ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯಿಲ್ಲದ ಯುದ್ಧ...

Last Updated 1 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಇವರಿಬ್ಬರೂ ಅತಿಲೋಕ ಸುಂದರಿಯರು. ಬಾಲಿವುಡ್‌ ಸಿನಿಮಾಗಳಲ್ಲಿ ಹೆಸರು ಮಾಡಿದವರು. ಟಿ.ವಿ. ಶೋ, ಜಾಹೀರಾತುಗಳಲ್ಲೂ ಮಿಂಚಿದವರು. ಹೆಸರು, ಹಣ, ಸೆಲೆಬ್ರಿಟಿ ಪ್ರಪಂಚದಲ್ಲಿ ಸ್ಥಾನಮಾನ ಸಹಜವಾಗಿಯೇ ಬೆನ್ನಹಿಂದೆ ಬಂದವು. ಆದರೆ, ಸಾಧನೆಯ ಶಿಖರದ ಆರೋಹಣ ಇನ್ನೂ ಬಾಕಿ ಇದೆ ಎನ್ನುವಾಗಲೇ ಕ್ಯಾನ್ಸರ್‌ ಎಂಬ ಉರಿಕೊಂಡಿ ತಗುಲಿಕೊಂಡಿತು. ಇನ್ನೂ ನಲ್ವತ್ತರ ಹೊಸ್ತಿಲಿನಲ್ಲಿ ಇರುವಾಗಲೇ ಇಹಲೋಕಕ್ಕೆ ವಿದಾಯ ಹೇಳುವಂತೆ ಬಲವಂತ ಮಾಡಿತು.

ಆದರೆ, ಇಬ್ಬರೂ ಛಲಗಾತಿಯರು ಮಣಿಯಲಿಲ್ಲ. ಸತತ ಹೋರಾಟದಿಂದ ಉರಿಕೊಂಡಿಯ ಹಿಡಿತದಿಂದ ಪಾರಾದರು, ಸಾಧನೆಯ ಪಯಣವನ್ನು ಮುಂದುವರಿಸಿದರು. ಈಗ ಕ್ಯಾನ್ಸರ್‌ ವಿರುದ್ಧದ ಕೊನೆಯಿಲ್ಲದ ಯುದ್ಧದ ಕುರಿತು ಸಂದೇಶ ಹರಡುತ್ತಾ ಬದುಕು ಮುನ್ನಡೆಸುತ್ತಿದ್ದಾರೆ. ಅವರ ಫೋಟೊ ನೋಡಿದರೆ ಈಗ ನಿಮಗೇ ಆಶ್ಚರ್ಯವಾಗುತ್ತದೆ–ಅಲ್ಲಿ ಕ್ಯಾನ್ಸರ್‌ ಬಂದ ಯಾವ ಸೂಚನೆಯೂ ಮೇಲ್ನೋಟಕ್ಕೆ ಕಾಣುವುದಿಲ್ಲ.

ಸೋನಾಲಿ ಬೇಂದ್ರೆ ಹಾಗೂ ಲೀಸಾ ರೇ– ಈ ಇಬ್ಬರು ಛಲಗಾತಿಯರು. ಸೌಂದರ್ಯ, ಖ್ಯಾತಿಯ ಅಲೆಯಲ್ಲಿ ತೇಲುತ್ತಿದ್ದಾಗಲೇ ಸಾವಿನ ಕರಾಳಹಸ್ತ ಕ್ಯಾನ್ಸರ್‌ ರೂಪದಲ್ಲಿ ಆಳಕ್ಕೆ ಅದುಮಲು ಯತ್ನಿಸಿದರೂ, ಧೈರ್ಯಗುಂದದೇ ಪುಟಿದೆದ್ದು ನಿಂತಿದ್ದಾರೆ. ಆದರೆ, ಈ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ. ಕಣ್ಣೀರು, ನೋವು, ನಿದ್ದೆಯಿಲ್ಲದ ರಾತ್ರಿಗಳ ಆಕ್ರಂದನ, ನಿನ್ನೆ– ನಾಳೆಗಳ ನೆನೆದು ಬಿಟ್ಟ ನಿಟ್ಟುಸಿರು... ಎಲ್ಲವೂ ಇತ್ತು!

ಲೀಸಾ: ‘ರೇ ಆಫ್‌ ಹೋಪ್‌’

ಇಂಡೋ–ಕೆನಡಿಯನ್‌ ಚೆಲುವೆ ಲೀಸಾ ರೇ. ಇನ್ನೂ 19ರ ಹರೆಯದಲ್ಲೇ ಜಾಹೀರಾತು ಲೋಕಕ್ಕೆ ಕಾಲಿಟ್ಟಾಕೆ. ಬಾಂಬೆ ಡೈಯಿಂಗ್‌ ಜಾಹೀರಾತಿಗೆ ರೂಪದರ್ಶಿಯಾದಾಗ ‘ಸೂಪರ್‌ ಮಾಡೆಲ್‌ ಉದಯ’ ಎಂದೇ ಮಾಧ್ಯಮಗಳು ಬಿಂಬಿಸಿದವು. ಲ್ಯಾಕ್ಮೆ, ಲೋರಿಯಲ್ಸ್‌, ಡಿ ಬಿಯರ್ಸ್‌, ರ‍್ಯಾಡೊ ಮೊದಲಾದ ಜಾಗತಿಕ ಬ್ರ್ಯಾಂಡ್‌ಗಳಿಗೆ ರೂಪದರ್ಶಿಯಾದ ಹಿರಿಮೆ ಈಕೆಯದು. ಸಹಜವಾಗಿಯೇ ಜಾಹೀರಾತಿನಿಂದ ಚಿತ್ರರಂಗಕ್ಕೆ ಆಹ್ವಾನಗಳು ಬಂದರೂ 2000ದವರೆಗೆ ಹೂಂ ಅನ್ನಲಿಲ್ಲ. ಕೊನೆಗೆ ‘ಕಸೂರ್‌’ ಮೂಲಕ ಬಾಲಿವುಡ್‌ಗೆ ಕಾಲಿಟ್ಟಳು. ನಂತರ ವಿವಾದ ಸೃಷ್ಟಿಸಿದ ‘ವಾಟರ್‌’ನಲ್ಲೂ ಅಭಿನಯ. ಅಮೆರಿಕ, ಯೂರೋಪ್‌, ಕೆನಡಾದಲ್ಲಿ ನಿರ್ಮಾಣಗೊಂಡ ಹಲವಾರು ಚಿತ್ರಗಳಲ್ಲಿ ನಟನೆ.

ಆದರೆ, ಯಶಸ್ಸಿನ ತುತ್ತತುದಿಯಲ್ಲಿದ್ದಾಗಲೇ ‘ಮಲ್ಟಿಪಲ್‌ ಮೆಲೊಮಾ’ ರೂಪದಲ್ಲಿ ಎರಗಿತ್ತು ಅಪರೂಪದ ರಕ್ತ ಕ್ಯಾನ್ಸರ್‌. ಆಗ ಆಕೆಗಿನ್ನೂ 37 ವರ್ಷ ವಯಸ್ಸು. ಚಿಕಿತ್ಸೆ ಪಡೆಯುತ್ತಲೇ ತನ್ನ ಕಾಯಿಲೆ, ಚಿಕಿತ್ಸಾ ಹಂತಗಳನ್ನು ‘ದಿ ಯೆಲ್ಲೊ ಡೈರೀಸ್‌’ ಬ್ಲಾಗ್‌ ಮೂಲಕ ದಾಖಲಿಸಿದ ಲೀಸಾ ತಾನೊಬ್ಬ ಯಶಸ್ವಿ ಬರಹಗಾರ್ತಿ ಎಂಬುದನ್ನು ಸಾಬೀತುಪಡಿಸಿದಾಕೆ.

ಸ್ಟೆಮ್‌ ಸೆಲ್‌ ಚಿಕಿತ್ಸೆ ಪಡೆದು ಕ್ಯಾನ್ಸರ್‌ನಿಂದ ಮುಕ್ತಳಾದ ಲೀಸಾ, ಸಿನಿಮಾ, ರಂಗಭೂಮಿ, ಟಿ.ವಿ. ಶೋ, ಬರವಣಿಗೆಯ ಜೊತೆ ಜೊತೆಯಲ್ಲೇ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಸಾಮಾಜಿಕ ಕಾರ್ಯದಲ್ಲಿ; ಅದರಲ್ಲೂ ಕ್ಯಾನ್ಸರ್‌ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸದಲ್ಲಿ. ಒಬ್ಬ ಜಾಗತಿಕ ಸೆಲೆಬ್ರಿಟಿಯಾಗಿ ಮಲ್ಟಿಪಲ್‌ ಮೆಲೊಮಾ ಪೀಡಿತರ ಚಿಕಿತ್ಸೆಗೆ, ಆ ಕುರಿತ ಸಂಶೋಧನೆಗೆ ನಿಧಿ ಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದಾಳೆ.

ಟೊರಂಟೋದ ಪ್ರಿನ್ಸೆಸ್‌ ಮಾರ್ಗರೇಟ್‌ ಆಸ್ಪತ್ರೆಯಲ್ಲಿ ಪ್ರಪ್ರಥಮ ಮಲ್ಟಿಪಲ್‌ ಮೆಲೊಮಾ ಸಂಶೋಧನಾ ಕೇಂದ್ರಕ್ಕೆ ನಿಧಿ ಸಂಗ್ರಹಿಸಿಕೊಟ್ಟ ಆಕೆ, ‘ಕುಕಿಂಗ್‌ ವಿಥ್‌ ಸ್ಟೆಲ್ಲಾ’ ಚಿತ್ರದಲ್ಲಿನ ಅಭಿನಯಕ್ಕೆ ಸಂದ ಸಂಭಾವನೆಯನ್ನು ಅಮೆರಿಕದ ಮೆಲೊಮಾ ಮತ್ತು ಅಸ್ಥಿ ಕ್ಯಾನ್ಸರ್‌ ಸಂಶೋಧನಾ ಕೇಂದ್ರಕ್ಕೆ ನೀಡಿದ್ದಾಳೆ. ‘ಹಿಲ್‌ಬರ್ಗ್‌ ಅಂಡ್‌ ಬರ್ಕ್ಸ್‌’ ಆಭರಣಗಳಿಗೆ ರೂಪದರ್ಶಿಯಾಗಿ, ಪ್ರತಿ ಆಭರಣ ಮಾರಾಟದಿಂದ ಬಂದ ಹಣದಲ್ಲಿ 25 ಡಾಲರ್‌ ಅನ್ನು ಮಲ್ಟಿಪಲ್‌ ಮೆಲೊಮಾ ಕೆನಡಾ ಸಂಸ್ಥೆಗೆ ನೀಡುವ ಕಾರ್ಯಕ್ರಮದಲ್ಲಿ ಆಕೆಯ ಪಾತ್ರ ಪ್ರಮುಖವಾದದ್ದು.

ಲಿಂಗ ಅಸಮಾನತೆ ವಿರುದ್ಧದ ಆಂದೋಲನ ‘ಪ್ಲ್ಯಾನ್‌ ಕೆನಡಾಸ್‌ ಬಿಕಾಸ್‌ ಐ ಆ್ಯಮ್‌ ಎ ಗರ್ಲ್‌’ನ ರೂವಾರಿಯೂ ಈಕೆಯೇ; ಕೆನಡಾದಲ್ಲಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ತಲೆಗೂದಲು ಕಳೆದುಕೊಂಡ ಮಹಿಳೆಯರಿಗೆ ನಿಜವಾದ ಕೂದಲಿನ ವಿಗ್‌ ಪೂರೈಸಲು ಕೂದಲು ಬೆಳೆಸಿ ದಾನ ಮಾಡುವಂತೆ ಪ್ರೇರೇಪಿಸುವ ‘ಪ್ಯಾಂಟೀನ್‌ ಬ್ಯೂಟಿಫುಲ್‌ ಲೆಂಥ್ಸ್‌’ ಚಳವಳಿಯ ರಾಯಭಾರಿ; ಭಾರತದಲ್ಲಿ ಕ್ಯಾನ್ಸರ್‌ ಸಂಶೋಧನಾ ಸಂಸ್ಥೆ ‘ಇಂಡಿಯನ್‌ ಇನ್ನೋವೇಶನ್‌ ರೀಸರ್ಚ್‌ ಸೆಂಟರ್‌’ಗೆ ವಸ್ತ್ರವಿನ್ಯಾಸಕ ಸತ್ಯಪಾಲ್‌ ಜೊತೆ ಸೇರಿ ನಿಧಿ ಸಂಗ್ರಹ; ಸ್ತನ ಕ್ಯಾನ್ಸರ್‌ ಜಾಗೃತಿ ಆಂದೋಲನ; ಭಾವನಾತ್ಮಕವಾಗಿ ಕುಸಿಯುವ ಕ್ಯಾನ್ಸರ್‌ ರೋಗಿಗಳಿಗೆ ನೆರವು ನೀಡುವ ಕೆನಡಾದ ‘ಬ್ಯೂಟಿ ಗಿವ್ಸ್‌ ಬ್ಯಾಕ್‌’ ಆಂದೋಲನದಲ್ಲಿ ಸಕ್ರಿಯೆ; ಕ್ಯಾನ್ಸರ್‌ ರೋಗಿಗಳಿಗೆ ಪೌಷ್ಟಿಕ ಆಹಾರ ತಯಾರಿಸುವ ಗ್ರೀನಿಚ್ ನ್ಯಾಚುರಲ್ಸ್‌ನಲ್ಲಿ ಸಹಭಾಗಿತ್ವ... ಈಕೆ ಸಹಾಯಹಸ್ತ ಚಾಚಿರುವ ಜನಹಿತ ಕಾರ್ಯಕ್ರಮಗಳು ಒಂದೆರಡಲ್ಲ!

‘ಕ್ಲೋಸ್‌ ಟು ದಿ ಬೋನ್ಸ್‌’ ಪುಸ್ತಕ ಹೊರತಂದಿರುವ ಲೀಸಾ ಕಳೆದ ವರ್ಷ ಅಮೆಜಾನ್‌ ಪ್ರೈಮ್‌ನ ‘ಫೋರ್‌ ಮೋರ್‌ ಶಾಟ್ಸ್‌ ಪ್ಲೀಸ್‌’ ಟಿ.ವಿ. ಧಾರಾವಾಹಿಯಲ್ಲಿ ನಟಿಸಿದ್ದಳು. ಈಗ ಇದರ ಎರಡನೇ ಸೀಸನ್‌ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದಾಳೆ. ಪತಿ ಜೇಸನ್‌ ದೇಹ್ನಿ ಜೊತೆ ಮುಂಬೈಯಲ್ಲಿ ನೆಲೆಸಿರುವ ಆಕೆ ಬಾಡಿಗೆ ತಾಯಿಯ ಮೂಲಕ ಇಬ್ಬರು ಹೆಣ್ಣುಮಕ್ಕಳನ್ನು ಪಡೆದಿದ್ದಾಳೆ.

ಸೋನಾಲಿಯ ‘ಸನ್‌ಶೈನ್‌’

90ರ ದಶಕದಲ್ಲಿ ಕೇಶತೈಲದ ಜಾಹೀರಾತಿಗೆ ರೂಪದರ್ಶಿಯಾದ ಸೊಂಪುಗೂದಲಿನ ಸುಂದರಿ ಸೋನಾಲಿ ಬೇಂದ್ರೆ. ಹಾಗೆ ನೋಡಿದರೆ ಆಕೆ ಸಿನಿಮಾ ರಂಗ ಪ್ರವೇಶಿಸಿದ್ದೇ ಆ ಜಾಹೀರಾತಿನ ನಂತರ. ಆದರೀಗ ಒಂದು ವರ್ಷದಷ್ಟು ದೀರ್ಘಕಾಲ ಕ್ಯಾನ್ಸರ್‌ ಚಿಕಿತ್ಸೆಯ ನಂತರ ಆ ಉದ್ದನೆಯ ಕೇಶರಾಶಿಯ ಜಾಗದಲ್ಲಿ ಕ್ರಾಪ್‌ ರಾರಾಜಿಸುತ್ತಿದೆ; ನೇರ ಕೂದಲಿನ ಬದಲು ಸುರುಳಿಗೂದಲು ಹಣೆಯನ್ನು ಚುಂಬಿಸುತ್ತಿದೆ.

ಕನ್ನಡದಲ್ಲಿ ಶಿವರಾಜ್‌ಕುಮಾರ್‌ ಮತ್ತು ಉಪೇಂದ್ರ ಜೊತೆಗೆ ಈಕೆ ನಟಿಸಿದ ‘ಪ್ರೀತ್ಸೆ’ ಚಿತ್ರ ನಿಮಗೆ ನೆನಪಿರಬಹುದು. ಅಥವಾ ಆ ಚಿತ್ರದ ‘ಪ್ರೀತ್ಸೆ ಪ್ರೀತ್ಸೇ...’ ಎಂಬ ಹಾಡಾದರೂ ನೆನಪಿದ್ದೇ ಇರುತ್ತದೆ. ಅಮೀರ್‌ಖಾನ್‌ ಜೊತೆಗೆ ‘ಸರ್ಫ್‌ರೋಶ್‌’ ಚಿತ್ರದಲ್ಲಿ ನಟಿಸಿದ ಈ ಚೆಲುವೆ ಒಂದೂವರೆ ವರ್ಷದ ಹಿಂದೆ ತನ್ನ ದೇಹದಲ್ಲಿ ಒಂದಕ್ಕಿಂತ ಹೆಚ್ಚು ಕಡೆ (ಮೆಟಾಸ್ಟೇಟಿಕ್‌) ಕ್ಯಾನ್ಸರ್‌ ಪಸರಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಾಗ ಅಭಿಮಾನಿಗಳು ಬೆಚ್ಚಿಬಿದ್ದರು!

#ಸ್ವಿಚ್‌ಆನ್‌ಸನ್‌ಶೈನ್‌ ಮೂಲಕ ಧೈರ್ಯ ತುಂಬಿದರು. 45ರ ಸೋನಾಲಿಗೆ ಕ್ಯಾನ್ಸರ್‌ ನಾಲ್ಕನೇ ಹಂತದಲ್ಲಿದೆ. ಬದುಕುವ ಅವಕಾಶ ಶೇಕಡ 30ರಷ್ಟು ಮಾತ್ರ ಇದೆ ಎಂಬ ಸಂದರ್ಭದಲ್ಲಿ ಕಲ್ಲುಬಂಡೆಯಂತೆ ನಿಂತು ಆತ್ಮವಿಶ್ವಾಸ ತುಂಬಿದವರು, ಅಮೆರಿಕಕ್ಕೆ ಒಯ್ದು ಚಿಕಿತ್ಸೆ ಕೊಡಿಸಿದವರು ಚಿತ್ರ ನಿರ್ಮಾಪಕರಾದ ಪತಿ ಗೋಲ್ಡಿ ಬೆಹ್ಲ್‌.

ಆಕೆ ಆನ್‌ಲೈನ್‌ನಲ್ಲಿ ಆರಂಭಿಸಿದ ‘ಸೋನಾಲೀಸ್‌ ಬುಕ್‌ ಕ್ಲಬ್‌’ಗೆ ಈಗ ಸಾವಿರಾರು ಅಭಿಮಾನಿಗಳು ಸದಸ್ಯರಾಗಿದ್ದಾರೆ. ಆಕೆಯಲ್ಲಿದ್ದ ಓದುವ ಹುಮ್ಮಸ್ಸನ್ನು ಈ ಕ್ಲಬ್ ಹೆಚ್ಚಿಸಿದೆ. ಹತ್ತಾರು ಕಡೆ ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೇಶನ್‌... ಎಂದೆಲ್ಲ ಮೈಗಾದ ಘಾಸಿ, ಮನಸ್ಸಿಗಾದ ಆಘಾತವನ್ನು ಕಡಿಮೆ ಮಾಡಿದ್ದು ಈ ಓದುವ ಹವ್ಯಾಸ. ಚಿಕಿತ್ಸೆ ಮುಗಿಸಿ ಆರು ತಿಂಗಳ ನಂತರ ಭಾರತಕ್ಕೆ ವಾಪಸಾದ ಸೋನಾಲಿ ಇತ್ತೀಚೆಗೆ ಒಂದೆರಡು ಜಾಹೀರಾತುಗಳಿಗೆ ರೂಪದರ್ಶಿಯಾಗಿದ್ದಾಳೆ.

ಹಲವಾರು ಟಿ.ವಿ. ಚಾನೆಲ್‌ಗಳಲ್ಲಿ, ಸಮಾರಂಭಗಳಲ್ಲಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ. ಕ್ಯಾನ್ಸರ್‌ ವಿರುದ್ಧದ ತನ್ನ ಹೋರಾಟದ ಬಗ್ಗೆ ಪುಸ್ತಕ ಬರೆಯುವ ಆಲೋಚನೆಯೂ ಇದೆ ಈ ನಟಿಗೆ. ‘ಹಂ ಸಾಥ್‌ ಸಾಥ್‌ ಹೈ’ ಚಿತ್ರದಲ್ಲಿ ಸುಖೀ ಕುಟುಂಬದ ಸದಸ್ಯರಲ್ಲಿ ಒಬ್ಬಳಾಗಿದ್ದ ಈ ನಟಿಯ ಹೋರಾಟಕ್ಕೆ ಸಾವಿರಾರು ಅಭಿಮಾನಿಗಳು ಸಾಥ್‌ ನೀಡಿದ್ದಾರೆ.

ಅಂದಹಾಗೆ ಫೆಬ್ರುವರಿ 14ರಂದು ಪ್ರೇಮಿಗಳ ದಿನ ಬರುವುದಕ್ಕೆ 10 ದಿನ ಮೊದಲೇ ‘ವಿಶ್ವ ಕ್ಯಾನ್ಸರ್‌ ದಿನ’ (ಫೆ.4) ಬರುತ್ತದೆ. ಕ್ಯಾನ್ಸರ್‌ ವಿರುದ್ಧ ಸೆಣಸಾಡುವ ಎಲ್ಲ ಮಹಿಳೆಯರಿಗೂ ಆದರ್ಶಪ್ರಾಯರಾದ ಈ ಇಬ್ಬರು ಸುಂದರಿಯರ ಮುಗುಳ್ನಗೆ ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT