ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

Chandan Flirt | ಸಂದರ್ಶನ: ಪ್ರೇಕ್ಷಕರ ತೀರ್ಪಿಗೆ ಕಾಯುತ್ತಿದ್ದೇನೆ; ನಟ ಚಂದನ್‌

Published : 20 ನವೆಂಬರ್ 2025, 23:34 IST
Last Updated : 20 ನವೆಂಬರ್ 2025, 23:34 IST
ಫಾಲೋ ಮಾಡಿ
Comments
ಪ್ರ

ಚಿತ್ರದಲ್ಲಿ ನಿಮ್ಮ ಪಾತ್ರ ಯಾವ ರೀತಿಯದ್ದು?

ಪಾತ್ರದ ಹೆಸರು ‘ಕೃಷ್ಣ’. ಜಿಮ್‌ ಟ್ರೈನರ್‌ ಆಗಿರುತ್ತೇನೆ. ಈಗಿನ ಕಾಲದ ಯುವಕರನ್ನು ಪ್ರತಿನಿಧಿಸುವ ಪಾತ್ರ. ಹುಡುಗಿಯರನ್ನು ಪಟಾಯಿಸುವ ವ್ಯಕ್ತಿ. ಈಗಾಗಲೇ ಚಿತ್ರದ ಟ್ರೇಲರ್‌ ಬಿಟ್ಟಿದ್ದೇವೆ. ಆದರೆ ಟ್ರೇಲರ್‌ನಲ್ಲಿ ಮೇಲ್ನೋಟಕ್ಕೆ ಕಾಣುವಂತೆ ಸಿನಿಮಾವಿಲ್ಲ. ನೋಡಿದರೆ ನಕಾರಾತ್ಮಕ ಪಾತ್ರದಂತೆ ಅನ್ನಿಸುತ್ತದೆ. ಆದರೆ ಆ ಪಾತ್ರ ಹಾಗಲ್ಲ ಎಂಬುದು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಸಿನಿಮಾ ಮುಗಿಯುವ ಹೊತ್ತಿಗೆ ನಾಯಕನ ಮೇಲೆ ಒಲುವು ಮೂಡುತ್ತದೆ. ಆ ರೀತಿಯ ಪಾತ್ರ.

ಪ್ರ

ರಾಮ್‌ಕಾಮ್‌ ಜಾನರ್‌ನ ಚಿತ್ರವೇ?

ಅಲ್ಲ. ಇದು ಸೈಕಿಕ್‌, ಥ್ರಿಲ್ಲರ್ ಜಾನರ್‌ ಚಿತ್ರ. ರಿವರ್ಸ್‌ ಸ್ಕ್ರೀನ್‌ಪ್ಲೆನಲ್ಲಿ ಮಾಡಿರುವ ಸಿನಿಮಾ. ಕೊನೆ ನಿಮಿಷದವರೆಗೂ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಚಿತ್ರಕಥೆ ಆಧಾರಿತ ಚಿತ್ರ. ಸಿನಿಮಾ ಬೇರೆ ಏನೋ ಇದೆ ಎಂಬುದು ಊಹೆಗೂ ಸಿಗುವುದಿಲ್ಲ. ನಾಯಕ ಕೃಷ್ಣನೇ ಹೌದಾ ಅಥವಾ ಬೇರೆ ಯಾರಾದ್ದರೂ ಇದ್ದಾರಾ ಎಂಬುದನ್ನು ಪ್ರೇಕ್ಷಕರೇ ನಿರ್ಧಾರ ಮಾಡಬೇಕು. 

ಪ್ರ

ನಟನೆಯಿಂದ ನಿರ್ದೇಶನದತ್ತ ತಿರುಗಿದ್ದು ಯಾಕೆ?

ನಾನು ಉದ್ಯಮಕ್ಕೆ ಬಂದಿದ್ದು ನಿರ್ದೇಶಕನಾಗಬೇಕೆಂದು. ನನ್ನ ಲುಕ್‌, ನಟನೆ ಎಲ್ಲವೂಗಳಿಂದ ನನ್ನನ್ನು ನಟ ಎಂದು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂದಿತ್ತು. ನಾನು ಎಂಜಿನಿಯರ್‌ ಆಗಿದ್ದೆ. ಕೆಲಸ ಬೋರ್‌ ಬಂದಿತ್ತು. ಕಚೇರಿ ಬದಲಾಗಬಹುದು, ಕೂರುವ ಸ್ಥಳ ಬೇರೆಯಾಗಬಹುದು, ಆದರೆ ಯಾವ ಕಂಪನಿಗೆ ಹೋದರೂ ಮಾಡುವುದು ಅದೇ ಕೆಲಸ ಅನ್ನಿಸುತ್ತಿತ್ತು. ಹೀಗಾಗಿ ಇಂಗ್ಲಿಷ್‌ನ ‘ಫ್ರೆಂಡ್ಸ್‌’ ಸರಣಿಯನ್ನು ಕನ್ನಡದಲ್ಲಿ ಮಾಡೋಣ ಎಂದು ಆಗ ಒಂದು ವಾಹಿನಿ ಬಳಿಗೆ ಹೋದೆ. ಆಗ ಅಲ್ಲಿ ಮುಖ್ಯಸ್ಥರಾಗಿದ್ದ ಪರಮೇಶ್ವರ್‌ ಗುಂಡ್ಕಲ್‌ ‘ರಾಧಾ ಕಲ್ಯಾಣ’ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದರು. ಅಲ್ಲಿಂದ ಆಕಸ್ಮಿಕವಾಗಿ ನಟನಾಗಿಬಿಟ್ಟೆ. ಆದರೆ ನನ್ನೊಳಗೆ ಇದ್ದಿದ್ದು ನಿರ್ದೇಶನ. ಧಾರಾವಾಹಿ ಲೋಕದಿಂದ ಹೊರಬಂದ ಬಳಿಕ ಕಥೆ ಬರೆಯಲು ಶುರು ಮಾಡಿದೆ. ಈಗ ನಿರ್ದೇಶಕನಾಗುವ ಕಾಲ ಕೂಡಿ ಬಂದಿದೆ. 

ಪ್ರ

ಕೆಲಸ ಮಾಡುತ್ತಿದ್ದಾಗಲೇ ನಟನೆ, ಸಿನಿಮಾದ ಒಡನಾಟವಿತ್ತಾ?

ಖಂಡಿತ ಇಲ್ಲ. ಕೆಲಸ ಬೋರಾಗಿ ಈ ವೃತ್ತಿ ಆಯ್ದುಕೊಂಡಿದ್ದು. ನನಗೆ ನಟನೆಯ ಯಾವ ಹಿನ್ನೆಲೆಯೂ ಇರಲಿಲ್ಲ. ಅಥವಾ ಆಸಕ್ತಿಕರ ಕ್ಷೇತ್ರವೂ ಆಗಿರಲಿಲ್ಲ. ಬುದ್ಧಿ ಬಳಸಿ ಏನಾದರೂ ಮಾಡಬೇಕು ಎಂಬುದು, ಕೆಲಸದ ಮೇಲಿನ ಅಸಹನೆಯೇ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು.

ಪ್ರ

ಈತನಕದ ಸಿನಿಪಯಣ ಹೇಗನ್ನಿಸುತ್ತಿದೆ?

ತುಂಬಾ ತೃಪ್ತಿಯಿದೆ. ಸಾಧನೆ ಅಂತ ಏನಾಗಿಲ್ಲ. ಏನೂ ಇಲ್ಲದೆ ಬಂದವನು ಒಂದು ಮಟ್ಟಕ್ಕೆ ಬಂದು ನಿಂತಿದ್ದೇನೆ ಅನ್ನಿಸುತ್ತಿದೆ. ಯಾವುದೇ ಹಿನ್ನೆಲೆ, ಬೆಂಬಲ ಇಲ್ಲದವನು ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸುವ ಮಟ್ಟಕ್ಕೆ ತಲುಪಿದ್ದೇನೆ ಎಂಬ ಖುಷಿಯಿದೆ. ಕಿರುತೆರೆ ಪಯಣ ತುಂಬ ಚೆನ್ನಾಗಿತ್ತು. ನಾನು ಮಾಡಿರುವ ಧಾರಾವಾಹಿಗಳು, ರಿಯಾಲಿಟಿ ಶೋಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿವೆ. ಅದೇ ಯಶಸ್ಸನ್ನು ಸಿನಿಮಾದಲ್ಲಿಯೂ ಗಳಿಸಬೇಕೆಂಬ ಆಸೆಯಿದೆ.

ಪ್ರ

ಈ ಸಿನಿಮಾದಿಂದ ನಿಮ್ಮ ಯಶಸ್ಸಿನ ಕನಸು ನನಸಾಗಬಹುದಾ?

ಥ್ರಿಲ್‌ ಆಗಿರುವ ಸಿನಿಮಾ. ನಿರೀಕ್ಷೆ ಮಾಡಿದ್ದು ಯಾವುದೂ ಇರುವುದಿಲ್ಲ. ಎರಡು ಮೂರು ಪದರಗಳಲ್ಲಿ ಕಥೆ ಸಾಗುತ್ತದೆ. ಈ ಪಾತ್ರ ಹೀಗೇ ಅಂತ ಮೊದಲಾರ್ಧದಲ್ಲಿ ಅಂದುಕೊಂಡಿದ್ದು ದ್ವಿತೀಯಾರ್ಧದಲ್ಲಿ ಬದಲಾಗಿರುತ್ತದೆ. ಬೇರೆ ಆಯಾಮದಿಂದ ಮತ್ತೆ ಸಿನಿಮಾ ನೋಡಬೇಕು ಎನ್ನಿಸುವಂಥ ಚಿತ್ರಕಥೆ ಎಂದಷ್ಟೇ ಹೇಳಬಲ್ಲೆ. ಹೀಗಾಗಿ ಈ ಸಿನಿಮಾದ ಮೇಲೆ ಬಹಳ ಭರವಸೆಯಿದೆ. ಇವತ್ತು ಕಥೆ ಗಟ್ಟಿಯಾಗಿದ್ದರೆ ಮಾತ್ರ ಪ್ರೇಕ್ಷಕರನ್ನು ಸೆಳೆಯಬಹುದು. ಇಲ್ಲವಾದಲ್ಲಿ ಇಲ್ಲಿ ನೆಲೆ ಕಷ್ಟ. ಅದನ್ನು ಅರ್ಥಮಾಡಿಕೊಂಡು ಈ ಸಿನಿಮಾ ನಿರ್ದೇಶನದ ಜತೆಗೆ ನಿರ್ಮಾಣದ ಸಾಹಸಕ್ಕೂ ಕೈ ಹಾಕಿರುವೆ. ಮಿಕ್ಕಿದ್ದು ಜನರ ತೀರ್ಪು.

ಪ್ರ

ನಿಮ್ಮ ಮುಂದಿನ ಯೋಜನೆಗಳು...

ಈ ಚಿತ್ರದ ಟ್ರೇಲರ್‌ ಬಿಡುಗಡೆ ಬಳಿಕ ಕೆಲ ಸಿನಿಮಾ ಆಫರ್‌ಗಳು ಬಂದಿವೆ. ಆದರೆ ಯಾವ ಕಥೆಯನ್ನೂ ಕೇಳಿಲ್ಲ. ಪೂರ್ತಿಯಾಗಿ ಈ ಸಿನಿಮಾದ ಮೇಲೆ ಫೋಕಸ್‌ ಆಗಿರುವೆ. ಹೀಗಾಗಿ ಮುಂದಿನ ಯೋಜನೆಗಳ ಬಗ್ಗೆ ಹೆಚ್ಚು ಯೋಚನೆ ಮಾಡಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT