ಶನಿವಾರ, ಸೆಪ್ಟೆಂಬರ್ 18, 2021
22 °C

ಹಿರಿಯ ನಟಿ ಜಯಂತಿ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ವಿಧಿವಶರಾಗಿದ್ದಾರೆ.

ಸುಮಾರು 500 ಚಿತ್ರಗಳಲ್ಲಿ ನಟಿಸಿದ್ದ ಜಯಂತಿ, ‘ಅಭಿನಯ ಶಾರದೆ’ ಎಂದು  ಅಭಿಮಾನದಿಂದ ಕರೆಸಿಕೊಂಡಿದ್ದರು. ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದರು.

1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದರು. ನಟಿ ಜಯಂತಿಯವರು ವಿಷ್ಣುವರ್ಧನ್, ಅಂಬರೀಷ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತ್ ನಾಗ್ ಮುಂತಾದ ನಟರ ಜೊತೆ ಅಭಿನಯಿಸಿದ್ದರು.

ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ನಟಿಸಿದ ಖ್ಯಾತಿಗೆ ಪಾತ್ರರಾಗಿದ್ದರು

ಜೇನುಗೂಡು, ಬೆಟ್ಟದ ಹುಲಿ, ಎಡಕಲ್ಲು ಗುಡ್ಡದ ಮೇಲೆ, ಮಸಣದ ಹೂವು ಅವರ ಪ್ರಮುಖ ಚಿತ್ರಗಳು.

ಇದನ್ನೂ ಓದಿ.. ಅಭಿನಯ ಶಾರದೆ: ಎರಡು ಜಡೆ ಕಮಲಕುಮಾರಿ ಜಯಂತಿ ಆದ ಕತೆ

ನಟಿ ಜಯಂತಿ ಅವರ ಪಾರ್ಥಿವ ಶರೀರವನ್ನು ಬನಶಂಕರಿಯಲ್ಲಿರುವ ಅವರ ನಿವಾಸದಲ್ಲೇ ಇರಿಸಲಾಗಿದೆ. ಬಂಧುಗಳು, ಸಿನಿಮಾ ಕ್ಷೇತ್ರದ ಪ್ರಮುಖರು ಮನೆಗೆ ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. 

ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬಳಿಕ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಯಂತಿ ಅವರ ಪುತ್ರ ಕೃಷ್ಣಕುಮಾರ್‌ ತಿಳಿಸಿದರು.

ನನ್ನ ತಾಯಿಯವರು ಸದಾ ಕ್ರಿಯಾಶೀಲ ವ್ಯಕ್ತಿ. ಒಂಟಿಯಾಗಿ ಕೂರುವವರು ಅಲ್ಲ. ಅವರಿಗೆ ನಾವು ಮಾತ್ರವಲ್ಲ. ಚಿತ್ರರಂಗವೇ ಕುಟುಂಬದಂತಿತ್ತು. ಹಾಗಾಗಿ ಎಲ್ಲರೊಂದಿಗೆ ಸದಾ ಬೆರೆಯುತ್ತಿದ್ದರು. ಆಸ್ತಮಾ ಅವರನ್ನು ಕಾಡಿತ್ತು. ಇದು ತೀವ್ರಗೊಂಡು ಎರಡು ಬಾರಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅದರಿಂದ ಪೂರ್ಣ ಚೇತರಿಸಿಕೊಂಡು ಮತ್ತೆ ಲವಲವಿಕೆಯಿಂದ ಇದ್ದರು. ಇಂದು ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ನಟಿ ದಿವಂಗತ ಜಯಂತಿ ಅವರ ಪುತ್ರ ಕೃಷ್ಣಕುಮಾರ್‌ ದುಃಖ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು