ಸೋಮವಾರ, ಏಪ್ರಿಲ್ 6, 2020
19 °C

ಸಿರಿಯ ಸಿನಿಮಾ ಶಿಕಾರಿ

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಆಕೆಯ ಮೂಲ ಹೊಸಪೇಟೆಯಾದರೂ ಹುಟ್ಟಿ, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೇ. ಕಾಲೇಜು ಹಂತದಲ್ಲಿರುವಾಗಲೇ ನಟನೆಯ ಗೀಳು ಹತ್ತಿಸಿಕೊಂಡ ನಟಿ ಸಿರಿ ಪ್ರಹ್ಲಾದ್‌ ಕ್ಯಾಮೆರಾ ಎದುರಿಸುವುದರಲ್ಲಿ ಪಳಗಿದ್ದು, ‘ಯುಗಳಗೀತೆ’ ಧಾರಾವಾಹಿಯ ‘ಪಂಚಮಿ’ ಪಾತ್ರದ ಮೂಲಕ. ಅವರಿಗೆ ಹಿರಿತೆರೆಯಲ್ಲಿ ನಾಯಕಿಯಾಗಿ ಪದಾರ್ಪಣೆಗೆ ವೇದಿಕೆ ಕಲ್ಪಿಸಿದ್ದು, ಸಚಿನ್‌ ಶೆಟ್ಟಿ ನಿರ್ದೇಶನದ ‘ಒಂದು ಶಿಕಾರಿಯ ಕಥೆ’.

ಇದೇ ಶುಕ್ರವಾರ ತೆರೆ ಕಾಣುತ್ತಿರುವ ಈ ಸಿನಿಮಾದಲ್ಲಿ ಅವರು ಉಮಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಾವು ನಟಿಸಿದ ಮೊದಲ ಚಿತ್ರವೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿ ಪಡೆದಿರುವುದಕ್ಕೆ ಅವರಿಗೆ ಖುಷಿಯಾಗಿದೆ. ‘ಉಮಾ ಯಕ್ಷಗಾನ ಪ್ರೇಮಿ. ಪ್ರತೀ ರಾತ್ರಿ ಯಕ್ಷಗಾನ ನೋಡಲು ಹೋಗುತ್ತಿರುತ್ತಾಳೆ. ಯಕ್ಷಗಾನ ಕಲಾವಿದನ ಪ್ರೇಮಕ್ಕೂ ಸಿಲುಕುತ್ತಾಳೆ. ಮುಗ್ಧ ಪಾತ್ರವದು; ಆಡಂಬರ ಇಲ್ಲ. ಕೊನೆಗೆ, ಆ ಪ್ರೀತಿ ಶಿಕಾರಿಯ ಹಾದಿಯಲ್ಲಿ ಹೇಗೆ ಸಾಗುತ್ತದೆ ಎಂಬುದೇ ಈ ಚಿತ್ರದ ಕುತೂಹಲ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

ಅವರ ಅಪ್ಪ ಬ್ಯಾಂಕ್‌ ಮ್ಯಾನೇಜರ್. ಅಮ್ಮ ಗೃಹಿಣಿ. ಜೈನ್‌ ಕಾಲೇಜಿನಲ್ಲಿ ಬಿಎಸ್‌ಸಿ ಓದಿದ್ದಾರೆ. ಅವರು ರ‍್ಯಾಂಕ್‌ ವಿದ್ಯಾರ್ಥಿನಿಯೂ ಹೌದು. ಕಾಲೇಜಿನಲ್ಲಿ ಇದ್ದಾಗಲೇ ಅವರಿಗೆ ಖಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗ ಸಿಕ್ಕಿತಂತೆ.

‘ಹಾಗಾದರೆ ಬಣ್ಣದಲೋಕದ ಸೆಳೆತಕ್ಕೆ ಸಿಕ್ಕಿದ್ದು ಹೇಗೆ’ ಎನ್ನುವ ಪ್ರಶ್ನೆಗೆ ಅವರು ಉತ್ತರಿಸುವುದು ಹೀಗೆ: ‘ನನಗೆ ಮೊದಲಿನಿಂದಲೂ ನಟನಾ ಕ್ಷೇತ್ರದ ಮೇಲೆ ಆಸಕ್ತಿಯಿತ್ತು. ಆದರೆ ನಾನೆಂದಿಗೂ ನಟನಾ ಶಾಲೆಗೆ ಹೋದವಳಲ್ಲ. ಭರತನಾಟ್ಯ, ಕಥಕ್‌ ನೃತ್ಯ ಕಲಿತಿದ್ದೇನೆ. ಇದೇ ಸಿನಿಮಾದ ಸೆಳೆತಕ್ಕೆ ಸಿಲುಕಲು ಕಾರಣವಾಯಿತು. ಕಾಲೇಜಿನಲ್ಲಿದ್ದಾಗ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ರಂಗ ಕಲಾವಿದರೊಟ್ಟಿಗೆ ಕೆಲಸ ಮಾಡಿದೆ. ಆಗಲೇ, ನಟನಾ ಕ್ಷೇತ್ರದಲ್ಲೂ ಸಾಧನೆ ಮಾಡಬಹುದೆಂಬ ಭರವಸೆ ಮೂಡಿತು’ ಎಂದು ಉತ್ಸಾಹದಿಂದ ಹೇಳುತ್ತಾರೆ.

‘ಧಾರಾವಾಹಿಯಲ್ಲಿನ ನನ್ನ ನಟನೆ ನೋಡಿ ನಿರ್ದೇಶಕರು ಆಡಿಶನ್‌ಗೆ ಕರೆದರು. ಕಥೆ ಹಾಗೂ ನನ್ನ ಪಾತ್ರದ ಬಗ್ಗೆ ವಿವರಿಸಿದರು. ಅಲ್ಲದೇ, ಪಾತ್ರಕ್ಕೆ ತಕ್ಕಂತೆ ಎಲ್ಲಾ ಕಲಾವಿದರ ಕಾರ್ಯಾಗಾರ ನಡೆಸಿದರು. ಇದರಿಂದ ನನಗೆ ನಟನೆ ಸುಲಭವಾಯಿತು’ ಎಂದು ಮಾಹಿತಿ ನೀಡುತ್ತಾರೆ.

2014ರಲ್ಲಿ ನಡೆದ ಪ್ರೆಶ್‌ಫೇಸ್‌ ಸ್ಪರ್ಧೆಯಲ್ಲಿ ಅವರು ಪಾಲ್ಗೊಂಡಿದ್ದರಂತೆ. ಮೊದಲ ಐವರು ಸ್ಪರ್ಧಿಗಳಲ್ಲಿ ಅವರು ಒಬ್ಬರಾಗಿ ಆಯ್ಕೆಯಾದರಂತೆ. ಅವರಿಗೆ ಮಾಡೆಲಿಂಗ್‌ ಜಗತ್ತಿನ ಬಾಗಿಲು ತೆರೆದಿದ್ದು ಆಗಲೇ. ‘ಎರಡು ವರ್ಷಗಳ ಕಾಲ ಮಾಡೆಲಿಂಗ್‌ ಮಾಡಿದೆ. ಆಗ ಸಿನಿಮಾದಲ್ಲೂ ನಟಿಸುವ ಅವಕಾಶ ಬಂತು. ಓದಿನ ನಂತರವಷ್ಟೇ ಸಿನಿಮಾದಲ್ಲಿ ನಟಿಸಬೇಕೆಂದು ಅಪ್ಪ–ಅಮ್ಮ ಸಲಹೆ ನೀಡಿದರು. ಹಾಗಾಗಿ, ನಟನೆಗೆ ಮುಂದಾಗಲಿಲ್ಲ. ಪದವಿ ಶಿಕ್ಷಣದ ಬಳಿಕ ಚಿತ್ರರಂಗದತ್ತ ಹೊರಳಿದೆ’ ಎಂದು ವಿವರಿಸುತ್ತಾರೆ.

ಪ್ರಸ್ತುತ ಪಿಆರ್‌ಕೆ ಪ್ರೊಡಕ್ಷನ್‌ನಡಿ ರಘು ಸಮರ್ಥ್‌ ನಿರ್ದೇಶನದ ಮಹಿಳಾ ಕೇಂದ್ರಿತ ಚಿತ್ರ ‘ಲಾ’ ಚಿತ್ರದಲ್ಲೂ ಸಿರಿ ನಟಿಸಿದ್ದಾರೆ. ಇದರಲ್ಲಿ ಅವರದು ದ್ವಿತೀಯ ನಾಯಕಿಯ ಪಾತ್ರ. ‘ಹದಿಹರೆಯದ ಹುಡುಗಿಯ ಪಾತ್ರವದು. ‘ಒಂದು ಶಿಕಾರಿಯ ಕಥೆ’ ಚಿತ್ರದಲ್ಲಿನ ಪಾತ್ರಕ್ಕೆ ತದ್ವಿರುದ್ಧವಾದ ಮನೋಭಾವ ಇರುವ ಪಾತ್ರ. ಮುಗ್ಧತೆ ಇದ್ದರೂ ಬಬ್ಲಿ ಹುಡುಗಿಯಾಗಿ ನಟಿಸಿದ್ದೇನೆ’ ಎನ್ನುತ್ತಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿನ ನಟನೆಯ ವ್ಯತ್ಯಾಸದ ಬಗ್ಗೆ ಅವರಿಗೆ ಗೊತ್ತಿದೆ. ‘ಸೀರಿಯಲ್‌ನಲ್ಲಿ ಸಂಭಾಷಣೆ ಒಪ್ಪಿಸುವಿಕೆ ಮತ್ತು ನಟನೆಯ ಶೈಲಿ ಭಿನ್ನವಾಗಿರುತ್ತದೆ. ಸಿನಿಮಾದಲ್ಲಿ ನ್ಯಾಚುರಲ್‌ ಆದ ನಟನೆಯನ್ನು ಪ್ರೇಕ್ಷಕರು ಅಪೇಕ್ಷಿಸುತ್ತಾರೆ.  ಹಾವಭಾವದಲ್ಲೂ ಸಾಕಷ್ಟು ಬದಲಾವಣೆಯಿದೆ’ ಎನ್ನುವುದು ಅವರ ವಿವರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು