ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರಿಯಾ ಗಾನಾಭಿನಯ

ಬಹುಮುಖಿ
Last Updated 29 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ತಾ‌ಯಿಯ ಸಂಗೀತದ ದನಿಯನ್ನು ಆಲಿಸಿ, ತಂದೆಯ ನಟನೆಯ ಮೋಡಿಯನ್ನು ನೋಡುತ್ತಾ ಬೆಳೆದವರು ಸುಪ್ರಿಯಾ ಎಸ್. ರಾವ್. ಶಿವಮೊಗ್ಗದ ಭದ್ರಾವತಿಯ ಈ ಸುಂದರಿ ಬಹುಮುಖ ಪ್ರತಿಭೆ. ಗಾಯಕಿ, ಸಂಗೀತ ಸಂಯೋಜಕಿ, ಸಿನಿಮಾ ನಟಿಯೂ ಆಗಿರುವ ಅವರಿಗೆ ರಂಗಭೂಮಿಯಲ್ಲಿ ಇನ್ನೂ ಗಟ್ಟಿಯಾಗಿ ನೆಲೆ ಕಂಡುಕೊಳ್ಳುವ ತುಡಿತ.

‘ಸಂಗೀತಕ್ಕೆ ಬರುವ ಒಲವು ನನ್ನಲ್ಲಿ ಇರಲಿಲ್ಲ. ಸುಮಧುರ ಧ್ವನಿಯಷ್ಟೇ ಇತ್ತು. ಅದನ್ನು ಗುರುತಿಸಿದ್ದು ಅಮ್ಮ ಸೀತಾಲಕ್ಷ್ಮಿ’ ಎನ್ನುವ ಅವರಿಗೆ ತಾಯಿಯೇ ಸಂಗೀತದ ಮೊದಲ ಗುರುವಂತೆ. ಅಮ್ಮನ ಆಸೆ ಈಡೇರಿಸುವುದಕ್ಕಿಂತ ಬೇರೆ ಖುಷಿಯಿಲ್ಲ ಎಂದು ಭಾವಿಸಿದ್ದ ಅವರು ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡು ಗಾಯಕಿಯಾದವರು. ದೈವದತ್ತವಾಗಿ ಬಂದ ಕಂಠಸಿರಿ ಅವರಿಗೆ ವರವಾಗಿತ್ತು.

8ನೇ ತರಗತಿ ಓದುತ್ತಿದ್ದಾಗಲೇ ‘ಎದೆ ತುಂಬಿ ಹಾಡಿವೆನು’ ಟಿವಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿ ತನ್ನ ಕಂಠಸಿರಿಯ ಮೂಲಕ ಕರುನಾಡಿನಲ್ಲಿ ಮನೆ ಮಾತಾಗಿದ್ದರು.ಮೊದಲ ವರ್ಷದ ಪಿಯುಸಿ ಓದುತ್ತಿದ್ದ ವೇಳೆ ‘ಸರಿಗಮಪ’ ಹಾಗೂ ಡಿಗ್ರಿಯಲ್ಲಿದ್ದಾಗ ‘ಸ್ಟಾರ್ ಸಿಂಗರ್‌ ಸೀಸನ್ 2’ ಟಿವಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು.

ಸುಪ್ರಿಯಾ ಅವರ ತಂದೆಯೂ ರಂಗಕರ್ಮಿ. ತಂದೆಯ ನಾಟಕಗಳನ್ನು ನೋಡುತ್ತ ಬೆಳೆದ ಅವರು ರಂಗಭೂಮಿಗೆ ಬಂದದ್ದು ಆಕಸ್ಮಿಕವಂತೆ. ರಂಗಕರ್ಮಿ ರೇಣುಕಪ್ಪ ಅವರ ಮುಂದೆ, ‘ನನಗೂ ಅವಕಾಶ ಸಿಕ್ಕರೆ ನಟಿಸುವೆ’ ಎಂದು ತಮಾಷೆಗೆ ಹೇಳಿದ್ದೆ. ಕಾಕತಾಳೀಯವೆಂಬಂತೆ ಅವರು ‘ಪಿನೋಕಿಯೊ’ ನಾಟಕದ ಅಪ್ಸರೆ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು. ಅದು ನನ್ನ ನಟನೆಯ ಬದುಕಿಗೆ ತಿರುವು ನೀಡಿತು. ಅಪ್ಸರೆ ಪಾತ್ರ ನನ್ನಲ್ಲಿನ ನಟನೆಯ ಪ್ರತಿಭೆಯನ್ನು ಜಾಗೃತಗೊಳಿಸಿತು’ ಎನ್ನುತ್ತಾರೆ.

‘ಅಪ್ಸರೆ ಪಾತ್ರವು ನನ್ನನ್ನು ರಂಗಭೂಮಿಗೆ ಕರೆತಂದು ನಿಲ್ಲಿಸಿತು. ಕಳೆದು 8 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕ್ಷೇತ್ರದಲ್ಲಿ ನಾನು ಕಳೆದ, ಕಳೆಯಲಿರುವ ಪ್ರತಿಯೊಂದು ಕ್ಷಣವೂ ಅವಿಸ್ಮರಣೀಯ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.

ರಂಗಭೂಮಿಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡ ಬಳಿಕ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ‘ಗಿರಿಜಾ ಕಲ್ಯಾಣ’ದಲ್ಲಿ. ಹೊಂಗಿರಣ ತಂಡದ ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ‘ಕರ್ಣಾಂತರಂಗ’, ‘ರಾವಣ ದರ್ಶನ’, ‘ಮೈಥಿಲಿ’, ‘ಮಂಥರೆ’, ‘ಯಹೂದಿ ಹುಡುಗಿ’ ಸೇರಿದಂತೆ ಹತ್ತಾರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮೊದಲ ನಾಟಕದ ‘ಗಿರಿಜಾ’ ಪಾತ್ರ ಅವರಿಗೆ ಎಂದೆಂದಿಗೂ ಅಚ್ಚುಮೆಚ್ಚಂತೆ.

ಅನಿರೀಕ್ಷಿತವಾಗಿ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟ ಅವರು, ಎಚ್.ಎಸ್.ವೆಂಕಟೇಶ ಮೂರ್ತಿ ಅವರ ‘ಹಸಿರು ರಿಬ್ಬನ್’ ಚಿತ್ರದಲ್ಲಿ ಅಭಿನಯದ ಮೂಲಕ ಮೋಡಿ ಮಾಡಿದ್ದರು. ಆ ಚಿತ್ರದಲ್ಲಿ ಅವರದ್ದು ಲೀಡ್ ರೋಲ್. ‘ಮಾತೃ ಜನನ’ದಲ್ಲೂ ನಟಿಸಿರುವ ಅವರ ನಿರೀಕ್ಷಿತ ಸಿನಿಮಾ ನರೇಂದ್ರ ಬಾಬು ನಿರ್ದೇಶನದ ‘ಅಮೃತವಾಹಿನಿ’. ಆ ಚಿತ್ರ ಇನ್ನಷ್ಟೇ ತೆರೆಕಾಣಬೇಕಿದೆ. 2–3 ಚಿತ್ರಗಳಿಗೆ ಆಫರ್ ಬಂದಿದೆ ಎನ್ನುವ ಅವರು ಧಾರಾವಾಹಿಗಳಲ್ಲಿ ನಟಿಸಬೇಕೆಂಬ ಮಹದಾಸೆ ಹೊಂದಿದ್ದಾರೆ.

ಒಂದೇ ಕೆಲಸಕ್ಕೆ ಅಥವಾ ಒಂದೇ ಕ್ಷೇತ್ರಕ್ಕೆ ತನ್ನನ್ನು ಸಿಮೀತಗೊಳಿಸಿಕೊಳ್ಳದ ಸುಪ್ರಿಯಾ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿರುತ್ತಾರೆ. ನಟನೆ, ಸಂಗೀತದ ಜೊತೆ ಜೊತೆಗೆ ಬಿಬಿಎ ಮುಗಿಸಿರುವ ಅವರು ಸದ್ಯ ಎಂ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪ್ರಸಾದನ, ವಸ್ತ್ರವಿನ್ಯಾಸ, ಸ್ಟೇಜ್ ವರ್ಕ್, ಸಂಗೀತ ಸಂಯೋಜನೆ, ಸಾಹಿತ್ಯ ರಚನೆ ಹೀಗೆ ರಂಗಭೂಮಿಯ ಎಲ್ಲ ಕೆಲಸಗಳನ್ನು ಕರಗತ ಮಾಡಿಕೊಂಡಿದ್ದಾರೆ.ಆದಷ್ಟು, ದಿಢೀರನೆ ನಟನೆಯಲ್ಲಿ ಮುನ್ನೆಲೆಗೆ ಬರಬೇಕೆಂಬ ಆಸೆ ಹೊಂದಿರದ ಅವರು ಅರ್ಥಪೂರ್ಣ ಸಂದೇಶವುಳ್ಳ ಹಾಗೂ ಕಲಾತ್ಮಕ ಚಿತ್ರಗಳಿಗೆ ಮಾತ್ರ ಹೆಚ್ಚು ಆದ್ಯತೆ ನೀಡುತ್ತಾರಂತೆ.

‘ಮೈಥಿಲಿ’ಯೆಂಬ ಸವಾಲಿನ ಹೆಮ್ಮರ
‘ನಾನು ನಟಿಸಿರುವ ನಾಟಕಗಳಲ್ಲಿ ಅತ್ಯಂತ ವಿಭಿನ್ನವಾದದ್ದು ‘ಮೈಥಿಲಿ’. ಅದು ಏಕವ್ಯಕ್ತಿ ನಾಟಕ. 1 ಗಂಟೆ 45 ನಿಮಿಷದ ನಾಟಕದಲ್ಲಿ 19 ಪಾತ್ರಗಳಿವೆ. ಆ ಎಲ್ಲ ಪಾತ್ರಗಳನ್ನು ನಾನೊಬ್ಬಳೇ ಮಾಡಿದ್ದೆ. ಪ್ರತಿ ಕ್ಷಣಕ್ಷಣಕ್ಕೂ ಬದಲಾಗುವ ಪಾತ್ರ, ಬದಲಾಗುವ ನಟನೆಯ ಧಾಟಿ ಸವಾಲಿನದ್ದಾಗಿತ್ತು. ಆ ಸವಾಲಿನ ಹೆಮ್ಮರವನ್ನು ಯಶಸ್ವಿಯಾಗಿ ಏರಿದ್ದು, ಸಂತೃಪ್ತಿ ನೀಡಿದೆ’ ಎನ್ನುತ್ತಾರೆ.

ಆ ಪಾತ್ರಗಳ ರಿಹರ್ಸಲ್‌ಗೆಂದು ಒಂದೂವರೆ ತಿಂಗಳು ಮುಡುಪಿಟ್ಟಿದ್ದರಂತೆ ಅವರು. ಸುಮಾರು 27 ಪ್ರದರ್ಶನಗಳನ್ನು ಆ ನಾಟಕ ಕಂಡಿದೆ.

***
ನಟನೆ ತಪಸ್ಸು. ಅದು ನೋಡಿ ಕಲಿಯುವಂತಹದ್ದಲ್ಲ. ಪಾತ್ರಗಳನ್ನು ಅನುಭವಿಸಿ ಮಾಡುವಂತಹದ್ದು. ಆ ರೀತಿ ಮಾಡಿದರೆ ಮಾತ್ರ ಒಬ್ಬ ಅತ್ಯುತ್ತಮ ನಟ ಅಥವಾ ನಟಿಯಾಗಿ ಹೊರಹೊಮ್ಮಲು ಸಾಧ್ಯ.
-ಸುಪ್ರಿಯಾ ಎಸ್. ರಾವ್, ರಂಗಭೂಮಿ ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT