ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹುಕಾರ್ ಜಾನಕಿ ಒಲ್ಲೆ ಎಂದಿದ್ದ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದ ಜಯಂತಿ

ಅಕ್ಷರ ಗಾತ್ರ

‘ಮಿಸ್‌ ಲೀಲಾವತಿ’ ಚಿತ್ರಕ್ಕೆ ನಾಯಕಿಯಾಗಿ ಆರಂಭದಲ್ಲಿ ಸಾಹುಕಾರ್‌ ಜಾನಕಿ ಆಯ್ಕೆಯಾಗಿದ್ದರು. ಜಯಂತಿ ಅವರದ್ದು ಜಾನಕಿಯ ಸ್ನೇಹಿತೆಯ ಪಾತ್ರ. ಆದರೆ ಬಳಿಕ ಜಯಂತಿ ಅವರೇ ಈ ಸಿನಿಮಾದಲ್ಲಿ ನಾಯಕಿಯಾದರು!

ಹೌದು, ಹೀರೊಯಿನ್‌ ಪಾತ್ರಕ್ಕೆ ಅಗತ್ಯವಿದ್ದ ಸ್ವಿಮ್ಮಿಂಗ್‌ ಕಾಸ್ಟ್ಯೂಮ್‌ ಧರಿಸಲು ನಿರ್ದೇಶಕ ಎಂ.ಆರ್‌. ವಿಠ್ಠಲ್‌ ಹೇಳಿದರೂ ಜಾನಕಿ ಒಪ್ಪಲಿಲ್ಲವಂತೆ. ಹೀಗಾಗಿ ಆ ಪಾತ್ರ ಜಯಂತಿ ಅವರ ಪಾಲಾಗಿತ್ತು. ‘ಮಿಸ್‌ ಲೀಲಾವತಿ’ಯು ಜಯಂತಿ ಅವರ ನಟನೆಯ ನಾಲ್ಕನೇ ಚಿತ್ರವೂ ಆಗಿದೆ.

ಗ್ಲಾಮರಸ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯುವ ಪ್ರೇಕ್ಷಕರ ಮನಸ್ಸಿನಲ್ಲೂ ಮಿಂಚಿನಹೊಳೆ ಹರಿಸಿದ್ದರು ಜಯಂತಿ. ‘ಜೇಡರಬಲೆ’ ಚಿತ್ರದಲ್ಲೂ ಸ್ವಿಮ್‌ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದ ಅವರು ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು.

ಜಯಂತಿ ಅವರು ಅವರು ಕ್ಯಾಮೆರಾ ಎದುರಿನ ಪಯಣ ಆರಂಭಿಸಿದ್ದು ‘ಜಗದೇಕವೀರ’ನ ಕಥೆಯ ಪುಟ್ಟ ಪಾತ್ರದ ಮೂಲಕ. ಆದರೆ, ಪೂರ್ಣಪ್ರಮಾಣದ ನಾಯಕಿಯಾಗಿ ನಟಿಸಿದ್ದು, 1968ರಲ್ಲಿ ತೆರೆಕಂಡ ‘ಜೇನುಗೂಡು’ ಚಿತ್ರದಲ್ಲಿ.

ಅವರ ಮೂಲ ಹೆಸರು ಕಮಲಕುಮಾರಿ. ಅದು ‘ಚಂದವಳ್ಳಿಯ ತೋಟ’ ಸಿನಿಮಾದ ಸಂದರ್ಭ. ಇದು ಅವರ ನಟನೆಯ ದ್ವಿತೀಯ ಚಿತ್ರವೂ ಹೌದು. ಕಮಲಕುಮಾರಿ ಹೆಸರು ಉದ್ದವಾಯಿತು ಎಂದರಂತೆ ನಿರ್ದೇಶಕರು. ಆಗ ಅವರೇ ‘ಜಯಂತಿ’ ಎಂದು ಮರುನಾಮಕರಣ ಮಾಡಿದರಂತೆ.

ತಮ್ಮ ಅಭಿನಯ ಚಾತುರ್ಯದಿಂದಲೇ ‘ಅಭಿನಯ ಶಾರದೆ’ ಎನ್ನುವ ಪ್ರಶಂಸೆಗೆ ಪಾತ್ರವಾಗಿರುವ ಅವರು, ಕನ್ನಡದಲ್ಲಿ 190ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೆಣ್ಣುಮಕ್ಕಳು ಬಣ್ಣದಲೋಕ ಪ್ರವೇಶಿಸಲು ಹಿಂಜರಿಯುತ್ತಿದ್ದ ದಿನಗಳಲ್ಲೇ ಅವರು ಚಿತ್ರರಸಿಕರ ಕಣ್ಮಣಿಯಾಗಿದ್ದರು.

ಜಯಂತಿ ನಟಿಸಿದ ಜನಪ್ರಿಯ ಸಿನಿಮಾಗಳಾದ ‘ಚಂದವಳ್ಳಿಯ ತೋಟ’, ‘ಚಕ್ರತೀರ್ಥ’, ‘ಮಿಸ್‌ ಲೀಲಾವತಿ’, ‘ಮಣ್ಣಿನ ಮಗಳು’, ‘ಎಡಕಲ್ಲು ಗುಡ್ಡದ ಮೇಲೆ’, ‘ಭಲೇ ಬಸವ’, ‘ಬೆಟ್ಟದ ಹುಲಿ’, ‘ಶ್ರೀಕೃಷ್ಣ ದೇವರಾಯ’, ‘ಕಸ್ತೂರಿ ನಿವಾಸ’, ‘ಬಹದ್ದೂರ್‌ ಗಂಡು’ ಇಂದಿಗೂ ಕನ್ನಡಿಗರ ಮನದಲ್ಲಿ ಬೆಚ್ಚಗೆ ಕುಳಿತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT