ಬುಧವಾರ, ಮಾರ್ಚ್ 22, 2023
21 °C

ಬಾಗಿಲನು ತೆರೆದು... ತೆರೆಯ ಮೇಲೆ ಬರಲು ಕಾದಿವೆ ಸಾಲು ಸಾಲು ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಲಾಕ್‌ಡೌನ್‌ ಹೊಡೆತಕ್ಕೆ ರಾಜ್ಯದಲ್ಲಿ ಹಲವು ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚಿವೆ. ಇನ್ನು ಸರ್ಕಾರದ ಆದೇಶದ ಮೇಲೆ ಬಾಗಿಲು ಮುಚ್ಚಿರುವ ಚಿತ್ರಮಂದಿರಗಳು ಇನ್ನೂ ಬಾಗಿಲು ತೆರೆದಿಲ್ಲ. ಮತ್ತೆ ಸಿನಿಪ್ರಿಯರನ್ನು ಸೆಳೆಯಲು ಸಜ್ಜಾಗಿರುವ ಚಿತ್ರಮಂದಿರಗಳು ಅನ್‌ಲಾಕ್‌ ನಿರ್ಬಂಧ ಮತ್ತಷ್ಟು ಸಡಿಲಿಕೆಯಾಗಲು ಕಾಯುತ್ತಿವೆ. ಇದಕ್ಕೆ ಪೂರಕವಾಗಿ ‘ಸಲಗ’, ‘ಕೋಟಿಗೊಬ್ಬ–3’, ‘ಭಜರಂಗಿ–2’, ‘ಕೆಜಿಎಫ್‌–2’, ‘ವಿಕ್ರಾಂತ್‌ ರೋಣ’ದಂತಹ ಬಿಗ್‌ಬಜೆಟ್‌ ಚಿತ್ರಗಳು ಸೇರಿದಂತೆ ಹತ್ತಾರು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ.

ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದರೂ, ಪ್ರೇಕ್ಷಕರ ಸಂಖ್ಯೆಗೆ ಹಾಕುವ ನಿರ್ಬಂಧವನ್ನು ಅವಲೋಕಿಸಿ, ಚಿತ್ರ ಬಿಡುಗಡೆಗೆ ಚಿತ್ರತಂಡಗಳು ನಿರ್ಧರಿಸಿವೆ. ಪ್ರೇಕ್ಷಕರ ಸಂಖ್ಯೆಯನ್ನು ಶೇ 50ಕ್ಕೆ ಮಿತಿಗೊಳಿಸಿದರೆ ದೊಡ್ಡ ಬಜೆಟ್‌ ಚಿತ್ರಗಳನ್ನು ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ಹಿಂದೇಟು ಹಾಕಬಹುದು.

ಕೆಜಿಎಫ್‌ ಚಿತ್ರ ಬಿಡುಗಡೆ ಮುಂದಕ್ಕೆ: ನಟ ಯಶ್‌ ಅಭಿನಯದ ‘ಕೆಜಿಎಫ್‌–2’ ಜುಲೈ 16ರಂದು ತೆರೆಯ ಮೇಲೆ ಬರಲಿದೆ ಎಂದು ಜನವರಿಯಲ್ಲಿ ನಿರ್ದೇಶಕ ಪ್ರಶಾಂತ್‌ ನೀಲ್‌ ಘೋಷಿಸಿದ್ದರು. ಇದಾದ ನಂತರ ಲಾಕ್‌ಡೌನ್‌ ಜಾರಿಯಾದ ಕಾರಣ ಈ ಚಿತ್ರದ ಬಿಡುಗಡೆ ಮುಂದಕ್ಕೆ ಹೋಯಿತು. ಶೀಘ್ರದಲ್ಲೇ ಬಿಡುಗಡೆಯ ಹೊಸ ದಿನಾಂಕವನ್ನು ಘೋಷಿಸುವುದಾಗಿ ಚಿತ್ರತಂಡವು ತಿಳಿಸಿದೆ. ಜುಲೈ 6ರಂದು ಈ ಕುರಿತು ಟ್ವೀಟ್‌ ಮಾಡಿರುವ ಪ್ರಶಾಂತ್‌ ನೀಲ್‌, ‘ಸಿನಿಮಾ ಹಾಲ್‌ ಗ್ಯಾಂಗ್‌ಸ್ಟರ್‌ಗಳಿಂದ ತುಂಬಿಕೊಂಡಾಗಲಷ್ಟೇ ಮಾನ್‌ಸ್ಟರ್‌ ಬರುತ್ತಾನೆ. ಆತ ತೆರೆಯ ಮೇಲೆ ಬರುವ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಿದ್ದೇವೆ’ ಎಂದು ತಿಳಿಸಿದ್ದಾರೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು ನಿರ್ಬಂಧಿಸಿದರೆ ಕೆಜಿಎಫ್‌–2 ಬಿಡುಗಡೆ ಸದ್ಯಕ್ಕಿಲ್ಲ ಎನ್ನುವುದನ್ನು ಚಿತ್ರತಂಡ ಸ್ಪಷ್ಟಪಡಿಸಿದೆ.

ಕೃಷ್ಣ ಟಾಕೀಸ್‌ ಮತ್ತೆ ರಿಲೀಸ್‌: ಲಾಕ್‌ಡೌನ್‌ ಜಾರಿಗೂ ಮುನ್ನ ತೆರೆಕಂಡಿದ್ದ ನಟ ಅಜೇಯ್ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರ ಒಂದು ವಾರವಷ್ಟೇ ಚಿತ್ರಮಂದಿರಗಳಲ್ಲಿ ಓಡಿತ್ತು. ‘ಚಿತ್ರವನ್ನು ಮತ್ತೆ ಬಿಡುಗಡೆ ಮಾಡುವುದು ಖಚಿತ. ಆದರೆ ಪ್ರೇಕ್ಷಕರ ಸಂಖ್ಯೆ ನಿರ್ಬಂಧಿಸಿದರೆ ಏನು ಮಾಡುವುದು ಎಂದು ಚರ್ಚಿಸುತ್ತಿದ್ದೇವೆ. ಜನರ ಪ್ರತಿಕ್ರಿಯೆ ನೋಡಿ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ’ ಎಂದು ನಿರ್ದೇಶಕ ವಿಜಯಾನಂದ್‌ ತಿಳಿಸಿದರು.

ತಜ್ಞರ ಜೊತೆ ಮಾತನಾಡಿ ಚಿತ್ರಮಂದಿರಗಳನ್ನು ತೆರೆಯುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ನಾಲ್ಕೈದು ದಿನಗಳಲ್ಲಿ ಈ ಕುರಿತು ನಿರ್ಧಾರ ಪ್ರಕಟವಾಗಬಹುದು.
–ಡಿ.ಆರ್‌.ಜೈರಾಜ್‌, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು