ಮಂಗಳವಾರ, ಸೆಪ್ಟೆಂಬರ್ 28, 2021
26 °C

ಕಾಲಿವುಡ್ ‘ಸಿಂಗಂ’ ಸೂರ್ಯಗೆ 45ನೇ ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Suriya

ಕಾಲಿವುಡ್‌ನ ಬಹುಬೇಡಿಕೆಯ ನಟ ಸೂರ್ಯ ಅವರಿಗೆ ಇವತ್ತು (ಜುಲೈ23) 45ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು, ನಿನ್ನೆಯಿಂದಲೇ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ’ಟ್ರೆಂಡ್‌’ ಮಾಡುತ್ತಿದ್ದಾರೆ.

‘ಸೂರ್ಯ ಫ್ಯಾನ್ಸ್‌ ಟ್ರೆಂಡ್ಸ್‌’ ಹೆಸರಿನ ಟ್ವಿಟರ್‌ ಖಾತೆಯಿಂದ #HappyBirthdaySuriya ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ಟ್ರೆಂಡ್‌ ಆಗಿದೆ. ಅಷ್ಟೇ ಅಲ್ಲ, ಸೂರ್ಯ ಅವರ ಬಿಡುಗಡೆಯಾಗಲಿರುವ ’ಸೂರರೈ ಪೋಟ್ರು’ ಸಿನಿಮಾದ ಟೈಟಲ್‌ ಅನ್ನು #SooraraiPottru ಹ್ಯಾಷ್‌ಟ್ಯಾಗ್ ಮಾಡಿ ಟ್ರೆಂಡ್ ಮಾಡಿದ್ದಾರೆ ಅಭಿಮಾನಿಗಳು.

ವಾಯುಸೇನೆಯ ನಿವೃತ್ತ ಅಧಿಕಾರಿ ಮತ್ತು ಕನ್ನಡಿಗ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಅವರ ಜೀವನಕತೆ ಆಧಾರಿತ ಸಿನಿಮಾ ’ಸೂರರೈ ಪೋಟ್ರು’. ಇದಕ್ಕೆ ಸುಧಾ ಕೊಂಗಾರ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಕನ್ನಡಕ್ಕೂ ಈ ಸಿನಿಮಾ ಡಬ್‌ ಆಗಲಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನವೇ ಕರ್ನಾಟಕ, ತಮಿಳುನಾಡಿನಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೂರ್ಯ ಅಭಿಮಾನಿಗಳು ’ಸೂರರೈ ಪೋಟ್ರು’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲೂ ಇದ್ದಾರೆ.

1997ರಲ್ಲಿ 'ನೇರ್‌ಕ್ಕುನೇರ್' ಸಿನಿಮಾದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ, ಸೂರ್ಯ ಸುಮಾರು 40 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಅನೇಕ ಸಿನಿಮಾಗಳು ಹಿಂದಿ ಮತ್ತು ಬೇರೆ ಬೇರೆ ಭಾಷೆಗೆ ರಿಮೇಕ್ ಮತ್ತು ಡಬ್‌ ಆಗಿವೆ. ಇವರು ನಟಿಸಿದ ’ಘಜನಿ’ ಮತ್ತು ’ಸಿಂಗಂ’, ’ಸಿಂಗಂ 2’ ಸಿನಿಮಾಗಳು ಸೂಪರ್ ಹಿಟ್‌ ಆದವು. ’ಸಿಂಗಂ’ ನಲ್ಲಿ ಸೂರ್ಯ ನಿರ್ವಹಿಸಿದ್ದ  ಪಾತ್ರವನ್ನು, ಹಿಂದಿ ರಿಮೇಕ್‌ನಲ್ಲಿ ಅಜಯ್ ದೇವ್‌ಗನ್ ಮಾಡಿದ್ದರು. ಹಿಂದಿ ಅವತರಣಿಕೆಯ ’ರಕ್ತ ಚರಿತ್ರ 2’ ಸಿನಿಮಾದಲ್ಲಿ ಸೂರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವನ್ನು ತಮಿಳಿನಲ್ಲೂ ಚಿತ್ರೀಕರಿಸಲಾಗುತ್ತಿದೆ.

ಸೂರ್ಯ ಅವರ ’ಜೂನ್ ಆರ್‌’ ಸಿನಿಮಾದ ಹಿಂದಿ ರಿಮೇಕ್ 'ಆಪ್‌ ಕೆ ಲಿಯೇ ಹಮ್‌’ ಇನ್ನೂ ತೆರೆಕಂಡಿಲ್ಲ. ಭೂಮಿಕಾ ಚಾವ್ಲಾ ಪ್ರಧಾನ ಪಾತ್ರದಲ್ಲಿ ನಟಿಸಿರುವ 'ಸಿಲ್ಲುನು ಒರು ಕಾದಲ್‌’ ಕೂಡ ಮರಾಠಿಗೆ ರಿಮೇಕ್ ಆಗಿತ್ತು.

ವೆಟ್ರಿಮಾರನ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ತಂದೆ ಹಾಗೂ ಮಗನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದು ಸೂರ್ಯ ಅವರ ವೃತ್ತಿ ಜೀವನದ 40ನೇ ಚಿತ್ರ. ಈಗ ಈ ಚಿತ್ರಕ್ಕೆ ‘ವಾಡಿವಾಸಲ್‌’ ಎಂದು ಶೀರ್ಷಿಕೆ ಇಡಲಾಗಿದ್ದು, ಇದರಲ್ಲಿ ತಂದೆ– ಮಗ (ಸೂರ್ಯ) ಇಬ್ಬರೂ ಗೂಳಿಯ ತರಬೇತುದಾರರು. ದ್ವಿಪಾತ್ರ ಸೂರ್ಯ ಅವರಿಗೆ ಹೊಸದೇನಲ್ಲ.

ಈ ಹಿಂದೆ ಗೌತಮ್‌ ಮೆನನ್‌ ನಿರ್ದೇಶನದ ‘ವಾರಣಂ ಆಯಿರಂ’ ನಲ್ಲಿ  ದ್ವಿಪಾತ್ರ ಹಾಗೂ ವಿಕ್ರಮ್‌ ಕುಮಾರ್‌ ಅವರ ‘24’ ಸಿನಿಮಾದಲ್ಲಿ ತ್ರಿಪಾತ್ರ ಮಾಡಿದ್ದರು.

ಸೂರ್ಯ ಈಗ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ವೆಬ್‌ಸರಣಿಯಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಒಂದು ವೇಳೆ ಇದು ನಿಜವಾದರೆ, ಇದು ಸೂರ್ಯ ಅವರ ಮೊದಲ ವೆಬ್‌ ಸರಣಿ ಆಗಲಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು