ಗುರುವಾರ , ಅಕ್ಟೋಬರ್ 1, 2020
27 °C

ಆಯುಷ್ಮಾನ್‌ ನಟನೆಯ ಹೊಸ ಚಿತ್ರಕ್ಕೆ ವಾಣಿ ಕಪೂರ್‌ ಹೀರೊಯಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಭಿಷೇಕ್‌ ಕಪೂರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಬಾಲಿವುಡ್ ನಟ ಆಯುಷ್ಮಾನ್‌ ಖುರಾನ ನಟಿಸುತ್ತಿರುವುದು ಪಕ್ಕಾ ಆಗಿದೆ. ಆದರೆ, ಇನ್ನೂ ಈ ಸಿನಿಮಾದ ಟೈಟಲ್‌ ಅಂತಿಮಗೊಂಡಿಲ್ಲ. ನವಿರು ಪ್ರೇಮದ ಸುತ್ತ ಇದರ ಕಥೆ ಹೆಣೆಯಲಾಗಿದೆ. ‘ವಾರ್’  ಚಿತ್ರದ ಖ್ಯಾತಿಯ ವಾಣಿ ಕಪೂರ್‌ ಇದಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಅಂದಹಾಗೆ ಆಯುಷ್ಮಾನ್‌ ಜೊತೆಗೆ ವಾಣಿಯ ಮೊದಲ ಚಿತ್ರ ಇದು. ‘ಆಯುಷ್ಮಾನ್‌ ಜೊತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಥ್ರಿಲ್‌ ಆಗುತ್ತಿದೆ. ನಮ್ಮ ಜನರೇಷನ್‌ನಲ್ಲಿಯೇ ಅವರು ಪ್ರತಿಭಾನ್ವಿತ ನಟ. ನಮ್ಮಿಬ್ಬರ ಪ್ರಥಮ ಚಿತ್ರವೂ ಸುಂದರವಾದ ಪ್ರೇಮ ಕಥೆಯೊಟ್ಟಿಗೆ ಶುರುವಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದಿದ್ದಾರೆ ವಾಣಿ.

‘ಅಭಿಷೇಕ್‌ ಕಪೂರ್‌ ಅವರ ಹಲವು ಸಿನಿಮಾಗಳು ನನ್ನ ವೃತ್ತಿಬದುಕಿಗೆ ಪ್ರೇರಣೆಯಾಗಿವೆ. ಅವರ ಸಿನಿಮಾಗಳಲ್ಲಿ ನಟಿಸುವ ನನ್ನ ಆಸೆ ಈಗ ಈಡೇರಿದೆ. ಅವರ ಚಿತ್ರದ ಭಾಗವಾಗುತ್ತಿರುವುದು ನನ್ನ ಸಿಕ್ಕಿರುವ ದೊಡ್ಡ ಅದೃಷ್ಟ’ ಎಂದು ಹೇಳಿದ್ದಾರೆ ವಾಣಿ.

‘ಬೆಫಿಕ್ರೆ ಚಿತ್ರದಲ್ಲಿ ವಾಣಿ ನಟನೆ ಅದ್ಭುತವಾಗಿತ್ತು. ಆಕೆ ಸೌಂದರ್ಯದ ಖನಿ. ಜೊತೆಗೆ, ಕೆಲಸದ ಬಗ್ಗೆ ಬದ್ಧತೆ ಇರುವ ನಟಿ. ಆಯುಷ್ಮಾನ್‌ ಅವರೊಟ್ಟಿಗೆ ಸೆಟ್‌ನಲ್ಲಿ ಆಕೆಯನ್ನು ನೋಡುವ ಆಸೆ ನನಗಿತ್ತು. ಈ ಇಬ್ಬರ ಕಾಂಬಿನೇಷನ್‌ ತೆರೆಯ ಮೇಲೆ ಫಲ ಕೊಡಲಿದೆ’ ಎಂದು ನಿರ್ದೇಶಕ ಅಭಿಷೇಕ್‌ ಕಪೂರ್‌ ಪ್ರತಿಕ್ರಿಯಿಸಿದ್ದಾರೆ.

ಈ ಚಿತ್ರದಲ್ಲಿ ಆಯುಷ್ಮಾನ್‌ ಅವರದ್ದು ಅಥ್ಲೀಟ್‌ ಪಾತ್ರವಂತೆ. ಉತ್ತರ ಭಾರತದ ವಿವಿಧೆಡೆ ಅಕ್ಟೋಬರ್‌ನಿಂದ ಸಿನಿಮಾ ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ‘ಗುಲಾಬೊ ಸಿತಾಬೊ’ ಚಿತ್ರದ ಬಳಿಕ ಆಯುಷ್ಮಾನ್ ನಟಿಸುತ್ತಿರುವ ಚಿತ್ರ ಇದಾಗಿದೆ. ಅಮಿತಾಭ್‌ ಬಚ್ಚನ್‌ ಕೂಡ ನಟಿಸಿದ್ದ ಈ ಸಿನಿಮಾ ಒಟಿಟಿಯಲ್ಲಿ ತೆರೆ ಕಂಡಿತ್ತು.

ಕಳೆದ ವರ್ಷ ತೆರೆಕಂಡ ಹೃತಿಕ್‌ ರೋಷನ್‌ ನಟನೆಯ ‘ವಾರ್‌’ ಚಿತ್ರದ ಯಶಸ್ಸಿನ ಬಳಿಕ ವಾಣಿ ಕಪೂರ್‌ ಈ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್‌ ಕುಮಾರ್ ನಟನೆಯ ‘ಬೆಲ್‌ ಬಾಟಂ’ ಚಿತ್ರದಲ್ಲಿಯೂ ಅವರು ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇಂಗ್ಲೆಂಡ್‌ನಲ್ಲಿ ಇದರ ಶೂಟಿಂಗ್‌ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು