ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಎವಿಡೆನ್ಸ್’, ‘ಜಡ್ಜ್‌ಮೆಂಟ್‌’ ಸೇರಿ ಇಂದು ಮೂರು ಕನ್ನಡ ಚಿತ್ರಗಳು ತೆರೆಗೆ

Published 24 ಮೇ 2024, 1:17 IST
Last Updated 24 ಮೇ 2024, 1:17 IST
ಅಕ್ಷರ ಗಾತ್ರ

ದ ಜಡ್ಜ್‌ಮೆಂಟ್‌:

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದ ಜಡ್ಜ್‌ಮೆಂಟ್‌’ ಚಿತ್ರ ಇಂದು(ಮೇ 24) ತೆರೆಗೆ ಬರುತ್ತಿದೆ. ಜಿ9 ಕಮ್ಯೂನಿಕೇಷನ್‌ ಮೀಡಿಯಾ ಆ್ಯಂಡ್‌ ಎಂಟರ್‌ಟೈನ್ಮೆಂಟ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು, ಗುರುರಾಜ ಕುಲಕರ್ಣಿ ಈ ಚಿತ್ರಕ್ಕೆ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. 

‘ನ್ಯಾಯವಾದಿಯೊಬ್ಬ ನ್ಯಾಯಕ್ಕೋಸ್ಕರ, ನ್ಯಾಯಾಲಯದ ಪರಿಧಿಯಲ್ಲೇ ಹೋರಾಡುತ್ತಾನೆ. ಇರುವ ವ್ಯವಸ್ಥೆಯನ್ನು ದೂರದೇ, ಇದ್ದ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವ ಕಥೆ. ರವಿಚಂದ್ರನ್‌ ನ್ಯಾಯವಾದಿಯಾಗಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾರೆ ಕುಲಕರ್ಣಿ.

ನಟಿ ಮೇಘನಾ ಗಾಂವ್ಕರ್‌ ರವಿಚಂದ್ರನ್‌ಗೆ ಜೋಡಿಯಾಗಿದ್ದಾರೆ. ದಿಗಂತ್, ಧನ್ಯಾ ರಾಮ್‌ಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ.ಎಸ್‌.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರವಿಶಂಕರ್ ಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಪಿ.ಕೆ.ಎಚ್‌. ದಾಸ್‌ ಛಾಯಾಚಿತ್ರಗ್ರಹಣ, ಕೆಂಪರಾಜ್ ಸಂಕಲನ ಚಿತ್ರಕ್ಕಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಎವಿಡೆನ್ಸ್ :

ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೊಂದು ತ್ರಿಕೋನ ಪ್ರೇಮಕಥಾಹಂದರ ಒಳಗೊಂಡ ಎವಿಡೆನ್ಸ್ ತೆರೆಗೆ ಬರುತ್ತಿರುವ ಮತ್ತೊಂದು ಚಿತ್ರ ನಟ, ನಿರ್ದೇಶಕ ಉಪೇಂದ್ರ ಅವರ ಜೊತೆ ‘ಶ್‌..’ ಚಿತ್ರದಿಂದ ‘ಉಪೇಂದ್ರ-2’ ವರೆಗೂ ಕೆಲಸ ಮಾಡಿದ ಪ್ರವೀಣ್ ಸಿ. ಪಿ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಶ್ರೀಧೃತಿ ಪ್ರೊಡಕ್ಷನ್ ನಿರ್ಮಾಣದ ಚಿತ್ರದಲ್ಲಿ ನಾಯಕನಾಗಿ ‘ಜೋಶ್’ ಖ್ಯಾತಿಯ ರೋಬೊ ಗಣೇಶನ್ ಅವರು ನಟಿಸಿದ್ದು, ನಟಿ ಮಾನಸ ಜೋಶಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ, ರವಿ ಸುವರ್ಣ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ.

ಮೂರನೇ ಕೃಷ್ಣಪ್ಪ: 

ರಂಗಾಯಣ ರಘು ಹಾಗೂ ಸಂಪತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮೂರನೇ ಕೃಷ್ಣಪ್ಪ’ ಚಿತ್ರವು ತೆರೆಕಾಣುತ್ತಿದೆ. ನವೀನ್‌ ನಾರಾಯಣಘಟ್ಟ ನಿರ್ದೇಶನದ ಈ ಚಿತ್ರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನ ನಾರಾಯಣಪುರ ಎಂಬಲ್ಲಿ ನಡೆಯುವ ಕಥೆಯನ್ನು ಹೊಂದಿದೆ. 

ಊರಲ್ಲಿ ‘ಕೃಷ್ಣಪ್ಪ’ ಹೆಸರಿನ ಮೂವರಿದ್ದು, ಅದರಲ್ಲಿ ನಟ ಸಂಪತ್‌ ‘ಮೂರನೇ ಕೃಷ್ಣಪ್ಪ’ನಿಗೆ ಬಣ್ಣಹಚ್ಚಿದ್ದಾರೆ. ‘ವೀರಣ್ಣ’ನಾಗಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿ ನಟಿಸಿದ್ದು, ಸಂತೋಷ್‌, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ. ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಚಿತ್ರಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT