ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಸ್ಟಲ್‌ವುಡ್‌ನಲ್ಲಿ ಗರಿಗೆದರಿದ ಚಟುವಟಿಕೆ

‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್ಸ್’ ಚಿತ್ರದ ಶೂಟಿಂಗ್‌ ಆರಂಭ
Last Updated 7 ಸೆಪ್ಟೆಂಬರ್ 2020, 6:06 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ –19 ಕಾರಣದಿಂದ ಸ್ತಬ್ಧಗೊಂಡಿದ್ದ ಕೋಸ್ಟಲ್‌ವುಡ್‌ನ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಇದೀಗ ಕೋವಿಡ್‌ ಮುನ್ನೆಚ್ಚರಿಕೆ ಕ್ರಮದೊಂದಿಗೆ ‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್ಸ್’ ತುಳು ಚಿತ್ರದ ಶೂಟಿಂಗ್‌ ಆರಂಭಗೊಂಡಿದೆ. ಮುಂದಿನ ಒಂದೆರಡು ತಿಂಗಳಲ್ಲಿ 5–6 ತುಳು ಚಿತ್ರಗಳು ಸೆಟ್ಟೇರುವ ಸಿದ್ಧತೆಯಲ್ಲಿವೆ.

ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಐದು ತಿಂಗಳಿನಿಂದ ಚಿತ್ರಮಂದಿರಗಳು ಬಂದ್‌ ಆಗಿವೆ. ಚಿತ್ರೀಕರಣಕ್ಕೆ ಸರ್ಕಾರ ನಿಷೇಧ ಹೇರಿತ್ತು. ಇದೀಗ ಶೂಟಿಂಗ್‌ಗೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದ್ದರಿಂದ ಕೋಸ್ಟಲ್‌ವುಡ್‌ನಲ್ಲಿ ಚಟುವಟಿಕೆ ಆರಂಭವಾಗಿದೆ. ಈತನಕ ಚಿತ್ರಕಥೆ, ಸ್ಕ್ರಿಪ್ಟ್‌, ಸಂಭಾಷಣೆ ಕೆಲಸದಲ್ಲಿ ಮಗ್ನರಾಗಿದ್ದ ಕಲಾವಿದರು, ಇದೀಗ ಶೂಟಿಂಗ್‌ ಕಾರ್ಯಕ್ಕೆ ಸಜ್ಜಾಗಿದ್ದಾರೆ.

ರಾಹುಲ್‌ ಅಮೀನ್‌ ಚೊಚ್ಚಲ ನಿರ್ದೇಶನದ ‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್ಸ್’ ಚಿತ್ರಕ್ಕೆ ಈಚೆಗೆ ಪೊಳಲಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಬಂಟ್ವಾಳ ತಾಲ್ಲೂಕಿನ ಹಳ್ಳಿಯೊಂದರಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ಇದೇ 7ರಿಂದ ಶೂಟಿಂಗ್‌ ನಡೆಯಲಿದೆ. ಕೋವಿಡ್‌ ಮುನ್ನೆಚ್ಚರಿಕೆ ವಹಿಸಿಕೊಂಡು ಹಂತ ಹಂತವಾಗಿ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಲಾಕ್‌ಡೌನ್‌ ಬಳಿಕ ಸೆಟ್ಟೇರಿದ ಮೊದಲ ತುಳು ಚಿತ್ರ ಇದಾಗಿದೆ.

ಇದೇ ಸೆಪ್ಟೆಂಬರ್‌ನಲ್ಲಿ ಪ್ರಸಾದ್‌ ಬಜಾಲ್‌ ಅವರ ‘ಟೈಟಾನಿಕ್‌’ ಚಿತ್ರಕ್ಕೆ ಶೂಟಿಂಗ್‌ ಆರಂಭದ ಸಾಧ್ಯತೆಯಿದೆ. ‘ತೆಲಿಕೆದ ಬೊಳ್ಳಿ’ ದೇವದಾಸ ಕಾಪಿಕಾಡ್‌ ಅವರ ನಿರ್ದೇಶನದ ‘ಒಂದೆ ಕುಲ್ಲುಲೆ ಆವು, ಆವು, ಆವು’ ಚಿತ್ರವು ನವೆಂಬರ್‌ನಲ್ಲಿ, ಗಿರಿಗಿಟ್‌ ಖ್ಯಾತಿಯ ರೂಪೇಶ್‌ ಶೆಟ್ಟಿ ನಿರ್ದೇಶನದ ‘ಸರ್ಕಸ್‌’ ಚಿತ್ರ ಡಿಸೆಂಬರ್‌ನಲ್ಲಿ ಸೆಟ್ಟೇರುವ ನಿರೀಕ್ಷೆಯಿದೆ.

‘ರಾಜ್‌ ಸೌಂಡ್ಸ್‌ ಅಂಡ್‌ ಲೈಟ್ಸ್’ ಕಾಮಿಡಿ ಮತ್ತು ಮನರಂಜನೆಯ ಕಥಾವಸ್ತುವನ್ನು ಹೊಂದಿರುವ ಚಿತ್ರವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಚಿತ್ರಕತೆ, ಸಂಭಾಷಣೆ, ಇನ್ನಿತರ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದೇವೆ. ಪ್ರಸನ್ನ ಶೆಟ್ಟಿ ಬೈಲೂರು ಅವರು ಸಂಭಾಷಣೆಯಲ್ಲಿ ನೆರವಾಗಿದ್ದಾರೆ. ಚಿತ್ರದ ಬಹುತೇಕ ಭಾಗ ಬಂಟ್ವಾಳದಲ್ಲಿಯೇ ಚಿತ್ರೀಕರಣ ನಡೆಯಲಿದೆ. ‘ಒಂದು ಮೊಟ್ಟೆಯ ಕಥೆ’ ಚಿತ್ರತಂಡದ ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ನಾಯಕ ನಟ ವಿನೀತ್‌ ಕುಮಾರ್ ಹೇಳಿದ್ದಾರೆ.

ಚಿತ್ರದಲ್ಲಿ ಕರಿಷ್ಮಾ ಅಮೀನ್‌, ದಿನಾ ಶಿವಕುಮಾರ್‌ ನಾಯಕಿಯಾಗಿ ಬಣ್ಣಹಚ್ಚುತ್ತಿದ್ದು, ತುಳು ರಂಗಭೂಮಿಯ ಮೇರು ಕಲಾವಿದರಾದ ನವೀನ್‌ ಡಿ.ಪಡೀಲ್‌, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್‌ ಮತ್ತಿತರರು ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇದೇ ಚಿತ್ರವನ್ನು ಸ್ಯಾಂಡಲ್‌ವುಡ್‌ಗೂ ಕೊಂಡೊಯ್ಯುವ ಚಿಂತನೆಯನ್ನು ಚಿತ್ರತಂಡ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT