ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಹೋರಾಟದ ಕಥನ ಮೊಗೆದಿಡುವ ‘ಕೊಳಗ’

Last Updated 22 ಡಿಸೆಂಬರ್ 2020, 6:58 IST
ಅಕ್ಷರ ಗಾತ್ರ

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ರೈತ ಹೋರಾಟದ ಕಥನಗಳು ತೆರೆಯ ಮೇಲೆ ಮೂಡಿಬಂದಿವೆ. ಆ ಸಾಲಿಗೆ ಮತ್ತೊಂದು ಚಿತ್ರ ‘ಕೊಳಗ’ ಹೊಸ ಸೇರ್ಪಡೆಯಾಗುತ್ತಿದೆ. ಇದು ಸಾಹಿತಿ ನಾ.ಡಿಸೋಜಾ ಅವರ ಕಾದಂಬರಿ ಆಧರಿಸಿದ ಚಿತ್ರ. ಇದನ್ನು ಪ್ರಸನ್ನ ಗೂರಲಕೆರೆ ನಿರ್ದೇಶಿಸುತ್ತಿದ್ದಾರೆ. ಜತೆಗೆ ಸಂಭಾಷಣೆ ಕೂಡ ಬರೆದಿದ್ದಾರೆ.

ನಿರ್ದೇಶಕರ ಪತ್ನಿ ನಿಶಿತಾಗೌಡ ಈ ಚಿತ್ರಕ್ಕೆ ಚಿತ್ರಕಥೆ ಹೆಣೆಯುವ ಜತೆಗೆ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ನಾಯಕನಾಗಿ ಕಿಶೋರ್‌ ನಟಿಸುತ್ತಿದ್ದಾರೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿಮಿಶಾಂಭ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಿತು. ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, ಆಯುರ್ವೇದ ವೈದ್ಯ ಡಾ.ಅಶೋಕ್, ನಿರ್ದೇಶಕರಾದ ಎಸ್. ನಾರಾಯಣ್, ಕೋಡ್ಲು ರಾಮಕೃಷ್ಣ, ಅವಿನಾಶ್ ಯು. ಶೆಟ್ಟಿ ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಎಸ್. ನಾರಾಯಣ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದರು.

ಈ ಚಿತ್ರದಲ್ಲಿ ಪ್ರಮುಖವಾಗಿ ಆರೇಳು ಪಾತ್ರಗಳಿವೆ. ಅದರಲ್ಲೂ ಮೂರು ಪಾತ್ರಗಳು ಇಡೀ ಕಥೆಯ ಕೇಂದ್ರಬಿಂದು. ಆದಿ ಲೋಕೇಶ್ ಸ್ವಾಮೀಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಗುರು ಅವರ ಸಂಗೀತ, ಸುಜಿತ್ ನಾಯಕ್ ಅವರ ಸಂಕಲನ ಈ ಚಿತ್ರಕ್ಕಿದೆ.

ಕಾದಂಬರಿಯ ಆಶಯಕ್ಕೆ ಒಂದಿನಿತು ಕುಂದಾಗದಂತೆ ತೆರೆಯ ಮೇಲೆ ತರುವ ಜವಾಬ್ದಾರಿ ಹೊತ್ತಿರುವ ನಿರದೇಶಕ ಪ್ರಸನ್ನ, ‘ಇಪ್ಪತ್ತು ವರ್ಷಗಳ ಕಾಲ ನಡೆದಂಥ ದೊಡ್ಡ ರೈತ ಹೋರಾಟದ ಕಥಾನಕವಿದು. ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಚಳವಳಿಯ ವಿಚಾರಗಳು ನನ್ನ ಮನದಲ್ಲಿದ್ದವು. ಆಗಿನ ಕಾಲದಲ್ಲಿ ರೈತ ತನ್ನ ಭೂಮಿಯ ಮೇಲೆ ಭಾವನಾತ್ಮಕ ಸಂಬಂಧ ಹೊಂದಿದ್ದ. ಇತ್ತೀಚಿನ ದಿನಗಳಲ್ಲಿ ಅದು ಕ್ಷೀಣಿಸುತ್ತಿದೆ. ಆ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನ ಈ ಚಿತ್ರದಲ್ಲಿದೆ. ನೀನಾಸಂ ಮಂಜು, ಅವಿನಾಶ್ ಸೇರಿ ಇನ್ನೂ ಹಲವರ ಸಲಹೆ, ಸಹಕಾರ ನನ್ನ ಬೆನ್ನಿಗದೆ’ ಎನ್ನುತ್ತಾರೆ.

‘ಕೊಳಗ ಹಿಂದಿನ ಕಾಲದಲ್ಲಿ ರೈತಾಪಿಗಳು ಧವಸಧಾನ್ಯ ಅಳೆಯಲು ಬಳಸುತ್ತಿದ್ದ ಒಂದು ಅಳತೆಗೋಲು. ರೈತಾಪಿವರ್ಗ ಹಾಗೂ ಭೂಮಾಲೀಕರ ನಡುವಿನ ಘರ್ಷಣೆಯೇ ಈ ಚಿತ್ರದ ಕಥೆ. ಮಹತ್ತರ ಬದಲಾವಣೆಗೆ ಕೊಳಗ ಹೇಗೆ ಕಾರಣವಾಯಿತೆಂದು ಈ ಚಿತ್ರ ತೆರೆದಿಡಲಿದೆ’ ಎನ್ನುವ ಮಾತು ಸೇರಿಸಿದರು ಕೋಡಿಹಳ್ಳಿ ಚಂದ್ರಶೇಖರ್.

‘ನಾನು ಈವರೆಗೆ 30 ಚಿತ್ರಗಳನ್ನು ನಿರ್ದೇಶಿಸಿದ್ದು, ಅದರಲ್ಲಿ 15 ಕಾದಂಬರಿ ಆಧರಿತ ಚಿತ್ರಗಳೇ ಆಗಿವೆ. ಆದರೆ, ನಾ.ಡಿಸೋಜಾ ಅವರ ಕಾದಂಬರಿ ಅಥವಾ ಕಥೆಯನ್ನು ನಾನು ಚಿತ್ರ ಮಾಡಲಿಲ್ಲವೆನ್ನುವ ಬೇಸರ ಈಗಲೂ ಇದೆ. ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್ ಕಾಸರವಳ್ಳಿ ಈ ಹಿಂದೆ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು. ಈಗ ಪ್ರಸನ್ನ ಚಲನಚಿತ್ರ ಕೈಗೆತ್ತಿಕೊಂಡಿದ್ದಾರೆ. ಇದೊಂದು ಸಾಮಾನ್ಯ ಪರಿಕಲ್ಪನೆಯಲ್ಲ, ನಿರ್ದೇಶಕರ ಪ್ರಯತ್ನ ಫಲಿಸಲಿ’ ಎಂದು ಬೆನ್ನು ತಟ್ಟಿದರು ನಿರ್ದೇಶಕ ಕೋಡ್ಲು ರಾಮಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT