆಗೆ ಉತ್ತರ ಹುಡುಕಬೇಕು ಎಂಬ ಹಸಿವನ್ನು ನನ್ನಲ್ಲಿ ಹುಟ್ಟಿಸಿದ್ದು ರಂಗಭೂಮಿ. ಆ ಶೋಧನೆಯೇ ನನ್ನ ವ್ಯಕ್ತಿತ್ವಕ್ಕೆ ಸತ್ವವನ್ನು ಕೊಟ್ಟಿದೆ.

ಉದಾಹರಣೆಗೆ ‘ಬಾಯ್‌ ವಿತ್‌ ಎ ಸೂಟ್‌ಕೇಸ್‌’ ಒಬ್ಬ ಅಕ್ರಮ ವಲಸೆ ಬಂದಿರುವ ಹುಡುಗನ ಕಥೆ. ಒಂದು ಯುದ್ಧಪೀಡಿತ ದೇಶದಿಂದ ಲಂಡನ್‌ಗೆ ಹೋಗುವ ಪ್ರಯಾಣ ಅದು. 110 ಪ್ರದರ್ಶನ ಕಂಡ ನಾಟಕ ಅದು. ಅಷ್ಟು ಪ್ರದರ್ಶನ ಮಾಡುತ್ತ ಮಾಡುತ್ತ ನನಗೆ ಹೊಸ ಜಗತ್ತೇ ತೆರೆದುಕೊಂಡಿತು. ಒಬ್ಬ ನಿರಾಶ್ರಿತನ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಹೀಗೆಯೇ ಪ್ರತಿ ನಾಟಕ, ಪ್ರತಿ ಪಾತ್ರವೂ ಜಗತ್ತನ್ನು ನೋಡಲು, ಅರ್ಥಮಾಡಿಕೊಳ್ಳಲು ನನಗೆ ಸಿಕ್ಕ ಕಿಟಕಿ.

*ವೀಣಾಪಾಣಿ ಅವರ ‘ಆದಿಶಕ್ತಿ’ ತಂಡದಲ್ಲಿಯೂ ರಂಗತರಬೇತಿ ಪಡೆದುಕೊಂಡಿದ್ದೀರಿ. ಅದರ ಕುರಿತು ಹೇಳಿ.

‘ಆದಿಶಕ್ತಿ’ ಅವರ ರಂಗಭೂಮಿ ಸಂಶೋಧನಾ ಲ್ಯಾಬೊರೇಟರಿಯ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದೆ. ‘ಆದಿಶಕ್ತಿ’ ನಡೆಸಿದ ಕಾರ್ಯಾಗಾರವೇ ನನಗೆ ಧೈರ್ಯ ಕೊಟ್ಟಿದ್ದು. ಮೊದಲೆಲ್ಲ ಏನು ಮಾಡ್ತಿದ್ದೀಯಾ ಎಂದು ಯಾರಾದರೂ ಕೇಳಿದಾಗ ‘ನಟ’ ಎಂದು ಹೇಳಲು ಹಿಂಜರಿಕೆ ಇತ್ತು. ಆದರೆ ಪಾಂಡಿಚೇರಿಯಲ್ಲಿ ಐದೂವರೆ ತಿಂಗಳು ಕಳೆದ ಮೇಲೆ ‘ನಾನು ನಟ’ ಎಂದು ಧೈರ್ಯದಿಂದ ಹೇಳಿಕೊಳ್ಳುವ ಹಾಗೆ ಆಗಿದ್ದೇನೆ. ಹವ್ಯಾಸಿ ರಂಗತಂಡಗಳನ್ನೇ ನೋಡುತ್ತಿದ್ದ ನನಗೆ ರಂಗಭೂಮಿಯಲ್ಲಿ ಎಷ್ಟು ಸಂಶೋಧನೆ ಮಾಡುತ್ತಾರೆ, ಏನೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿಕೊಟ್ಟ ಕಾರ್ಯಾಗಾರ ಅದು. ನನ್ನ ಇಡೀ ಬದುಕಿಗೇ ‘ಆದಿಶಕ್ತಿ’ ತಂಡದ ಜೊತೆಗಿನ ಒಡನಾಟ ಒಂದು ದೆಸೆಯನ್ನು ತೋರಿಸಿಕೊಟ್ಟಿತು.

*ನಟನೆ ಎಂದರೆ ಪರಕಾಯ ಪ್ರವೇಶ ಅನ್ನುತ್ತಾರೆ. ಹಾಗೆಯೇ ನಟನೆ ಎನ್ನುವುದು ಪ್ರಜ್ಞಾಪೂರ್ವಕವಾಗಿ ನಡೆಸುವ ಪ್ರಕ್ರಿಯೆ ಎನ್ನುವವರೂ ಇದ್ದಾರೆ. ನಿಮ್ಮ ನಟನೆಯ ವ್ಯಾಖ್ಯಾನ ಏನು?

ಆ ಎರಡೂ ವ್ಯಾಖ್ಯಾನಗಳ ಮಿಶ್ರಣದಲ್ಲಿ ನಟನೆ ಇದೆಯೇನೋ ಅನಿಸುತ್ತದೆ. ಪರಕಾಯ ಪ್ರವೇಶ ಎಂಬುದನ್ನೆಲ್ಲ ನಾನು ದೇವರಾಣೆ ನಂಬಲ್ಲ. ಅದು ತುಂಬ ರೊಮ್ಯಾಂಟಿಕ್‌ ಐಡಿಯಾ ಅಷ್ಟೆ. ನಟ ಒಂದು ಪಾತ್ರದ ಒಟ್ಟಾರೆ ರೂಪುರೇಷೆಯಷ್ಟೇ ಕೊಡುವುದಕ್ಕೆ ಸಾಧ್ಯ. ಮಿಕ್ಕಿದ್ದೆಲ್ಲವೂ ಪ್ರೇಕ್ಷಕನ ಮನಸಿನಲ್ಲಿಯೇ ಆಗಬೇಕು, ಆಗುತ್ತದೆ. ಅಲ್ಲದೇ ನಾಟಕ ಅಷ್ಟು ಶಕ್ತಿಶಾಲಿ ಆಗಿಲ್ಲ ಎಂದರೆ ನಟ ಏನು ಮಾಡಿದರೂ ವ್ಯರ್ಥ.

ನಟನೆ ಎನ್ನುವ ಪ್ರಕ್ರಿಯೆ ತುಂಬ ತಾಂತ್ರಿಕವಾದದ್ದು; ಮಾನಸಿಕವಾದದ್ದು ಮತ್ತು ವೈಯಕ್ತಿಕವಾದದ್ದು. ನಟ ತಾನು ಅಭಿನಯಿಸುವ ಪಾತ್ರದ ಇತಿಹಾಸ, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ. ನಂತರ ಒಂದು ಸನ್ನಿವೇಶದಲ್ಲಿ ಆ ಪಾತ್ರ ಹೇಗೆ ವರ್ತಿಸಬಹುದು ಎಂಬುದರ ಒಟ್ಟಾರೆ ಕಲ್ಪನೆಯನ್ನು ಕಟ್ಟಿಕೊಡಬಹುದು ಅಷ್ಟೆ. ಆದರೆ ಅದನ್ನು ಕಾರ್ಯಗತಗೊಳಿಸಲಿಕ್ಕೆ ತರಬೇತಿ ಬೇಕು. ಯಾಕೆಂದರೆ ಒಂದು ಭಾವವನ್ನು ಹುಡುಕುವುದಕ್ಕೆ, ಜೀವನದ ಅನುಭವ, ಅಧ್ಯಯನ ಎಲ್ಲವೂ ಬೇಕು. ಹಾಗೆ ಹುಡುಕಿರುವ ಭಾವವನ್ನು ಮರುಸೃಷ್ಟಿಸಲಿಕ್ಕೆ ತರಬೇತಿ–ತಂತ್ರಗಳೂ ಬೇಕಾಗುತ್ತವೆ. ಕೆಲವು ಧಾರಾವಾಹಿ ನಟಿಯರು ಇದನ್ನು ತುಂಬ ಚೆನ್ನಾಗಿ ಮಾಡುತ್ತಾರೆ. ಪ್ರತಿದಿನವೂ ಒಬ್ಬ ಮನುಷ್ಯ ಅಳಬೇಕು ಅಂದರೆ ಸುಲಭವಲ್ಲ. ಹಲವು ಕಲಾವಿದರು ಗ್ಲಿಸರಿನ್‌ ಇಲ್ಲದೆ ಅಳುತ್ತಿರುತ್ತಾರೆ. ಅದು ಫೆಂಟಾಸ್ಟಿಕ್‌. ಅವರಿಗೆ ಆ ಟೆಕ್ನಿಕ್‌ ಸಿಕ್ಕಿದೆ. ಅಳತೆ ಸಿಕ್ಕಿದೆ.

ರಂಗಭೂಮಿಯಲ್ಲಿ ಅವೇ ಪಾತ್ರಗಳನ್ನು ಸನ್ನಿವೇಶಗಳನ್ನು, ಸಂಭಾಷಣೆಗಳನ್ನು ಮತ್ತೆ ಮತ್ತೆ ನಟಿಸುತ್ತಿರುತ್ತೀರಿ. ಆದರೆ ಸಿನಿಮಾ ಮತ್ತು ಧಾರಾವಾಹಿ ಹಾಗಲ್ಲ. ಎರಡೂ ಮಾಧ್ಯಮಗಳಲ್ಲಿನ ಪಾತ್ರಗಳಿಗೆ ಸಿದ್ಧರಾಗುವ ಬಗೆಯಲ್ಲಿ ಏನು ವ್ಯತ್ಯಾಸ ಇರುತ್ತದೆ?

ನಾಟಕದಲ್ಲಿ ನನಗೆ ಇಷ್ಟವಾಗುವುದೇ ಅದು. 2011ರಲ್ಲಿ ಒಂದು ನಾಟಕದ ಸಂಭಾಷಣೆ ಹೇಳಿರುವುದಕ್ಕೂ ಅದೇ ಸಂಭಾಷಣೆಯನ್ನು ಇಂದಿಗೆ ಹೇಳುವುದಕ್ಕೂ ವ್ಯತ್ಯಾಸ ಇರುತ್ತದೆ. ಎಂಟು ವರ್ಷದ ಜೀವನನುಭವದ ಬೆಂಬಲ ಇರುತ್ತದೆ. ಈ ಸಾಧ್ಯತೆ ಇರುವುದು ರಂಗಭೂಮಿಯಲ್ಲಿಯೇ ಮತ್ತು ರಿಪೀಟ್‌ ಶೋ ಆದಾಗಲೇ.

ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಒಮ್ಮೆ ಮಾಡಿ ಬಿಟ್ಟುಬಿಡುತ್ತೇವೆ. ತಿದ್ದಿಕೊಳ್ಳಲಿಕ್ಕೆ ಅವಕಾಶ ಇರುವುದಿಲ್ಲ. ಧಾರಾವಾಹಿಗಳಲ್ಲಂತೂ ಕೊಂಚ ಕಷ್ಟವೇ. ಯಾಕೆಂದರೆ ಕಥೆ ಎಲ್ಲಿಗೆ ಹೋಗುತ್ತದೆ ಎಂದೇ ಗೊತ್ತಿರುವುದಿಲ್ಲ. ಅದು ಒಂದು ಸಾಧ್ಯತೆಯೂ ಹೌದು. ಯಾಕೆಂದರೆ ಬದುಕು ಎಲ್ಲಿಗೆ ಹೋಗುತ್ತದೆ ಎಂದೂ ನಮಗೆ ಗೊತ್ತಿರುವುದಿಲ್ಲವಲ್ಲ. ಅಂದಾಜಿನಲ್ಲಿಯೇ ಎಲ್ಲವನ್ನೂ ಮಾಡುತ್ತಿರುತ್ತೇವೆ.

* ನಿರ್ದೇಶನದ ಕನಸು ಇದೆಯೇ?

ಇದೆ. ಇನ್ನೂ ತುಂಬ ಓದಬೇಕು, ತಿಳಿದುಕೊಳ್ಳಬೇಕು. ನಟನೆಯ ಹಂಬಲ ಕೊಂಚ ಕಮ್ಮಿಯಾದ ಮೇಲೆ ನಿರ್ದೇಶನ ಮಾಡುವುದು ಒಳ್ಳೆಯದು. ಈ ಪಾತ್ರವನ್ನು ನಾನು ಮಾಡಬಹುದಲ್ವಾ ಅನಿಸಿಬಿಟ್ರೆ ಕಷ್ಟ. ಸದ್ಯಕ್ಕೆ ನಟನೆಗೆ ಗಮನಕೊಡುತ್ತಿದ್ದೇನೆ.

*ಸಿನಿಮಾ ಮಾಧ್ಯಮದಲ್ಲಿ ಯಾವ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟ?

ಈಗ ಜಗತ್ತಿನ ಸಿನಿಮಾಗಳಿಗೆ ನಾವು ತೆರೆದುಕೊಳ್ಳುತ್ತಿದ್ದೇವೆ. ಅವುಗಳನ್ನು ನೋಡಿದಾಗ ನಾನೂ ಅಂಥ ಸಂಕೀರ್ಣ ಪಾತ್ರಗಳಲ್ಲಿ ನಟಿಸಬೇಕು ಅನಿಸುತ್ತದೆ. ನಮ್ಮ ರಂಗಭೂಮಿಯಲ್ಲಿ, ಸಾಹಿತ್ಯ ಕೃತಿಯಲ್ಲಿ ಆ ಸಂಕೀರ್ಣತೆ ಇದೆ. ಸಿನಿಮಾಗಳಲ್ಲಿ ಕೊಂಚ ಕಮ್ಮಿಯಿದೆ. ಮುಖ್ಯವಾಹಿನಿ ಸಿನಿಮಾಗಳಲ್ಲಿ ಹೀರೊ, ಪೋಷಕಪಾತ್ರಗಳು, ಹೀರೊಯಿನ್‌, ಹೀಗೆ ಪಾತ್ರಗಳಿಗೆ ಸಿದ್ಧ ವ್ಯಾಖ್ಯಾನಗಳು ಇರುವುದೂ ಅದಕ್ಕೆ ಕಾರಣ ಇರಬಹುದು. ಸಂಕೀರ್ಣತೆ ಇರುವ ಸಿನಿಮಾಗಳು ಇಲ್ಲ ಅಂತಿಲ್ಲ. ಗಿರಿರಾಜ್‌ ಅವರ ‘ಜಟ್ಟ’ ನನ್ನ ನೆಚ್ಚಿನ ಸಿನಿಮಾಗಳಲ್ಲಿ ಒಂದು. ಒಂದು ಮುಖ್ಯಪಾತ್ರ, ಅದರ ಸುತ್ತಮುತ್ತ ಬರುವ ಎಲ್ಲ ಪಾತ್ರಗಳೂ ತುಂಬ ಸಂಕೀರ್ಣವಾಗಿವೆ. ಅಂಥ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಕಮರ್ಷಿಯಲ್‌ ಆಗಲಿ, ಕಲಾತ್ಮಕ ಆಗಲಿ ನಾನು ನಟಿಸುತ್ತೇನೆ.

ಚಿತ್ರಗಳು: ಆನಂದ ಬಕ್ಷಿ

ಕೃಪೆ: ಸುಧಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT