ಶುಕ್ರವಾರ, ಮೇ 29, 2020
27 °C

ಮದುವೆ ಗಾಸಿಪ್‌ ವಿರುದ್ಧ ವರಲಕ್ಷ್ಮಿ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವರಲಕ್ಷ್ಮಿ ಶರತ್‌ಕುಮಾರ್ ಬಹುಭಾಷಾ ನಟಿ. ತಮಿಳಿನ ‘ಪೊಡಾ ಪೋಡಿ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಆಕೆಯ ವೃತ್ತಿಬದುಕಿಗೆ ಈಗ ಎಂಟು ವರ್ಷ ತುಂಬಿದೆ. ತಮಿಳು, ತೆಲುಗು, ಮಲಯಾಳದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆ ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿದ ನಟಿಸಿದ ಚಿತ್ರ ಸುದೀಪ್‌ ನಟನೆಯ ‘ಮಾಣಿಕ್ಯ’.

‘ರನ್ನ’ ಚಿತ್ರದ ಹಾಡೊಂದರಲ್ಲೂ ಆಕೆ ಹೆಜ್ಜೆ ಹಾಕಿದ್ದರು. ಬಳಿಕ ಅರ್ಜುನ್‌ ಸರ್ಜಾ ನಾಯಕರಾಗಿದ್ದ ‘ವಿಸ್ಮಯ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಬಿಡುಗಡೆಗೆ ಸಿದ್ಧವಾಗಿರುವ ‘ರಣಂ’ ಚಿತ್ರದಲ್ಲಿ ಆಕೆಯದು ಸಿಬಿಐ ಅಧಿಕಾರಿಯ ಪಾತ್ರ.

ಆಕೆಯ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಆದರೂ, ವರಲಕ್ಷ್ಮಿ ಸಪ್ತಪದಿ ತುಳಿಯಲು ಸಜ್ಜಾಗುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದೊಟ್ಟಿಗೆ ನಿಕಟ ಸಂಪರ್ಕ ಹೊಂದಿರುವ ಉದ್ಯಮಿಯೊಬ್ಬರ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ. ಅವರನ್ನು ಮದುವೆಯಾಗಲು ಸಿನಿಮಾಗಳನ್ನು ಕೈಬಿಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದನ್ನು ಕೇಳಿ ಆಕೆ ಗಾಸಿಪ್‌ ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ.

‘ನನ್ನ ಮದುವೆ ಬಗ್ಗೆ ನಾನೇಕೆ ಬೇರೆಯವರಿಂದ ತಿಳಿದುಕೊಳ್ಳಬೇಕು. ಇಂತಹ ಅರ್ಥವಿಲ್ಲದ ಸುದ್ದಿ ಹಬ್ಬಿಸುತ್ತಿರುವವರು ಯಾರೆಂಬುದು ನನಗೂ ತಿಳಿಯುತ್ತಿಲ್ಲ. ನನ್ನ ಅನುಪಸ್ಥಿತಿಯಲ್ಲಿ ಕೆಲವರು ಇಂತಹ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಸಪ್ತಪದಿ ತುಳಿಯಲು ನಿರ್ಧರಿಸಿದ ದಿನದಂದು ಮನೆಯ ಮೇಲೆ ಬಂದು ಎಲ್ಲರಿಗೂ ಕೇಳುವಂತೆ ಜೋರಾಗಿ ಕೂಗಿ ಹೇಳುತ್ತೇನೆ. ಈ ಬಗ್ಗೆ ಬರೆಯಿರಿ ಎಂದು ಮಾಧ್ಯಮದವರಿಗೂ ಹೇಳುತ್ತೇನೆ. ಸದ್ಯಕ್ಕೆ ನಾನು ಮದುವೆಯಾಗುತ್ತಿಲ್ಲ. ಯಾವುದೇ ಸಿನಿಮಾಗಳಿಂದಲೂ ಹೊರಗುಳಿದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಎರಡು ವರ್ಷದ ಹಿಂದೆಯೂ ವರಲಕ್ಷ್ಮಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದು ನನ್ನ ವೈಯಕ್ತಿಕ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಆಕೆ ಹೇಳಿದ್ದು ಉಂಟು.

ಮತ್ತೊಂದೆಡೆ ವರಲಕ್ಷ್ಮಿ ಮತ್ತು ನಟ ವಿಶಾಲ್‌ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಪಡಸಾಲೆಯಲ್ಲಿ ಹಬ್ಬಿತ್ತು. ಆದರೆ, ತಾವಿಬ್ಬರು ಸ್ನೇಹಿತರು ಎಂದು ಇಬ್ಬರೂ ಸ್ಪಷ್ಟನೆ ನೀಡಿದ್ದರು. ಕಳೆದ ವರ್ಷದ ಏಪ್ರಿಲ್‌ನಲ್ಲಿ ವಿಶಾಲ್‌ ಅವರು ಅನಿಶಾ ರೆಡ್ಡಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

ಪ್ರಸ್ತುತ ವರಲಕ್ಷ್ಮಿ ತೆಲುಗಿನ ‘ನಾಂದಿ’, ‘ಕ್ರ್ಯಾಕ್‌’, ತಮಿಳಿನ ‘ಕಾಟೆರಿ’, ‘ಕಣ್ಣಿ ರಾಶಿ’ ‘ಪಂಬನ್‌’, ‘ಡ್ಯಾನಿ’ ಮತ್ತು ‘ಚೇಸಿಂಗ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.