ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲನ್‌ಗೆ ಗೆಲುವಿನ ಖುಷಿ

Last Updated 28 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಸುದೀಪ್ ಮತ್ತು ಶಿವಣ್ಣ ಅಭಿನಯದ ಸಿನಿಮಾ ‘ದಿ ವಿಲನ್’ ಬಿಡುಗಡೆಗೆ ಮುನ್ನ ಮತ್ತು ನಂತರ ಸಾಕಷ್ಟು ಸುದ್ದಿಮಾಡುತ್ತಿದೆ. ಇದರ ನಡುವೆಯೇ ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಅವರ ಜೊತೆ ನಿರ್ದೇಶಕ ಪ್ರೇಮ್, ವಿತರಕ ಜಾಕ್ ಮಂಜು ಸೇರಿದಂತೆ ಚಿತ್ರತಂಡದ ಹಲವರು ಇದ್ದರು.

ಅವರು ಕರೆದಿದ್ದು, ಚಿತ್ರ ಹಣ ಗಳಿಕೆಯಲ್ಲಿ ಯಶಸ್ಸು ಕಂಡಿರುವುದರ ಬಗ್ಗೆ ಹಾಗೂ ಅಭಿಮಾನಿಗಳಿಗೆ ಇಷ್ಟವಾಗಿರುವುದರ ಬಗ್ಗೆ ಹೇಳಿಕೊಳ್ಳುವುದಕ್ಕಾಗಿತ್ತು. ‘ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಂತಹ ಕಲೆಕ್ಷನ್ ಮಾಡಿದೆ ಈ ಸಿನಿಮಾ. ಅಕ್ಟೋಬರ್ 21ರ ಸುಮಾರಿಗೆ ಬಹುಶಃ ಮೂವತ್ತು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ’ ಎಂದು ಖುಷಿಯಿಂದ ಹೇಳಿಕೊಂಡರು ಮನೋಹರ್.

ಅಂದಹಾಗೆ, ಇದು ಕರ್ನಾಟಕದಲ್ಲಿ ಆಗಿರುವ ಕಲೆಕ್ಷನ್ ಮೊತ್ತ ಮಾತ್ರ! ಹಾಗೆಯೇ, ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಆರೂವರೆ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದೂ ಮನೋಹರ್ ತಿಳಿಸಿದರು.

ಮಾತಿನ ಮಧ್ಯೆ 'ನಿಗದಿ ಮಾಡಿರುವ ಟಿಕೆಟ್ ದರ ಹೆಚ್ಚು ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲಾ? ಸಿನಿಮಾ ಬಗ್ಗೆ ವಿಶ್ವಾಸ ಇಲ್ಲದ್ದಕ್ಕೆ ಹೆಚ್ಚಿನ ದರ ನಿಗದಿ ಮಾಡಲಾಯಿತೇ' ಎಂಬ ಪ್ರಶ್ನೆ ತೂರಿಬಂತು. 'ಸಿನಿಮಾ ಚೆನ್ನಾಗಿದೆ. ಸಿನಿಮಾ ಬಗ್ಗೆ ವಿಶ್ವಾಸ ಇದೆ. ಹಾಗಾಗಿಯೇ ಟಿಕೆಟ್ ದರವನ್ನು ತುಸು ಹೆಚ್ಚಿಸಲಾಯಿತು' ಎಂಬ ಸಮರ್ಥನೆ ನೀಡಿದರು.

‘ವಿಡಿಯೊ ಪಕ್ಕಕ್ಕಿಟ್ಟೆ’: ಈ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಕೆಲವು ಅಭಿಮಾನಿಗಳು ಪ್ರಾಣಿಗಳನ್ನು ಬಲಿ ಕೊಟ್ಟ ಪ್ರಕರಣ ಕೂಡ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮನೋಹರ್, ‘ಪ್ರಾಣಿಗಳನ್ನು ವಧಿಸುವಂತಹ ರಾಕ್ಷಸ ಕೆಲಸ ಬೇಡ. ಇಂತಹ ಕೆಲಸಗಳನ್ನು ನಮ್ಮ ತಂಡದ ಯಾರೂ ಬೆಂಬಲಿಸುವುದಿಲ್ಲ’ ಎಂದರು.

ಪ್ರಾಣಿಯನ್ನು ಬಲಿಕೊಟ್ಟ ವಿಡಿಯೊ ತೋರಿಸಲು ಮನೋಹರ್ ಅವರ ಸ್ನೇಹಿತರೊಬ್ಬರು ಬಂದರಂತೆ. ಆಗ ಅದನ್ನು ಮನೋಹರ್ ಅವರು ದೂರ ತಳ್ಳಿದರಂತೆ.

‘ನನ್ನಿಂದ ಅಂತಹ ವಿಡಿಯೊ ನೋಡಲು ಆಗದು. ಅಂಥದ್ದನ್ನು ಕಂಡರೆ ಮನಸ್ಸು ಖಿನ್ನವಾಗಿಬಿಡುತ್ತದೆ’ ಎಂದರು ಮನೋಹರ್.

‘ನಾವು ಮಾಡಿದ ಸಿನಿಮಾ ಗೆಲ್ಲಿಸುವುದು, ಸೋಲಿಸುವುದು ಜನರಿಗೆ ಬಿಟ್ಟಿದ್ದು. ಚಿತ್ರದ ಗೆಲುವಿಗೆ ಪ್ರಾಣಿಬಲಿಯಂತಹ ಕೃತ್ಯ ಬೇಡವೇ ಬೇಡ’ ಎಂದೂ ಮನವಿ ಮಾಡಿಕೊಂಡರು.

ಪ್ರೇಮ್‌ಗೆ ಕೋಪ
‘ಕೆಲವು ವಿಕೃತ ಜನ ಸೋಷಿಯಲ್‌ ಮೀಡಿಯಾಗಳಲ್ಲಿ ಅವಿವೇಕದ ವರ್ತನೆ ತೋರಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ಮಾತುಗಳಿಗೆ ಮಿತಿಯೇ ಇಲ್ಲವಾಗಿದೆ. ಸಿನಿಮಾವನ್ನು ಸಿನಿಮಾ ಆಗಿಯೇ ವೀಕ್ಷಿಸಬೇಕು. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ಹೇಳುವ ಬದಲು ವೈಯಕ್ತಿಕ ಮಟ್ಟದಲ್ಲಿ ಮಾತು ಆಡುವುದು ಸರಿಯಲ್ಲ’ ಎಂದು ಕೋಪ ತೋರಿಸಿದರು ನಿರ್ದೇಶಕ ಪ್ರೇಮ್.

‘ವೈಯಕ್ತಿಕ ಮಟ್ಟದಲ್ಲಿ ಮಾತನಾಡುವವರು ಗುಂಡ್ರುಗೋವಿಗಳು ಎಂದು ಅರ್ಥ. ಕನ್ನಡದ ಸಿನಿಮಾ ಎಂಬ ಗೌರವ ಕೂಡ ಇಲ್ಲದೆ ಬೇರೆಯವರಿಗೆ ಹೋಲಿಸಿ ಮಾತನಾಡುವುದು ತರವಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ವಿಕೃತವಾಗಿ ಮಾತನಾಡಿರುವವರು ಹೀರೊ ಜೊತೆ ಮಾತನಾಡಿ ಒಂದು ಸಿನಿಮಾ ನಿರ್ಮಾಣ ಮಾಡಲಿ, ಅವರಿಗೆ ಬೇಕಿರುವಂತೆ ನಾನು ಸಿನಿಮಾ ಮಾಡಿಕೊಡುವೆ’ ಎಂದರು ಪ್ರೇಮ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT