ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬಲಾ ನಾಣಿಯ ಸಕ್ಸಸ್‌ ಮಂತ್ರಕಾಮಿಡಿ ‘ಕೆಮಿಸ್ಟ್ರಿ’

Last Updated 15 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಒಂದು ಸಿನಿಮಾ ಹಿಟ್‌ ಆದರೆ, ಆ ಚಿತ್ರ ತಂಡದ ಎಲ್ಲರ ‘ಕೆಮಿಸ್ಟ್ರಿ’ಯನ್ನೇ ಬದಲಿಸಿ ಬದುಕನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎನ್ನುವುದಕ್ಕೆ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರವೇ ಒಂದು ತಾಜಾ ನಿದರ್ಶನ. ಹಾಸ್ಯ ನಟ ತಬಲಾ ನಾಣಿ ಅವರ ಕೆರಿಯರ್‌ ಕಾರ್ಡ್‌ನ್ನು ನಿಜವಾಗಿಯೂ ರಿನಿವಲ್‌ ಮಾಡಿದ ಚಿತ್ರವಿದು. ‘ಲೀಡ್‌ ರೋಲ್‌ಗೆ ನನ್ನನ್ನೂ ಪರಿಗಣಿಸಿ ಚಿತ್ರ ಮಾಡಬಹುದೆಂದು ತೋರಿಸಿಕೊಟ್ಟ ಚಿತ್ರವಿದು’ ಎನ್ನುವುದನ್ನು ನಾಣಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಸಿನಿಮಾಗಳು ವೃತ್ತಿ ಬದುಕಿಗೆ ತಿರುವು ಕೊಟ್ಟಿರುವುದನ್ನು ನೆನಪಿಸಿಕೊಳ್ಳುವ ಇವರು ‘ನಿರ್ದೇಶಕ ಗುರುಪ್ರಸಾದ್‌ಗೆ ನಾನೆಂದೂ ಚಿರಋಣಿ. ಹಾಗೆಯೇ ಪ್ರತಿ ಚಿತ್ರದ ನಿರ್ದೇಶಕರು ಕೂಡ ನನಗೆ ಗುರು ಸಮಾನರು’ ಎನ್ನುತ್ತಾರೆ. ಒಂದೂವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವ, ಈಗ ಮತ್ತಷ್ಟು ಹೆಚ್ಚಿಸಿಕೊಂಡಿರುವ ನಾಣಿ ತಮ್ಮ ಸಿನಿಪಯಣದ ಬಗ್ಗೆ ಹಲವು ಸಂಗತಿಗಳನ್ನು ‘ಪ್ರಜಾಪ್ಲಸ್‌’ ಜತೆಗೆ ಹಂಚಿಕೊಂಡಿದ್ದಾರೆ.

ಹವ್ಯಾಸಿ ರಂಗಭೂಮಿ, ಮಿಮಿಕ್ರಿ, ಆರ್ಕೆಸ್ಟ್ರಾ ಹಿನ್ನೆಲೆಯಿಂದ ಬಂದನಾಣಿ ಈವರೆಗೆ ನಟಿಸಿರುವ 118 ಚಿತ್ರಗಳು ತೆರೆಕಂಡಿವೆ. ಇವರು ತಮ್ಮ ಪತ್ನಿ ಮಂಜುಳಾ ಮತ್ತು ಪುತ್ರಿ ಮುಖ್ಯ ಗಾಯಕಿಯಾಗಿರುವ ಸ್ವಂತ ‘ಚಿತ್ರಾ ಮೆಲೋಡಿಸ್‌ ಆರ್ಕೆಸ್ಟ್ರಾ’ ತಂಡವನ್ನು ಹೊಂದಿದ್ದು, ನಾಡಿನಲ್ಲಷ್ಟೇ ಅಲ್ಲದೆ, ದೇಶ–ವಿದೇಶಗಳಲ್ಲೂ ‘ಹಾಡು– ಹಾಸ್ಯ’ ಕಾರ್ಯಕ್ರಮ ನೀಡುತ್ತಾರೆ. ಸದ್ಯ ಕೊರೊನಾ ಕಾರಣಕ್ಕೆ ಈ ಕಾರ್ಯಕ್ರಮ ನಿಲ್ಲಿಸಿದ್ದಾರೆ.

ಸದ್ಯ ಇವರ ಕೈಯಲ್ಲಿ 14 ಚಿತ್ರಗಳು ಇದ್ದು, ಇದರಲ್ಲಿ ನಾಲ್ವರುಸ್ಟಾರ್‌ ನಟರ ನಟನೆಯ ನಾಲ್ಕು ದೊಡ್ಡಚಿತ್ರಗಳು ತೆರೆಕಾಣಲು ಸಜ್ಜಾಗಿವೆ. ಅಲ್ಲದೇ ನಾಣಿ ಲೀಡ್‌ ರೋಲ್‌ ನಿಭಾಯಿಸಿರುವ ‘ಮಿಸ್ಟರಿ ಆಫ್‌ ಮಂಜುಳ’ ಮತ್ತು ‘ಕ್ರಿಟಿಕಲ್‌‌ ಕೀರ್ತನೆಗಳು’ ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಇದಲ್ಲದೇ ಇವರು ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ಚಿತ್ರ ‘ಕೆಇಬಿ ಕೆಂಪಣ್ಣ’ನ ಒಂದಿಷ್ಟು ಭಾಗ ಚಿತ್ರೀಕರಣಕ್ಕೆ ಬಾಕಿ ಉಳಿದಿದೆ. ಇದು ತಂದೆ–ತಾಯಿ ಮತ್ತು ಇಬ್ಬರು ಮಕ್ಕಳ ಸುತ್ತಲಿನ ಕಥಾಹಂದರದ ಚಿತ್ರ. ಚಿಕ್ಕ ಮಕ್ಕಳು ಚಿತ್ರೀಕರಣದಲ್ಲಿ ಭಾಗವಹಿಸಲು ಕೋವಿಡ್‌ ಕಾರಣಕ್ಕೆ ಸದ್ಯ ಅವಕಾಶ ಇಲ್ಲದಿರುವ ಕಾರಣಕ್ಕೆ ಇದು ಸದ್ಯಕ್ಕೆ ಸ್ಥಗಿತಗೊಂಡಿದೆ.

ಇನ್ನು ಇದೇ ಮೊದಲ ಬಾರಿಗೆ ಕುರಿಪ್ರತಾಪ್‌ ಮತ್ತು ನಾಣಿ ಕಾಂಬಿನೇಷನ್‌ನಲ್ಲಿ ಹೊಸದೊಂದು ಚಿತ್ರ ಮೂಡಿಬರುತ್ತಿದೆ. ಇದರ ಹೆಸರು ‘ಆರ್‌ಸಿ ಬ್ರದರ್ಸ್‌’. ಇದರ ಅಡಿ ಟಿಪ್ಪಣಿ ‘ಬ್ಯಾಟ್‌ ನಂದು, ಬಾಲ್‌ ನಿಂದು’ ಅಂದ ಮೇಲೆ ಇದು ಕೂಡ ಪಕ್ಕಾ ಹಾಸ್ಯಮಯ ಚಿತ್ರವೆನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಚಿತ್ರಕ್ಕೆ ಪ್ರಕಾಶ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ‘ರಾಬರ್ಟ್‌’ ಚಿತ್ರಕ್ಕೆ ಸಂಭಾಷಣೆ ಬರೆದಿರುವ ರಾಜಶೇಖರ್‌ ನಿರ್ದೇಶನ ಮತ್ತು ಕೋಮಲ್‌ ನಟನೆಯ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಾಣಿ ಪ್ರಮುಖ ಪಾತ್ರ ನಿಭಾಯಿಸಲಿದ್ದಾರಂತೆ. ಇದಲ್ಲದೇ ಇವರ ನಟನೆಯ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಚಿತ್ರವು ಶೂಟಿಂಗ್‌ ಮುಗಿಸಿ, ಡಬ್ಬಿಂಗ್‌ ಹಂತದಲ್ಲಿದೆ. ಇನ್ನು ‘ಟೆಂಪರ್’‌, ‘ವಿಶ್ವಾಮಿತ್ರ’, ‘ಹಗ್ಗ’ ಹಾಗೂ ‘ಲಿಲ್ಲಿ’ ಸಿನಿಮಾಗಳಲ್ಲೂ ನಾಣಿ ನಟಿಸುತ್ತಿದ್ದು, ‘ಲಿಲ್ಲಿ’ಯಲ್ಲಿ ರಚಿತಾ ರಾಮ್‌ ಡಾಕ್ಟರ್‌ ಆದರೆ, ನಾಣಿಯವರದು ಕಾಂಪೌಂಡರ್‌ ಪಾತ್ರ.ಈ ಚಿತ್ರಗಳು ಜನವರಿ ಅಥವಾ ಫೆಬ್ರುವರಿಯಿಂದ ಚಿತ್ರೀಕರಣ ಶುರುಮಾಡಲಿವೆ.

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ಬಗ್ಗೆ ಹೆಮ್ಮೆಪಡುವ ನಾಣಿ, ‘ಒಂದು ಸಿನಿಮಾ ಗೆದ್ದರೆ ಎಷ್ಟು ಜನರಿಗೆ ಅನುಕೂಲವಾಗುತ್ತದೆನೋಡಿ, ಈ ಸಿನಿಮಾ ಎಷ್ಟೊಂದು ಅವಕಾಶಗಳನ್ನು ಸೃಷ್ಟಿಸಿತೆಂದರೆ, ಇದರ ನಿರ್ದೇಶಕ ಎಲ್. ಕುಮಾರ್‌ ಅವರಿಗೆ ನಾಲ್ಕು ಹೊಸ ಸಿನಿಮಾಗಳ ನಿರ್ದೇಶನದ ಅವಕಾಶ ಹೊತ್ತು ತಂದಿತು. ಸಂಜನಾ ಆನಂದ್‌ಗೆ ನಾಲ್ಕು ದೊಡ್ಡ ಸಿನಿಮಾಗಳಲ್ಲಿ ಸ್ಟಾರ್‌ ನಟರೊಂದಿಗೆ ನಟಿಸುವ ಅವಕಾಶ ಗಿಟ್ಟಿಸಿಕೊಟ್ಟಿತು. ಆದರೆ, ಈಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಚಂದನ್‌ ಆಚಾರ್‌ ವಿಷಯದಲ್ಲಿ ಯಾಕೋ ಇದೊಂದು ಹುಸಿಯಾಗಿದೆ.

‘ನನಗಂತೂ ಈ ಸಿನಿಮಾ ಬರೋಬರಿ ಎಂಟು ಹೊಸ ಸಿನಿಮಾಗಳಲ್ಲಿ ನಟಿಸುವಭಾಗ್ಯ ತಂದುಕೊಟ್ಟಿತು. ಇದರಲ್ಲಿ ನನ್ನ ಪತ್ನಿಯಾಗಿ ನಟಿಸಿದ್ದ ಅಪೂರ್ವ ಅವರಿಗೂ ಕಿರುತೆರೆಯಲ್ಲಿ ಬೇಡಿಕೆ ಸೃಷ್ಟಿಸಿತು. ಈ ಸಿನಿಮಾದ ಜಾಡು ಹಿಡಿದು ನಾಲ್ಕೈದು ಹೊಸ ಸಿನಿಮಾಗಳು ಶುರುವಾಗಿವೆ’ ಎನ್ನುವ ಮಾತು ಹೇಳಲು ನಾಣಿ ಮರೆಯಲಿಲ್ಲ.

ಕುಮಾರ್‌ ಮತ್ತುತಬಲಾನಾಣಿ

ನಾಣಿ ಜತೆಗೆ ತಬಲಾ ಸೇರಿದ ಕಥೆ

ಮೂಲತಃ ತುಮಕೂರು ತಾಲ್ಲೂಕಿನ ಕೊರಟಗೆರೆಯವರಾದ ತಬಲಾ ನಾಣಿಯವರ ಮೂಲ ಹೆಸರು ಲಕ್ಷ್ಮಿನಾರಾಯಣ. ಇವರು ಕಿರ್ಲೋಸ್ಕರ್‌, ಎಚ್‌ಎಂಟಿ, ಬಿಇಎಲ್‌ ಫ್ಯಾಕ್ಟರಿಗಳು ಸೇರಿದಂತೆ ಹಲವು ಕೈಗಾರಿಕೆಗಳ ಹವ್ಯಾಸಿ ನಾಟಕ ತಂಡಗಳಲ್ಲಿ ತಬಲ ನುಡಿಸುತ್ತಿದ್ದವರು. ಗುರುಪ್ರಸಾದ್‌ ನಿರ್ದೇಶನದ ‘ಮಠ’ ಸಿನಿಮಾದಲ್ಲಿ ಇವರು ನಟಿಸುವಾಗ, ನಾರಾಯಣ ಹೆಸರಿನ ಮೂವರು ಕಲಾವಿದರಿದ್ದರಂತೆ. ‘ನಾಣಿ’ ಎಂದು ನಿರ್ದೇಶಕರು ಕರೆದಾಗ ಮೂವರೂ ಗಡಿಬಿಡಿಯಲ್ಲಿ ಓಡಿ ಹೋಗಿ ನಿಲ್ಲುತ್ತಿದ್ದರಂತೆ. ಆಗ ಗುರು ಅವರೇ ‘ಚಿತ್ರರಂಗದಲ್ಲಿ ‘ಮೇಕಪ್‌ ನಾಣಿ’ ಹೆಸರು ಈಗಾಗಲೇ ಜನಪ್ರಿಯವಾಗಿದೆ. ನೀವು ಹೇಗೂ ತಬಲಾ ವಾದ್ಯ ನುಡಿಸುತ್ತೀರಿ, ನಿಮ್ಮ ಹೆಸರನ್ನು ‘ತಬಲಾ ನಾಣಿ’ ಎಂದು ಇಟ್ಟುಕೊಳ್ಳಿ’ ಎಂದು ಹೊಸ ಹೆಸರು ನಾಮಕರಣ ಮಾಡಿದರಂತೆ. ‘ಮಠ’ ಚಿತ್ರದ ನಂತರ ಈ ಲಕ್ಷ್ಮಿನಾರಾಯಣ ಅವರು ತಬಲಾ ನಾಣಿ ಎಂದೇ ಚಿತ್ರರಂಗದಲ್ಲಿ ಪರಿಚಿತಗೊಂಡು, ಜನಪ್ರಿಯತೆ ಸಂಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT