ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರನಟಿಯರಿಗೆ ಲೈಂಗಿಕ ಕಿರುಕುಳ: ನ್ಯಾ. ಹೇಮಾ ವರದಿ ಎಚ್ಚರಿಕೆಯ ಗಂಟೆ ಎಂದ ನಾನಿ

Published : 23 ಆಗಸ್ಟ್ 2024, 10:24 IST
Last Updated : 23 ಆಗಸ್ಟ್ 2024, 10:24 IST
ಫಾಲೋ ಮಾಡಿ
Comments

ಮುಂಬೈ: ‘ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತ ತನಿಖೆಗಾಗಿ ನೇಮಕಗೊಂಡ ನ್ಯಾ. ಹೇಮಾ ಸಮಿತಿ ನೀಡಿರುವ ವರದಿಯು ಚಿತ್ರರಂಗಕ್ಕೇ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಚಿತ್ರೀಕರಣ ಸೆಟ್‌ನಲ್ಲಿ ಕೆಲಸ ಮಾಡುವವರನ್ನು ಉದ್ಯಮದಲ್ಲಿರುವವರು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ’ ಎಂದು ತೆಲುಗು ನಟ ನಾನಿ ಹೇಳಿದ್ದಾರೆ.

‘ಸೂರ್ಯಾಸ್ ಸಾಟರ್ಡೇ’ ಅಥವಾ ‘ಸರಿಪೊದ್ದಾ ಶನಿವಾರಂ’ ಎಂಬ ಚಿತ್ರದ ಪ್ರಚಾರದಲ್ಲಿರುವ ನಾನಿ ಮಾತನಾಡಿ, ‘ಈ ಸುದ್ದಿ ಕೇಳಿನಂತರ ಹೃದಯ ಒಡೆದುಹೋಯಿತು. ನನ್ನ ಚಿತ್ರಗಳ ಸೆಟ್‌ನಲ್ಲಿ ಅಥವಾ ಸುತ್ತಮುತ್ತ ಇಂಥ ಘಟನೆಗಳು ನಡೆದಿದ್ದನ್ನು ನೋಡಿಲ್ಲ. ಮುಖ್ಯವಾಹಿನಿಯ ಬಹುತೇಕ ಸಿನಿಮಾಗಳ ಸೆಟ್‌ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ ಎಂಬ ನಂಬಿಕೆ ನನ್ನದು’ ಎಂದಿದ್ದಾರೆ.

‘ನಮ್ಮ ವೃತ್ತಿ ಸ್ಥಳದಲ್ಲಿನ ಘನತೆಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಆದರೆ ಹೊಸ ತಲೆಮಾರಿನ ನಟ ಹಾಗೂ ನಟಿಯರು ಭಿನ್ನವಾದ ವರ್ತನೆಯೊಂದಿಗೆ ಈ ರಂಗ ಪ್ರವೇಶಿಸುತ್ತಾರೆ. ಅವರು ಉತ್ತಮವಾದದ್ದನ್ನೇ ಹೊರತರುತ್ತಾರೆ ಎಂಬ ಭರವಸೆ ಇದೆ’ ಎಂದು ನಾನಿ ಹೇಳಿದ್ದಾರೆ.

‘ಮುಂದಿನ ತಲೆಮಾರಿನ ಹೊತ್ತಿಗೆ ಸಾಕಷ್ಟು ಬದಲಾವಣೆ ಆಗಲಿದೆ. ಚಿತ್ರರಂಗ ಪ್ರವೇಶಿಸುವ ಯುವತಿಯರು, 20 ವರ್ಷಗಳ ಹಿಂದೆ ಇದ್ದ ನಟಿಯರಿಗಿಂತ ಭಿನ್ನವಾಗಿರುತ್ತಾರೆ. ಇವರು ಹೆಚ್ಚು ಪ್ರಬುದ್ಧರಾಗಿರುತ್ತಾರೆ. ಅವರಲ್ಲಿ ವೃತ್ತಿಪರತೆಯೂ ಹೆಚ್ಚಿರುತ್ತದೆ. ಹೀಗಾಗಿ ಪರಿಸ್ಥಿತಿಯು ಮುಂದೆ ಎಲ್ಲವೂ ಉತ್ತಮವಾಗಿರಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದ ಚಲನಚಿತ್ರ ಇತಿಹಾಸದಲ್ಲೇ ಇಂಥದ್ದೊಂದು ವರದಿ ಸಲ್ಲಿಕೆಯಾಗಿರುವುದು ಮೊದಲ ಬಾರಿ. ಒಟ್ಟು 233 ಪುಟಗಳ ವರದಿ ಇದಾಗಿದ್ದು, ಉದ್ಯಮದಲ್ಲಿನ ಮಹಿಳೆಯರು ಹಲವು ಹಂತಗಳಲ್ಲಿ ಅನುಭವಿಸಿದ ದೌರ್ಜನ್ಯಗಳ ಹಿಂದಿನ ಮಲಯಾಳಂ ಚಿತ್ರರಂಗದ ಪ್ರಭಾವಿಗಳ ಕೈವಾಡ ಈ ವರದಿಯಲ್ಲಿದೆ ಎಂದೆನ್ನಲಾಗಿದೆ.

2017ರಲ್ಲಿ ನಟ ದಿಲೀಪ್‌ ಅವರ ವಿರುದ್ಧ ನಟಿಯೊಬ್ಬರು ಮಾಡಿದ ಇಂಥ ಆರೋಪದ ನಂತರ ಲೈಂಗಿಕ ದೌರ್ಜನ್ಯ ಮತ್ತು ಲಿಂಗ ತಾರತಮ್ಯ ಕುರಿತು ವರದಿ ಸಲ್ಲಿಸಲು ನ್ಯಾ. ಹೇಮಾ ಸಮಿತಿಯನ್ನು ಕೇರಳ ಸರ್ಕಾರ ರಚಿಸಿತ್ತು.

ನಾನಿ ಅವರ ಹೊಸ ಚಿತ್ರವನ್ನು ವಿವೇಕ್ ಆತ್ರೇಯ ನಿರ್ದೇಶಿಸಿದ್ದಾರೆ. ಎಸ್‌.ಜೆ. ಸೂರ್ಯ ಹಾಗೂ ಪ್ರಿಯಾಂಕಾ ಅರುಲ್ ಮೋಹನ್ ಅವರು ಮುಖ್ಯ ಭೂಮಿಯಕೆಯಲ್ಲಿದ್ದು, ಆ. 29ರಂದು ತೆರೆ ಕಾಣಲಿದೆ. ನಾನಿ ಅವರ ಜೆಂಟಲ್‌ಮ್ಯಾನ್, ಜರ್ಸಿ, ಶ್ಯಾಮ್‌ ಸಿಂಘ ರಾಯ್‌, ದಸರಾ, ಹೈ ನಾನಾ ಜನಪ್ರಿಯ ಚಿತ್ರಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT