ಬುಧವಾರ, ಜೂನ್ 3, 2020
27 °C

ಚಿತ್ರೋದ್ಯಮದ ಸ್ವಪರೀಕ್ಷೆ ಕಾಲವಿದು: ಆ ದಿನಗಳು ಚೇತನ್

ಸಂದರ್ಶನ: ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಪೂರ್ವದ ದಿನಗಳಿಗೆ ಮರಳುತ್ತೇವೆ ಎಂದು ಕಾಯುತ್ತಾ ಕೂರುವುದಕ್ಕಿಂತ ಕೊರೊನೊತ್ತರ ದಿನಗಳಿಗೆ ಚಿತ್ರೋದ್ಯಮ ತಯಾರಾಗಬೇಕಿದೆ ಎನ್ನುತ್ತಾರೆ ನಟ ಚೇತನ್‌

‘ಆ ದಿನಗಳು’ ಮತ್ತು ‘ಮೈನಾ’ ಚಿತ್ರಗಳಲ್ಲಿನ ಮನೋಜ್ಞ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡವರು ನಟ ಚೇತನ್‌. ಹಾಗೆಯೇ ವೈಚಾರಿಕ ಚಿಂತನೆ, ಸಾಮಾಜಿಕ ಹೋರಾಟ, ಸಮಾಜ ಸೇವೆಯಿಂದಲೂ ಜನಮನ್ನಣೆ ಗಳಿಸಿದ್ದಾರೆ. ಇತ್ತೀಚೆಗಷ್ಟೇ ಬಹುಕಾಲದ ಗೆಳತಿಯ ಜತೆಗೆ ಅನಾಥಶ್ರಮದಲ್ಲಿ ಸರಳ ವಿವಾಹ ಮಾಡಿಕೊಂಡು, ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕೊರೊನಾ ಪರಿಣಾಮ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರಿಗೆ ಕೈಲಾದ ನೆರವು ನೀಡುತ್ತಿರುವ ಚೇತನ್‌, ಚಿತ್ರೋದ್ಯಮ ಎದುರಿಸುತ್ತಿರುವ ಸದ್ಯದ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದಾರೆ.

* ಕನ್ನಡ ಚಿತ್ರೋದ್ಯಮ ಎಂಥಾ ಬಿಕ್ಕಟ್ಟಿನಲ್ಲಿದೆ? 

ಚಿತ್ರೋದ್ಯಮದಲ್ಲಿ ಕಾರ್ಮಿಕರು, ತಂತ್ರಜ್ಞರು, ನಿರ್ಮಾಪಕರೇ ನಿಜವಾದ ‘ಸ್ಟಾರ್‌’ಗಳು. ಜಾಗತಿಕ ಹೆಮ್ಮಾರಿ ಕೊರೊನಾದಿಂದ ಹೆಚ್ಚು ಸಂಕಷ್ಟಕ್ಕೆ ಸಿಲುಕಿರುವುದು ಈ ಸ್ಟಾರ್‌ಗಳೇ. ಅದರಲ್ಲೂ ಈ ಕಾರ್ಮಿಕರಿಗೆ ಶೂಟಿಂಗ್‌ ಇದ್ದಾಗಷ್ಟೇ ಕೆಲಸ. ಹಾಗಾಗಿ ಇವರ ಬದುಕು ಯಾವಾಗಲೂ ಅನಿಶ್ಚಿತತೆಯ ನಡುವೆಯೇ ಸಾಗಬೇಕು. ಈ ಅನಿಶ್ಚಿತತೆ ಒಂದು ಮಟ್ಟದಲ್ಲಿ ಎಲ್ಲ ರಂಗದಲ್ಲೂ ಇದ್ದೇ ಇರುತ್ತದೆ. ಎರಡು ದಶಕಗಳ ಹಿಂದೆ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಕಾಡುಗಳ್ಳ ವೀರಪ್ಪನ್‌ ಅಪಹರಿಸಿದಾಗ ಚಿತ್ರರಂಗ ಈ ರೀತಿ ಸಂಪೂರ್ಣ ಸ್ತಬ್ಧವಾಗಿತ್ತು. ಆದರೆ, ಈಗ ಆಗಿರುವ ಹಾನಿ ಚಿತ್ರೋದ್ಯಮದ ಮೇಲೆ ದೀರ್ಘಕಾಲದ ಪರಿಣಾಮ ಬೀರಲಿದೆ. 

* ಈ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗವೇನು?

ಸದ್ಯದ ತುರ್ತು ಪರಿಹಾರೋಪಾಯಗಳು ಇದಕ್ಕೆ ಇಲ್ಲ. ದೂರಗಾಮಿ ಯೋಜನೆಗಳೇ ಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವಿಕೆ, ಸ್ಯಾನಿಟೈಸರ್‌ ಬಳಕೆಯೊಂದೇ ಸದ್ಯಕ್ಕೆ ಕೊರೊನಾ ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಇರುವ ಕ್ರಮಗಳು. ಚಿತ್ರಮಂದಿರಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಲಾಕ್‌ಡೌನ್‌ ಮುಗಿದ ಮೇಲೆ ಜನರು ಚಿತ್ರಮಂದಿರಕ್ಕೆ ಎಷ್ಟರಮಟ್ಟಿಗೆ ಧೈರ್ಯವಾಗಿ ಬರಬಹುದು ಎನ್ನುವ ಪ್ರಶ್ನೆಯೂ ಇದೆ. 

ಹಾಗಾಗಿ ಕೊರೊನಾ ಪೂರ್ವದ ದಿನಗಳಿಗೆ ಮರಳುತ್ತೇವೆ ಎಂದು ಕಾಯುತ್ತಾ ಕೂರುವುದಕ್ಕಿಂತ ಕೊರೊನೊತ್ತರ ದಿನಗಳಿಗೆ ಚಿತ್ರೋದ್ಯಮ ತಯಾರಾಗಬೇಕಿದೆ. ಸಿನಿಮಾದ ಸಾರಾಂಶ, ಮನರಂಜನೆ ಉಳಿಸಿಕೊಂಡು ಅದನ್ನು ಜನರಿಗೆ ತಲುಪಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. 

ಈ ಲಾಕ್‌ಡೌನ್‌ ನಡುವೆ ಓಟಿಟಿ ವೇದಿಕೆಗಳು ಮನರಂಜನೆ ಒದಗಿಸಲು ಪರಿಣಾಮಕಾರಿ ಮಾರ್ಗಗಳಾಗಿ ಹೊರಹೊಮ್ಮಿವೆ. ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್ ಬೂಮ್‌ ಆಗುತ್ತಿವೆ. ಸಿನಿಮಾ ಬಿಡುಗಡೆಗೆ ಓಟಿಟಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಷ್ಟೆ. ಜತೆಗೆ ಹೊಸ ಪ್ರೇಕ್ಷಕರನ್ನು ಸೆಳೆಯಬೇಕು. 

 * ಅಂದರೆ ಚಿತ್ರೋದ್ಯಮಕ್ಕೆ ಆತ್ಮಾವಲೋಕನದ ಅಗತ್ಯವಿದೆ?

ಖಂಡಿತ ಇದೆ. ಸ್ವಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ಕಾಲವಿದು. ಬಿಗ್‌ ಸ್ಕ್ರೀನ್‌ಗೆ ಸಿನಿಮಾ ಮಾಡುವುದು ಶತಮಾನದಿಂದ ನಡೆದುಬಂದಿತ್ತು. ಈಗ ಬಿಗ್‌ಸ್ಕ್ರೀನ್‌ಗೆ ಎಫೆಕ್ಟ್‌ ಆಗಿದೆ ಎನ್ನುವ ಕಾರಣಕ್ಕೆ ಸಿನಿಮಾರಂಗದ ಕಥೆಯೇ ಮುಗಿಯಿತೆಂದಲ್ಲ. ಸಿಂಗಲ್‌ ಟಿಪ್ಸ್‌ ಸ್ಕ್ರೀನ್‌ಗಳತ್ತ ಗಮನ ಹರಿಸುವ ಪರಿಸ್ಥಿತಿ ಬರುತ್ತಿರಬಹುದು. ನಾವು 2012ರಲ್ಲಿ ‘ಮೈನಾ’ ಚಿತ್ರವನ್ನು ಕ್ಯಾಮೆರಾ ರೀಲ್‌ ಬಳಸಿಯೇ ಮಾಡಿದ್ದೆವು. ಆನಂತರದಲ್ಲಿ ಚಿತ್ರರಂಗ ಡಿಜೀಟಲೀಕರಣದ ರೂಪಾಂತರವಾಗಿದೆ. 

ನಮ್ಮ ಪ್ರೇಕ್ಷಕರು ಬೆಲೆ ಕೊಡುವುದು ಸಿನಿಮಾದ ವ್ಯಾಪಾರೀಕರಣಕ್ಕಿಂತ ಅದರಲ್ಲಿನ ಕಂಟೆಂಟ್‌ಗೆ. ದೊಡ್ಡ ಚಿತ್ರಗಳ ಗಳಿಕೆ ನೋಡಿ ಚಿತ್ರರಂಗ ಬೆಳೆಯುತ್ತಿದೆ ಎಂದುಕೊಂಡಿದ್ದೆವು. ದಕ್ಷಿಣ ಭಾರತದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಿನಿಮಾ ವೀಕ್ಷಕರ ಸಂಖ್ಯೆ ಮತ್ತು ಸಿನಿಮಾ ಯಶಸ್ಸಿನ ಪ್ರಮಾಣ ಕಡಿಮೆ ಇದೆ. ಕಲೆ, ಕಂಟೆಂಟ್‌, ಸೃಜನಶೀಲತೆಗೆ ಹಾಗೂ ಬರಹಗಾರರಿಗೆ ಬೆಲೆಕೊಟ್ಟಾಗ ಕನ್ನಡ ಚಿತ್ರರಂಗ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಈ ಲಾಕ್‌ಡೌನ್‌ ಅವಧಿಯನ್ನು ಆತ್ಮಾವಲೋಕನ, ಸಂಶೋಧನೆ, ಕಲಿಕೆಗೆ ಬಳಸಿಕೊಳ್ಳಬೇಕು.

* ಲಾಕ್‌ಡೌನ್‌ ವೇಳೆ ಏನೇನು ಮಾಡಿದ್ದೀರಿ?

ಕಷ್ಟ ಕಾಲದಲ್ಲಿ ಮಾನವೀಯತೆ ಹೆಚ್ಚು ಪುಟಿಯಬೇಕು; ನನ್ನ ಅಪ್ಪ– ಅಮ್ಮ ಇಬ್ಬರೂ ವೈದ್ಯರು. ಇಬ್ಬರೂ ಅಮೆರಿಕದಲ್ಲೇ ಇದ್ದು, ಅಮ್ಮ ಅಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನಾವು ಇಲ್ಲಿ ‘ಪೈರ್‌’ ಸಂಸ್ಥೆ ವತಿಯಿಂದ ಚಿತ್ರೋದ್ಯಮದ ಕಾರ್ಮಿಕರಿಗೆ ಕೈಲಾದ ಸಹಾಯ ಮಾಡುತ್ತಿದ್ದೇವೆ. ಅಲೆಮಾರಿ ಜನರಿಗೆ ಒಂದಿಷ್ಟು ಆಹಾರ ಕಿಟ್‌ ಪೂರೈಸೆದೆವು. ಚಿತ್ರರಂಗದ 500 ಕಾರ್ಮಿಕರಿಗೆ ಅವರ ಬ್ಯಾಂಕ್‌ ಖಾತೆಗಳಿಗೆ ತಲಾ ಎರಡು ಸಾವಿರ ಹಾಕಿದೆವು.

* ದಾಂಪತ್ಯ ಜೀವನ ಹೇಗಿದೆ?

2020 ತುಂಬಾ ಕಷ್ಟದ ವರ್ಷ. ಇದೇ ವರ್ಷ ಮೂರು ತಿಂಗಳ ಹಿಂದೆ ನಾನು ಮೇಘಾ ಮದುವೆಯಾದೆವು. 70–80 ವರ್ಷ ದಾಂಪತ್ಯದಲ್ಲಿ ಬರುವ ಅನ್ಯೋನ್ಯತೆ ನಮಗೆ ಈ ಲಾಕ್‌ಡೌನ್‌ನಲ್ಲಿ ಸಿದ್ಧಿಸಿದೆ. ಸಹಬಾಳ್ವೆ ನಡೆಸಲು, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ.

* ಬಿಡುವಿನ ಅವಧಿ ಹೇಗೆ ಕಳೆಯುತ್ತಿದ್ದೀರಿ?

ಸಾಕುಪ್ರಾಣಿಗಳ ಜತೆಗೆ ಆಟ ಆಡುವುದು, ಸ್ಯಾಕ್ಸೊಪೋನ್‌ ಸಂಗೀತ ನುಡಿಸುವುದು, ಪುಸ್ತಕಗಳನ್ನು ಓದುವುದರಲ್ಲಿ ಬಿಡುವಿನ ಸಮಯ ಕಳೆಯುತ್ತಿದ್ದೇನೆ. ಲೇಖಕ ರಾಜಶೇಖರ್‌ ವುಂಡ್ರು ಅವರ ‘ಅಂಬೇಡ್ಕರ್‌, ಗಾಂಧಿ ಆ್ಯಂಡ್‌ ಪಟೇಲ್‌’ ಪುಸ್ತಕ ಓದುತ್ತಿದ್ದೇನೆ. 

* ನಿಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿ... 

ನಾನು ನಟಿಸಿರುವ ‘ರಣಂ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಇದೊಂದು ರೈತಪರ ಹೋರಾಟಗಾರನ ಕಥೆ ಆಧರಿಸಿದ ನಾಯಕಪ್ರಧಾನ ಚಿತ್ರ. ಕಮರ್ಷಿಯಲ್‌ ಆಯಾಮದಲ್ಲಿ ಸಾಹಸ ಪ್ರಧಾನವಾಗಿ ಚಿತ್ರಿಸಲಾಗಿದೆ. ಬಿ. ಸಮುದ್ರ ನಿರ್ದೇಶಿಸಿದ್ದು, ಕನಕಪುರ ಶ್ರೀನಿವಾಸ್‌ ನಿರ್ಮಿಸಿದ್ದಾರೆ. ವರಲಕ್ಷ್ಮಿ ಶರತ್‌ ಕುಮಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು