ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್‌... ನಿಮಗೀ ಮಾತುಗಳು ನೆನಪಾಗಲಿಲ್ವೆ?

ನಿಮ್ಮ ಹೆಸರೀಗ ಮತ್ತೆ ಖಿನ್ನತೆಯ ಮೌನದೊಂದಿಗೆ ತಳಕು ಹಾಕಲಾಗುತ್ತಿದೆ. ನೀವು ಧ್ವನಿಯಾಗಬೇಕಿತ್ತು ಸುಶಾಂತ್‌!
Last Updated 14 ಜೂನ್ 2020, 16:14 IST
ಅಕ್ಷರ ಗಾತ್ರ

ಸುಶಾಂತ್.. ನಿಮಗೀ ಮಾತುಗಳು ನೆನಪಾಗಬೇಕಿತ್ತು...!

‘ಜಿಂದಗಿಮೆ ಸಬ್‌ಸೆ ಇಂಪಾಂಟೆಂಟ್‌ ಚೀಜ್‌ ಅಗರ್ ಕುಛ್‌ ಹೈ.. ತೋ ವೋ ಹೈ ಖುದ್‌ ಕಿ ಜಿಂದಗಿ’ (ಜೀವನದಲ್ಲಿ ಎಲ್ಲಕ್ಕಿಂತ ಮಹತ್ವದ್ದು, ಮುಖ್ಯವಾದುದು ಏನಾದರೂ ಇದ್ರೆ ಅದು ನಮ್ಮ ಜೀವನ ಮಾತ್ರ) ಜೀವಸಾವುಗಳ ನಡುವೆ ಉಯ್ಯಾಲೆ ಜೀಕುತ್ತಿರುವ ಮಗನ ಪಾತ್ರಕ್ಕೆ ಸುಶಾಂತ್‌ ಸಿಂಗ್‌ ರಾಠೋಡ್‌ ತಮ್ಮ ಕೊನೆಯ ಚಿತ್ರ ಛಿಚೊರೆಯಲ್ಲಿ ಹೇಳುವ ಮಾತಿದು. ಭಾನುವಾರ ಸಂಜೆ ಈ ಮಾತು ಅದ್ಯಾಕೋ ಕ್ಲೀಷೆ ಎನಿಸುತ್ತಿದೆ.

ಜೀವನಕ್ಕಿಂತಲೂ ಸಾವು ಸೆಳೆಯಿತೇ.. ಈ ನಗುಮೊಗದ ಯುವಕನನ್ನ? ಸಾವಿನ ಮೋಹ, ಹದಿನಾರರ ಹರೆಯದಲ್ಲಿ ಕಳೆದುಕೊಂಡ ಅಮ್ಮನ ಬಗೆಗಿನ ಹಪಹಪಿಯಾಗಿತ್ತೆ? ಇವೆರಡೂ ಪ್ರಶ್ನೆಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ.

ಇಬ್ಬರು ಸಹೋದರಿಯರು, ಹಿರಿಯಣ್ಣ ಇರುವ ತುಂಬು ಕುಟುಂಬದಿಂದ ಸುಶಾಂತ್‌ಸಿಂಗ್‌ ರಜಪೂತ್‌ ಬಂದಿದ್ದು. ಪಟ್ನಾದ ಈ ಯುವಕ ‘ಪವಿತ್ರ ರಿಷ್ತಾ’ ಎಂಬ ಸೀರಿಯಲ್‌ನಿಂದ ಮನೆಮಾತಾದರು. ಕಾಯ್‌ಪೊ ಛೆ ಚಿತ್ರದಿಂದ ಬೆಳ್ಳಿ ತೆರೆಗೆ. ಶುದ್ಧ ದೇಸಿ ರೋಮ್ಯಾನ್ಸ್‌ ಹೆಸರು ತಂದುಕೊಟ್ಟ ಚಿತ್ರ. ಎಂ.ಎಸ್‌. ಧೋನಿ ಅನ್‌ಟೋಲ್ಡ್‌ ಸ್ಟೋರಿ, ಖ್ಯಾತಿ ತಂದುಕೊಟ್ಟ ಚಿತ್ರ.

‘ಛಿಚೊರೆ’ ಯುವಜನರು ಆತ್ಮಹತ್ಯೆಯಂಥ ಯೋಚನೆಗಳಿಂದ, ಪ್ರಯತ್ನಗಳಿಂದ ಅದ್ಹೇಗೆ ದೂರ ಇರಬೇಕು ಅಂತ ಹೇಳಿದ ಚಿತ್ರ. ಬಹುಶಃ ಕೆಲವೊಂದು ಸಂಭಾಷಣೆಗಳು ಸುಶಾಂತ್‌ಗೆ ನೆನಪಾಗಿದ್ರೆ, ನಾವು ಇಷ್ಟೆಲ್ಲ ಬರೆಯುವ ಅಗತ್ಯವೇ ಇರುತ್ತಿರಲಿಲ್ಲ.

ಸುಶಾಂತ್‌, ನೆನಪಾಗಬೇಕಿತ್ತು ನಿಮಗೆ ಈ ಮಾತುಗಳು..

‘ದೂಸರೋಂಸೆ ಹಾರ್‌ಕರ್‌ ಲೂಸರ್‌ ಕೆಹಲಾನೆಸೆ ಬುರಾ ಹೈ, ಖುದ್‌ ಸೆ ಹಾರ್‌ಕರ್‌ ಲೂಸರ್‌ ಕೆಹ್ಲಾನಾ..’ (ಇನ್ನೊಬ್ಬರಿಂದ ಸೋತು, ಲೂಸರ್‌ ಅನಿಸಿಕೊಳ್ಳುವುದಕ್ಕಿಂತಲೂ, ನಮ್ಮಿಂದಲೇ ನಾವು ಸೋತು ಲೂಸರ್‌ ಅನಿಸಿಕೊಳ್ಳುವುದು ಹೀನವಾಗಿದೆ) ಒಮ್ಮೆ ನೆನಪಾಗಿದ್ದರೂ ಆ ಕುಣಿಕೆ ಬಿಗಿಯುತ್ತಿರಲಿಲ್ಲವೇನೋ.. ಬಟ್ಟೆಯನ್ನೆಸೆದು ಮತ್ತೆ ಹೊರಬರುತ್ತಿದ್ದರೇನೊ..?

ತುಮ್ಹಾರಾ ರಿಸಲ್ಟ್‌ ಡಿಸೈಡ್‌ ನಹಿ ಕರ್ತಾ ಕಿ ತುಮ್‌ ಲೂಸರ್‌ ಹೋ ಯಾ ನಹಿ, ತುಮ್ಹಾರಾ ಕೋಶಿಷ್‌ ಡಿಸೈಡ್‌ ಕರ್ತಾ ಹೈ (ನೀನು ಲೂಸರ್‌ ಎನ್ನುವುದು ನಿನ್ನ ಫಲಿತಾಂಶ ನಿರ್ಧರಿಸುವುದಿಲ್ಲ, ನಿನ್ನ ಪ್ರಯತ್ನ ನಿರ್ಧರಿಸುತ್ತದೆ) ಆರುತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಿರಿ ಸುಶಾಂತ್‌ ನೀವು. ಆ ಶ್ರಮ, ಪ್ರಯತ್ನ, ಸರಿಯಾಗಬೇಕೆನ್ನುವ ನಿಮ್ಮ ಹುಕಿ.. ಒಂಚೂರು ನೆನಪಾಗಬೇಕಿತ್ತು.

‘ಅಚ್ಛೆ ದೋಸ್ತ್‌ ವಹಿ ಹೋತೆ ಹೈ ಜೊ ಅಚ್ಛೆ ವಕ್ತ್‌ ಮೇ ಆಪ್ಕಿ ಬಜಾತೆ ಹೈ.. ಔರ್‌ ಜಬ್‌ ಮುಷ್ಕಿಲ್‌ ವಕ್ತ್‌ ಆತಾ ಹೈ ತೋ ವಹಿ ಛಿಚೊರೆ ಆಪ್‌ಕೆ ದರ್ವಾಜೆ ಪರ್‌ ನಜರ್‌ ಆತೆ ಹೈ’ (ಒಳ್ಳೆಯ ಸ್ನೇಹಿತರೆಂದರೆ, ನಿನ್ನ ಒಳಿತಿನ ಸಮಯದಲ್ಲಿ ಅಹಂಕಾರ ಬರದಂತೆ ನೋಡಿಕೊಳ್ಳುವವರು, ಕೇಡುಗಾಲದಲ್ಲಿ ನಿನ್ನ ಮನೆಬಾಗಿಲಿನಲ್ಲಿ ಪ್ರತ್ಯಕ್ಷರಾಗುವವರು) ಇಂಥದ್ದೇ ಸ್ನೇಹವನ್ನು ಬಯಸಿ, ಪಾರ್ಟಿ ಇಟ್ರಾ ಸುಶಾಂತ್‌? ಅಥವಾ ಕೊನೆಗಾಲದಲ್ಲಿ ಸ್ನೇಹಿತರ ಸಾಂಗತ್ಯ ಬೇಕಿತ್ತಾ? ನಿಮ್ಮ ಮಾತುಗಳನ್ನೂ, ಮಾತುಗಳ ಹಿಂದಿನ ಮೌನವನ್ನೂ, ಮೌನದೊಳಗಿನ ಮಾತನ್ನೂ ಅರ್ಥೈಸಿಕೊಳ್ಳುವ ಸ್ನೇಹಿತರು ಯಾರೊಬ್ಬರೂ ಕಾಣಲಿಲ್ಲವೇ? ಅದೇಕೆ ಭಾನುವಾರ ಬೆಳಗ್ಗೆ ಹೋಗಿ ಬಾಗಿಲು ಹಾಕಿಕೊಂಡ್ರಿ?

ಸಕ್ಸ್‌ಸ್‌ ಕೆ ಬಾದ್‌ ಕಾ ಪ್ಲ್ಯಾನ್‌ ಸಬ್‌ಕೆ ಪಾಸ್‌ ಹೈ, ಲೇಕಿನ್‌ ಅಗರ್‌ ಗಲ್ತಿಸೆ ಫೇಲ್‌ ಹೋಗಯೆ ತೊ ಫೇಲ್ಯುರ್‌ ಸೆ ಕೈಸೆ ಡೀಲ್‌ ಕರ್‌ನಾ ಹೈ ಕೋಯಿ ಬಾತ್‌ಹಿ ನಹಿ ಕರ್‌ನಾ ಚಾಹ್ತಾ (ಯಶಸ್ಸಿನ ನಂತರ ಏನು ಮಾಡಬೇಕಿದೆ ಎಂಬ ಪ್ಲ್ಯಾನ್‌ ಎಲ್ಲರ ಬಳಿ ಇದೆ. ಆದರೆ ಸೋತರೆ ಆ ಸೋಲನ್ನು ಹೇಗೆ ಸ್ವೀಕರಿಸಬೇಕು, ನಿಭಾಯಿಸಬೇಕು ಎನ್ನುವ ಯೋಜನೆ ಯಾರಬಳಿಯೂ ಇಲ್ಲ. ಯಾರೂ ಮಾತನಾಡಲು ಇಷ್ಟವೇ ಪಡುವುದಿಲ್ಲ)

ಹೌದು ಸುಶಾಂತ್ ಯಾರೂ ಮಾನಸಿಕವಾಗಿ ಕುಗ್ಗುವುದರ ಬಗ್ಗೆ, ಖಿನ್ನತೆಯ ಬಗ್ಗೆ, ಒತ್ತಡದ ಬಗ್ಗೆ ಮಾತನಾಡಲು ಇಷ್ಟವೇ ಪಡುವುದಿಲ್ಲ. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ ಅದನ್ನು ನಿಭಾಯಿಸುವ ಬಗ್ಗೆ ಚರ್ಚೆಗಳಾಗ್ತವೆ. ಅದರೊಟ್ಟಿಗೆ ಏಕಾಂಗಿತನ, ಇವುಗಳನ್ನು ನಿಭಾಯಿಸುವ ಬಗ್ಗೆ ಮಾತನಾಡುವುದೇ ಕಡಿಮೆ. ಆದರೂ ಸುಶಾಂತ್‌... ಹೊಸತನಕ್ಕೆ ಹಾತೊರೆಯುತ್ತಿದ್ದ ನೀವು.. ಈ ಬಗ್ಗೆ ಮಾತಾಡಬಹುದಿತ್ತು.

ನಿಮ್ಮ ಹೆಸರೀಗ ಮತ್ತೆ ಖಿನ್ನತೆಯ ಮೌನದೊಂದಿಗೆ ತಳಕು ಹಾಕಲಾಗುತ್ತಿದೆ. ನೀವು ಧ್ವನಿಯಾಗಬೇಕಿತ್ತು ಸುಶಾಂತ್‌!

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT