ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅದ್ವೆಯನ್ನು ಪರಿಚಯಿಸುವ ಈ ತುಣುಕು ಬಿಡುಗಡೆಯಾಗಿದೆ. ವಿಷಪೂರಿತ ಹಾವುಗಳಿಂದ ತುಂಬಿದ ಬಾವಿಗೆ ಅದ್ವೆ ಹಗ್ಗದ ಮೂಲಕ ಪ್ರವೇಶಿಸುವ, ಆ ಬಾವಿಯಲ್ಲಿರುವ ಪುರಾತನ ಪುಸ್ತಕವನ್ನು ಎತ್ತಿಕೊಂಡು ಹೊರ ಬರುವ ದೃಶ್ಯ ಇದರಲ್ಲಿದ್ದು, ಗ್ರಾಫಿಕ್ಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ‘ಸುಬ್ರಹ್ಮಣ್ಯ’ನ ಈ ಗ್ಲಿಂಪ್ಸ್ ತಯಾರಿಗೆ ವಿಎಫ್‌ಎಕ್ಸ್ ತಂತ್ರಜ್ಞರು ನಾಲ್ಕು ತಿಂಗಳಿನಿಂದ ದುಡಿದಿದ್ದಾರೆ. ಚಿತ್ರದ ಕ್ರಿಯೇಟಿವ್ ನಿರ್ಮಾಪಕ ಮತ್ತು ವಿಎಫ್‌ಎಕ್ಸ್ ಮೇಲ್ವಿಚಾರಕ ನಿಖಿಲ್ ಕೋಡೂರು ನೇತೃತ್ವದಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಪ್ರಸಿದ್ಧ ಸ್ಟುಡಿಯೋಗಳಲ್ಲಿ ವಿಎಫ್‌ಎಕ್ಸ್ ಕೆಲಸ ನಡೆದಿದೆ ಎಂದಿದೆ ಚಿತ್ರತಂಡ. ‘ಸುಬ್ರಹ್ಮಣ್ಯ’ ಸಿನಿಮಾ ಸೋಶಿಯೋ-ಫ್ಯಾಂಟಸಿ ಶೈಲಿಯ ಸಿನಿಮಾವಾಗಿದ್ದು ಜೊತೆ ಅಡ್ವೆಂಚರ್ ಅಂಶಗಳೂ ಈ ಸಿನಿಮಾದಲ್ಲಿದೆ.