ಮಂಗಳವಾರ, ಅಕ್ಟೋಬರ್ 27, 2020
19 °C
ವಿವಾದಾತ್ಮಕ ನಿರ್ದೇಶಕನ ಸಿನಿಮಾ ಜಗತ್ತಿನಲ್ಲೊಂದು ಇಣುಕುನೋಟ

PV Web Exclusive l ಕಿಮ್ ಕಿ ಡುಕ್ – ಕ್ರೌರ್ಯದ ಕತ್ತಿಗೆ ಗುಲಾಬಿ ಹಿಡಿಕೆ!

ಪದ್ಮನಾಭ ಭಟ್‌ Updated:

ಅಕ್ಷರ ಗಾತ್ರ : | |

Prajavani

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕರಲ್ಲಿ ಸಿನಿಮಾಗಳ ಮೂಲಕ ಅತಿ ಹೆಚ್ಚು  ವಿವಾದಗಳನ್ನು ಸೃಷ್ಟಿಸಿದ ನಿರ್ದೇಶಕರ ಒಂದು ಯಾದಿಯನ್ನು ಸಿದ್ಧಪಡಿಸಿದರೆ ಅದರಲ್ಲಿ ಖಂಡಿತ ದಕ್ಷಿಣ ಕೊರಿಯಾದ ನಗುಮುಖದ, ಜುಟ್ಟುಕಟ್ಟಿದ, ಸಣ್ಣಕಣ್ಣಿನ ಕಿಮ್ ಕಿ ಡುಕ್ ಮೊದಲ ಸಾಲಿನಲ್ಲಿಯೇ ಹಾಜರಿರುತ್ತಾರೆ. ಅವರ ಸಿನಿಮಾಗಳನ್ನು ಶ್ರೇಷ್ಠ ಚಿತ್ರಗಳೆಂದು ಆರಾಧಿಸುವ ದೊಡ್ಡ ಸಮೂಹವೇ ಜಗತ್ತಿನಾದ್ಯಂತ ಇದೆ. ಹಾಗೇ ಅವರೊಬ್ಬ ಕೀಳು ಅಭಿರುಚಿಯ ಕೆಟ್ಟ ನಿರ್ದೇಶಕ; ಕ್ರೌರ್ಯ, ಲೈಂಗಿಕತೆಯನ್ನೇ ಬಂಡವಾಳ ಮಾಡಿಕೊಂಡು ಸಿನಿಮಾ ಮಾಡುವ ಸ್ಯಾಡಿಸ್ಟ್ ಎಂದು ಜರಿಯುವವರ ಸಂಖ್ಯೆಯೂ ಕಮ್ಮಿಯಿಲ್ಲ. ‘ಕೊರಿಯನ್ ಸಿನಿಮಾ’ ಎಂಬ ಹಣೆಪಟ್ಟಿಯಲ್ಲಿ ಜಗತ್ತಿನಾದ್ಯಂತ ಗಮನಸೆಳೆಯುತ್ತಿರುವ ಚಿತ್ರಗಳಿಗಿಂತ ತುಂಬ ಭಿನ್ನವಾದ, ವಿರುದ್ಧವೇನೋ ಅನಿಸುವಂಥ ಸಿನಿಮಾಗಳನ್ನು ನೀಡಿದ ನಿರ್ದೇಶಕ ಕಿಮ್ ಕಿ ಡುಕ್. ನಮ್ಮ ಸಿನಿಮಾ ಸ್ಟಾರ್‌ಗಳಿಗೆ ಬಿರುದು ಕೊಡುತ್ತೇವಲ್ಲ, ಹಾಗೆ ಕಿಮ್‌ ಕಿ ಡುಕ್ ಹೆಸರಿನ ಹಿಂದೆಯೂ ಒಂದು ವಿಶೇಷಣ ಸದಾಕಾಲ ಉಲ್ಲೇಖಿತಗೊಳ್ಳುತ್ತಿರುತ್ತದೆ. ಅದು ‘ಕಾಂಟ್ರವರ್ಷಿಯಲ್ ಡೈರೆಕ್ಟರ್’ ಎಂಬ ವಿಶೇಷಣ.

ಸಿನಿಮಾ ಅಷ್ಟೇ ಅಲ್ಲ, ಸಿನಿಮಾದಾಚೆಗಿನ ಬದುಕಿನಲ್ಲಿಯೂ ಕಿಮ್‌ ಕಿ ಡುಕ್ ವಿವಾದಕ್ಕೆ ಈಡಾಗಿದ್ದಿದೆ. 2017ರಲ್ಲಿ ಅಷ್ಟಾಗಿ ಪರಿಚಿತವಲ್ಲದ ನಟಿಯೊಬ್ಬಳು ಇವನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಳು. ಸೆಟ್‌ನಲ್ಲಿ ಲೈಂಗಿಕ ದೃಶ್ಯಗಳಲ್ಲಿ ನಟಿಸುವಂತೆ ಒತ್ತಾಯಿಸಿ ಹಲವು ಬಾರಿ ಹಲ್ಲೆ ಮಾಡಿದ್ದಾನೆ ಎಂದು ಹೇಳಿದ್ದಳು. 2018ರಲ್ಲಿ ಮತ್ತೂ ಮೂರು ನಟಿಯರು ಕಿಮ್ ಕಿ ಡುಕ್ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಕಿಮ್ ಕಿ ಡುಕ್ ಆ ನಟಿಯರ ಮೇಲೆ ತಿರುಗಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾನೆ.

ಇವೆಲ್ಲ ಏನೇ ಇದ್ದರೂ ಜಗತ್ತಿನ ಸಿನಿಮಾ ಆಸ್ಥಾನದಲ್ಲಿ ಕಿಮ್‌ ಕಿ ಡುಕ್‌ಗೆ ಒಂದು ಗಟ್ಟಿಯಾದ ಸಿಂಹಾಸನ ಇರುವುದಂತೂ ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. 

ಇಂದಿಗೂ ತಮ್ಮ ಸಿನಿಮಾಗಳ ಮೂಲಕ ಸಿನಿಮಾಜಗತ್ತಿನಲ್ಲಿ ಕಂಪನ ಎಬ್ಬಿಸುತ್ತಲೇ ಇರುವ ಕಿಮ್ ಕಿ ಡುಕ್ ಸಿನಿಮಾ ಕಲೆಯನ್ನು ಅಕಾಡೆಮಿಕ್ ಆಗಿ ಕಲಿತವರಲ್ಲ ಎಂದರೆ ಅಚ್ಚರಿಯಾಗಬಹುದು. ಎಲ್ಲೆಲ್ಲಿಯೋ ಅಲೆಯುತ್ತ, ಯಾವ್ಯಾವುದೋ ಕಲಾಪ್ರಕಾರಗಳನ್ನು ಎಡತಾಕುತ್ತ, ಅಚಾನಕ್ಕಾಗಿ ಸಿನಿಮಾಕಲೆಯನ್ನು ಮುಟ್ಟಿ, ಇದಕ್ಕಾಗಿಯೇ ಇಷ್ಟು ದಿನ ಕಾಯುತ್ತಿದ್ದೆನಲ್ಲ ಎಂಬ ಅಚ್ಚರಿಯಲ್ಲಿ ಅದನ್ನೆತ್ತಿಕೊಂಡು ನೆತ್ತಿಮೇಲಿಟ್ಟುಕೊಂಡು ಸಂಭ್ರಮಿಸುತ್ತಿರುವ ಹುಡುಗನಂತೆ ಕಿಮ್ ಕಿ ಡುಕ್ ಕಾಣಿಸುತ್ತಾರೆ. ಅವರ ಎಷ್ಟೋ ಸಿನಿಮಾಗಳನ್ನು ನೋಡಿದಾಗ ಸಿನಿಮಾ ಮಾಧ್ಯಮವೂ ತನ್ನನ್ನು ತಾನು ವಿಸ್ತರಿಸಿಕೊಳ್ಳಲು, ಅಭಿವ್ಯಕ್ತಿಸಿಕೊಳ್ಳಲು ಈ ನಿರ್ದೇಶಕನಿಗಾಗಿ ಕಾಯುತ್ತಿತ್ತೇನೋ ಎಂಬ ಅನುಮಾನವೂ ಮೂಡದಿರದು.

‘ಕ್ರೊಕಡೈಲ್’ ಆಗಿ ಪ್ರವೇಶ:

1960ರ ಡಿಸೆಂಬರ್ 20ರಂದು ದಕ್ಷಿಣ ಕೊರಿಯಾದ ಬೋಂಘ್ವಾ ಎಂಬಲ್ಲಿ ಹುಟ್ಟಿದ ಕಿಮ್, ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ. 1990ರಲ್ಲಿ ಲಲಿತಕಲೆಯ ಅಧ್ಯಯನಕ್ಕಾಗಿ ಪ್ಯಾರಿಸ್‌ಗೆ ಹೋದ. ಮೂರು ವರ್ಷಗಳ ಕೋರ್ಸ್ ಮುಗಿಸಿ ವಾಪಸ್ಸಾದ ಅವನು ಚಿತ್ರಕಥೆಯ ಬರವಣಿಗೆಗೆ ತೊಡಗಿಕೊಂಡ. 1995ರಲ್ಲಿ ಕೊರಿಯನ್ ಫಿಲ್ಮ್ ಕೌನ್ಸಿಲ್ ಏರ್ಪಡಿಸಿದ್ದ ಚಿತ್ರಕಥೆ ಬರವಣಿಗೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಾಗ ಕಿಮ್‌ಗೆ ಮೂವತ್ತೈದು ವರ್ಷ. ಅದಾದ ಮರುವರ್ಷವೇ (1996) ಅವನು ‘ಕ್ರೊಕಡೈಲ್’ ಎಂಬ ಸಿನಿಮಾ ನಿರ್ದೇಶಿಸುವುದರ ಮೂಲಕ ನಿರ್ದೇಶಕನ ಟೋಪಿಯನ್ನೂ ಧರಿಸಿದ. 

‌ಶಾಂತ ಕಣ್ಣಿನ, ನಗುಮುಖದ ತರುಣನ ಮನಸಲ್ಲಿ ಎಂಥ ಪ್ರಕ್ಷುಬ್ಧ ಜಗತ್ತಿದೆ ಎಂದು ತೋರಿಸಿದ್ದು ಈ ಸಿನಿಮಾ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡ ‘ಕ್ರೊಕಡೈಲ್‌’ ಎಬ್ಬಿಸಿದ ಬಿರುಗಾಳಿ ಕಡಿಮೆಯದೇನೂ ಅಲ್ಲ. ದಕ್ಷಿಣ ಕೊರಿಯನ್ ಸಿನಿಮಾರಂಗದವರನ್ನೂ, ಪ್ರೇಕ್ಷಕರನ್ನೂ ಬೆಚ್ಚಿಬೀಳಿಸಿದ ಸಿನಿಮಾ ಅದು.

ದಿ ಐಲ್’ ಎಂಬ ಕ್ರೌರ್ಯ ಕಥಾನಕ:

 2000ರಲ್ಲಿ ಬಂದ ‘ದಿ ಐಲ್’, ಕಿಮ್ ಕಿ ಡುಕ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿನ ಚೀಟಿಯಾದ ಸಿನಿಮಾ. ಅದು ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನ ಕಂಡಿತು. ಈ ಸಿನಿಮಾ ಎಬ್ಬಿಸಿದ ವಿವಾದವೂ ಕಮ್ಮಿಯೇನಲ್ಲ. ‘‌ದಿ ಬ್ರಿಟಿಷ್ ಬೋರ್ಡ್ ಆಫ್ ಫಿಲಂ ಕ್ಲಾರಿಫಿಕೇಷನ್’, ‘ದಿ ಐಲ್’ ಸಿನಿಮಾ ಯುಕೆದಲ್ಲಿ ಬಿಡುಗಡೆಯಾಗುವುದನ್ನು ತಡೆಹಿಡಿದಿತ್ತು. ಸಿನಿಮಾದಲ್ಲಿ ಪ್ರಾಣಿಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬುದು ಅದಕ್ಕೆ ನೀಡಿದ ಕಾರಣ. ಆದರೆ ಈ ಸಿನಿಮಾ ನೋಡಿದವರಿಗೆಲ್ಲ ಗೊತ್ತಾಗುವ ಒಂದು ಸಂಗತಿ ಏನೆಂದರೆ ಪ್ರಾಣಿಹಿಂಸೆಯನ್ನೂ ನಾಚಿಸುವಷ್ಟು ಮನುಷ್ಯಹಿಂಸೆಯೂ ಈ ಸಿನಿಮಾದಲ್ಲಿದೆ!


’ದಿ ಐಲ್’ ಸಿನಿಮಾದ ದೃಶ್ಯ

 ‘ದ ಐಲ್‌’ ಸಿನಿಮಾ ಮನುಷ್ಯನ ಮನಸ್ಸಿನೊಳಗಿನ ಕ್ರೌರ್ಯವನ್ನು ಹಸಿಹಸಿಯಾಗಿ ಬಿಚ್ಚಿಡುವ ರೀತಿ ಎಂಥವರನ್ನೂ ಬೆಚ್ಚಿಬೀಳಿಸುವ ಹಾಗಿದೆ. ಆದರೆ ಹಾಗೆ ಬೆಚ್ಚಿಬೀಳಿಸಿ ಸುಮ್ಮನಾಗದೇ ಅದು ಮನುಷ್ಯನ ಮೂಲಭೂತ ಗುಣಗಳ ಶೋಧನೆಯ ಆಳಕ್ಕಿಳಿಯುವ ಕಾರಣಕ್ಕೆ  ನೆನಪಿಟ್ಟುಕೊಳ್ಳಬೇಕಾದ ಸಿನಿಮಾ.

ಫಿಷಿಂಗ್ ರೆಸಾರ್ಟ್‌ ನಿರ್ವಹಿಸುವ ಹೀ–ಜಿನ್‌ ಮಹಾಮೌನಿ. ನೀರಿನ ನಡುವೆ ತೇಲುವ ಮನೆಗಳಲ್ಲಿ ವಿಲಾಸದ ಸಮಯ ಕಳೆಯಲು ಬರುವ ಜನರನ್ನು ದಡದಿಂದ ಅಲ್ಲಿಗೆ ತಲುಪಿಸುವ ಕೆಲಸವನ್ನು ಅವಳು ಮಾಡುತ್ತಾಳೆ. ಮನಸ್ಸಿಗೆ ಬಂದಾಗ ಅವರಿಗೆ ಮೈಸುಖವನ್ನೂ ಉಣಿಸುತ್ತಾಳೆ.

ಒಮ್ಮೆ ಕೊಲೆ ಮಾಡಿ ಬಂದ ಅಪರಾಧಿಯೊಬ್ಬ ಆ ತೇಲುಮನೆಗೆ ಬಂದು ಸೇರಿಕೊಳ್ಳುತ್ತಾನೆ. ಆ ಮಹಾಮೌನಿ ಹೆಣ್ಣು ಮತ್ತು ಅವನ ನಡುವೆ ಅಮೂರ್ತ ಸಂಬಂಧವೂ ಬೆಳೆಯುತ್ತದೆ. ಈ ಸಂಬಂಧದ ನಡುವಿನ ಘರ್ಷಣೆ, ಆಕರ್ಷಣೆಗಳ ದ್ವಂದ್ವವನ್ನು ನಿರ್ದೇಶಕರು ಮೌನಭಾಷೆಯಲ್ಲಿಯೇ ಕಟ್ಟುತ್ತಾ ಹೋಗುತ್ತಾರೆ.

ಕಿಮ್‌ ಕಿ ಡುಕ್‌ ನಿರ್ದೇಶನದ ಸಿನಿಮಾಗಳಲ್ಲಿ ಮಾತು ಅತೀ ಎನ್ನುವಷ್ಟು ಕಮ್ಮಿ. ಈ ಸಿನಿಮಾದಲ್ಲಿಯೂ ಅವರು ದೃಶ್ಯ ಮತ್ತು ಹಿನ್ನೆಲೆ ಸಂಗೀತದ ಮೂಲಕವೇ ಮಾತಿಗೆ ಮೀರಿದ ಅನುಭವವನ್ನು ನೋಡುಗನ ಮನಸಲ್ಲಿ ಊರುತ್ತಾ ಹೋಗುತ್ತಾರೆ. ಹೀಗೆ ಮಾತಿಗೆ ಮೀರಿದ್ದನ್ನು ಹೇಳಹೊರಡುವುದರಿಂದಲೇ ಮನಸ್ಸಿನೊಳಗಿನ ಹಿಂಸೆಯನ್ನು ಹಸಿಹಸಿಯಾಗಿ ‘ಕಾಣಿಸುವ’ ದಾರಿಯನ್ನು ಅವರು ಆಯ್ದುಕೊಂಡಿದ್ದಿರಬಹುದು.

ಕೆಲವು ದೃಶ್ಯಗಳಂತೂ ತೆರೆಯ ಮೇಲೆ ನೋಡಲೂ ಕಷ್ಟವಾಗುವಷ್ಟು ವಿಜೃಂಭಿಸುತ್ತವೆ. ಆದರೆ ಇವನ್ನೆಲ್ಲ ಬಳಸಿಕೊಂಡು ನಿರ್ದೇಶಕರು ಕಟ್ಟುವ ಕಲಾಕೃತಿ ಮಾತ್ರ ಬಹಳ ಗಟ್ಟಿಯಾದದ್ದು. ನೆನಪಿನಲ್ಲಿ ಉಳಿಯುವಂಥದ್ದು.

ಸಿನಿಮಾ ವೀಕ್ಷಣೆ ಲಿಂಕ್‌: goo.gl/88uaOR

ವಿವಾದಗಳು, ಅಡೆತಡೆಗಳು ಕಿಮ್ ಕಿ ಡುಕ್‌ನ ಸಿನಿಮಾ ಉತ್ಸಾಹವನ್ನಾಗಲಿ, ಜನಪ್ರಿಯತೆಯನ್ನಾಗಲಿ ಕುಗ್ಗಿಸಲಿಲ್ಲ. ಅವನ ಪಾಡಿಗೆ ಅವನು ಸಿನಿಮಾಗಳನ್ನು ಮಾಡುತ್ತಲೇ ಹೋದ. ಅವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತ, ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣುತ್ತ ಅವನಿಗೊಂದು ಹೆದ್ದಾರಿಯನ್ನು ರೂಪಿಸುತ್ತಲೇ ಹೋದವು. 2001ರಲ್ಲಿ ಇವನು ನಿರ್ದೇಶಿಸಿದ ‘ಬ್ಯಾಡ್ ಬಾಯ್’ ಸಿನಿಮಾದ ನಂತರ ‘ಕೊರಿಯನ್ ಚಿತ್ರರಂಗದ ಬ್ಯಾಡ್ ಬಾಯ್’ ಎಂಬ ಹಣೆಪಟ್ಟಿಯೂ ಇವನಿಗೆ ಅಂಟಿಕೊಂಡಿತು.

ಹೀಗೊಂದು ಝೆನ್ ಸಿನಿಮಾ!

ಹಿಂಸೆ ಮತ್ತು ಲೈಂಗಿಕತೆಯ ವೈಭವೀಕರಣದ ಕಾರಣಕ್ಕೆ ಕಿಮ್ ಕಿ ಡುಕ್‌ನನ್ನು ಟೀಕಿಸುತ್ತಿದ್ದವರೂ ಅಚ್ಚರಿಗೊಳ್ಳುವ ಹಾಗೆ 2003ರಲ್ಲಿ ‘ಸ್ಪ್ರಿಂಗ್‌, ಸಮ್ಮರ್‌, ಫಾಲ್‌, ವಿಂಟರ್‌... ಆ್ಯಂಡ್ ಸ್ಪ್ರಿಂಗ್‌’ ಎಂಬ ಸಿನಿಮಾವನ್ನು ನಿರ್ದೇಶಿಸಿ, ಅದರಲ್ಲಿ ತಾನೂ ಒಂದು ಪಾತ್ರದಲ್ಲಿ ನಿರ್ವಹಿಸಿದ. 


ಸ್ಪ್ರಿಂಗ್, ಸಮ್ಮರ್, ಫಾಲ್ ವಿಂಟರ್... ಸ್ಟ್ರಿಂಗ್.. ಸಿನಿಮಾ

ಕಾಲ ಚಲಿಸುತ್ತಿರುತ್ತದೆ. ಕಾಲದೊಟ್ಟಿಗೆ ಪ್ರಕೃತಿಯೂ ಚಲಿಸುತ್ತದೆ. ಮನುಷ್ಯನ ಬದುಕೂ ಇದಕ್ಕೆ ಹೊರತಲ್ಲ. ಈ ಚಲನೆಗೆ ಹಲವು ಹಂತಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಚಲನೆಯಲ್ಲಿನ ಆವರ್ತವನ್ನೂ ಗಮನಿಸಬಹುದು. ಋತುಗಳು ಹೇಗೆ ಪದೇ ಪದೇ ಬದಲಾಗುತ್ತವೆಯೋ ಹಾಗೆಯೇ ಮನುಷ್ಯನ ಬದುಕೂ ಬದಲಾಗುತ್ತದೆ. ಈ ಎಲ್ಲ ಬದಲಾವಣೆಯ ಹಿಂದಿರುವ ಸೂತ್ರ ಯಾವುದು? ಅದನ್ನು ನಡೆಸುವ ಚೈತನ್ಯ ಯಾವುದು? ಈ ಆವರ್ತನದಲ್ಲಿ ಮತ್ತೆ ಮತ್ತೆ ಅದದೇ ದಾರಿ ತುಳಿಯುವುದು ಯಾಕೆ ಈ ಎಲ್ಲ ಪ್ರಶ್ನೆಗಳನ್ನು ಬೌದ್ಧಧರ್ಮದ ಹಿನ್ನೆಲೆಯಲ್ಲಿ ಇಟ್ಟುಕೊಂಡು ಚಿತ್ರಿಸುವ ಸಿನಿಮಾ ‘ಸ್ಪ್ರಿಂಗ್‌, ಸಮ್ಮರ್‌, ಫಾಲ್‌, ವಿಂಟರ್‌... ಆ್ಯಂಡ್ ಸ್ಪ್ರಿಂಗ್‌’.  

ಬೌದ್ಧ ಭಿಕ್ಕು ಒಬ್ಬನ ಬದುಕನ್ನೂ ಪ್ರಕೃತಿಯಲ್ಲಿನ ಋತುಗಳ ಬದಲಾವಣೆಯನ್ನೂ ಸಮೀಕರಿಸಿ ರೂಪಿಸಿರುವ ರೀತಿಯೇ ತುಂಬ ಚೆನ್ನಾಗಿದೆ. ‘ದ ಐಲ್‌’, ‘ಪಿಯೆಟಾ’ದಂಥ ಕ್ರೌರ್ಯದ ಪರಮಾವಧಿಯನ್ನು ತೋರುವ ಸಿನಿಮಾ ನಿರ್ದೇಶಿಸಿದ ನಿರ್ದೇಶಕನೇ ಈ ಸಿನಿಮಾ ನಿರ್ದೇಶಿಸಿದ್ದಾನೆ ಎನ್ನುವುದನ್ನು ನಂಬುವುದೇ ಕಷ್ಟವಾಗುವಷ್ಟು ಸಂಯಮದಿಂದ ಈ ಸಿನಿಮಾ ಕಟ್ಟಲ್ಪಟ್ಟಿದೆ.  

ನೀರ ನಡುವಣ ದೇವಾಲಯದಲ್ಲಿ ವಾಸವಾಗಿರುವ ಬೌದ್ಧ ಗುರು ತನ್ನ ಬಳಿ ಒಬ್ಬ ಶಿಷ್ಯನನ್ನು ಇರಿಸಿಕೊಂಡಿರುತ್ತಾನೆ. ಪ್ರಾಯೋಗಿಕತೆಯ ಮೂಲಕವೇ ಬದುಕಿನ ಶಿಕ್ಷಣವನ್ನೂ ತನ್ಮೂಲಕ ಪರದ ದಾರಿಯನ್ನು ಕಾಣಿಸುವ ಗುರು ಅವನು. ಆದರೆ ಹದಿಹರೆಯಕ್ಕೆ ಬಂದ ಶಿಷ್ಯ ತನ್ನ ಆಶ್ರಮಕ್ಕೆ ಬಂದ ಹೆಣ್ಣೊಬ್ಬಳ ಮೋಹಕ್ಕೆ ಒಳಗಾಗಿ ಆಶ್ರಮ ಬಿಟ್ಟು ಹೋಗುತ್ತಾನೆ. ನಂತರ ಲೌಕಿಕ ಜಗತ್ತಿನಿಂದ ಭ್ರಮನಿರಸನ ಹೊಂದಿ ಒಂದು ಕೊಲೆಯನ್ನೂ ಮಾಡಿ ಅವನು ಮತ್ತೆ ಮರಳುವುದು ಆಶ್ರಮಕ್ಕೇ. ಅವನ ಗುರುಗಳು ಮೋಕ್ಷ ಪಡೆದ ಮೇಲೆ ಅವನೇ ಸ್ವಂತ ಸಾಧನೆ ಮಾಡಿ ಆತ್ಮಸಾಕ್ಷಾತ್ಕಾರ ಕಂಡುಕೊಳ್ಳುವ ದಾರಿಯಲ್ಲಿದ್ದಾಗ ಅವನಿಗೆ ಮತ್ತೊಬ್ಬ ಶಿಷ್ಯ ಸಿಗುತ್ತಾನೆ.

ಆ ಶಿಷ್ಯನೂ ಗುರುವು ಚಿಕ್ಕಂದಿನಲ್ಲಿ ಮಾಡಿದ ತಪ್ಪುಗಳನ್ನೇ ಮಾಡುವುದನ್ನು ಕಾಣಿಸುವುದರ ಮೂಲಕ ಸಿನಿಮಾ ಕೊನೆಯಾಗುತ್ತದೆ. ಅರಿವು ಎನ್ನುವುದು ಪ್ರತಿಯೊಬ್ಬನೂ ಸ್ವಂತ ಗಳಿಸಿಕೊಳ್ಳಬೇಕಾದ್ದು. ಅದು ದೈವದತ್ತವಾಗಿದ್ದಾಗಲಿ, ಗುರುಮುಖೇನವಾಗಲಿ ಸಿಗುವುದಲ್ಲ. ಅವರೆಲ್ಲ ದಾರಿ ತೋರಬಹುದಷ್ಟೆ. ಮೇಲಕ್ಕೇರಿದಷ್ಟೂ ಕೆಳಕ್ಕಿಳಿಯುವ ಮನುಷ್ಯನ ಬದುಕಿನ ಆವರ್ತನವನ್ನು ತೋರಿಸುವ ಈ ಸಿನಿಮಾ ಕಿಮ್ ಕಿ ಡುಕ್‌ನ ಸೃಜನಶೀಲತೆಯ ಇನ್ನೊಂದು ಮಗ್ಗುಲನ್ನು ಕಾಣಿಸಿತು ಎಂದರೆ ತಪ್ಪಿಲ್ಲ.

ಸಿನಿಮಾ ವೀಕ್ಷಣೆ ಲಿಂಕ್‌: goo.gl/PDXlW4

ಒಂದೇ ವರ್ಷ ಎರಡು ಪ್ರಶಸ್ತಿಗಳು!:

2004ರಲ್ಲಿ ಎರಡು ಬೇರೆ ಬೇರೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕಿಮ್ ಕಿ ಡುಕ್‌ ತನ್ನ ಬೇರೆ ಬೇರೆ ಸಿನಿಮಾಗಳಿಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡ. ಬರ್ಲಿನ್ ಚಲನಚಿತ್ರೋತ್ಸವದಲ್ಲಿ ‘ಸಮುರಿಟನ್ ಗರ್ಲ್‘ ಸಿನಿಮಾಗಾಗಿ ಪ್ರಶಸ್ತಿ ಪಡೆದರೆ, ವೆನಿಸ್ ಚಿತ್ರೋತ್ಸವದಲ್ಲಿ ‘3 ಐರನ್’ ಸಿನಿಮಾಗಾಗಿ ಪ್ರಶಸ್ತಿ ಸಂದಿತು.


3 ಐರನ್

ಅತ್ಯಂತ ಚಾಣಾಕ್ಷ ಕಳ್ಳನೊಬ್ಬ, ಒಂದು ಮನೆಗೆ ಕದಿಯಲು ಹೋಗಿ ಅಲ್ಲಿನ ವಿವಾಹಿತ ಮಹಿಳೆಯ ಜೊತೆಗೆ ಪ್ರೇಮಕ್ಕೆ ಬೀಳುವ ಕಥಾಭಿತ್ತಿಹೊಂದಿರುವ ಈ ಸಿನಿಮಾ, ಮನುಷ್ಯರನ್ನು ಕೊಲ್ಲಬಹುದು. ಆದರೆ ಅವರ ಜೊತೆಗಿನ ಸಂಬಂಧಗಳನ್ನು ಸಾಯಿಸಬಹುದೇ? ಎಂಬ ಘನವಾದ ಪ್ರಶ್ನೆಯನ್ನು ಎತ್ತುತ್ತದೆ. ಆ ಸಿನಿಮಾದಲ್ಲಿ ಬರುವ ಒಂದು ಸಾಲು ಹೀಗಿದೆ: ‘ನಾವು ಬದುಕುತ್ತಿರುವ ಈ ಜಗತ್ತು ವಾಸ್ತವವೋ ಅಥವಾ ಕನಸೋ ಎಂದು ಹೇಳುವುದು ತುಂಬ ಕಷ್ಟ’. ಮನುಷ್ಯ ಮನುಷ್ಯರ ನಡುವಿನ ಸಂಬಂಧ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧ, ನಾಗರಿಕತೆಯ ಮುಖವಾಡಗಳು ಮತ್ತು ಮನುಷ್ಯನ ಮೂಲಪ್ರವೃತ್ತಿಗಳ ನಡುವಿನ ಘರ್ಷಣೆಗಳಲ್ಲಿ ವಾಸ್ತವವಾಗಿಯೂ ಇರುವುದೆಷ್ಟು, ನಾವು ಕಲ್ಪಿಸಿಕೊಂಡಿದ್ದೆಷ್ಟು ಎಂಬ ಪ್ರಶ್ನೆ ಕಿಮ್‌ ಕಿ ಡುಕ್‌ನ ಬಹುತೇಕ ಸಿನಿಮಾಗಳಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಮೈದೋರುತ್ತದೆ. ವೇಶ್ಯೆಯೊಬ್ಬಳ ಬದುಕಿನ ಮೂಲಕ ನಾಗರಿಕ ಸಮಾಜದಲ್ಲಿ ಹುದುಕಿಗೊಂಡಿರುವ ಕ್ರೌರ್ಯಕ್ಕೆ ಕನ್ನಡಿ ಹಿಡಿಯುವ ‘ಸಮರಿಟನ್ ಗರ್ಲ್’ ಸಿನಿಮಾ ಕೂಡ ಇಂಥದ್ದೇ ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಎತ್ತುತ್ತದೆ. 

ಬಾಡಿ ಪಾಲಿಟಿಕ್ಸ್‌ನ ಶೋಧ ‘ಬ್ಯೂಟಿಫುಲ್’:

2008 ರಲ್ಲಿ ತೆರೆಕಂಡ ’ಬ್ಯೂಟಿಫುಲ್’, ಬಾಡಿ ಪಾಲಿಟಿಕ್ಸ್ ಅನ್ನು ಬಹುತೀವ್ರವಾಗಿ ಶೋಧಿಸುತ್ತದೆ. 

ಯಾವುದೋ ನೆಪದಲ್ಲಿ ಅವಳ ಮನೆಯೊಳಗೆ ನುಸುಳುವ ಹುಡುಗ ಅವಳ ಮೇಲೆ ಅತ್ಯಾಚಾರ ಎಸಗುತ್ತಾನೆ. ನಂತರ ಅವನು ತನ್ನ ಈ ಕೃತ್ಯಕ್ಕೆ ಕೊಡುವ ಕಾರಣ. ‘ನಾನು ಇದನ್ನು ಮಾಡಲು ಕಾರಣ ನೀನು ತುಂಬಾ ಸುಂದರವಾಗಿದ್ದೀಯ!!’

ಈ ಸಿನಿಮಾದ ನಾಯಕಿ ಯ್ಯೋನ್‌ ಯುಂಗ್‌ ಅಪ್ರತಿಮ ಸುಂದರಿ. ಒಮ್ಮೆ ನೋಡಿದರೆ ಕಣ್ಣು ಕೀಳಲಾಗದಂಥ ರೂಪ ಅವಳದು. ಈ ಸೌಂದರ್ಯವೇ ಅವಳಿಗೆ ಅಪಾರ ಅಭಿಮಾನಿವರ್ಗವನ್ನೂ ಗಳಿಸಿಕೊಟ್ಟಿದೆ. ಆದರೆ ಈ ಸೌಂದರ್ಯವೇ ಅವಳಿಗೆ ಶಾಪವೂ ಆಗುತ್ತದೆ.

ಅಂಗಸೌಂದರ್ಯದಿಂದಲೇ ಪ್ರಸಿದ್ಧಿಯ ಪರಾಕಾಷ್ಠೆಯಲ್ಲಿರುವ ಯ್ಯೋನ್‌ ಬದುಕಿನಲ್ಲಿ ಈ ಕಾರಣಕ್ಕಾಗಿಯೇ ದುರಂತಗಳೂ ಸಂಭವಿಸುತ್ತವೆ. ಖಾಸಗೀ ಬದುಕು ಛಿದ್ರವಾಗುತ್ತದೆ. ಆದ್ದರಿಂದ ಅವಳು ತಾನು ವಿಕಾರ ದೇಹಿಯಾಗಬೇಕು ಎಂದು ಹೊರಡುತ್ತಾಳೆ. ಎಲ್ಲ ಡಯಟ್‌ಗಳನ್ನೂ ಬಿಟ್ಟು ಸಿಕ್ಕಿದ್ದೆಲ್ಲವನ್ನೂ ಹಿಂಸೆಪಟ್ಟುಕೊಂಡು ತಿನ್ನುತ್ತಾಳೆ. ದಪ್ಪಗಾದರೆ ಜನರು ನನ್ನನ್ನು ನೋಡುವ ದೃಷ್ಟಿ ಬದಲಾಗಬಹುದು ಎಂಬುದೇ ಅವಳ ಆಶಯ.

ಈ ಪಾತ್ರದ ಮೂಲಕ ಕಿಮ್ ಕಿ ಡುಕ್ ಸೌಂದರ್ಯ, ಅದು ನೀಡುವ ಪ್ರಚೋದನೆಗಳು, ಅದರ ಪರಿಣಾಮಗಳು, ಸುಂದರವಾದ್ದೆಲ್ಲವನ್ನೂ ನಾವೂ ಅನುಭವಿಸಬೇಕು ಎಂಬ ಮಾನಸಿಕ ವಿಕೃತಿ ತಂದಿಕ್ಕುವ ದುರಂತಗಳು ಎಲ್ಲವನ್ನೂ ಎಳೆ ಎಳೆಯಾಗಿ ಅನಾವರಣ ಮಾಡುತ್ತ ಹೋಗುತ್ತಾರೆ.

ಕಿಮ್‌ ಕಿ ಡುಕ್‌ ಅವರ ಸಿನಿಮಾಗಳಲ್ಲಿ ಎಲ್ಲ ಪಾತ್ರಗಳೂ ಕೊನೆಯಲ್ಲಿ ಸಾಂಕೇತಿಕವಾಗಿ ದರ್ಶನವೊಂದನ್ನು ಹೊಳೆಯಿಸುವ ಉದ್ದೇಶಕ್ಕಾಗಿಯೇ ಪೋಷಿಸಲ್ಪಟ್ಟಿರುತ್ತವೆ. ಈ ಸಿನಿಮಾದ ನಾಯಕ ಮತ್ತು ಅವಳ ಬದುಕಿನ ವೈಪರೀತ್ಯಗಳನ್ನು ಹತ್ತಿರದಿಂದ ನೋಡುತ್ತಲಿರುವ ಪೊಲೀಸ್‌ ಅಧಿಕಾರಿ ಎರಡೂ ಪಾತ್ರಗಳೂ ಸಮಾಜದ ಸಂಗತ ಮತ್ತು ಸಾಕ್ಷಿಪ್ರಜ್ಞೆಯ ಸಂಕೇತಗಳಾಗಿಯೇ ಮನಸ್ಸನ್ನು ಮುಟ್ಟುತ್ತವೆ.

ಹಾಗೆಯೇ ಕೊನೆಯಲ್ಲಿ ನಾಯಕಿಯ ಬದುಕಿನ ದುರಂತಗಳನ್ನು ಅತ್ಯಂತ ಅನುಕಂಪದಿಂದ ನೋಡುವ, ಸಾಧ್ಯವಾದಾಗೆಲ್ಲ ಅವಳನ್ನು ಪೋಷಿಸುವ ಪೊಲೀಸ್‌ ಅಧಿಕಾರಿ ಮನಸ್ಸಲ್ಲಿರುವುದೂ ಮತ್ತದೇ ಸೌಂದರ್ಯದ ಮೇಲೆ ಅಧಿಕಾರ ಸ್ಥಾಪಿಸುವ ಪುರುಷನೇ ಎಂಬ ದುರಂತವನ್ನೂ ಸೂಕ್ಷ್ಮವಾಗಿ ಹೇಳಿದ್ದಾರೆ. ಸಿನಿಮಾ ವೀಕ್ಷಣೆ ಲಿಂಕ್‌: goo.gl/nmYxpZ

ಕ್ರೌರ್ಯ ಮಮತೆಯ ಮುಖಾಮುಖಿ ‘ಫಿಯೆಟಾ’:

‘ಸ್ಪ್ರಿಂಗ್...’ ಸಿನಿಮಾದಲ್ಲಿ ಹಿಂಸೆಯನ್ನು ಬೇರೆಯೇ ರೀತಿಯಲ್ಲಿ ಕಾಣಿಸಿದ್ದ ಕಿಮ್ ಕಿ ಡುಕ್‌ಗೆ ಮನುಷ್ಯನ ಮೂಲಪ್ರವೃತ್ತಿಗಳನ್ನು ಅತಿರೇಕದಲ್ಲಿ ಪರೀಕ್ಷಿಸುವ ಹಂಬಲವೇನೂ ಕಮ್ಮಿಯಾಗಲಿಲ್ಲ. 2012ರಲ್ಲಿ ತೆರೆಕಂಡ ‘ಫಿಯೆಟಾ’ ಸಿನಿಮಾವೇ ಅದಕ್ಕೆ ಪುರಾವೆ. 


‘ಫಿಯೆಟಾ’ ಸಿನಿಮಾದ ದೃಶ್ಯ

ಪಿಯೆಟಾ ಅಂದರೆ ಕರುಣೆ ಎಂದರ್ಥ. ಮೈಖೆಲೆಂಜಿಲೋ ರೂಪಿಸಿರುವ ಯೇಸುವನ್ನು ಮಡಿಲಲ್ಲಿ ಇರಿಸಿಕೊಂಡಿರುವ ಮೇರಿಯ ಶಿಲ್ಪಕ್ಕೂ ಪಿಯೆಟಾ ಎಂಬ ಹೆಸರಿದೆ. ಅಲ್ಲಿಯೂ ಅದರ ಕೇಂದ್ರಭಾವ ಕರುಣೆಯೇ. ಆದರೆ ಈ ಸಿನಿಮಾದ ನಾಯಕ ಲೀ ಕಾಂಗ್‌ ಡೂ ಕರುಣೆಯ ಲವಲೇಶವೂ ಇಲ್ಲದ ಪರಮ ಕ್ರೂರಿ. ಸಾಲ ತೆಗೆದುಕೊಂಡವರನ್ನು ಅತಿಯಾಗಿ ಹಿಂಸಿಸಿ ಅವರಿಂದ ಸಾಲ ವಸೂಲಿ ಮಾಡುವವ. ಶ್ರಮಿಸುವ ಜನರನ್ನು ನಿರ್ದಯವಾಗಿ ಹಿಂಸಿಸಿ, ಅಗತ್ಯ ಬಿದ್ದರೆ ಕೊಲೆಯನ್ನೂ ಮಾಡುವ ಪಾತಕಿ. ಅವನಿಗೆ ಹಿಂದುಮುಂದಿಲ್ಲ. ಹೇಳಿ ಕೇಳುವವರೂ ಇಲ್ಲ. ಹಣಕ್ಕಾಗಿ ಎಂಥ ಕೀಳು ಕೆಲಸವನ್ನಾದರೂ ಮಾಡುವ ವ್ಯಕ್ತಿ.

ಇಂಥ ವ್ಯಕ್ತಿಯನ್ನು ಒಂದು ದಿನ ಒಮ್ಮಿಂದೊಮ್ಮೆಲೇ ಒಬ್ಬಳು ಮಧ್ಯವಯಸ್ಕ ಹೆಂಗಸು ಹಿಂಬಾಲಿಸಲು ಶುರು ಮಾಡುತ್ತಾಳೆ. ಕೇಳಿದರೆ ನಾನು ನಿನ್ನ ತಾಯಿ ಅನ್ನುತ್ತಾಳೆ. ಇದು ಕಾಂಗ್‌ ಡೂಗೆ ಆಘಾತಕಾರಿ ವಿಷಯ. ಹಲವು ರೀತಿಯಲ್ಲಿ ಅವಳನ್ನು ಓಡಿಸಲು ಪ್ರಯತ್ನಿಸುತ್ತಾನೆ. ಕೊನೆಗೆ ಸಾಧ್ಯವಾಗದೇ ಅವನೇ ಅವಳ ವಾತ್ಸಲ್ಯಕ್ಕೆ ಕರಗತೊಡಗುತ್ತಾನೆ. ಅಲ್ಲಿಂದ ಆ ಕ್ರೂರಿಯ ಬದುಕು ವಾತ್ಸಲ್ಯದ, ಮಾನವೀಯತೆಯ ಹಳಿಯ ಮೇಲೆ ಓಡತೊಡಗುತ್ತದೆ. ಅಲ್ಲಿಗೆ ಕಥೆ ಮುಗಿಯುವುದಿಲ್ಲ. ಬದಲಿಗೆ ಅಸಲಿ ಕಥೆ ಶುರುವಾಗುವುದೇ ಅಲ್ಲಿಂದ.

2012ರಲ್ಲಿ ಬಿಡುಗಡೆಯಾದ ಈ ಕೊರಿಯನ್‌ ಸಿನಿಮಾದ ನಿರ್ದೇಶಕ ಕಿಮ್‌ ಕಿ ಡುಕ್‌. ಕೆಲವು ಮೂಲಭೂತ ಪ್ರಶ್ನೆಗಳನ್ನು ಇಟ್ಟುಕೊಂಡು ತನ್ನದೇ ಬಗೆಯಲ್ಲಿ ಅದನ್ನು ವಿಶ್ಲೇಷಿಸುತ್ತ ಸಾಗುವುದು ಕಿಮ್‌ ಕಿ ಡುಕ್ ಶೈಲಿ. ಕ್ರೌರ್ಯ ಎನ್ನುವುದು ಅವನಿಗೆ ಎಷ್ಟು ಪ್ರಿಯವೋ, ಮೂಲಭೂತ ಪ್ರಶ್ನೆಗಳಿಗೆ ಎದುರಾಗುವುದೂ ಅವನಿಗೆ ಅಷ್ಟೇ ಮುಖ್ಯ.

ಕ್ರೂರಿ ಡಕಾಯತ ಅಂಗುಲಿಮಾಲ ಜ್ಞಾನೋದಯವಾದ ಮೇಲೆ ಎದುರಿಸುವ ಸಂಕಷ್ಟಗಳ ಕಥೆಯನ್ನೂ ಈ ಸಿನಿಮಾ ನೆನಪಿಸುವಂತಿದೆ. ನಿಷ್ಕರುಣಿಯಾಗಿ ಎಷ್ಟೋ ಜನರನ್ನು ಹಿಂಸಿಸಿದ, ಅವರ ಬದುಕನ್ನು ಅಭದ್ರತೆಗೆ ದೂಡಿದ ಕಾಂಗ್‌ ಡೂ ಕೊನೆಗೆ ಆ ಎಲ್ಲ ಆತಂಕ, ಭಯಗಳನ್ನು ತಾನೇ ಅನುಭವಿಸಬೇಕಾಗಿ ಬರುತ್ತದೆ. ಸಾವೆಂದರೆ ಹೂ ಹಿಸುಕಿದಷ್ಟೇ ಸಲೀಸಾಗಿದ್ದ ಅವನಿಗೆ ಅಮ್ಮನ ಸಾವಿನ ಎದುರು ಹಣೆ ಮಣ್ಣಿಗೊತ್ತಿ ಅಂಗಲಾಚಬೇಕಾಗಿ ಬರುತ್ತದೆ. ಅಂಗುಲಿಮಾಲನ ಕಥೆಯಲ್ಲಿ ಅವನಿಗೆ ಪ್ರೇಮಜಲದಲ್ಲಿ ಮೀಯಿಸಿ ಕೊಳೆ ತೊಳೆದದ್ದು ಬುದ್ಧನಾದರೆ, ಇಲ್ಲಿ ನಾಯಕನಿಗೆ ‘ನಾನು ನಿನ್ನ ಅಮ್ಮ’ ಎಂದು ಹೇಳಿಕೊಂಡು ತನ್ನ ಮಗನ ಸಾವಿನ ಸೇಡನ್ನು ತೀರಿಸಿಕೊಳ್ಳಲು ಬರುವ ಹೆಂಗಸು ತಾನೇ ಸತ್ತು ಅವನ ಮೇಲೆ ಸೇಡು ತೀರಿಸಿಕೊಳ್ಳುತ್ತಾಳೆ. 

ಕಿಮ್‌ ಕಿ ಡುಕ್‌ ಬಹುತೇಕ ಎಲ್ಲ ಸಿನಿಮಾಗಳಂತೆ ಈ ಸಿನಿಮಾದಲ್ಲಿಯೂ ಮಾತು ಕಮ್ಮಿ. ಮುಖಭಾವ, ರೂಪಕಗಳು, ಕ್ಯಾಮೆರಾ ಚಲನೆಗಳ ಮೂಲಕವೇ ಅವನು ಅನುಭವವನ್ನು ಪ್ರೇಕ್ಷಕನಿಗೆ ದಾಟಿಸುತ್ತಾನೆ.

ಈ ಚಿತ್ರದಲ್ಲಿನ ಅತಿಯಾದ ಕ್ರೌರ್ಯದ ಮತ್ತು ಲೈಂಗಿಕ ದೃಶ್ಯಗಳು ಸಾಕಷ್ಟು ವಿವಾದಗಳನ್ನೂ ಹುಟ್ಟಿಹಾಕಿದ್ದವು. ಅದರಲ್ಲಿಯೂ ಮಗ ತನ್ನ ಗುಪ್ತಾಂಗದ ಭಾಗವನ್ನೇ ಕತ್ತರಿಸಿ ಹೆಂಗಸಿಗೆ ಕೊಟ್ಟು ‘ನೀನು ನನ್ನ ತಾಯಿಯೇ ಆಗಿದ್ದರೆ ಇದನ್ನು ತಿನ್ನು’ ಎನ್ನುವ ದೃಶ್ಯದ ಕುರಿತು ತುಂಬ ಆಕ್ಷೇಪಗಳು ಕೇಳಿಬಂದಿದ್ದವು. ಈ ಎಲ್ಲವನ್ನೂ ಹೊರತುಪಡಿಸಿ ಇಡೀ ಚಿತ್ರ ನೀಡುವ ಅನುಭವ ತುಂಬ ಘನವಾದದ್ದು.
ಸಿನಿಮಾ ವೀಕ್ಷಣೆ ಲಿಂಕ್‌:: goo.gl/jsFZoK 

ದೇಶಭಕ್ತಿಯ ಬಲೆ ಮತ್ತು ಬೆಲೆ ಸಾರುವ ‘ದಿ ನೆಟ್’:

ಕಿಮ್ ಕಿ ಡುಕ್‌ನ ಸಿನಿಮಾ ವಸ್ತುಗಳು ನಿಧಾನಕ್ಕೆ ವೈಯಕ್ತಿಕ ನೆಲೆಯಿಂದ ಸಾರ್ವತ್ರಿಕ ಬಯಲಿನೆಡೆಗೆ, ಮನುಷ್ಯನ ಮನಸ್ಸಿನಿಂದ ಸಮಾಜದ ವಿಕೃತಿಗಳನ್ನು ಶೋಧಿಸುವ ಕಡೆಗೆ ಹೊರಳಿದ್ದನ್ನು ಗಮನಿಸಬಹುದು. 2016ರಲ್ಲಿ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಕಂಡು ಸಾಕಷ್ಟು ಸುದ್ದಿ ಮಾಡಿದ ‘ದಿ ನೆಟ್’ ಸಿನಿಮಾವನ್ನು ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಇದು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ತೆರೆಕಂಡಿತ್ತು. 


‘ದಿ ನೆಟ್’ ಸಿನಿಮಾದ ದೃಶ್ಯ

ಜಗತ್ತಿನಲ್ಲಿನ ಎಲ್ಲ ಬಗೆಯ ಪ್ರಭುತ್ವಗಳೂ ಮನುಷ್ಯನ ಸುರಕ್ಷತೆ ಮತ್ತು ನೆಮ್ಮದಿಯನ್ನು ಉದ್ದೇಶವಾಗಿಟ್ಟುಕೊಂಡೇ ಹುಟ್ಟಿದವು. ಆದರೆ  ಕಾಲಾನಂತರವ ಅವೇ ಪ್ರಭುತ್ವಗಳು ಮನುಷ್ಯನನ್ನು ತನ್ನ ಅಧೀನದಲ್ಲಿರಿಸಿಕೊಳ್ಳಲು ಯಾವ ಕ್ರೌರ್ಯಕ್ಕೂ ಹೇಸದ ಹಾಗೆ ವಿಕಾರಗೊಂಡಿದೆ. ಮನುಷ್ಯನಿಗಾಗಿಯೇ ಹುಟ್ಟಿಕೊಂಡ ಧರ್ಮ, ದೇಶದಂಥ ಘಟಕಗಳು ಅವನನ್ನು ಮೀರಿ ಬೆಳೆದು ಕೊನೆಗೆ ಅವನನ್ನೇ ಬಲಿ ಪಡೆದುಕೊಳ್ಳುವ ವಿಪರ್ಯಾಸದ ಕಾಲದಲ್ಲಿ ನಾವಿದ್ದೇವೆ.

ದೇಶಭಕ್ತಿ, ಯುದ್ಧ, ಭಯೋತ್ಪಾದನೆಗಳು ಬೇರೆ ಬೇರೆ ಮುಖವಾಡಗಳನ್ನು ಧರಿಸಿ ಮಾಡುತ್ತಿರುವುದು ಅದನ್ನೇ. ನಿಸರ್ಗದತ್ತವಾಗಿ ಬಂದ ನೆಲ–ಜಲದ ನಡುವೆ ಗಡಿರೇಖೆ ಹಾಕಿಕೊಂಡು ಅದರ ಆಚೆ ನಿಂತುಕೊಂಡರೆ ದೇಶದ್ರೋಹಿ ಈಚೆ ನಿಂತರೆ ದೇಶಭಕ್ತ, ಆಚೆ ಸತ್ತರೆ ಹತ ಈಚೆ ಸತ್ತರೆ ಹುತಾತ್ಮ ಎಂದೆಲ್ಲ ಉದ್ಘೋಷಿಸುವುದೇ ಮನುಷ್ಯತ್ವದ ಬಹುದೊಡ್ಡ ಕುಚೋದ್ಯ ಅಲ್ಲವೇ? ನಿಜಕ್ಕೂ ಮಾನವರಿಗೆ–ಮಾನವೀಯತೆಗೆ ಗಡಿ ಹಾಕಿ ಬೇರ್ಪಡಿಸಲು ಸಾಧ್ಯವೇ? ಹಾಗೆ ಮಾಡುತ್ತೇವೆಂದು ಹೊರಡುವುದು ಸಾಧುವೇ?

ಇಂಥ ಹಲವು ಪ್ರಶ್ನೆಗಳನ್ನು ’ದಿ ನೆಟ್’ ಸಿನಿಮಾ ಹುಟ್ಟುಹಾಕುತ್ತದೆ.

ಕಿಮ್‌ ಕಿ ಡುಕ್‌ಗೆ ಸಿನಿಮಾ ಕಥೆ ಹೇಳುವ ಒಂದು ಮಾಧ್ಯಮವಷ್ಟೇ ಅಲ್ಲ. ಬದುಕಿನ ಶೋಧನೆಯ ಮಾರ್ಗವೂ ಹೌದು. 

ಇದು ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ ನಡುವಿನ ವೈಷಮ್ಯದ ರಾಜಕೀಯ ಕಥನವನ್ನು ಕಾಣಿಸುವ ಸಿನಿಮಾ. ಅವನ ಬಹುತೇಕ ಎಲ್ಲ ಸಿನಿಮಾಗಳಲ್ಲಿ ಇರುವಂತೆ ಇಲ್ಲಿಯೂ ಕಥೆ ಎಂಬುದು ಸಿನಿಮಾದ ಶರೀರ ಅಷ್ಟೆ. ಶರೀರದ ಮೂಲಕವೇ ಅದಕ್ಕೆ ಅತೀತವಾದ ಶಾರೀರವನ್ನು ಪ್ರೇಕ್ಷಕನ ಮನಸಲ್ಲಿ ರಿಂಗಣಿಸುತ್ತಾ ಹೋಗುವುದು ಅವನ ಶೈಲಿ. ಇಲ್ಲಿಯೂ ಅದು ಮುಂದುವರಿದಿದೆ. ಹೇಳುವ ಕಥೆಯು ಕಣ್ಮುಂದೆ ಓಡುತ್ತಿರುವಂತೆ ಹೇಳದ ಕಥನವೊಂದು ಮನಸ್ಸಿನಲ್ಲಿ ಒಂದಕ್ಕೊಂದು ಸೇರಿಕೊಂಡು ‘ಕಾಣ್ಕೆ’ಗೊಳ್ಳುತ್ತಾ ಹೋಗುತ್ತದೆ.

ನಮ್ ಚುಲ್‌ ವೂ ಉತ್ತರ ಕೊರಿಯಾ ದೇಶದ ಬಡ ಮೀನುಗಾರ. ದಿನದಿನ ಮೀನು ಹಿಡಿದು ಮಾರಿ ತನ್ನ ಹೆಂಡತಿ ಮತ್ತು ಮುದ್ದು ಮಗಳನ್ನು ಸಾಕುವವ. ತನ್ನ ದೇಶದ ಬಗೆಗೆ, ಅಲ್ಲಿನ ಪ್ರಭುತ್ವದ ಬಗೆಗೆ ಅಪಾರ ಗೌರವ, ಭಕ್ತಿ ಇರಿಸಿಕೊಂಡಿರುವವ. ಹಾಗೆಯೇ ಉತ್ತರ ಕೊರಿಯಾದ ಎಲ್ಲರಂತೆ ದಕ್ಷಿಣ ಕೊರಿಯಾ ದೇಶದ ಬಗೆಗೆ ದ್ವೇಷವೂ ಅವನಲ್ಲಿದೆ. ಒಂದು ದಿನ ಅವನು ಮೀನು ಹಿಡಿಯಲು ಹೋಗಿದ್ದಾಗ ಬಲೆ ಬೋಟಿನ ಯಂತ್ರಕ್ಕೆ ಸಿಲುಕಿ ಕೆಟ್ಟುಬಿಡುತ್ತದೆ. ಆಕಸ್ಮಿಕವಾಗಿ ಅವನು ದಕ್ಷಿಣ ಕೊರಿಯಾದ ಗಡಿಯೊಳಗೆ ಪ್ರವೇಶಿಸಿಬಿಡುತ್ತಾನೆ. ಅಲ್ಲಿಂದ ಅವನ ಬದುಕಿನ ಗತಿಯೇ ಬದಲಾಗಿಬಿಡುತ್ತದೆ.

ಅಕ್ರಮವಾಗಿ ಗಡಿಪ್ರವೇಶಿಸಿದ ಬೇಹುಗಾರನಿರಬಹುದು ಎಂಬ ಅನುಮಾನದ ಮೇಲೆ ದಕ್ಷಿಣ ಕೊರಿಯಾದ ಸೈನಿಕರು ಅವನನ್ನು ಬಂಧಿಸುತ್ತಾರೆ. ಅಲ್ಲಿ ಅವನು ಅತ್ಯಂತ ಕ್ರೂರ ಹಿಂಸಾತ್ಮಕ ವಿಚಾರಣೆ ಎದುರಿಸಬೇಕಾಗುತ್ತದೆ. ಕೊನೆಗೂ ಅವನು ನಿರಪರಾಧಿ ಎಂದು ಮರಳಿ ತನ್ನ ದೇಶಕ್ಕೆ ಬಂದರೆ ಇಲ್ಲಿಯೂ ಅವನು ತನ್ನದೇ ದೇಶದ ಸೈನಿಕರಿಂದ ಅನುಮಾನಕ್ಕೊಳಗಾಗಿ ಅಷ್ಟೇ ಕ್ರೂರ ವಿಚಾರಣೆ ಎದುರಿಸಬೇಕಾಗುತ್ತದೆ.

ಸಾಮಾನ್ಯ ನಿರಪರಾಧಿಯ ದುರಂತ ಕತೆಯನ್ನು ಹೇಳುತ್ತ ಡುಕ್‌, ಪ್ರಭುತ್ವ, ದೇಶಭಕ್ತಿ, ಸ್ವಾತಂತ್ರ್ಯದ ಅರ್ಥ, ಭೋಗದ ಲಾಲಸೆ ಇಂಥ ಹಲವು ಸಂಗತಿಗಳ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತುತ್ತಾನೆ. ತನ್ನ ಉಳಿದ ಸಿನಿಮಾಗಳಿಗೆ ಹೋಲಿಸಿದರೆ ತುಸು ವಾಚ್ಯವಾಗಿಯೇ ಅವುಗಳನ್ನು ಹೇಳಿದ್ದಾನೆ.

ಪ್ರಜಾಪ್ರಭುತ್ವ, ಸ್ವತಂತ್ರ ದೇಶ ಎಂದು ಹೇಳಿಕೊಳ್ಳುವ ದಕ್ಷಿಣ ಕೊರಿಯಾದಲ್ಲಿ ದೇಹ ಮಾರಿಕೊಂಡು ಬದುಕಬೇಕಾದ ಹೆಣ್ಣುಮಗಳು ಅಲ್ಲಿನ ಸ್ವಾತಂತ್ರ್ಯದ ಪೊಳ್ಳುತನದ ಕುರುಹಾಗಿ ಕಾಣುತ್ತಾಳೆ. ತಾನು ಅಖಂಡವಾಗಿ ದ್ವೇಷಿಸುವ ದೇಶದ ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನೋಡಲಾಗದ ಅವಳ ರಕ್ಷಣೆಗೆ ಹೋಗುವ ನಮ್ ಚುಲ್‌ ವೂ ಗಡಿಮೀರಿದ ಮಾನವೀಯತೆಯ ರೂಪಕವಾಗಿ ನಿಲ್ಲುತ್ತಾನೆ.

ತಾನು ಅತಿಯಾಗಿ ಭಕ್ತಿಯಿಂದ ಕಾಣುವ ತನ್ನ ದೇಶವೇ ತನ್ನನ್ನು ಅನುಮಾನದಿಂದ ಕಾಣುವಾಗ ಅವನಿಗೆ ದೇಶಭಕ್ತಿಯ ಭ್ರಮೆ, ಪ್ರಭುತ್ವದ ಮುಖವಾಡ ಎರಡೂ ಒಟ್ಟಿಗೇ ಪರಿವಿಗೆ ಬರುತ್ತದೆ. ಎರಡು ಭಿನ್ನ ಪ್ರಭುತ್ವಗಳ ಹರಿತ ಕೋರೆಗಳ ಮಧ್ಯೆ ಸಿಲುಕಿಕೊಳ್ಳುವ ಸಾಮಾನ್ಯ ಮನುಷ್ಯನ ಪಾಡನ್ನು ಕಿಮ್‌ ಕಿ ಡುಕ್‌ ‘ದ ನೆಟ್‌’ನಲ್ಲಿ ಹೇಳಿದ್ದಾನೆ.

‘ಇಷ್ಟು ದಿನ ನನ್ನ ಬಲೆಯಲ್ಲಿ ಸಾಕಷ್ಟು ಮೀನುಗಳು ಸಿಲುಕಿಕೊಳ್ಳುತ್ತಿದ್ದವು. ಆದರೆ ಇಂದು ನನ್ನ ಬಲೆಗೆ ನಾನೇ ಸಿಲುಕಿಕೊಂಡಿದ್ದೇನೆ’ ಎಂಬ ನಮ್‌ ಚುಲ್‌ ವೂ ಮಾತೂ ಇದನ್ನೇ ಧ್ವನಿಸುತ್ತದೆ. ಎರಡೂ ದೇಶಗಳಿಗೆ ತನ್ನ ಘನತೆ ಮತ್ತು ಎದುರಾಳಿ ದೇಶದ ಮೇಲಿನ ದ್ವೇಷವೇ ಮುಖ್ಯವೇ ಹೊರತು ಮನುಷ್ಯ ಅಲ್ಲವೇ ಅಲ್ಲ.

ಇದು ಬರಿ ದಕ್ಷಿಣ – ಉತ್ತರ ಕೊರಿಯಾ ದೇಶಗಳ ದ್ವೇಷದ ಕತೆಯಷ್ಟೇ ಅಲ್ಲ. ಪ್ರಭುತ್ವದ ಕ್ರೌರ್ಯಕ್ಕೆ ಕಾಲ– ದೇಶಗಳ ಹಂಗಿಲ್ಲ. ಅದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ. ಈಗ ನಮ್ಮ ದೇಶದಲ್ಲಿ ಬಹುಚರ್ಚೆಯಲ್ಲಿರುವ ದೇಶಭಕ್ತಿಯ ಸಾಬೀತುಗೊಳಿಸುವುದು, ದೇಶದ್ರೋಹದ ನಿರ್ಣಯ ಈ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿಯೂ ಈ ಸಿನಿಮಾ ನಮಗೆ ಸಂಬಂಧಿಸಿಕೊಳ್ಳುತ್ತಾ ಹೋಗುತ್ತದೆ. ಆದ್ದರಿಂದಲೇ ಈ ಸಿನಿಮಾದಲ್ಲಿ ಬರುವ ಗಡಿಯ ಆಚೀಚೆಯ ದೇಶಗಳನ್ನು ಭಾರತ ಮತ್ತು ಪಾಕಿಸ್ತಾನ ಎಂದುಕೊಂಡರೆ ನಮ್ಮನ್ನೇ ನಾವು ಕಾಣಬಹುದು.

ಕಿಮ್ ಕಿ ಡುಕ್ ನಿರ್ದೇಶಿಸಿದ ಸಿನಿಮಾಗಳ ಸಂಖ್ಯೆಯೂ ಕಮ್ಮಿಯೇನಲ್ಲ. 14 ವರ್ಷಗಳಲ್ಲಿ 33 ಸಿನಿಮಾಗಳನ್ನು ನಿರ್ದೇಶಿಸಿದ್ದಾನೆ. ಅಂದರೆ ಸರಾಸರಿ ವರ್ಷಕ್ಕೆ ಎರಡಕ್ಕಿಂತ ಹೆಚ್ಚು ಸಿನಿಮಾಗಳು! ತನ್ನ ಸಿನಿಮಾಗಳು ಎಬ್ಬಿಸುವ ತಲ್ಲಣಗಳು, ಹುಟ್ಟು ಹಾಕುವ ವಿವಾದಗಳಿಗೂ ತನಗೂ ಸಂಬಂಧವೇ ಇಲ್ಲ, ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತ ಹೋಗುವುದಷ್ಟೇ ತನ್ನ ಕೆಲಸ ಎಂದು ನಂಬಿ ಹೊರಟಂತಿದೆ ಅವನ ಸಿನಿಪಯಣ. 

ಪಿಚ್ಚರ್ ಅಬಿ ಬಾಕಿ ಹೈ!:

ಇಷ್ಟಾಗಿಯೂ ಕಿಮ್ ಕಿ ಡುಕ್ ದಣಿದಂತಿಲ್ಲ. ಕಳೆದ ವರ್ಷ ಅಂದರೆ 2019ರಲ್ಲಿ ಕಝಕಿಸ್ತಾನಕ್ಕೆ ಹೋಗಿ ಅಲ್ಲಿನ ಸ್ಥಳೀಯ ಕಲಾವಿದರನ್ನೇ ಇಟ್ಟುಕೊಂಡು ‘ಡಿಸಾಲ್ವ್’ ಎಂಬ ಸಿನಿಮಾ ಮಾಡಿ ಬಂದಿದ್ದಾನೆ. ಅವನದ್ದೇ ನಿರ್ದೇಶನದ ‘ಸಮರಿಟನ್ ಗರ್ಲ್’ ವಸ್ತುವಿಗೆ ಹೋಲುವ ವಸ್ತುವುಳ್ಳ ಈ ಸಿನಿಮಾದಲ್ಲಿ ವೇಶ್ಯೆಯೊಬ್ಬಳ ಬದುಕಿನ ಮೂಲಕ ಸಮಾಜವನ್ನು ಕಾಣುವ ಪ್ರಯತ್ನವಿದೆ.


‘ಡಿಸಾಲ್ವ್’ ಸಿನಿಮಾದ ಪೋಸ್ಟರ್

ಲಾಕ್‌ಡೌನ್‌ನಿಂದ ಇಡೀ ಜಗತ್ತೇ ತತ್ತರಿಸಿ, ಚಿತ್ರೋದ್ಯಮವೂ ಸ್ಥಗಿತಗೊಂಡಿದೆ. ಆದರೆ ಖಂಡಿತ ಕಿಮ್ ಕಿ ಡುಕ್‌ನ ಸೃಜನಶೀಲ ಮನಸ್ಸು ಸ್ಥಗಿತಗೊಂಡಿರುವುದಿಲ್ಲ. ಜಗತ್ತನ್ನು ಬೆಚ್ಚಿಬೀಳಿಸುವ ಹೊಸ ವಸ್ತುವಿನೊಂದಿಗೆ, ಹೊಸ ರೀತಿಯ ಸಿನಿಮಾದೊಂದಿಗೆ ಬರಲು ಅವನು ಕಾಯುತ್ತಿರುತ್ತಾನೆ. ಜಗತ್ತಿನ ಸಿನಿಮಾರಂಗವೂ ಬಹುಶಃ ಅವನ ಹೊಸ ಸಿನಿಮಾಕ್ಕಾಗಿ ಕಾಯುತ್ತಿರುವಂತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು