ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ನಿರ್ದೇಶಕರ ಎರಡು ಹೊಸ ಕಥೆ

ಪುನೀತ್‌ ಚಿತ್ರ ಕಥೆಯಲ್ಲಿ ಸತ್ಯಪ್ರಕಾಶ್‌ ಬ್ಯುಸಿ; ವಲಸೆ ಸಂಕಷ್ಟ: ಮಂಸೋರೆ ಚಿತ್ರ
Last Updated 31 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಕೊರೊನಾ ಕಾರಣಕ್ಕೆ ಚಿತ್ರನಿರ್ದೇಶಕರು, ಕಥೆಗಾರರು ಕೈಕಟ್ಟಿ ಕುಳಿತಿಲ್ಲ. ಸೋಂಕು ಅಪ್ಪಳಿಸಿದ ಸಂದರ್ಭದಲ್ಲೇ ನಡೆದಿರುವ ಹೃದಯ ಹಿಂಡುವ ಘಟನೆಗಳನ್ನೇ ಕೇಂದ್ರವಾಗಿ ಇಟ್ಟುಕೊಂಡು ಕಥೆ, ಚಿತ್ರಕಥೆ ಹೆಣೆಯುತ್ತಿದ್ದಾರೆ. ಈ ರಿಯಲಿಸ್ಟಿಕ್‌ ಕಥೆಗಳನ್ನು ಆದಷ್ಟು ಬೇಗ ತೆರೆಯ ಮೇಲೂ ಕನ್ನಡಿಗರು ನೋಡುವ ಸಾಧ್ಯತೆ ಇದೆ.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಸಿನಿಮಾಗಳಿಂದ ಗಮನ ಸೆಳೆದಿರುವ ನಿರ್ದೇಶಕರಾದ ಮಂಸೋರೆ ಮತ್ತು ಸತ್ಯಪ್ರಕಾಶ್ ಈ ಕ್ವಾರಂಟೈನ್ ಅವಧಿಯನ್ನು ತಮ್ಮ ಹೊಸ ಚಿತ್ರದ ಕಥೆ, ಸಂಭಾಷಣೆ ಬರೆಯಲು ಬಳಸಿಕೊಳ್ಳುತ್ತಿದ್ದಾರೆ. ಪ್ರಶಸ್ತಿ ವಿಜೇತ ಚಿತ್ರಗಳಾದ ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲಾ ಎರಡಲ್ಲಾ’ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಸತ್ಯಪ್ರಕಾಶ್‌ ಅವರದ್ದು. ಕೊರೊನಾದಿಂದ ಉಂಟಾಗಿರುವ ಸನ್ನಿವೇಶ ಯಾವ ರೀತಿ ತಮ್ಮ ಮನಸ್ಸಿನಲ್ಲಿ ಅಕ್ಷರವಾಗಿ ಹರಳುಗಟ್ಟುತ್ತಿದೆ ಎನ್ನುವುದನ್ನು ಈ ಇಬ್ಬರು ಹಂಚಿಕೊಂಡಿದ್ದಾರೆ.

‘ನನಗೆ ಸದ್ಯದ ಸ್ಥಿತಿಗಿಂತ ದೇಶದ ಮುಂದಿರುವ ಭವಿಷ್ಯದ ದಿನಗಳ ಬಗ್ಗೆ ಹೆಚ್ಚು ಆತಂಕವಾಗುತ್ತಿದೆ’ ಎನ್ನುವುದು ಮಂಸೋರೆ ಅವರ ಮನದ ಮಾತು.

‘ದೇಶದಲ್ಲಿ ಏಕಾಏಕಿ ಲಾಕ್‌ಡೌನ್‌ ಘೋಷಿಸುವಾಗ ಊರಿಂದ ಊರಿಗೆ ವಲಸೆ ಬಂದು ಬದುಕುತ್ತಿದ್ದ ಲಕ್ಷಾಂತರ ಶ್ರಮಿಕರ ಬಗ್ಗೆ ಪ್ರಧಾನಿ ಯಾಕೆ ಯೋಚಿಸಲಿಲ್ಲ? ಸಾರಿಗೆ ವ್ಯವಸ್ಥೆ ಏಕಾಏಕಿ ಬಂದ್‌ ಆದಾಗ ಮಂಗಳೂರಿನಿಂದ ಕಾಲ್ನಡಿಗೆಯಲ್ಲೇ ಹೊರಟ ಕಾರ್ಮಿಕರ ಗುಂಪು ಇತ್ತ ಕೋಲಾರದ ಗಡಿ ಭಾಗ ತಲುಪುವವರೆಗೆ ಅನುಭವಿಸಿದ ಸಂಕಟ; ಅತ್ತ ದೆಹಲಿಯಿಂದ ಬಿಹಾರ, ಉತ್ತರಪ್ರದೇಶಕ್ಕೆ ಮರುವಲಸೆ ಹೊರಟ ಕಾರ್ಮಿಕರ ಆ ಕರಾಳ ರಾತ್ರಿಯ ಕಾಲ್ನಡಿಗೆ ಹೇಗಿತ್ತು; ಹೇಗಾದರೂ ಮಾಡಿ ಮನೆ ತಲುಪಲೇಬೇಕೆಂದು 200 ಕಿ.ಮೀ ನಡೆದ ಕೂಲಿ ಯುವಕನೊಬ್ಬ ಗುರಿ ಸೇರಲು ಇನ್ನು 80 ಕಿ.ಮೀ ಇರುವಾಗಲೇ ರಸ್ತೆಯಲ್ಲಿ ಕುಸಿದುಬಿದ್ದು ಅಸುನೀಗಿದ ಹೃದಯ ಹಿಂಡುವ ಘಟನೆ– ಇದೆಲ್ಲ ನನ್ನೊಳಗೆ ತೀವ್ರವಾಗಿ ಕಾಡುತ್ತಿವೆ. ಹೀಗೆ ಕಾಡಿದಾಗಲೇ ಅವು ಕಥೆಯಾಗುವುದು, ಸಿನಿಮಾ ಆಗುವುದು’ ಎಂದು ಹೇಳಿದರು ಮಂಸೋರೆ. ಅವರ ಹೊಸ ಕಥೆ ಕನ್ನಡದಲ್ಲಿ ಹೊಸಬಗೆಯ ಪ್ರಯೋಗವೂ ಆಗಬಹುದು.

ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್ ಕೂಡಾ ಸಂಭಾಷಣೆ ಬರೆಯುವುದರಲ್ಲಿ ಬ್ಯುಸಿ. ಪುನೀತ್‌ ರಾಜ್‌ಕುಮಾರ್‌ ನಟಿಸಲಿರುವ ಮುಂದಿನ, ಹೆಸರಿಡದ ಚಿತ್ರಕ್ಕೆ ಕಥೆ, ಚಿತ್ರಕಥೆ ಮುಗಿಸಿ, ಈಗ ಸಂಭಾಷಣೆ ಬರೆಯುವುದರಲ್ಲಿ ನಿರತರಾಗಿದ್ದಾರೆ ನಿರ್ದೇಶಕ ಸತ್ಯಪ್ರಕಾಶ್‌.

‘ಸಿನಿಮಾ ಮಂದಿಗೆ, ಕಥೆಗಾರರಿಗೆ ಲಾಕ್‌ಡೌನ್ ಹೊಸದಲ್ಲ, ತಮಗೆ ತಾವೇ ಲಾಕ್‌ಡೌನ್‌ ವಿಧಿಸಿಕೊಂಡು ಹೋಂ ಕ್ವಾರಂಟೈನಲ್ಲಿದ್ದು ಕಥೆ– ಚಿತ್ರಕಥೆ ಬರೆಯುವುದು ಮಾಮೂಲು. ಆದರೆ, ಎಲ್ಲರೂ ಸಾಮೂಹಿಕ ಕ್ವಾರಂಟೈನ್‌ ಆಗುವ ಈ ಸ್ಥಿತಿ ಬರಬಾರದಿತ್ತು’ ಎನ್ನುವ ಮಾತು ಸೇರಿಸಿದರು ಸತ್ಯ.

ತಾವು ಬರೆದಿರುವ ಕಥೆಯ ಬಗ್ಗೆಯೂ ವಿವರ ನೀಡಿದ ಅವರು ‘ಫ್ಯಾಂಟಸಿ ರೌಡಿಸಂ ಕಥೆ ಇದರಲ್ಲಿದ್ದು, ಮಾನವೀಯ ಸ್ಪರ್ಶ ಇದರಲ್ಲಿರುತ್ತದೆ.ಸಮಕಾಲೀನ ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನವೂ ಇರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT