ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸ್ತೂರಿ ನಿವಾಸ’ದ ಕಲಾ ಸರಸ್ವತಿ

Last Updated 31 ಜುಲೈ 2021, 19:30 IST
ಅಕ್ಷರ ಗಾತ್ರ

ಅದು 1960ರ ಕಾಲ. ನಾನು ಆಕೆಯನ್ನು ಮೊದಲು ನೋಡಿದ್ದು, ಬಹಳ ವಿಚಿತ್ರವಾದ ಸನ್ನಿವೇಶದಲ್ಲಿ. ಡಾ.ರಾಜ್‌ಕುಮಾರ್‌ ನಟನೆಯ ‘ಕಣ್ತೆರೆದು ನೋಡು’ ಚಿತ್ರದ ಯಶಸ್ಸಿನ ಬಳಿಕ, ಇದೇ ಚಿತ್ರವನ್ನು ತಮಿಳಿನಲ್ಲಿ ರಿಮೇಕ್‌ ಮಾಡಲು ನಿರ್ಮಾಪಕ ಎ.ಕೆ.ವೇಲನ್‌ ನಿರ್ಧರಿಸಿದ್ದರು. ಅರುಣಾಚಲಂ ಸ್ಟುಡಿಯೊ ಮಾಲೀಕರಾಗಿದ್ದ ವೇಲನ್‌, ‘ಕಣ್ತೆರೆದು ನೋಡು’ ಚಿತ್ರದಲ್ಲಿ ದೊರೈ ಅವರ ಸಿನಿಮಾಟೊಗ್ರಫಿಯನ್ನು ಮೆಚ್ಚಿದ್ದರು. ಹೀಗಾಗಿ ತಮಿಳು ರಿಮೇಕ್‌ ಚಿತ್ರಕ್ಕೂ ಅವರನ್ನೇ ಆಯ್ಕೆ ಮಾಡಿದ್ದರು. ಚಿತ್ರದ ನೃತ್ಯವೊಂದರ ಚಿತ್ರೀಕರಣ ಮದ್ರಾಸ್‌ ವೇಲನ್‌ ಸ್ಟುಡಿಯೊದಲ್ಲಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ದೊರೈ ಹಾಗೂ ನಾನು ಬಹಳ ಆತ್ಮೀಯರಾಗಿದ್ದೆವು. ಅವರೆಲ್ಲಿ ಇರುತ್ತಾರೆಯೋ ಅಲ್ಲೇ ನಾನು ಇರುತ್ತಿದ್ದೆ. We had Become inseparable. ನೃತ್ಯದ ಪೂರ್ವಸಿದ್ಧತೆ ವೇಳೆ ‘ಭಗವಾನ್‌ ಬನ್ನಿ ಇಲ್ಲಿ’ ಎಂದು ದೊರೈ ಕರೆದರು. ‘ಕ್ಯಾಮೆರಾದಲ್ಲಿ ಝೂಮ್‌ ಮಾಡಿ, ಹುಡುಗಿಯನ್ನು ತೋರಿಸಿ, ನೋಡಿ ಹೇಗಿದ್ದಾಳೆ’ ಎಂದು ಕೇಳಿದರು. ನಾನು ಆಕೆಯನ್ನು ನೋಡಿ ‘ಬಹಳ ಚೆನ್ನಾಗಿದ್ದಾಳೆ’ ಎಂದೆ. ‘ನಮ್ಮ ಮುಂದಿನ ಚಿತ್ರಕ್ಕೆ ಇವಳನ್ನು ನಾಯಕಿಯನ್ನಾಗಿ ಮಾಡೋಣ, ಮ್ಯಾನೇಜರ್‌ ಬಳಿ ಮಾತನಾಡಿ’ ಎಂದು ದೊರೈ ನನ್ನ ಬಳಿ ಹೇಳಿದರು. ಮ್ಯಾನೇಜರ್‌ ಸುಂದರ್‌ರಾಜನ್‌ ಅವರ ಬಳಿ ಬಂದು ‘ಯಾರು ಆ ಹುಡುಗಿ’ ಎಂದು ವಿಚಾರಿಸಿದಾಗ, ‘ಕಮಲಾ ಎಂದು ಆಕೆಯ ಹೆಸರು. ಅದ್ಭುತ ನೃತ್ಯ ಕಲಾವಿದೆ. ಸ್ಯಾಂತ್‌ಹೋಮ್‌ನಲ್ಲಿ ಆಕೆಯ ಮನೆ’ ಎಂದರು. ನಮ್ಮ ಕಾಲೊನಿ ಸಮೀಪವೇ ಎಂದುಕೊಂಡು, ವಿಳಾಸ ತೆಗೆದುಕೊಂಡು ಹೋಗಿ ಮಾತನಾಡಿದೆ.

‘ಚಂದವಳ್ಳಿಯ ತೋಟ’ಕ್ಕೆ ಜಯಂತಿಯನ್ನು ಆಯ್ಕೆ ಮಾಡಿದ ಸಂದರ್ಭದಲ್ಲಿ ‘ಕನ್ನಡ ಚಿತ್ರದಲ್ಲಿ ನಟಿಸಬೇಕೇ’ ಎಂದು ಜಯಂತಿ ಅವರ ಪತಿ ಪೆಕೇಟಿ ಶಿವರಾಂ ಕೇಳಿದರು. ಆಗಿನ ಕಾಲದಲ್ಲಿ ತಮಿಳು ಹಾಗೂ ತೆಲುಗು ಸಿನಿಮಾಗಳು ಹೆಚ್ಚು ಜನಪ್ರಿಯವಾಗಿದ್ದ ಕಾರಣ ಕನ್ನಡಕ್ಕೆ ಬರಲು ಹಿಂಜರಿಕೆ ಅವರಿಗಿತ್ತು. ‘ತರಾಸು ಅವರ ಕಾದಂಬರಿ ಆಧಾರಿತ ಚಿತ್ರವಿದು. ರಾಜ್‌ಕುಮಾರ್‌ ಇದರ ಹೀರೊ’ ಎಂದು ತಿಳಿಸಿ, ನಾನು ಹೊರಡಲು ಮುಂದಾದೆ. ಈ ಸಂದರ್ಭದಲ್ಲಿ ‘ಯಾರು ಹೀರೊ ಎಂದಿರಿ. ರಾಜ್‌ಕುಮಾರ್‌ ಅವರೇ? ಡೇಟ್ಸ್‌ ಯಾವಾಗಕ್ಕೆ ಬೇಕು’ ಎಂದು ತಕ್ಷಣದಲ್ಲೇ ಶಿವರಾಂ ತಮ್ಮ ನಿರ್ಧಾರ ತಿಳಿಸಿದರು. ರಾಜ್‌ಕುಮಾರ್‌ ಎನ್ನುವ ಹೆಸರಿಗೆ ಆ ಶಕ್ತಿ ಇತ್ತು. ಅಲ್ಲಿಯವರೆಗೆ 45 ಚಿತ್ರಗಳನ್ನು ರಾಜ್‌ಕುಮಾರ್‌ ಮಾಡಿದ್ದರು.

ನಾನು ಜಯಂತಿಗೆ ‘ಕನ್ನಡದ ಗುರು’ವಾಗಿದ್ದು ಹೀಗೆ...
ಜಯಂತಿ ಹುಟ್ಟಿದ್ದು ಬಳ್ಳಾರಿಯಲ್ಲಿ ಆದರೂ ತೆಲುಗಿನ ಪ್ರಭಾವ ಹೆಚ್ಚಿತ್ತು. ಆಕೆಯ ಮನೆಭಾಷೆ ತೆಲುಗು ಆಗಿತ್ತು. ಕನ್ನಡ ಆಕೆಗಿನ್ನೂ ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಆಗಿನ ಕಾಲದಲ್ಲಿ ಡಬ್ಬಿಂಗ್‌ ಕೂಡಾ ಇರಲಿಲ್ಲ. ಶೂಟಿಂಗ್‌ನಿಂದ ನೇರವಾಗಿ ತೆರೆಗೆ ಚಿತ್ರವು ಹೋಗುತ್ತಿತ್ತು. 12ರಿಂದ 15 ದಿನಗಳಲ್ಲಿ ಚಿತ್ರಗಳ ಚಿತ್ರೀಕರಣ ಮುಗಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ನಾನು ಆಕೆಗೆ ಕನ್ನಡದ ಗುರು ಆದೆ. ಮೈಸೂರು ಕನ್ನಡದಲ್ಲಿ ಪ್ರತಿದಿನ ಮರುದಿನದ ದೃಶ್ಯಗಳ ಪ್ರತಿಯೊಂದು ಸಂಭಾಷಣೆಯನ್ನು ನಾನು ಹೇಳಿಕೊಡುತ್ತಿದ್ದೆ. ಇತರೆ ಸಿನಿಮಾಗಳ ಚಿತ್ರೀಕರಣ ಮುಗಿಸಿಕೊಂಡು ರಾತ್ರಿ 9 ಗಂಟೆಯ ವೇಳೆಗೆ ನಮ್ಮ ಮನೆಗೆ ಬಂದರೆ ರಾತ್ರಿ 11–12ರವರೆಗೆ ಈ ಕನ್ನಡ ಪಾಠಶಾಲೆ ನಡೆಯುತ್ತಿತ್ತು. ಹೀಗಾಗಿಯೇ ಆಕೆಯ ಕೊನೆಯ ಉಸಿರು ಇರುವವರೆಗೂ ನನ್ನನ್ನು ‘ಕನ್ನಡದ ಗುರು’ ಎಂದೇ ಕರೆಯುತ್ತಿದ್ದಳು. ‘ನನ್ನನ್ನು ಸ್ಟಾರ್‌ ಮಾಡಿದವನು ನೀನು’ ಎನ್ನುತ್ತಿದ್ದಳು.

ಆಕೆ ಎಂತಹ ಅದ್ಭುತ ಕಲಾವಿದೆ ಎನ್ನುವುದಕ್ಕೆ ಆಕೆ ನಟಿಸಿದ ಚಿತ್ರಗಳ ಸಂಖ್ಯೆಯೇ ಸಾಕ್ಷಿ. ಸುಮಾರು 500 ಚಿತ್ರಗಳಲ್ಲಿ ಆಕೆ ನಟಿಸಿದ್ದು, ರಾಜ್‌ಕುಮಾರ್‌ ಅವರ ಸುಮಾರು 200 ಚಿತ್ರಗಳ ಪೈಕಿ ಜಯಂತಿಯೇ 39 ಚಿತ್ರಗಳಲ್ಲಿ ನಟಿಸಿದ್ದಾಳೆ. ಇದು ಆಕೆಯ ನಟನೆಯ ಶಕ್ತಿಯ ಪ್ರದರ್ಶನ. ರಾಜ್‌ಕುಮಾರ್‌ ಅವರ ಜೊತೆ ನಟಿಸಬೇಕಿದ್ದರೆ ಬಹಳ ಯೋಗ್ಯತೆ ಬೇಕಿತ್ತು. ಈ ಯೋಗ್ಯತೆಯನ್ನು ಪಡೆದಿದ್ದವಳು ಜಯಂತಿ. ‘ಚಂದವಳ್ಳಿಯ ತೋಟ’ದಲ್ಲಿ ಹಾಕಿಕೊಟ್ಟ ಈ ವೇದಿಕೆಯನ್ನು ಸಮರ್ಪಕವಾಗಿ ಬಳಸಿಕೊಂಡವಳು ಆಕೆ.

ನಂತರ ಬಂದಿದ್ದು, ‘ಮಂತ್ರಾಲಯ ಮಹಾತ್ಮೆ’. ಈ ಚಿತ್ರದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಪತ್ನಿಯ ಪಾತ್ರವನ್ನು ಜಯಂತಿ ಮಾಡಿದಳು. ಆ ದಿವ್ಯತೆ ಆಕೆಯ ಮುಖದಲ್ಲಿ ಕಾಣಿಸುತ್ತಿತ್ತು. ಸನ್ಯಾಸ ಸ್ವೀಕರಿಸುವ ಸಂದರ್ಭದಲ್ಲಿ ಹೆಂಡತಿಯ ಮುಖ ನೋಡಬಾರದು ಎಂದು ಹೇಳುವ ಸಂದರ್ಭದಲ್ಲಿ ಆಕೆಯ ಅಭಿನಯ ಅತ್ಯದ್ಭುತ. ಇದರಲ್ಲಿ ಒಂದು ಹಾಡಿನಲ್ಲಿ ಕಲ್ಪನಾ, ಜಯಂತಿ ನಡುವೆ ಸೌಂದರ್ಯ ಸ್ಪರ್ಧೆ ಏರ್ಪಟ್ಟಂತಿತ್ತು. ಜಯಂತಿ ಸೌಂದರ್ಯದ ಜೊತೆಗೆ ದಕ್ಷತೆ ಹಾಗೂ ಅಭಿನಯದಲ್ಲಿ ಪ್ರಾವೀಣ್ಯತೆ ಹೊಂದಿದ್ದಳು. ‘ಅಭಿನಯ ಶಾರದೆ’ಗೆ ಅನ್ವರ್ಥವಾಗಿ ಆಕೆ ಅಭಿನಯಿಸುತ್ತಿದ್ದಳು.

2 ಪೀಸ್‌ ಟು 1 ಪೀಸ್‌
ಜಯಂತಿ ‘ಮಿಸ್‌ ಲೀಲಾವತಿ’ ಚಿತ್ರದಲ್ಲೇ ಅನೇಕ ನವಕಾಲೀನ ವಸ್ತ್ರಗಳನ್ನು ಧರಿಸಿದ್ದಳು. ‘ಜೇಡರ ಬಲೆ’ ಚಿತ್ರದಲ್ಲಿ ನಾವು ಕೊಂಚ ಮುಂದೆ ಹೋದೆವು. ನಮ್ಮ ನಡುವೆ ಅಷ್ಟು ಹೊತ್ತಿಗಾಗಲೇ ಸಲುಗೆ ಬೆಳೆದಿದ್ದ ಕಾರಣ, ‘ಈ ಚಿತ್ರದಲ್ಲಿ 2 ಪೀಸ್‌ ಸ್ವಿಮ್‌ಸೂಟ್‌ ಹಾಕಬೇಕು’ ಎಂದು ಕೇಳಿದೆವು. ಮೊದಲಿಗೆ ಕೊಂಚ ಹಿಂಜರಿದಳು. ‘ನಾನು ದಪ್ಪವಿದ್ದೇನೆ. ಸ್ವಿಮ್‌ಸೂಟ್‌ ಹಾಕಿದರೆ ಚೆಂದ ಕಾಣಲಿಕ್ಕಿಲ್ಲ’ ಎಂದಳು. ಶಿವರಾಂ ಕೂಡಾ ಇದಕ್ಕೆ ಮೊದಲು ವಿರೋಧಿಸಿದ್ದರು. ‘ಮಿಸ್‌ ಲೀಲಾವತಿ’ಯಲ್ಲಿರುವಂತಹ ವಸ್ತ್ರಗಳನ್ನೇ ಹಾಕಿ ಎಂದರು.

‘ಇದು ಜೇಮ್ಸ್‌ಬಾಂಡ್‌ ಸಿನಿಮಾ, ಇದರಲ್ಲಿ ಗ್ಲ್ಯಾಮರ್‌ ಬೇಕು. ಇಲ್ಲಿ ಹೀರೋಯಿನ್‌ ಸ್ವಿಮ್‌ಸ್ಯೂಟ್‌ ಹಾಕಿಕೊಂಡರೆ ತಪ್ಪೇನಿದೆ’
ಎಂದು ಕೇಳಿದೆ. ಶಿವರಾಂ ಈ ಜವಾಬ್ದಾರಿಯನ್ನು ಜಯಂತಿಗೆ ನೀಡಿದರು. ನಂತರ ‘ಪಾತ್ರಕ್ಕೆ ಅಗತ್ಯವಿದ್ದರೆ ಹಾಕಿಕೊಳ್ಳುತ್ತೇನೆ. ಆದರೆ ಟು ಪೀಸ್‌ ಬೇಡ. ಮೈಮುಚ್ಚಿಕೊಳ್ಳುವ ಸಿಂಗಲ್‌ ಪೀಸ್‌ ಇರಲಿ’ ಎಂದು ಜಯಂತಿ ಒಪ್ಪಿಕೊಂಡರು. ಅಂದಿನಿಂದ ಬಾಂಡ್‌ ಸಿನಿಮಾ ತೆಗೆದರೆ ಸ್ವಿಮ್‌ಸ್ಯೂಟ್‌ ಧರಿಸುವುದು ಮೊದಲ ಅರ್ಹತೆಯಾಗಿತ್ತು. ಮುಂದಿನ ಚಿತ್ರದಲ್ಲಿ ಲಕ್ಷ್ಮಿ, ರೇಖಾ ನಾಯಕಿಯಾಗಿ ಈ ರೀತಿಯೇ ನಟಿಸಿದರು.

ಇಂತಹ ಗ್ಲ್ಯಾಮರಸ್‌ ಪಾತ್ರದ ಬಳಿಕ ಕೌಟುಂಬಿಕ ಚಿತ್ರದಲ್ಲಿ ಭಾವನಾತ್ಮಕವಾದ ಪಾತ್ರವೊಂದನ್ನು ಆಕೆಗೆ ನೀಡಬೇಕು ಎಂದು ಅನಿಸಿದಾಗ ಕೈಗೆ ಸಿಕ್ಕ ಚಿತ್ರ ‘ಕಸ್ತೂರಿ ನಿವಾಸ’. ಈ ಚಿತ್ರವನ್ನು ನೋಡದೇ ಇರುವ ಕನ್ನಡಿಗನೇ ಇಲ್ಲ ಎನ್ನುವುದು ನನ್ನ ಭಾವನೆ. ಇದರಲ್ಲಿ ಆಕೆಯ ನಟನೆ ರಾಜ್‌ಕುಮಾರ್‌ ಅವರಿಗೇ ಸ್ಪರ್ಧೆ ನೀಡುವಂತಿತ್ತು. ನಮ್ಮ ಚಿತ್ರಗಳು ಮಾತ್ರವಲ್ಲ, ಎಲ್ಲ ಚಿತ್ರಗಳಲ್ಲೂ ಆಕೆ ಪಾತ್ರವನ್ನು ನಿಭಾಯಿಸುತ್ತಿದ್ದ ರೀತಿ ಶ್ಲಾಘನೀಯ. ಇವುಗಳಲ್ಲಿ ನನಗೆ ಬಹಳ ಇಷ್ಟವಾದ ಆಕೆಯ ಪಾತ್ರ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ್ದು. ಅದೇ ರೀತಿ ‘ಮಸಣದ ಹೂವು’ ಚಿತ್ರದ ಪಾತ್ರವೂ ಅಮೋಘ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಬಹಳ ಧೈರ್ಯ ಬೇಕು. ಇದರಲ್ಲಿನ ನಟನೆಗೆ ಆಕೆಗೆ ರಾಜ್ಯ ಪ್ರಶಸ್ತಿ ಬಂತು. ಇದು ಆಕೆಯ ನಟನೆಯ ಶಕ್ತಿ. She played such daring roles.

ಇಷ್ಟೊಂದ್‌ ಚಿತ್ರದಲ್ಲಿ ನಟಿಸಿರುವೆನೇ?
ಇಷ್ಟೊಂದ್‌ ಚಿತ್ರದಲ್ಲಿ ನಟಿಸಿರುವೆನೇ?

ಕಾಲ್‌ಶೀಟ್‌ ಸಿಗುತ್ತಿರಲಿಲ್ಲ
ಜಯಂತಿಯನ್ನು ಮತ್ತಷ್ಟು ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಹಾಕಬೇಕು ಎನ್ನುವ ಆಸೆ ನನಗೆ ಇತ್ತು. ಆದರೆ ತೆಲುಗು, ತಮಿಳು ಹಾಗೂ ಕನ್ನಡದ ಸಿನಿಮಾಗಳಲ್ಲಿ ಆಕೆ ಎಷ್ಟು ತಲ್ಲೀನರಾಗಿದ್ದರು ಎಂದರೆ, ನನಗೆ ‘ಎರಡು ಕನಸು’ ಚಿತ್ರಕ್ಕೆ ಕಾಲ್‌ಶೀಟ್‌ ಸಿಗಲಿಲ್ಲ. ಕೊನೆಗೆ ಕಲ್ಪನಾ ಅವರನ್ನು ಆಯ್ಕೆ ಮಾಡಿದೆವು.

ತೆಲುಗು, ತಮಿಳು ಚಿತ್ರಗಳಲ್ಲೂ ಛಾಪು
ಆಂಗ್ಲ ಪ್ರಾಧ್ಯಾಪಕರಾಗಿದ್ದ ಬಾಲಸುಬ್ರಮಣ್ಯಂ ಹಾಗೂ ಸಂತಾನಲಕ್ಷ್ಮಿ ಪುತ್ರಿಯಾದ ಕಮಲಾ ಕುಮಾರಿ(ಜಯಂತಿ) ಜನಿಸಿದ್ದು 1945ರ ಜನವರಿ 6ರಂದು ಬಳ್ಳಾರಿಯಲ್ಲಿ. ಸಿನಿ ಪಯಣದ ಆರಂಭದಲ್ಲಿ ವೈ.ಆರ್‌.ಸ್ವಾಮಿ ನಿರ್ದೇಶನದ ‘ಜೇನುಗೂಡು’(1963) ನಂತರದಲ್ಲಿ ರಾಜ್‌ಕುಮಾರ್‌ ಅವರ ಜೊತೆಗೆ ‘ಚಂದವಳ್ಳಿಯ ತೋಟ’ ಚಿತ್ರಗಳ ಯಶಸ್ಸಿನ ಬಳಿಕ ಜಯಂತಿ ಅವರು ನಟನೆಯ ಪಯಣದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ ಅವರು ನಟಿಸಿದ 500 ಚಿತ್ರಗಳೇ ಇದಕ್ಕೆ ಸಾಕ್ಷಿ.

ತೆಲುಗು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಜಯಂತಿ, ಖ್ಯಾತ ತೆಲುಗು ನಟ ಎನ್‌.ಟಿ.ರಾಮರಾವ್‌ ಅವರ ಜೊತೆಗೂ ತೆರೆಹಂಚಿಕೊಂಡು, ‘ಜಗದೇಕ ವೀರುನಿ ಕಥಾ’, ‘ಕುಲ ಗೌರವಂ’, ‘ಕೊಂಡವೀಟಿ ಸಿಂಹಂ’, ‘ಜಸ್ಟಿಸ್‌ ಚೌಧರಿ’ ಸೇರಿದಂತೆ ಹಲವು ಹಿಟ್‌ ಚಿತ್ರಗಳನ್ನು ನೀಡಿದ್ದರು. ತಮಿಳು ಚಿತ್ರರಂಗದಲ್ಲಿ ಜೆಮಿನಿ ಗಣೇಶನ್‌, ಎಂ.ಜಿ.ರಾಮಚಂದ್ರನ್‌, ಮುತ್ತುರಾಮನ್‌, ಜೈಶಂಕರ್‌ ಸೇರಿದಂತೆ ದಕ್ಷಿಣ ಭಾರತದ ಹಲವು ಖ್ಯಾತ ನಟರಿಗೆ ಜೋಡಿಯಾಗಿ ಜಯಂತಿ ನಟಿಸಿದ್ದರು. ಈ ಪೈಕಿ ‘ಪಡಗೊಟಿ’, ‘ಮುಗರಾಸಿ’, ‘ಕಣ್ಣ ನಲಮ’, ‘ಪುನ್ನಗೈ’, ‘ವೆಳ್ಳಿ ವಿಝ’, ‘ಇರು ಕೊಡುಗಳ್‌’ ಹಿಟ್‌ ಚಿತ್ರಗಳು.

ಬಾಲಿವುಡ್‌ನಲ್ಲೂ ‘ಅಭಿನಯ ಶಾರದೆ’ಯ ಹೆಜ್ಜೆಗುರುತಗಳಿದ್ದು, ‘ಲಾಲ್‌ ಲಾಲ್‌ ಬಂಗ್ಲಾ’, ‘ತೀನ್‌ ಬಹುರಾಣಿಯಾನ್‌’, ‘ಗುಂಡಾ’ ಹಾಗೂ ‘ತುಮ್ಸೆ ಅಚ್ಚಾ ಕೌನ್‌ ಹೇ’ ಚಿತ್ರಗಳಲ್ಲಿ ನಟಿಸಿದ್ದರು.

ಜಯಂತಿ ಜತೆ ಭಗವಾನ್‌ ಆತ್ಮೀಯ ಕ್ಷಣ
ಜಯಂತಿ ಜತೆ ಭಗವಾನ್‌ ಆತ್ಮೀಯ ಕ್ಷಣ

ರಾಜ್‌ಕುಮಾರ್‌ ಜೊತೆಗೆ ಸಲುಗೆ ಜಾಸ್ತಿ
ಜಯಂತಿ, ರಾಜ್‌ಕುಮಾರ್‌ ಅವರನ್ನು ತನ್ನದೇ ಧಾಟಿಯಲ್ಲಿ ವಿಶೇಷವಾಗಿ ‘ರಾಜ್‌’ ಎನ್ನುತ್ತಿದ್ದಳು. ಈ ರೀತಿ ಕರೆಯುವುದರಲ್ಲೇ ಪ್ರೀತಿ, ಆತ್ಮೀಯತೆ, ಗೌರವ, ವಿಶ್ವಾಸ ಇತ್ತು. ರಾಜ್‌ಕುಮಾರ್‌ ಅವರ ಜೊತೆಗಿನ 50 ವರ್ಷಗಳ ಸಂಬಂಧದಲ್ಲಿ ನನ್ನನ್ನು ಅವರೆಂದೂ ಏಕವಚನದಲ್ಲಿ ಕರೆದಿಲ್ಲ. ಆದರೆ ಸಲುಗೆಯಿಂದ ರಾಜ್‌ಕುಮಾರ್‌ ಅವರ ಎದುರಲ್ಲೇ ಜಯಂತಿ ನನ್ನನ್ನು, ‘ಏನೋ ಭಗವಾನ್‌ ಬಾರೋ ಇಲ್ಲಿ’ ಎನ್ನುತ್ತಿದ್ದಳು. ನಾನೂ ‘ಏನೇ’ ಎನ್ನುತ್ತಿದ್ದೆ. ಆಕೆ ಸ್ವಭಾವತಃ ಸ್ನೇಹಜೀವಿ. ಎಲ್ಲರನ್ನೂ ಸ್ನೇಹಿತರಂತೆ ಕಾಣುತ್ತಿದ್ದಳು. ಜಯಂತಿ ಹಾಗೂ ಸರೋಜಾದೇವಿ ಸಂಬಂಧ ಇಲ್ಲಿ ಉಲ್ಲೇಖಾರ್ಹ. ಸರೋಜಾದೇವಿಯವರೇ ಜಯಂತಿಯನ್ನು ಹೊಗಳುತ್ತಾರೆ ಎಂದರೆ ಜಯಂತಿ ಮಟ್ಟ ಎಲ್ಲಿತ್ತು ಎಂದು ಯೋಚಿಸಿ. ಇದೇ ರೀತಿ ಜಯಂತಿ ಹಾಗೂ ಭಾರತಿ ಸ್ನೇಹ. ಇವರಿಬ್ಬರೂ ಒಟ್ಟಿಗೇ ಚಿತ್ರರಂಗಕ್ಕೆ ಕಾಲಿಟ್ಟವರು. ಒಂದೇ ತರಗತಿಯಲ್ಲಿ ಓದಿದವರಂತೆ ಇವರ ನಡುವಿನ ಸ್ನೇಹವಿತ್ತು.

ರಾಜ್‌ಕುಮಾರ್‌ ಮೆಚ್ಚಿದ್ದ ಕಲಾವಿದೆ
‘ಕಸ್ತೂರಿ ನಿವಾಸ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ರಾಜ್‌ಕುಮಾರ್‌ ನನಗೊಂದು ಮಾತು ಹೇಳಿದ್ದರು. ‘ಭಗವಾನ್‌, ನಿಮ್ಮ ನಿರ್ದೇಶನ ಏಕೆ ನನಗೆ ಇಷ್ಟ ಎಂದರೆ, ನೀವು ಆಯಾ ಪಾತ್ರಕ್ಕೆ ಒಳ್ಳೆಯ ಕಲಾವಿದರನ್ನು ಆರಿಸುತ್ತೀರಿ. ಹಾಗೆಯೇ ಜಯಂತಿ ಅವರದೂ ಭಿನ್ನವಾದ ಪಾತ್ರ (ಕಂಪನಿಯ ಮಾಲೀಕ, ಕೈಕೆಳಗೆ ಕೆಲಸ ಮಾಡುವ ಹುಡುಗಿಯನ್ನು ಪ್ರೀತಿಸುತ್ತಾನೆ. ಆಕೆ ಗೋಪ್ಯವಾಗಿ ಬೇರೆಯವರನ್ನು ಪ್ರೀತಿಸುತ್ತಾಳೆ). ಈ ಪಾತ್ರಕ್ಕೆ ಜಯಂತಿ ಅವರನ್ನು ಆಯ್ಕೆ ಮಾಡಿದ್ದು ಬಹಳ ಸಂತೋಷ ಆಗಿದೆ’ ಎಂದಿದ್ದರು. ತಮ್ಮ ಪಾತ್ರಕ್ಕೆ ಸರಿದೂಗುವ ಕಲಾವಿದೆ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀರೊ ಜೊತೆಗೆ ಹೀರೋಯಿನ್‌ ಚೆನ್ನಾಗಿ ನಟಿಸಿದರೆ ಹೀರೊ ಮೌಲ್ಯ ಹೆಚ್ಚುತ್ತದೆ. ‘ಕಸ್ತೂರಿ ನಿವಾಸ’ ಚಿತ್ರದಲ್ಲಿ ಆಗಿದ್ದೂ ಈ ರೀತಿಯೇ. ಅದು ಜಯಂತಿಯ ನಟನೆ. ಹಲವು ಸಂದರ್ಭಗಳಲ್ಲಿ ಜಯಂತಿ ಅವರ ನಟನೆ ಕ್ಷೀಣಿಸಿದಾಗ, ರಾಜ್‌ಕುಮಾರ್‌ ಅವರೇ ಹೇಳಿಕೊಡುತ್ತಿದ್ದರು. ತನ್ನಲ್ಲಿರುವ ಆಸೆ, ಅಭಿಲಾಷೆ, ಪ್ರೀತಿಯನ್ನು ‘ಎಲ್ಲೇ ಇರು ಹೇಗೆ ಇರು’ ಹಾಡಿನಲ್ಲಿ ಜಯಂತಿ ತನ್ನಪಾತ್ರದ ಮುಖಾಂತರ ವ್ಯಕ್ತಪಡಿಸಿದ ಬಗೆ ಅದ್ಭುತ.

ಪ್ರತಿಯೊಂದು ನಾಣ್ಯಕ್ಕೂ ಎರಡು ಮುಖ
ಸಾಮಾನ್ಯವಾಗಿ ಕೆಲ ಕಲಾವಿದರ ಬದುಕಿನಲ್ಲಿ ಎರಡು ಮುಖಗಳಿರುತ್ತವೆ. ಸಂತೋಷದ ಸಮಯದಲ್ಲಿ ದುಃಖವೂ ಬರುತ್ತದೆ. ಇವರ ಕುಟುಂಬದ ಒಳಕಥೆ ನಮಗೆ ಗೊತ್ತಿಲ್ಲ. ಒಬ್ಬರಿಗೊಬ್ಬರು ಹೇಗಿದ್ದರೋ ತಿಳಿದಿಲ್ಲ. ಶಿವರಾಂ ಅವರಿಂದ ಬೇರೆಯಾಗಿದ್ದು ಜಯಂತಿಗೆ ಆದ ಮೊದಲ ಆಘಾತ. ಶಿವರಾಂ ಆರಂಭಿಕ ಕಾಲದಲ್ಲಿ ಜಯಂತಿ ಅವರ ಸಿನಿಮಾ ಬದುಕನ್ನು ರೂಪಿಸಿದ್ದರು. ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸುವ ಅವಕಾಶ ಕಲ್ಪಿಸಿದರು. ಜಯಂತಿಗೆ ಎರಡನೇ ಆಘಾತ ಆಗಿದ್ದು, ಸೊಸೆಯಾಗಿದ್ದ, ಮಗಳಿಗಿಂತ ಹೆಚ್ಚಾಗಿ ಪ್ರೀತಿಸಿದ್ದ ಅನು ಪ್ರಭಾಕರ್‌ ಬೇರೆ ಹೋಗಿದ್ದು. ಈ ಘಟನೆಗಳು ಆಕೆಯ ಬದುಕನ್ನು ಛಿದ್ರಗೊಳಿಸಿದ್ದವು. ಅವು ಆಕೆಯ ಹಿನ್ನಡೆಗೂ ಕಾರಣವಾಗಿದ್ದವು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ. ತಪ್ಪೂ ಆಗಿರಬಹುದು. ನನಗೆ ಈ ವಿಚಾರ ಹೇಳುವಾಗ ಬಹಳ ಉಮ್ಮಳವಾಗುತ್ತದೆ. ಆಕೆಯ ನಿಧನ, ಕನ್ನಡ ಚಿತ್ರರಂಗಕ್ಕೆ ಅಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಆದ ನಷ್ಟ. ಕೊನೆ ಉಸಿರು ಇರುವವರೆಗೂ ಕ್ಯಾಮೆರಾ ಮುಂದೆಯೇ ಇರಬೇಕು ಎನ್ನುವುದು ಪ್ರತಿ ಕಲಾವಿದನ ಆಸೆ. ಇದು ಜಯಂತಿ ಜೀವನದಲ್ಲಿ ಸಾರ್ಥಕವಾಗಿದೆ. ಸೇನೆಯಲ್ಲಿ ಒಂದು ಮಾತಿದೆ. ‘He died with his boots on’. ಇದು ಯುದ್ಧ ಭೂಮಿಯಲ್ಲೇ ಮಡಿದವನಿಗೆ ಕೊಡುವ ಗೌರವ. ಇದೇ ರೀತಿ ಜಯಂತಿ. ‘She has expired with her colors on’.

ಲೇಖಕ: ಹಿರಿಯ ಚಿತ್ರ ನಿರ್ದೇಶಕ

ನಿರೂಪಣೆ: ಅಭಿಲಾಷ್‌ ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT